Site icon Vistara News

Petrol Diesel Price: ಪೆಟ್ರೋಲ್‌ ಬೆಲೆ ಏರಿಕೆ ವಿರೋಧಿಸಿ ಇಂದು ಬಿಜೆಪಿ ಮಿಂಚಿನ ಪ್ರತಿಭಟನೆ

petrol diesel price hike

ಬೆಂಗಳೂರು: ಇದ್ದಕ್ಕಿದ್ದಂತೆ ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆಗಳನ್ನು (petrol diesel price hike) ಏರಿಸಿರುವ ರಾಜ್ಯ ಸರಕಾರದ (Karnataka Govt) ಕ್ರಮವನ್ನು ವಿರೋಧಿಸಿ ಪ್ರತಿಪಕ್ಷ ಬಿಜೆಪಿ (BJP) ಇಂದು ರಾಜ್ಯಾದ್ಯಂತ ಮಿಂಚಿನ ಪ್ರತಿಭಟನೆಗೆ (protest) ಮುಂದಾಗಿದೆ. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ (Freedom park) ಹಾಗೂ ರಾಜ್ಯದ ನಾನಾ ಕಡೆ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆಗಳು ನಡೆಯಲಿವೆ.

ಲೋಕಸಭಾ ಚುನಾವಣೆ (Lok Sabha Election results) ಫಲಿತಾಂಶದ ಬೆನ್ನಲ್ಲೇ ಪೆಟ್ರೋಲ್, ಡೀಸೆಲ್ ದರ ಏರಿಕೆ ಮಾಡಿ ಜನರಿಗೆ ರಾಜ್ಯ ಸರ್ಕಾರ ಶಾಕ್ ನೀಡಿದ್ದು, ಜನಾಕ್ರೋಶಕ್ಕೆ ಕಾರಣವಾಗಿದೆ. ಪ್ರತಿಪಕ್ಷಗಳ ನಾಯಕರು ಹಾಗೂ ಜನಸಾಮಾನ್ಯರು ಕೂಡ ಪೆಟ್ರೋಲ್, ಡೀಸೆಲ್ ದರ ಏರಿಕೆಯನ್ನು ಖಂಡಿಸಿದ್ದಾರೆ. ದರ ಏರಿಕೆ ವಿರೋಧಿಸಿ ಇಂದು ಪ್ರತಿಭಟನೆಗೆ ಕರೆ ನೀಡಿರುವ ಬಿಜೆಪಿ, ರಾಜ್ಯಾಧ್ಯಕ್ಷ ವಿಜಯೇಂದ್ರ (BY Vijayendra), ವಿಪಕ್ಷ ನಾಯಕ ಆರ್. ಅಶೋಕ್ (R Ashok) ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆ.

ಬೆಳಗ್ಗೆ 11.30ಕ್ಕೆ ಪ್ರತಿಭಟನೆ ಆರಂಭವಾಗಲಿದೆ. ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಲು ಪ್ರತಿಪಕ್ಷ ನಿರ್ಧರಿಸಿದೆ. ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳ ಮಾಡಿರುವ ಪರಿಣಾಮ ಎತ್ತಿನ ಗಾಡಿಯೇ ಗತಿಯಾಗಿದೆ ಎಂದು ಸೂಚಿಸಲು ಎತ್ತಿನಗಾಡಿ, ಸೈಕಲ್ ಮೂಲಕ ಪ್ರಯಾಣ ಮಾಡಿ ಸರ್ಕಾರದ ನೀತಿಯನ್ನು ಖಂಡಿಸಲಿದ್ದಾರೆ. ಬಳಿಕ ಸಿಎಂ ಮನೆಗೆ ಮುತ್ತಿಗೆ ಹಾಕಲು ಬಿಜೆಪಿ ನಿರ್ಧರಿಸಿದೆ.

ಹೆಚ್ಚಿಸಿರುವ ಅಷ್ಟೂ ದರವನ್ನು ಇಳಿಸುವಂತೆ ಬಿಜೆಪಿ ಆಗ್ರಹಿಸಿದ್ದು, ದರ ಇಳಿಸುವವರೆಗೂ ಹಂತಹಂತವಾಗಿ ಪ್ರತಿಭಟನೆ ನಡೆಸಲು ತೀರ್ಮಾನಿಸಿದೆ. ಪ್ರತಿಭಟನೆಗೆ ವಿವಿಧ ಸಂಘಟನೆಗಳ ಬೆಂಬಲವನ್ನೂ ಕೋರಿದೆ.

ರಾಜ್ಯದ ಜನರಿಗೆ ಬರೆ: ವಿಜಯೇಂದ್ರ

“ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಗ್ಯಾರಂಟಿ ಬಗ್ಗೆ ಸಾಕಷ್ಟು ಪ್ರಚಾರ ತೆಗೆದುಕೊಂಡಿದೆ. ಗ್ಯಾರಂಟಿ ಬಗ್ಗೆ ಸಾಧನೆ ಅಂತ ಬಿಂಬಿಸಿಕೊಂಡಿದೆ. ಮತ್ತೊಂದು ಕಡೆ ರಾಜ್ಯದ ಜನರಿಗೆ ಬರೆ ಎಳೆಯುತ್ತಿದೆ. ಸ್ಟ್ಯಾಂಪ್ ಡ್ಯೂಟಿ ಜಾಸ್ತಿ ಮಾಡಿದೆ. ಲೋಕಸಭಾ ಚುನಾವಣೆ ಬಳಿಕ ಪೆಟ್ರೋಲ್, ಡೀಸೆಲ್ ತೆರಿಗೆ ಹೆಚ್ಚಿಸಿದೆ. ಸರ್ಕಾರ ಬೇಜವಾಬ್ದಾರಿಯಿಂದ ನಡೆದುಕೊಳ್ತಿದೆ” ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ದೂರಿದ್ದಾರೆ.

“ಬರಗಾಲದಲ್ಲಿ ರಾಜ್ಯ ಸರ್ಕಾರದ ಈ ಕೆಟ್ಟ ನಡವಳಿಕೆಯನ್ನು ಬಿಜೆಪಿ ಗಂಭೀರವಾಗಿ ತೆಗೆದುಕೊಂಡಿದ್ದು, ಬರುವ ಶುಕ್ರವಾರ ಕೂಡ ಮತ್ತೊಂದು ಹೋರಾಟ ರೂಪಿಸುತ್ತೇವೆ. ನಾವು ಸುಮ್ಮನೆ ಕೂರುವುದಿಲ್ಲ. ನೆರೆಯ ರಾಜ್ಯದಲ್ಲಿ ನಮಗಿಂತ ದರ ಹೆಚ್ಚಿದೆ ಎಂದು ಸಿಎಂ ಹೇಳಿದ್ದಾರೆ. ಕೂಡಲೇ ಆದೇಶವನ್ನು ಕೈಬಿಟ್ಟು ಹಿಂದೆ ಸರಿಯಬೇಕು ಎಂದು ನಾನು ಆಗ್ರಹಿಸುತ್ತೇನೆ” ಎಂದಿದ್ದಾರೆ.

“ರಾಜ್ಯದ ಮುಗ್ಧ ಮತದಾರರು ಚುನಾವಣೆ ಸಂಧರ್ಭದಲ್ಲಿ ಮತ ಕೊಟ್ಟು ಅಧಿಕಾರಕ್ಕೆ ತಂದಿದ್ದಾರೆ. ಇಂದು ಅದೇ ಜನ ಸಿಎಂಗೆ ಶಾಪ‌ ಹಾಕ್ತಿದ್ದಾರೆ. ವಿಪಕ್ಷದಲ್ಲಿ ಇದ್ದಾಗ ಸಿದ್ದರಾಮಯ್ಯ ಸೇರಿದಂತೆ ಎಲ್ಲರೂ ಹಾರಾಡುತ್ತಿದ್ದರು. ಇಂದು ರಾಜ್ಯದ ಆರ್ಥಿಕ ಪರಿಸ್ಥಿತಿ ಸಂಪೂರ್ಣ ಹಾಳಾಗಿದೆ. ರೈತರ ಮೇಲೆ ಹೊರೆಯಾಗುತ್ತಿದೆ. ತೈಲ ದರ ಏರಿಕೆಯಿಂದ ಟ್ಯಾಕ್ಸಿ, ಬಸ್ ಆಪರೇಟರ್, ಎಲ್ಲಾ ವಸ್ತುಗಳ ಬೆಲೆ ಗಗನಕ್ಕೆ ಏರುತ್ತಿದೆ. ಸಿಎಂ‌ ಕೂಡಲೇ ದರ ಹಿಂಪಡೆಯಬೇಕು. ಅಲ್ಲಿಯವರೆಗೂ ಹೋರಾಟ ಮಾಡುತ್ತೇವೆ” ಎಂದು ವಿಜಯೇಂದ್ರ ಹೇಳಿದ್ದಾರೆ.

ಇಂದು ಮಧ್ಯಾಹ್ನ ಸಿಎಂ ಪತ್ರಿಕಾಗೋಷ್ಠಿ

ಇಂದು ಮಧ್ಯಾಹ್ನ 12.30 ಗಂಟೆಗೆ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಸಿದ್ದರಾಮಯ್ಯ (CM Siddaramaiah) ಪತ್ರಿಕಾಗೋಷ್ಠಿ ಕರೆದಿದ್ದಾರೆ. ಪೆಟ್ರೋಲ್- ಡಿಸೇಲ್ ದರ ಹೆಚ್ಚಳ ಕುರಿತು ಸಿಎಂ ಮಾತನಾಡಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ. ದರ ಹೆಚ್ಚಳ ಕುರಿತು ರಾಜ್ಯದ ಜನರಿಗೆ ಸಿಎಂ ಸಿದ್ದರಾಮಯ್ಯ ವಿವರಣೆ ನೀಡಲಿದ್ದಾರೆ. ಪ್ರತಿಪಕ್ಷ ಬಿಜೆಪಿ ದರ ಹೆಚ್ಚಳದ ವಿರುದ್ಧ ಪ್ರತಿಭಟನೆ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ, ದರ ಹೆಚ್ಚಳದ ಅನಿವಾರ್ಯತೆ ಹಾಗೂ ಅಂಕಿ ಅಂಶಗಳನ್ನು ಸಿಎಂ ಮಂಡಿಸಲಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Petrol Diesel Price: ಪೆಟ್ರೋಲ್, ಡೀಸೆಲ್ ದರ ಏರಿಕೆಗೂ ಚುನಾವಣಾ ಫಲಿತಾಂಶಕ್ಕೂ ಸಂಬಂಧವಿಲ್ಲ ಎಂದ ಸಿಎಂ

Exit mobile version