ಬೆಂಗಳೂರು: ಮೈಸೂರು ಚಲೋ ಪಾದಯಾತ್ರೆ ವೇಳೆ ಹೃದಯಾಘಾತದಿಂದ ಬಿಜೆಪಿ ಕಾರ್ಯಕರ್ತೆ ಮೃತಪಟ್ಟಿರುವ ಘಟನೆ (BJP-JDS Padayatra) ಸೋಮವಾರ ನಡೆದಿದೆ. ಆಸ್ಪತ್ರೆಗೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹಾಗೂ ವಿವಿಧ ಮುಖಂಡರು ಭೇಟಿ ನೀಡಿ ಅಂತಿಮ ದರ್ಶನ್ ಪಡೆದಿದ್ದಾರೆ.
ಬೆಂಗಳೂರಿನ ಬನಶಂಕರಿಯ ಗೌರಮ್ಮ (72) ಎಂಬುವರು ಪಾದಯಾತ್ರೆಯಲ್ಲಿ ಭಾಗಿಯಾಗಿದ್ದರು. ಪಾದಯಾತ್ರೆ ವೇಳೆ ಹೃದಯಾಘಾತವಾಗಿದ್ದರಿಂದ ಅವರು ಅಸ್ವಸ್ಥಗೊಂಡಿದ್ದರು. ಅವರನ್ನು ಕೂಡಲೇ ಚನ್ನಪಟ್ಟಣದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಆಸ್ಪತ್ರೆಗೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ನಿಖಿಲ್ ಕುಮಾರಸ್ವಾಮಿ ತೆರಳಿ ಅಂತಿಮ ದರ್ಶನ ಪಡೆದು, ಮೃತರ ಕುಟುಂಬಕ್ಕೆ ಆರ್ಥಿಕ ನೆರವು ನೀಡುವ ಭರವಸೆ ನೀಡಿದ್ದಾರೆ.
ಬಿಜೆಪಿ ಮುಖಂಡ ಅಸ್ವಸ್ಥ; ಆಸ್ಪತ್ರೆಗೆ ದಾಖಲು
ಚನ್ನಪಟ್ಟಣದಲ್ಲಿ ಪಾದಯಾತ್ರೆ ವೇಳೆ ಬಿಜೆಪಿ ಮುಖಂಡರೊಬ್ಬರು ಕೂಡ ಅಸ್ವಸ್ಥಗೊಂಡಿದ್ದು, ಅವರನ್ನು ಕೂಡಲೇ ಆಂಬ್ಯುಲೆನ್ಸ್ ಮೂಲಕ ರಾಮನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಂಗಳೂರಿನ ಬಿಜೆಪಿ ಜಯನಗರ ಮಂಡಲ ಉಪಾಧ್ಯಕ್ಷ ಶಂಕರ್ ಅಸ್ವಸ್ಥಗೊಂಡವರು.
ಪಾದಯಾತ್ರೆ ಸಂದರ್ಭದಲ್ಲಿ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಶಾಸಕರಾದ ಸಿ.ಕೆ. ರಾಮಮೂರ್ತಿ ಮತ್ತು ರವಿಸುಬ್ರಮಣ್ಯ ಮತ್ತಿತರರು ತೆರಳಿ ಶಂಕರ್ ಆರೋಗ್ಯ ವಿಚಾರಿಸಿದ್ದಾರೆ.
ಇದನ್ನೂ ಓದಿ | PSI Parashuram Case: ನಾನು ಯಾವ ಪೊಲೀಸ್ ಬಳಿಯೂ ದುಡ್ಡು ಕೇಳಿಲ್ಲ: ಶಾಸಕ ಚನ್ನಾರೆಡ್ಡಿ ಪಾಟೀಲ
ಮುಂದಿನ ಚುನಾವಣೆಯಲ್ಲಿ ಬಿಜೆಪಿ- ಜೆಡಿಎಸ್ 150 ಸೀಟು ಖಚಿತ: ಬಿಎಸ್ ಯಡಿಯೂರಪ್ಪ
ರಾಮನಗರ: ಬಿಜೆಪಿ- ಜೆಡಿಎಸ್ ಮೈತ್ರಿಕೂಟ ಸಂಬಂಧ ಶಾಶ್ವತ. ರಾಜ್ಯದ ಜನತೆ ಭ್ರಷ್ಟ ಕಾಂಗ್ರೆಸ್ (Congress) ಸರಕಾರದಿಂದ ಬೇಸತ್ತಿದ್ದು, ಮುಂದಿನ ಚುನಾವಣೆಯಲ್ಲಿ ಬಿಜೆಪಿ- ಜೆಡಿಎಸ್ ಮೈತ್ರಿಕೂಟದಿಂದ (BJP-JDS Alliance) ಮುಂಬರುವ ಚುನಾವಣೆಯಲ್ಲಿ 150ಕ್ಕೂ ಹೆಚ್ಚು ಸೀಟು ಗೆಲ್ಲುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ (BS Yediyurappa) ಹೇಳಿದ್ದಾರೆ.
ʼಮೈಸೂರು ಚಲೋʼ ಪಾದಯಾತ್ರೆಯ (BJP-JDS Padayatra) ಮೂರನೇ ದಿನದ ನಡಿಗೆ ಹಾಗೂ ಚನ್ನಪಟ್ಟಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಇಂದು ಈ ರಾಜ್ಯದ ಮುಖ್ಯಮಂತ್ರಿ ಅನೇಕ ಭ್ರಷ್ಟಾಚಾರಕ್ಕೆ ಸಿಲುಕಿದ್ದಾರೆ. ಉಸಿರುಗಟ್ಟುವ ವಾತಾವರಣದಲ್ಲಿ ಸಿಲುಕಿದ್ದಾರೆ. ಗೌರವಯುತವಾಗಿ ಅವರು ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.
ತೋಳ್ಬಲ, ಹೆಂಡದ ಬಲ, ಅಧಿಕಾರದ ಬಲದಿಂದ ಬಂದಿರುವ ಸಿಎಂ ಅನೇಕ ಭ್ರಷ್ಟಾಚಾರಗಳಲ್ಲಿ ಸಿಲುಕಿ ನರಳುತ್ತಿದ್ದಾರೆ. ಕೇಂದ್ರದಲ್ಲಿ ಕಾಂಗ್ರೆಸ್ ನಾಯಕತ್ವ ಇದ್ದರೆ ಕೂಡಲೇ ಸಿದ್ದರಾಮಯ್ಯ ಅವರಿಂದ ರಾಜೀನಾಮೆ ಪಡೆಯಬೇಕು. ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ಸಿದ್ದರಾಮಯ್ಯ ಅವರಂತೆ ಮುಡಾದಲ್ಲಿ 14 ಸೈಟು ಪಡೆದಿರೋದು ಯಾರೂ ಇಲ್ಲ. ಒಬ್ಬ ಮುಖ್ಯಮಂತ್ರಿ ತನ್ನ ಪತ್ನಿ ಹೆಸರಿಗೆ 14 ಸೈಟು ಪಡೆದಿದ್ದಾರೆ. ಅವರೇ ಅದನ್ನು ಒಪ್ಪಿಕೊಂಡಿದ್ದಾರೆ. 60 ಕೋಟಿ ಬೆಲೆ ಬಾಳಲಿದೆ ಅಂತಲೂ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷ ಕೇಂದ್ರದ ನಾಯಕರಿಗೆ ಜವಾಬ್ದಾರಿ ಇದ್ದರೆ ಕೂಡಲೇ ಅವರ ರಾಜೀನಾಮೆ ಪಡೆಯಬೇಕು ಎಂದು ಆಗ್ರಹಿಸಿದ್ದಾರೆ.
ವಾಲ್ಮೀಕಿ ನಿಗಮದಂಥ ಬೃಹತ್ ಹಗರಣ ಹಿಂದೆಂದೂ ಆಗಿರಲಿಲ್ಲ. ಇನ್ಸ್‌ಪೆಕ್ಟರ್ ವರ್ಗಾವಣೆಗೆ 30-40 ಲಕ್ಷ ತಗೋಳೋದು ನೋಡಿರಲಿಲ್ಲ. ಇದರಿಂದಾಗಿ ಪೊಲೀಸ್ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿರೋದನ್ನ ನೀವು ನೋಡಿದ್ದೀರಿ. ಇದು ಅತ್ಯಂತ ಭ್ರಷ್ಟ ಸರಕಾರ ಎಂದು ಅವರು ಆಪಾದಿಸಿದರು.
ಬಿಜೆಪಿ-ಜೆಡಿಎಸ್ ಸಂಬಂಧ ಶಾಶ್ವತ ಸಂಬಂಧ. ನಾವು ಜೊತೆಯಾಗಿ ಪಾದಯಾತ್ರೆಯಲ್ಲಿ ಭಾಗಿಯಾಗಿದ್ದೇವೆ. ಮುಂಬರುವ ಚುನಾವಣೆಯಲ್ಲಿ 150ಕ್ಕೂ ಹೆಚ್ಚು ಸೀಟು ಗೆಲ್ಲುತ್ತೇವೆ. ಮೈಸೂರಿನಲ್ಲಿ ಎರಡು ಲಕ್ಷ ಜನ ಸೇರಿಸಿ ಸಮಾರೋಪ ಮಾಡಲಿದ್ದೇವೆ. ನಿಮ್ಮ ಕೇಂದ್ರದ ನಾಯಕರಿಗೆ ಭ್ರಷ್ಟಾಚಾರದ ಮನವರಿಕೆ ಮಾಡುವ ಕೆಲಸ ಮಾಡ್ತಿದ್ದೇವೆ. ಈಗಲಾದ್ರೂ ಮುಖ್ಯಮಂತ್ರಿ ರಾಜೀನಾಮೆ ಪಡೆಯಬೇಕು. ಪಾದಯಾತ್ರೆ ಮೈಸೂರು ತಲುಪುವುದರ ಒಳಗೆ ಸಿಎಂ ರಾಜೀನಾಮೆ ಕೊಡದಿದ್ರೆ ನಮ್ಮ ಮುಂದಿನ ಹೋರಾಟ ರೂಪಿಸಲಿದ್ದೇವೆ ಎಂದು ಅವರು ಎಚ್ಚರಿಸಿದರು.
ʼನಮ್ಮ ಈ ಹೋರಾಟ ನಾವು ಅಧಿಕಾರಕ್ಕೆ ಬರಬೇಕು ಅಂತಲ್ಲ. ಈ ರಾಜ್ಯದಲ್ಲಿ ವಚನಭ್ರಷ್ಟ ಸರ್ಕಾರ ಅಧಿಕಾರದಲ್ಲಿದೆ. ವಾಲ್ಮೀಕಿ ನಿಗಮದ 187 ಕೋಟಿ ಲೂಟಿ ಮಾಡಿದೆ. ನಮ್ಮ ಹೋರಾಟದ ಪರಿಣಾಮವಾಗಿ ದೆಹಲಿಯಿಂದ ಕಾಂಗ್ರೆಸ್ ವರಿಷ್ಠರು ಬಂದಿದ್ದಾರೆ. ಸಿಎಂ ಪರವಾಗಿ ಗಟ್ಟಿಯಾಗಿ ನಿಲ್ಲುವಂತೆ ಆಡಳಿತ ಪಕ್ಷದ ಶಾಸಕರಿಗೆ ಸೂಚಿಸಲು ಬಂದಿದ್ದಾರೆ. ಆಡಳಿತ ಪಕ್ಷದ ಶಾಸಕರಿಗೆ ಅನುದಾನ ಕೊಡೋದಾಗಿ ಭರವಸೆ ಕೂಡ ನೀಡಿದ್ದಾರೆ. ಆದರೆ ಈ ಸರ್ಕಾರ ಎಷ್ಟು ಬೇಗ ತೊಲಗಲಿದೆಯೋ, ಅಷ್ಟು ಒಳ್ಳೆಯದುʼ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ನುಡಿದರು.