Site icon Vistara News

ವಿಸ್ತಾರ ಸಂಪಾದಕೀಯ: ಭಾರತೀಯ ಮುಸ್ಲಿಮರ ಸುರಕ್ಷತೆ ಬಗ್ಗೆ ಬರಾಕ್‌ ಒಬಾಮಾಗೆ ಚಿಂತೆ ಬೇಕಿಲ್ಲ

Barak Obama

#image_title

ಪ್ರಧಾನಮಂತ್ರಿ ಮೋದಿಯವರು ಅಮೆರಿಕದ ಭೇಟಿ ನೀಡಿದ ಸಂದರ್ಭ ಅಲ್ಲಿನ ಮಾಜಿ ಅಧ್ಯಕ್ಷ ಬರಾಕ್‌ ಒಬಾಮಾ ಅವರು ವಾಹಿನಿಯೊಂದಕ್ಕೆ ಸಂದರ್ಶನ ನೀಡುತ್ತ, ʼʼಭಾರತದ ಪ್ರಧಾನಿಯ ಜತೆ ಅಮೆರಿಕದ ಅಧ್ಯಕ್ಷರ ಮಾತುಕತೆ ಸಂದರ್ಭ ಅಲ್ಲಿನ ಮುಸ್ಲಿಮರ ಸುರಕ್ಷತೆಯ ಬಗ್ಗೆಯೂ ಮಾತನ್ನು ಆಡಬೇಕಿತ್ತು. ಇಲ್ಲವಾದರೆ ಭಾರತ ಒಂದು ಕಡೆಗೆ ಎಳೆಯಲ್ಪಡುವ ಸಾಧ್ಯತೆ ಇದೆʼʼ ಎಂದು ಹೇಳಿದ್ದಾರೆ. ʼʼಭಾರತ ಎಲ್ಲರ ಸುರಕ್ಷತೆ ಹಾಗೂ ಸೌಹಾರ್ದ ಜೀವನವನ್ನು ಪ್ರತಿಪಾದಿಸುತ್ತದೆ. ಎಲ್ಲರ ಜತೆಗೆ ಎಲ್ಲರ ವಿಕಾಸ ನಮ್ಮ ಆದರ್ಶʼʼ ಎಂದು ಪ್ರಧಾನಿ ಮೋದಿ ಅಮೆರಿಕದ ನೆಲದಲ್ಲಿ ನಿಂತು ಪ್ರತಿಪಾದಿಸಿರುವ ಬಳಿಕವೂ ಬರಾಕ್‌ ಒಬಾಮಾ ಈ ಮಾತನ್ನು ಹೇಳುವ ಅಗತ್ಯವಿರಲಿಲ್ಲ. ಒಬಾಮಾ ಅವರಿಗೆ ಭಾರತೀಯ ಮುಸ್ಲಿಮರ ಸ್ಥಿತಿಗತಿಯ ಬಗ್ಗೆ ತಪ್ಪು ತಿಳಿವಳಿಕೆ ಇದೆಯೋ, ಅಥವಾ ಅವರಿಗೆ ಮಾಹಿತಿ ನೀಡುವವರು ಬೇಕೆಂದೇ ತಪ್ಪು ವರದಿ ನೀಡಿದ್ದಾರೋ- ಅಂತೂ ಈ ಮಾತು ಒಬಾಮಾ ಅವರ ಘನತೆಗೆ ತಕ್ಕುದಲ್ಲ ಎಂದು ಹೇಳಬೇಕಿದೆ.

ಭಾರತೀಯ ಮುಸ್ಲಿಮರ ಸುರಕ್ಷತೆಯ ಬಗ್ಗೆ ಚಿಂತೆ ಮಾಡುವ ಮುನ್ನ ಅಮೆರಿಕದ ಮಾಜಿ ಅಧ್ಯಕ್ಷರಾದ ಮಾನ್ಯ ಘನ ಬರಾಕ್‌ ಒಬಾಮಾ ಅವರು ತಮ್ಮದೇ ಇತಿಹಾಸವನ್ನು ಒಮ್ಮೆ ಅವಲೋಕಿಸುವುದು ಒಳ್ಳೆಯದು. ಈದನ್ನೇ ನಮ್ಮ ವಿತ್ತ ಸಚಿವರಾದ ನಿರ್ಮಲಾ ಸೀತಾರಾಮನ್‌ ಹಾಗೂ ರಕ್ಷಣಾ ಸಚಿವರಾದ ರಾಜನಾಥ ಸಿಂಗ್‌ ಹೇಳಿದ್ದಾರೆ. ಒಬಾಮಾ ಅವರು ಅಧ್ಯಕ್ಷರಾಗಿದ್ದ ಎರಡು ಅವಧಿಯಲ್ಲಿ (2009- 2017) ಮುಸ್ಲಿಂ ಜನಬಾಹುಳ್ಯ ಹೆಚ್ಚಿರುವ 7 ದೇಶಗಳ ಮೇಲೆ ಅಮೆರಿಕ ಮಿಲಿಟರಿ ಬಾಂಬು ಹಾಕಿದೆ; ಆಕ್ರಮಣ ನಡೆಸಿದೆ. ಇದು ಬರಿಯ ಹೇಳಿಕೆಯಲ್ಲ; ನಿರ್ದಿಷ್ಟ ಅಂಕಿಸಂಖ್ಯೆ ಲಭ್ಯವಿದೆ. ಸಿರಿಯಾ (12,192), ಇರಾಕ್ (12,095), ಅಫ್ಘಾನಿಸ್ತಾನ (1,337), ಲಿಬಿಯಾ (496), ಯೆಮೆನ್ (35), ಸೊಮಾಲಿಯಾ (14) ಮತ್ತು ಪಾಕಿಸ್ತಾನ (3) ಹೀಗೆ ಏಳು ದೇಶಗಳಲ್ಲಿ 26,172 ಬಾಂಬ್‌ಗಳನ್ನು ಒಬಾಮ ಆಡಳಿತ ಹಾಕಿತ್ತು. ಅಂದರೆ ಇದು ಒಂದು ರೀತಿಯಲ್ಲಿ ʼಭೂತದ ಬಾಯಿಯಲ್ಲಿ ಬಂದ ಭಗವದ್ಗೀತೆʼ ಎಂದೇ ಹೇಳಬಹುದು. ಭಾರತವನ್ನು ದೂರುವ ಯಾವ ಅರ್ಹತೆಯೂ ಒಬಾಮಾ ಅವರಿಗೆ ಇಲ್ಲ.

ಒಬಾಮಾ ಆಡಳಿತದಲ್ಲಿಯೂ, ಅದಕ್ಕೆ ಮೊದಲೂ, ಈಗಲೂ ಅಮೆರಿಕದಲ್ಲಿ ಮುಸ್ಲಿಮರ ಸ್ಥಿತಿಗತಿ ಉತ್ತಮವಾಗಿಯೇನೂ ಇರಲಿಲ್ಲ. ಈಗಲೂ ಮುಸ್ಲಿಮರಿಗೆ ಅಮೆರಿಕಕ್ಕೆ ತೆರಳಲು ಬೇಗನೆ ವೀಸಾ ಸಿಗುವುದಿಲ್ಲ. ಪ್ರತೀ ಮುಸ್ಲಿಮರನ್ನೂ ಅಲ್ಲಿ ಭಯೋತ್ಪಾದಕನಂತೆ ನೋಡಲಾಗುತ್ತದೆ. ಮುಸ್ಲಿಂ ಹೆಸರಿನವರನ್ನು ಅನುಮಾನದಿಂದ ನೋಡಲಾಗುತ್ತದೆ. ಮುಸ್ಲಿಂ ದೇಶ ಪ್ಯಾಲೆಸ್ತೀನ್‌ ಮೇಲೆ ದಾಳಿ ನಡೆಸುವ ಇಸ್ರೇಲ್‌ ಅಮೆರಿಕದವರಿಗೆ ಅತ್ಯಾಪ್ತ ರಾಷ್ಟ್ರ. ಅಫಘಾನಿಸ್ತಾನವನ್ನು ಉದ್ಧಾರ ಮಾಡುವ ಹೆಸರಿನಲ್ಲಿ ಸಾಕಷ್ಟು ಕೆಡಿಸಿ, ನಡುನೀರಿನಲ್ಲಿ ಕೈಬಿಟ್ಟುಹೋದ ಕುಖ್ಯಾತಿ ಯಾರದ್ದು ಎಂದು ಬೇರೆ ಹೇಳಬೇಕಿಲ್ಲ. ಹೀಗೆ ತಮ್ಮ ಬಟ್ಟಲಲ್ಲಿ ಕತ್ತೆಯ ಹೆಣ ಇಟ್ಟುಕೊಂಡವರು ಇನ್ನೊಬ್ಬರ ಬಟ್ಟಲಲ್ಲಿ ನೊಣವಿದೆ ಎಂದು ಹೇಳಲು ಹೋಗಬಾರದು.

ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ಮೋದಿಗೆ ಅತ್ಯುನ್ನತ ಗೌರವ; ಭಾರತ-ಈಜಿಪ್ಟ್ ಹೊಸ ಬಾಂಧವ್ಯ

ಅಮೆರಿಕದ ಪ್ರಜಾಪ್ರಭುತ್ವಕ್ಕೆ ಸುದೀರ್ಘ ಇತಿಹಾಸವಿದ್ದರೂ ಅಲ್ಲಿ ಒಬ್ಬ ಮುಸ್ಲಿಂ ಮೂಲದ ಅಧ್ಯಕ್ಷ ಅಧಿಕಾರಕ್ಕೆ ಬರಲು 200 ವರ್ಷಗಳೇ ಬೇಕಾಯಿತು. ಭಾರತದಲ್ಲಿ ಹಾಗಲ್ಲ, ದೇಶ ಸ್ವಾತಂತ್ರ್ಯ ಪಡೆದ 20 ವರ್ಷಗಳಲ್ಲಿಯೇ (1967) ಮೊದಲ ಮುಸ್ಲಿಂ ರಾಷ್ಟ್ರಪತಿಯನ್ನು (ಝಕೀರ್‌ ಹುಸೇನ್)‌ ಆರಿಸಿತು. ಜಗತ್ತಿನ ಇತರ ದೇಶಗಳಿಗೆ ಹೋಲಿಸಿದರೆ, ಅಲ್ಪಸಂಖ್ಯಾತರನ್ನು ಒಳಗೊಳ್ಳುವ ಕ್ರಮಗಳಲ್ಲಿ ಭಾರತ ನಂ.1 ಸ್ಥಾನದಲ್ಲಿದೆ ಎಂದು ಸಿಪಿಎ (ಸೆಂಟರ್ ಫಾರ್ ಪಾಲಿಸಿ ಅನಾಲಿಸಿಸ್) ಇತ್ತೀಚೆಗೆ ನೀಡಿದ ಜಾಗತಿಕ ವರದಿ ಹೇಳಿತ್ತು. ಇದೊಂದು ಸ್ವತಂತ್ರ ಅಂತಾರಾಷ್ಟ್ರೀಯ ಸಂಸ್ಥೆ. 110 ರಾಷ್ಟ್ರಗಳಲ್ಲಿ ಸಮೀಕ್ಷೆ ನಡೆಸಿದಾಗ ಭಾರತವೇ ಅಲ್ಪಸಂಖ್ಯಾತರಿಗೆ ಹೆಚ್ಚು ಸುರಕ್ಷಿತ ಜಾಗ. ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಅಲ್ಪಸಂಖ್ಯಾತರ ಮೇಲೆ ಯಾವುದೇ ನಿರ್ಬಂಧ ಇಲ್ಲ ಎಂದು ಈ ವರದಿ ಉಲ್ಲೇಖಿಸಿತ್ತು. ಭಾರತದ ಜನಸಂಖ್ಯೆಯ ಸುಮಾರು 14%ದಷ್ಟು, ಅಂದರೆ 20 ಕೋಟಿ ಮಂದಿ ಮುಸ್ಲಿಮರು ಇಲ್ಲಿ ಇದ್ದಾರೆ. ಇದು ದೇಶದ ಎರಡನೇ ಅತಿ ದೊಡ್ಡ ಧಾರ್ಮಿಕ ಸಮುದಾಯ. ಇಂಡೋನೇಷ್ಯಾ ಹಾಗೂ ಪಾಕಿಸ್ತಾನದ ಬಳಿಕ ಅತಿ ಹೆಚ್ಚು ಮುಸ್ಲಿಮರು ಇರುವ ದೇಶ ಎಂದರೆ ಭಾರತ. ಇನ್ನುಳಿದ ಇಸ್ಲಾಮಿಕ್‌ದೇಶಗಳೆನಿಸಿಕೊಂಡವು ಕೂಡ ಭಾರತದಷ್ಟು ಸಂಖ್ಯೆಯ ಮುಸ್ಲಿಮರನ್ನು ಹೊಂದಿಲ್ಲ. ಭಾರತದಲ್ಲಿ ಎರಡೂ ಧರ್ಮಗಳೂ ಸಾಕಷ್ಟು ಕೊಡುಕೊಳ್ಳುವಿಕೆ ಮಾಡಿಕೊಂಡು ಸಾಮರಸ್ಯದಿಂದ ಬಾಳುತ್ತಿವೆ. ಈವರೆಗೆ ಪ್ರಧಾನಿ ಮೋದಿಯವರಿಗೆ 13 ದೇಶಗಳು ತಮ್ಮ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ನೀಡಿದ್ದು, ಅದರಲ್ಲಿ 6 ದೇಶಗಳು ಮುಸ್ಲಿಂ ಆಡಳಿತ ಹೊಂದಿರುವಂಥವು.

ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು, ಸ್ವತಃ ಅಮೆರಿಕದ ಮಾಜಿ ಕಮಿಷನರ್‌ ಒಬ್ಬರು ಹೇಳಿರುವಂತೆ ʼʼಒಬಾಮಾ ಅವರು ಭಾರತವನ್ನು ಈ ಕುರಿತು ಶ್ಲಾಘಿಸಲು ಕಲಿಯುವುದುʼʼ ಹೆಚ್ಚು ಒಳ್ಳೆಯದು. ಇದರಿಂದ ಒಬಾಮಾ ಅವರು ತಮ್ಮ ಘನತೆ ಉಳಿಸಿಕೊಳ್ಳಲು ಸಾಧ್ಯವಾಗಬಹುದು.

Exit mobile version