ಬೆಂಗಳೂರು: ಸಿಎಂ ಸಿದ್ದರಾಮಯ್ಯ (CM Siddaramaiah) ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ನಡೆಯುತ್ತಿರುವ ಬಿಜೆಪಿ- ಜೆಡಿಎಸ್ ಪಾದಯಾತ್ರೆಯಲ್ಲಿ (BJP-JDS Padayatra) ಎಲ್ಲೂ ಕಾಣಿಸಿಕೊಳ್ಳದ ಬಿಜೆಪಿ ರೆಬೆಲ್ ಶಾಸಕ ಎಸ್.ಟಿ ಸೋಮಶೇಖರ್ (ST Somashekhar), ಪಾದಯಾತ್ರೆಯ ವಿರುದ್ಧ ಕಾಂಗ್ರೆಸ್ (Congress) ಹಾಕಿರುವ ಬ್ಯಾನರ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಬಿಜೆಪಿ- ಜೆಡಿಎಸ್ ವಿರುದ್ಧ ಕಾಂಗ್ರೆಸ್ ಜನಾಂದೋಲನ ಆಯೋಜನೆ ಮಾಡಿದ್ದು, ಈ ಕಾರ್ಯಕ್ರಮದಲ್ಲಿ ಬಿಜೆಪಿಯ ಶಾಸಕ ಸೋಮಶೇಖರ್ ಕಾಣಿಸಿಕೊಳ್ಳುತ್ತಾರಾ ಎಂಬ ಅನುಮಾನ ಮೂಡಿದೆ. ಕಾಂಗ್ರೆಸ್ ಹಾಕಿರುವ ಬ್ಯಾನರ್‌ಗಳು ಈ ಕುತೂಹಲ ಮೂಡಿಸಿವೆ. ಬಿಡದಿಯಿಂದ ರಾಮನಗರದವರೆಗೂ ಬಿಜೆಪಿ ವಿರುದ್ಧ ಕಾಂಗ್ರೆಸ್ ಫ್ಲೆಕ್ಸ್ ಹಾಗೂ ಬ್ಯಾನರ್‌ಗಳನ್ನು ಹಾಕಿದ್ದು, ಅವುಗಳಲ್ಲಿ ಎಸ್.ಟಿ ಸೋಮಶೇಖರ್ ಭಾವಚಿತ್ರವಿದೆ.
ಬಿಜೆಪಿ ವಿರುದ್ಧ ರೆಬೆಲ್ ಆಗಿರುವ ಎಸ್. ಟಿ ಸೋಮಶೇಖರ್, ಡಿಕೆ ಶಿವಕುಮಾರ್ (DK Shivakumar) ಮತ್ತಿತರ ಕಾಂಗ್ರೆಸ್ ನಾಯಕರ ಜೊತೆಗೆ ಇತ್ತೀಚೆಗೆ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ. ಡಿಕೆಶಿ ಏರ್ಪಡಿಸಿದ್ದ ಔತಣಕೂಟದಲ್ಲೂ ಅವರು ಕಾಣಿಸಿಕೊಂಡಿದ್ದರು. ಬಿಜೆಪಿಯಿಂದಲೂ ಅವರು ಸಾಕಷ್ಟು ಅಂತರ ಕಾಪಾಡಿಕೊಂಡಿದ್ದಾರೆ. ಬಿಜೆಪಿಯ ಹಲವು ಕಾರ್ಯಕರ್ತರು ಇತ್ತೀಚೆಗೆ ಸೋಮಶೇಖರ್ ವಿರುದ್ಧ ಪ್ರತಿಭಟನೆಯನ್ನೂ ಮಾಡಿದ್ದರು.
ಬಿಜೆಪಿಗೆ ತಲೆನೋವಾದ ನಾಯಕರು
ಪಾದಯಾತ್ರೆಯಲ್ಲಿ ರಾಜ್ಯ ಬಿಜೆಪಿ ನಾಯಕರು ಹಾಗೂ ಕೇಂದ್ರ ಎನ್‌ಡಿಎ ಸಚಿವರು ಭಾಗವಹಿಸಿದ್ದಾರೆ. ಬಿಎಸ್. ಯಡಿಯೂರಪ್ಪ, ಹೆಚ್.ಡಿ.ಕುಮಾರಸ್ವಾಮಿ, ವಿಜಯೇಂದ್ರ, ಆರ್.ಅಶೋಕ್, ಪ್ರಹ್ಲಾದ್ ಜೋಶಿ ಸೇರಿದಂತೆ ಹಲವರು ಉಪಸ್ಥಿತರಿದ್ದಾರೆ. ಆದರೆ ಕೆಲವು ನಾಯಕರು ಬಿಜೆಪಿಗೆ ತಲೆನೋವಾಗಿದ್ದಾರೆ.
ಮೊನ್ನೆಯಷ್ಟೇ ರಮೇಶ್ ಜಾರಕಿಹೊಳಿ, ಬಸವನಗೌಡ ಪಾಟೀಲ್ ಯತ್ನಾಳ್, ಪ್ರತಾಪ್ ಸಿಂಹ ಹಾಗೂ ಕುಮಾರ್ ಬಂಗಾರಪ್ಪ ಸೇರಿ ಸಭೆ ನಡೆಸಿದ್ದರು. ಮೂವರ ಸಭೆ ಬಳಿಕ ಅಲರ್ಟ್ ಆಗಿದ್ದ ಬಿಜೆಪಿ ಹೈಕಮಾಂಡ್, ಅಸಮಾಧಾನ ಬದಿಗಿಟ್ಟು ಪಾದಯಾತ್ರೆಗೆ ಬರುವಂತೆ ಈ ನಾಯಕರಿಗೆ ಸಲಹೆ ನೀಡಿತ್ತು. ಹೈಕಮಾಂಡ್ ಸಲಹೆ ಮೇರೆಗೆ ಪಾದಯಾತ್ರೆಯಲ್ಲಿ ಇವರು ಭಾಗವಹಿಸುತ್ತಾರಾ ಇಲ್ಲವಾ ಎಂಬ ಕುತೂಹಲ ಮೂಡಿದೆ.
ಎಸ್.ಟಿ ಸೋಮಶೇಖರ್ ಹಾಗೂ ಶಿವರಾಮ ಹೆಬ್ಬಾರ್ ಕೂಡ ಪಕ್ಷದ ಬಗ್ಗೆ ಅಸಮಾಧಾನ ಹೊಂದಿದ್ದಾರೆ. ಇವರಿಬ್ಬರೂ ಕಾಂಗ್ರೆಸ್ ಚಟುವಟಿಕೆಯಲ್ಲಿ ಪಾಲ್ಗೊಳ್ಳುತ್ತಿರುವುದು ಕಂಡುಬಂದಿದೆ. ಕಾಂಗ್ರೆಸ್ ಫ್ಲೆಕ್ಸ್‌ಗಳಲ್ಲಿ ಎಸ್.ಟಿ ಸೋಮಶೇಖರ್ ಫೋಟೋ ರಾರಾಜಿಸುತ್ತಿದೆ. ಹೀಗಾಗಿ ಎಸ್‌ಟಿಎಸ್ ನಡೆ ಭಾರಿ ಚರ್ಚೆಗೆ ಕಾರಣವಾಗಿದೆ.
ಹೈಕೋರ್ಟ್‌ನಿಂದಲೇ ಅನುಮತಿ
“ಭ್ರಷ್ಟ ಕಾಂಗ್ರೆಸ್ ತೊಲಗಿಸಿ” ಎಂಬ ಘೋಷಣೆಯಡಿ ಹಮ್ಮಿಕೊಂಡಿರುವ ಬಿಜೆಪಿ-ಜೆಡಿಎಸ್ ಮೈಸೂರು ಚಲೋ ಪಾದಯಾತ್ರೆಗೆ (BJP-JDS Padayatra) ನೇರವಾಗಿ ಹೈಕೋರ್ಟ್‌ನಿಂದ (High court) ಅನುಮತಿ ಪಡೆಯಲಾಗಿದೆ. ಸರ್ಕಾರದಿಂದ ಅನುಮತಿ ದೊರೆಯುವುದು ವಿಳಂಬವಾದ ಹಿನ್ನೆಲೆಯಲ್ಲಿ ಹೈಕೋರ್ಟ್‌ಗೆ ಹೋಗಿದ್ದ ಬಿಜೆಪಿ (BJP) ಮುಖಂಡರು, ಪಾದಯಾತ್ರೆಗೆ ಅನುಮತಿ ಪಡೆದುಕೊಂಡಿದ್ದಾರೆ.
ಪಾದಯಾತ್ರೆಗೆ ಸರ್ಕಾರದಿಂದ ಅನುಮತಿ ಇಲ್ಲ ಎಂದು ಮೊನ್ನೆ ಗೃಹ ಸಚಿವ ಪರಮೇಶ್ವರ (G Parameshwara) ಹೇಳಿದ ಬೆನ್ನಲ್ಲೇ ಸರ್ಕಾರದಿಂದ ಸಮಸ್ಯೆ ಆಗದಂತೆ ಬಿಜೆಪಿ ಮುನ್ನೆಚ್ಚರಿಕೆ ವಹಿಸಿ ಉಚ್ಚ ನ್ಯಾಯಾಲಯಕ್ಕೆ ತೆರಳಿತ್ತು. ಶಾಸಕ ಪಿ. ರಾಜೀವ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಚಂದನ್ ಗೌಡರ್, ಅನುಮತಿ ನೀಡಿದ್ದು, ಪಾದಯಾತ್ರೆ ಸಾಗುವ ಜಾಗದಲ್ಲಿ ಭದ್ರತೆ ನೀಡುವಂತೆ ಡಿಸಿ, ಎಸ್ಪಿಗೆ ಸೂಚನೆ ನೀಡಿದ್ದಾರೆ.
ಮೈಸೂರು: ಮುಡಾ ಹಗರಣ ವಿರುದ್ದ ಇಂದಿನಿಂದ ನಡೆಯಲಿರುವ ಮೈಸೂರು ಚಲೋ ಪಾದಯಾತ್ರೆ ಪ್ರಾರಂಭಕ್ಕೂ ಮುನ್ನ ಬಿಜೆಪಿ ರಾಜ್ಯಾಧ್ಯಕ್ಷ ದೇವಿ ಚಾಮುಂಡೇಶ್ವರಿ ಮೊರೆಹೋದರು. ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಬಿ.ವೈ ವಿಜಯೇಂದ್ರ ಭೇಟಿ ನೀಡಿ ನಾಡದೇವತೆ ಚಾಮುಂಡಿ ತಾಯಿ ದರ್ಶನ ಪಡೆದರು. ಪಾದಯಾತ್ರೆ ಯಶಸ್ಸಿಗೆ ಚಾಮುಂಡೇಶ್ವರಿ ಬಳಿ ಪ್ರಾರ್ಥನೆ ಮಾಡಿ, ದಂಪತಿ ಸಮೇತ ಚಾಮುಂಡಿಗೆ ವಿಶೇಷ ಪೂಜೆ ಸಲ್ಲಿಸಿದರು. ವಿಜಯೇಂದ್ರಗೆ ಮಾಜಿ ಶಾಸಕ ನಾಗೇಂದ್ರ ಸೇರಿ ಮುಖಂಡರು ಸಾಥ್ ನೀಡಿದರು.
ಇದನ್ನೂ ಓದಿ: BJP-JDS Padayatra: ಪಾದಯಾತ್ರೆಗೆ ಹೈಕೋರ್ಟ್‌ನಿಂದಲೇ ಅನುಮತಿ ಪಡೆದ ಬಿಜೆಪಿ