Site icon Vistara News

BJP-JDS Padayatra: ಪಾದಯಾತ್ರೆಗೆ ಹೈಕೋರ್ಟ್‌ನಿಂದಲೇ ಅನುಮತಿ ಪಡೆದ ಬಿಜೆಪಿ

BJP-JDS Padayatra 1

ಬೆಂಗಳೂರು: “ಭ್ರಷ್ಟ ಕಾಂಗ್ರೆಸ್ ತೊಲಗಿಸಿ” ಎಂಬ ಘೋಷಣೆಯಡಿ ಹಮ್ಮಿಕೊಂಡಿರುವ ಬಿಜೆಪಿ-ಜೆಡಿಎಸ್ ಮೈಸೂರು ಚಲೋ ಪಾದಯಾತ್ರೆಗೆ (BJP-JDS Padayatra) ನೇರವಾಗಿ ಹೈಕೋರ್ಟ್‌ನಿಂದ (High court) ಅನುಮತಿ ಪಡೆಯಲಾಗಿದೆ. ಸರ್ಕಾರದಿಂದ ಅನುಮತಿ ದೊರೆಯುವುದು ವಿಳಂಬವಾದ ಹಿನ್ನೆಲೆಯಲ್ಲಿ ಹೈಕೋರ್ಟ್‌ಗೆ ಹೋಗಿದ್ದ ಬಿಜೆಪಿ (BJP) ಮುಖಂಡರು, ಪಾದಯಾತ್ರೆಗೆ ಅನುಮತಿ ಪಡೆದುಕೊಂಡಿದ್ದಾರೆ.

ಪಾದಯಾತ್ರೆಗೆ ಸರ್ಕಾರದಿಂದ ಅನುಮತಿ ಇಲ್ಲ ಎಂದು ಮೊನ್ನೆ ಗೃಹ ಸಚಿವ ಪರಮೇಶ್ವರ (G Parameshwara) ಹೇಳಿದ ಬೆನ್ನಲ್ಲೇ ಸರ್ಕಾರದಿಂದ ಸಮಸ್ಯೆ ಆಗದಂತೆ ಬಿಜೆಪಿ ಮುನ್ನೆಚ್ಚರಿಕೆ ವಹಿಸಿ ಉಚ್ಚ ನ್ಯಾಯಾಲಯಕ್ಕೆ ತೆರಳಿತ್ತು. ಶಾಸಕ ಪಿ. ರಾಜೀವ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಚಂದನ್ ಗೌಡರ್, ಅನುಮತಿ ನೀಡಿದ್ದು, ಪಾದಯಾತ್ರೆ ಸಾಗುವ ಜಾಗದಲ್ಲಿ ಭದ್ರತೆ ನೀಡುವಂತೆ ಡಿಸಿ, ಎಸ್ಪಿಗೆ ಸೂಚನೆ ನೀಡಿದ್ದಾರೆ.

ಚಾಮುಂಡೇಶ್ವರಿ ದರ್ಶನ

ಮೈಸೂರು: ಮುಡಾ ಹಗರಣ ವಿರುದ್ದ ಇಂದಿನಿಂದ ನಡೆಯಲಿರುವ ಮೈಸೂರು ಚಲೋ ಪಾದಯಾತ್ರೆ ಪ್ರಾರಂಭಕ್ಕೂ ಮುನ್ನ ಬಿಜೆಪಿ ರಾಜ್ಯಾಧ್ಯಕ್ಷ ದೇವಿ ಚಾಮುಂಡೇಶ್ವರಿ ಮೊರೆಹೋದರು. ಮೈಸೂರಿನ‌ ಚಾಮುಂಡಿ ಬೆಟ್ಟಕ್ಕೆ ಬಿ.ವೈ ವಿಜಯೇಂದ್ರ ಭೇಟಿ ನೀಡಿ ನಾಡದೇವತೆ ಚಾಮುಂಡಿ ತಾಯಿ ದರ್ಶನ ಪಡೆದರು. ಪಾದಯಾತ್ರೆ ಯಶಸ್ಸಿಗೆ ಚಾಮುಂಡೇಶ್ವರಿ ಬಳಿ ಪ್ರಾರ್ಥನೆ ಮಾಡಿ, ದಂಪತಿ ಸಮೇತ ಚಾಮುಂಡಿಗೆ ವಿಶೇಷ ಪೂಜೆ ಸಲ್ಲಿಸಿದರು. ವಿಜಯೇಂದ್ರಗೆ ಮಾಜಿ ಶಾಸಕ ನಾಗೇಂದ್ರ ಸೇರಿ ಮುಖಂಡರು ಸಾಥ್ ನೀಡಿದರು.

ಇಂದು 9.30ಕ್ಕೆ ಚಾಲನೆ

ಬಿಜೆಪಿ-ಜೆಡಿಎಸ್ ಪಾದಯಾತ್ರೆಗೆ ಅನುಮತಿ ಕೊಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. “ಭ್ರಷ್ಟ ಕಾಂಗ್ರೆಸ್ ತೊಲಗಿಸಿ” ಎಂಬ ಘೋಷಣೆಯಡಿ ಹಮ್ಮಿಕೊಂಡಿರುವ ಬಿಜೆಪಿ-ಜೆಡಿಎಸ್ ಮೈಸೂರು ಚಲೋ ಪಾದಯಾತ್ರೆಗೆ (BJP-JDS Padayatra) ಶನಿವಾರ ಬೆಳಗ್ಗೆ 9.30ಕ್ಕೆ ಕೆಂಗೇರಿಯ ಕೆಂಪಮ್ಮ ದೇವಸ್ಥಾನದ ಬಳಿ ಚಾಲನೆ ನೀಡಲಾಗುತ್ತದೆ. ಏಳು ದಿನಗಳ ಪಾದಯಾತ್ರೆ ಸಾಗುವ ಮಾರ್ಗದ ವಿವರವನ್ನು ಇಲ್ಲಿ ನೀಡಲಾಗಿದೆ.

ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ, ಕೇಂದ್ರ ಸಚಿವರಾದ ಎಚ್‌.ಡಿ. ಕುಮಾರಸ್ವಾಮಿ, ಪ್ರಹ್ಲಾದ್ ಜೋಶಿ ಅವರು ಚಾಲನೆ ನೀಡಲಿದ್ದಾರೆ. ಒಟ್ಟು 124 ಕಿ.ಮೀ ಪಾದಯಾತ್ರೆ ಸಾಗಲಿದ್ದು, ಸಮಾರೋಪ ಸಮಾರಂಭ ಸೇರಿ ಒಟ್ಟು ಎಂಟು ದಿನಗಳ ಕಾರ್ಯಕ್ರಮದ ಮಾಹಿತಿ ಇಲ್ಲಿದೆ.

ಪಾದಯಾತ್ರೆ ಸಾಗುವ ಮಾರ್ಗದ ವಿವರ
ಆ.3- ಕೆಂಗೇರಿಯಿಂದ ಹೊರಟು ಬಿಡದಿಯಲ್ಲಿ ವಾಸ್ತವ್ಯ
ಆ.4- ಬಿಡದಿಯಿಂದ ಹೊರಟು ಕೆಂಗಲ್‌ನಲ್ಲಿ ಹಾಲ್ಟ್
ಆ.5- ಕೆಂಗಲ್ ನಿಂದ ಹೊರಟು ನಿಡಘಟ್ಟದಲ್ಲಿ ವಾಸ್ತವ್ಯ
ಆ.6- ನಿಡಘಟ್ಟದಿಂದ ಹೊರಟು ಮಂಡ್ಯ
ಆ.7- ಮಂಡ್ಯದಿಂದ ಹೊರಟು ತೂಬಿನಕೆರೆಯಲ್ಲಿ ವಾಸ್ತವ್ಯ
ಆ.8- ತೂಬಿನ ಕೆರೆಯಿಂದ ಹೊರಟು ಶ್ರೀರಂಗಪಟ್ಟಣದಲ್ಲಿ ಹಾಲ್ಟ್
ಆ.9- ಶ್ರೀರಂಗಪಟ್ಟಣದಿಂದ ಹೊರಟು ಮೈಸೂರು ಹೊರವಲಯದಲ್ಲಿ ವಾಸ್ತವ್ಯ
ಆ.10- ಮೈಸೂರು ಹೊರವಲಯದಿಂದ ಕೇಂದ್ರ ನಾಯಕರ ಜತೆ ಪಾದಯಾತ್ರೆ ಹೊರಟು ಸಮಾರೋಪ ಸಮಾರಂಭದ ವೇದಿಕೆ ತಲುಪುವುದು.

ನಗರದಲ್ಲಿ ಪ್ರತಿಭಟನೆಗೆ ಅವಕಾಶವಿಲ್ಲ ಎಂದ ಕಮಿಷನರ್

ನಾಳೆ ಬಿಜೆಪಿ-ಜೆಡಿಎಸ್ ಪಾದಯಾತ್ರೆ ಹಿನ್ನೆಲೆ‌ ನಗರ ಪೊಲೀಸ್ ಆಯುಕ್ತ ದಯಾನಂದ್ ಪ್ರತಿಕ್ರಿಯಿಸಿ, ಎಲ್ಲಿಂದ ಯಾವ ರೀತಿ ಪಾದಯಾತ್ರೆ ಮಾಡುತ್ತಾರೋ ಅಂತ ಇನ್ನೂ ಗೊತ್ತಿಲ್ಲ. ನಗರದಲ್ಲಿ ಪ್ರತಿಭಟನೆ, ರ‍್ಯಾಲಿ, ಪಾದಯಾತ್ರೆಗೆ ಅನುಮತಿ ಇಲ್ಲ. ಹೈಕೋರ್ಟ್ ಆದೇಶದ ಅನ್ವಯ ಅನುಮತಿ ಇಲ್ಲ. ಆದರೂ ಪೂರಕವಾಗಿ ಎಲ್ಲಾ ವ್ಯವಸ್ಥೆ ಮಾಡಿಕೊಳ್ಳುತ್ತೇವೆ. ನನ್ನ ಮಟ್ಟದಲ್ಲಿ ಯಾರು ಬಂದು ಇದುವರೆಗೂ ಅನುಮತಿ ಕೇಳಿಲ್ಲ. ಪ್ರತಿಭಟನೆಗೆ ಬೆಂಗಳೂರಿನಲ್ಲಿ ಯಾವುದೇ ಅವಕಾಶವಿಲ್ಲ ಎಂದು ತಿಳಿಸಿದ್ದಾರೆ.

ಪಾದಯಾತ್ರೆ ಹಿನ್ನಲೆಯಲ್ಲಿ ಕೆಂಗೇರಿಯಲ್ಲಿ ಎರಡು ಕೆಎಸ್ಆರ್‌ಪಿ ತುಕಡಿ, 100 ಜನ ಪೊಲೀಸರ ನಿಯೋಜನೆ ಮಾಡಲಾಗಿದೆ. 2 ಎಸಿಪಿ, 7 ಜನ ಇನ್ಸ್ಪೆಕ್ಟರ್ 15 ಜನ ಸಬ್ ಇನ್ಸ್ಪೆಕ್ಟರ್ ಸೇರಿ ನೂರು ಜನರಿಂದ ಬಂದೋಬಸ್ತ್ ಮಾಡಲಾಗಿದೆ. ರಾಮನಗರದವರೆಗೂ ಬೆಂಗಳೂರು ನಗರ ಪೊಲೀಸರು ಬಂದೋಬಸ್ತ್ ಒದಗಿಸಲಿದ್ದಾರೆ.

ಇದನ್ನೂ ಓದಿ: BJP-JDS Padayatra: ಮೈಸೂರು ಚಲೋಗೆ ಸರ್ಕಾರ ಅನುಮತಿ; ನಾಳೆ ಬೆಳಗ್ಗೆ ಚಾಲನೆ, ಪಾದಯಾತ್ರೆ ಮಾರ್ಗದ ವಿವರ ಇಲ್ಲಿದೆ

Exit mobile version