ಮೈಸೂರು: ನಿನ್ನೆ ಸಿಎಂ ಸಿದ್ದರಾಮಯ್ಯ (CM Siddaramaiah) ಬೃಹತ್ ಜನಾಂದೋಲನ ಸಮಾವೇಶ (Janandolana) ನಡೆಸಿದ ಮೈಸೂರಿನಲ್ಲಿ (Mysore) ಇಂದು ದೋಸ್ತಿ ಪಕ್ಷಗಳ ಶಕ್ತಿ ಪ್ರದರ್ಶನ ನಡೆಯಲಿದೆ. ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಬಿಜೆಪಿ-ಜೆಡಿಎಸ್ ಪಾದಯಾತ್ರೆ (BJP-JDS Padayatra) ಸಮಾರೋಪ ಸಮಾವೇಶ ನಡೆಯಲಿದೆ.
ಮೈಸೂರಿನ ಮುಡಾ ಹಗರಣ, ವಾಲ್ಮೀಕಿ ನಿಗಮ ಹಗರಣಗಳಲ್ಲಿ ಹೊಣೆ ಹೊತ್ತು ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ʼಮೈಸೂರು ಚಲೋʼ ಪಾದಯಾತ್ರೆಯನ್ನು ಒಂದು ವಾರದಿಂದ ನಡೆಸುತ್ತಿರುವ ಬಿಜೆಪಿ- ಜೆಡಿಎಸ್, ಅಂತಿಮ ಘಟ್ಟ ತಲುಪಿವೆ. ಪಾದಯಾತ್ರೆ ಮೈಸೂರು ತಲುಪುವ ಮುನ್ನ ಸಿಎಂ ರಾಜೀನಾಮೆ ನೀಡಬೇಕು. ಇಲ್ಲವಾದರೆ ಇನ್ನಷ್ಟು ಉಗ್ರ ಹೋರಾಟ ಹಮ್ಮಿಕೊಳ್ಳುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಆಗ್ರಹಿಸಿದ್ದರು.
ಇಂದು ಮೈಸೂರು ನಗರದಲ್ಲಿ ದೋಸ್ತಿ ಪಕ್ಷಗಳ ಪಾದಯಾತ್ರೆ ನಡೆಯಲಿದೆ. ಕೊಲಂಬಿಯಾ ಏಷಿಯಾ ಜಂಕ್ಷನ್‌ನಿಂದ ಪಾದಯಾತ್ರೆ ಬೆಳಗ್ಗೆ 9.30ಕ್ಕೆ ಪ್ರಾರಂಭವಾಗಲಿದ್ದು, ಬೆಳಗ್ಗೆ 11.30ಕ್ಕೆ ಮಹಾರಾಜ ಕಾಲೇಜು ಮೈದಾನದಲ್ಲಿ ಜಮಾವಣೆಯಾಗಲಿದೆ. ಬೃಹತ್ ಸಮಾವೇಶದ ಮೂಲಕ ಪಾದಯಾತ್ರೆಗೆ ತೆರೆ ಬೀಳಲಿದೆ. ಅಂದಾಜು 1 ಲಕ್ಷಕ್ಕೂ ಅಧಿಕ ಜನ ಸೇರುವ ನಿರೀಕ್ಷೆ ಇದೆ.
ಸಮಾವೇಶದಲ್ಲಿ ಮಾಜಿ ಸಿಎಂಗಳಾದ ಬಿ.ಎಸ್.ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ ಸೇರಿದಂತೆ ಪ್ರಮುಖರು ಭಾಗಿಯಾಗಲಿದ್ದಾರೆ.
ದಲಿತರ ಹಣವೇ ಬೇಕಿತ್ತೆ: ಅಶೋಕ್
ವಾಲ್ಮೀಕಿ ಹಗರಣ ಮಾಡಿ ದಲಿತರ ಹಣ ಹೊಡೆದು ಗ್ಯಾರಂಟಿಗೆ ಹಣ ಹೊಂದಿಸಬೇಕಿತ್ತಾ? ಬೇರೆ ಜಾತಿಯ ಹಣ ಬೇಕಿಲ್ಲ ಇವರಿಗೆ ಎಂದು ಟೀಕಿಸಿರುವ ವಿಪಕ್ಷ ನಾಯಕ ಆರ್. ಅಶೋಕ್, ನಿಮಗೆ ಧೈರ್ಯ ಇದ್ದಿದ್ರೆ ವಿರೋಧ ಪಕ್ಷದಲ್ಲಿದಾಗ ನಮ್ಮ ದಾಖಲೆ ಬಿಡುಗಡೆ ಮಾಡಬೇಕಿತ್ತು ಎಂದಿದ್ದಾರೆ.
ಕಾಂಗ್ರೆಸ್ 14 ತಿಂಗಳ ಕಾಲ ಮಾಡಿದ ಭ್ರಷ್ಟಾಚಾರದ ಪುಸ್ತಕ ನಾವು ಬಿಡುಗಡೆ ಮಾಡುತ್ತೇವೆ. 14 ಅವತಾರಗಳಿವೆ. ಬ್ರಾಂಡ್ ಬೆಂಗಳೂರು ಬ್ಯಾಡ್ ಬೆಂಗಳೂರು ಮಾಡಿದ್ರಿ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದೆಗೆಟ್ಟಿದೆ ಎಂದು ಟೀಕಿಸಿದರು. ಸದನದಲ್ಲಿ ಮಾತಾಡಲು ನಮಗೆ ಅವಕಾಶ ಕೊಡಬೇಕಿತ್ತು. ಅದಕ್ಕೆ ನಮ್ಮ ಹೋರಾಟ ಎಂದರು.
ಸಿದ್ದರಾಮಯ್ಯ 5 ಗ್ಯಾರಂಟಿ ಜೊತೆಗೆ 50 ಗ್ಯಾರಂಟಿ ತನ್ನಿ. ಎಲ್ಲರಿಗೂ ಕೊಡಿ ನಮ್ಮ ವಿರೋಧ ಇಲ್ಲ. ಸಿದ್ದರಾಮಯ್ಯ ಬಹಳ ಭಯಬೀತರಾಗಿದ್ದಾರೆ. ಪಾಪ ಎರಡೂ ದಿನ ಮನೆಯಲ್ಲೆ ಕುಳಿತಿದ್ರು. ದುಡ್ಡು ಲೂಟಿ ಹೊಡೆಯುತ್ತಿದ್ದಾರೆ. ಸರ್ಕಾರ ದಾರಿ ತಪ್ಪಿದೆ. ವಾಲ್ಮೀಕಿ ಹಗರಣದ ಇಡಿ, ಸಿಬಿಐ, ತನಿಖೆ ನಡೆಯುತ್ತಿದೆ. ಹಣ ಸೀಜ್ ಮಾಡಿ ಜೈಲಿಗೆ ಹಾಕಿದ್ದಾರೆ. ಮುಡಾ ಹಗರಣದಲ್ಲಿ ಇನ್ನೂ ಯಾರು ಜೈಲಿಗೆ ಹೋಗಿಲ್ಲ ಎಂದರು.
ಭ್ರಷ್ಟಾಚಾರದ ಬಗ್ಗೆ ತಿಳಿಸುವ ಕೆಲಸ ವಿರೋಧ ಪಕ್ಷದ ಹಕ್ಕು.. ಆದರೆ ಕಾಂಗ್ರೆಸ್ ಪಕ್ಷ ಬೀದಿಗಳಿದು ಹೋರಾಟ ಮಾಡ್ತಿದೆ. ಅವರು ವಿಧಾನ ಸಭೆ ಒಳಗೆ ಹೇಳುವುದು ಕರ್ತವ್ಯ. ಸರ್ಕಾರ ಬೀದಿಗಿಳಿದು ನಾನು ಕಳ್ಳ ಅಲ್ಲ ಕಳ್ಳ ಅಲ್ಲ ಅಂತ ಸಾರುತ್ತಿದೆ. ನಮ್ಮದು ಹೋರಾಟ, ಕಾಂಗ್ರೆಸ್ ಅವರದು ಹಾರಾಟ. ಮಂತ್ರಿಗೆ ಇನ್ ಚಾರ್ಜ್ ಕೊಟ್ಟು ಸಭೆ ಮಾಡ್ತಾರೆ. ಕಾಂಗ್ರೆಸ್ ನಾಟಕ ಆಡುತ್ತಿದೆ ಎಂದು ಟೀಕಿಸಿದರು.
ಇದನ್ನೂ ಓದಿ: Congress Meeting: ನನ್ನದು ಹೋರಾಟದ ಬದುಕು, ಬಿಜೆಪಿ-ಜೆಡಿಎಸ್ ಎಷ್ಟೇ ಪಾದಯಾತ್ರೆ ಮಾಡಿದ್ರೂ ಜಗ್ಗಲ್ಲ ಎಂದ ಸಿಎಂ