ಬೆಂಗಳೂರು: ತಮಗೆ ಕಾಂಗ್ರೆಸ್‌ನಿಂದ (Congress) ಆಫರ್ ಇರುವುದು ನಿಜ. ಭಾರತೀಯ ಜನತಾ ಪಕ್ಷದಲ್ಲಿ (BJP) ತಮ್ಮ ಕಡೆಗಣನೆ ಮುಂದುವರಿದರೆ ತಾವು ಅತ್ತ ತೆರಳುವುದಾಗಿ ಬಿಜೆಪಿ ಮುಖಂಡ, ಯಶವಂತಪುರ ಶಾಸಕ ಎಸ್.ಟಿ ಸೋಮಶೇಖರ್ (ST Somashekhar) ಸ್ಪಷ್ಟವಾಗಿ ಹೇಳಿದ್ದಾರೆ.
ವಿಸ್ತಾರ ನ್ಯೂಸ್ (Vistara News) ಜೊತೆಗೆ ಮಾತನಾಡುತ್ತ ಮಾಜಿ ಸಚಿವ ಈ ಹೇಳಿಕೆ ನೀಡಿದ್ದಾರೆ. ಇತ್ತೀಚೆಗೆ ಅವರು ಡಿ.ಕೆ ಶಿವಕುಮಾರ್ (DK Shivakumar) ಮುಂತಾದ ಕಾಂಗ್ರೆಸ್ ನಾಯಕರ ಜೊತೆಗೆ ಹೆಚ್ಚು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವುದು ಹಾಗೂ ಬಿಜೆಪಿಯ ಕಾರ್ಯಕ್ರಮಗಳಿಗೆ ಗೈರುಹಾಜರಾಗುತ್ತಿರುವ ಹಿನ್ನೆಲೆಯಲ್ಲಿ ಸೋಮಶೇಖರ್ ಕಾಂಗ್ರೆಸ್ ಸೇರ್ಪಡೆಯ ಬಗ್ಗೆ ಚರ್ಚೆಯಾಗುತ್ತಿದೆ.
“ನನಗೆ ಕಾಂಗ್ರೆಸ್‌ನಿಂದ ಆಫರ್ ಇರುವುದು ನಿಜ. ಬೆಳಗಾವಿ ಅಧಿವೇಶನ ನಡೆಯುವಾಗ ನನ್ನನ್ನೂ ಸೇರಿದಂತೆ ಐದು ಜನರನ್ನು ಕರೆದಿದ್ದರು. ನೀವು ಐದು ಜನರು ಕಾಂಗ್ರೆಸ್‌ಗೆ ಬಂದರೆ ಒಳ್ಳೆಯ ಭವಿಷ್ಯ ಇದೆ ಎಂದು ಹೇಳಿದ್ದರು. ನಾನು ಕಾಂಗ್ರೆಸ್‌ನಲ್ಲಿ ಹಲವು ವರ್ಷಗಳ ಕಾಲ ದುಡಿದಿದ್ದೇನೆ. ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಪರಮೇಶ್ವರ್ ಅವರು ಹೇಳಿದ ಪಕ್ಷದ ಕೆಲಸ ಮಾಡಿದ್ದೇನೆ. ಹೀಗಾಗಿ ಪಕ್ಷಕ್ಕೆ ಬನ್ನಿ ಎಂದು ಕರೆದರು. ಆದರೆ ನನಗೆ ಬಿಜೆಪಿ ಬಿಡುವ ಮನಸ್ಸು ಇಲ್ಲ” ಎಂದು ಸೋಮಶೇಖರ್ ಹೇಳಿದ್ದಾರೆ.
“ಆದರೆ ನನ್ನ ಕ್ಷೇತ್ರದಲ್ಲಿ ಕೆಲವು ಬಿಜೆಪಿ ಮುಖಂಡರು ನನ್ನ ವಿರುದ್ಧ ಇದ್ದಾರೆ. ನನ್ನನ್ನು ಸೋಲಿಸಬೇಕು ಎಂದು ಮಾತನಾಡ್ತಾರೆ. ಅಂತಹವರ ಬಗ್ಗೆ ಪಕ್ಷದ ರಾಜ್ಯಾಧ್ಯಕ್ಷ ವಿಜೇಯೇಂದ್ರ ಮತ್ತು ವಿಪಕ್ಷ ನಾಯಕ ಅಶೋಕ್ ಅವರಿಗೆ ಮಾಹಿತಿ ನೀಡಿದ್ದೇನೆ. ಪಕ್ಷದಲ್ಲಿ ನಮ್ಮನ್ನು ಪರಿಗಣಿಸದಿದ್ದರೆ ನಮ್ಮ ದಾರಿ ನಾವು ನೋಡಿಕೊಳ್ಳುತ್ತೇವೆ. ಸಮಸ್ಯೆ ಬಗೆಹರಿಸದಿದ್ದರೆ ಪಕ್ಷ ಬಿಡುವ ನಿರ್ಧಾರ ಮಾಡುತ್ತೇನೆ” ಎಂದಿದ್ದಾರೆ.
“ವಿಜಯೇಂದ್ರ ಅವರ ತಂದೆ ಸಿಎಂ ಆಗಿದ್ದಾಗಲೂ ನಮ್ಮನ್ನು ಸರಿಯಾಗಿ ನಡೆಸಿಕೊಂಡಿದ್ದಾರೆ. ಕ್ಷೇತ್ರದಲ್ಲಿ ಇರುವ ಕೆಲ ಕಾರ್ಯಕರ್ತರು ಅಪಪ್ರಚಾರ ಮಾಡುತ್ತಿದ್ದಾರೆ. ನಾನು ಲೋಕಸಭಾ ಟಿಕೆಟ್ ಆಕಾಂಕ್ಷಿ ಅಲ್ಲ. ನನ್ನ ಮಗ ಶಿಕ್ಷಣ ಸಂಸ್ಥೆ ನಡೆಸುತ್ತಿದ್ದಾನೆ. ಮಗನಿಗಾಗಿ ಲೋಕಸಭಾ ಟಿಕೆಟ್ ಆಕಾಂಕ್ಷಿ ಅನ್ನೋದು ತಪ್ಪು. ನನ್ನ ಸಮಸ್ಯೆ ಬಗೆಹರಿಸದಿದ್ದರೆ ನನ್ನ ತೀರ್ಮಾನ ನಾನು ತೆಗೆದುಕೊಳ್ಳಬೇಕಾಗುತ್ತೆʼʼ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: Power Point with HPK : ಎಸ್‌ಟಿ ಸೋಮಶೇಖರ್, ಭೈರತಿ ಬಸವರಾಜ್‌ಗೆ ಕಾಂಗ್ರೆಸ್‌ನಿಂದ ಬ್ಲ್ಯಾಕ್‌ಮೇಲ್!