ಪಟನಾ: ಬಿಹಾರದಲ್ಲಿ ಬಿಜೆಪಿ ಸಾಂಗತ್ಯ ತೊರೆದು ಆರ್‌ಜೆಡಿ ಮತ್ತು ಕಾಂಗ್ರೆಸ್ ಜತೆ ಸಖ್ಯ ಬೆಳೆಸಿ ನೂತನ ಸರ್ಕಾರ ರಚಿಸಲು ಮುಂದಾಗಿರುವ ಸಂಯುಕ್ತ ಜನತಾ ದಳದ ನಾಯಕ ನಿತೀಶ್ ಕುಮಾರ್, ಈಗ ಮಿತ್ರ ಪಕ್ಷಗಳಿಂದ ಪ್ರಮುಖ ಸಚಿವ ಸಂಪುಟ ಹುದ್ದೆಗಳಿಗಾಗಿ ಚೌಕಾಸಿ ಎದುರಿಸುತ್ತಿದ್ದಾರೆ.
ರಾಷ್ಟ್ರೀಯ ಜನತಾ ದಳದ ನಾಯಕ ತೇಜಸ್ವಿ ಯಾದವ್ ಅವರು ಹೊಸ ಸರ್ಕಾರದಲ್ಲಿ ಗೃಹ ಸಚಿವ ಹುದ್ದೆಯನ್ನು ಬಯಸುತ್ತಿದ್ದಾರೆ. ಪ್ರತಿ ಸರ್ಕಾರದಲ್ಲೂ ಗೃಹ ಸಚಿವಾಲಯವನ್ನು ನಿತೀಶ್ ಅವರೇ ನಿಭಾಯಿಸುತ್ತಿದ್ದರು. ಇದಲ್ಲದೆ, ವಿಧಾನಸಭೆಯಲ್ಲಿ ಸ್ಪೀಕರ್ ಸ್ಥಾನವನ್ನೂ ಆರ್‌ಜೆಡಿ ಡಿಮ್ಯಾಂಡ್ ಮಾಡಿದೆ. ಕಾಂಗ್ರೆಸ್ ಕೂಡ ತನಗೆ ನಾಲ್ಕು ಸಚಿವ ಸ್ಥಾನಗಳು ಬೇಕು ಎಂದು ಡಿಮ್ಯಾಂಡ್ ಮಾಡಿದೆ. ಮೂರು ಪ್ರಮುಖ ಸಂಪುಟ ಸ್ಥಾನಗಳನ್ನು ಕಾಂಗ್ರೆಸ್‌ಗೆ ನೀಡಲು ನಿತೀಶ್ ಸಿದ್ಧರಾಗಿದ್ದಾರೆ. ಆದರೆ ಕಾಂಗ್ರೆಸ್ ನಾಲ್ಕು ಸ್ಥಾನ ಬಯಸುತ್ತಿದೆ.
ಹೊಸ ಸರ್ಕಾರಕ್ಕೆ ಬೆಂಬಲ ನೀಡಲು ಒಪ್ಪಿರುವ ಕಾಂಗ್ರೆಸ್ ಹಾಗೂ ಎಡಪಕ್ಷಗಳು ತಮ್ಮ ಶಾಸಕರ ಪಟ್ಟಿ ಹಾಗೂ ಸಚಿವ ಸ್ಥಾನದ ಆಕಾಂಕ್ಷೆಯ ಪಟ್ಟಿಯನ್ನು ತೇಜಸ್ವಿ ಅವರಿಗೆ ಒಪ್ಪಿಸಿವೆ.
2015ರಲ್ಲಿ ಸರ್ಕಾರದ ಭಾಗವಾಗಿದ್ದಾಗ ಕಾಂಗ್ರೆಸ್‌ನಲ್ಲಿ 27 ಶಾಸಕರಿದ್ದರು; 4 ಕ್ಯಾಬಿನೆಟ್ ಹುದ್ದೆಗಳನ್ನು ನೀಡಲಾಗಿತ್ತು. ಈಗ 19 ಶಾಸಕರಿದ್ದಾರೆ. ತೇಜಸ್ವಿ ಅವರು ಸೋನಿಯಾ ಗಾಂಧಿ ಜತೆ ದೂರವಾಣಿ ಸಂಭಾಷಣೆ ನಡೆಸಿದ್ದು, ಒಂದು ಉಪ ಸಿಎಂ ಹುದ್ದೆಗಾಗಿ ಬೇಡಿಕೆ ಮಂಡಿಸಿದ್ದಾರೆ, ಆದರೆ ತೇಜಸ್ವಿ ಅದನ್ನು ನಿರಾಕರಿಸಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Bihar Politics | ನೀವು ಮೋದಿ ಹೆಸರಿನಲ್ಲಿ ಗೆದ್ದಿದ್ದೀರಿ ಎಂಬುದನ್ನು ಮರೆಯಬೇಡಿ; ನಿತೀಶ್‌ಗೆ ಟಾಂಗ್ ನೀಡಿದ ಬಿಜೆಪಿ