ಬೆಂಗಳೂರು: ಕಳೆದ ವಾರ ರಾಜಧಾನಿಯ ರಾಮೇಶ್ವರಂ ಕೆಫೆಯಲ್ಲಿ (Blast in Bengaluru) ಬಾಂಬ್ ಸ್ಫೋಟಿಸಿ (Rameshwaram Cafe Blast) ಎಂಟು ಮಂದಿ ಗಾಯಗೊಳ್ಳಲು ಕಾರಣನಾದ ಆರೋಪಿ ಇಸ್ಲಾಮಿಕ್ ಸ್ಟೇಟ್ ಸಂಘಟನೆಯ (Islamic State terrorist) ಉಗ್ರ ಎಂಬುದು ಪೊಲೀಸರ ತನಿಖೆಯಿಂದ ಖಚಿತವಾಗಿದೆ.
ಐಸಿಸ್ (ISIS) ಹಾಗೂ ಇಸ್ಲಾಮಿಕ್ ಸ್ಟೇಟ್ ಆಫ್ ಕೋರಾಸಾನ್ (Islamic State of khorasan) ಜೊತೆ ಈ ಉಗ್ರ ನಂಟು ಹೊಂದಿರುವುದು ಸಾಬೀತಾಗಿದೆ. ಈ ಹಿಂದೆ ಇದೇ ರೀತಿಯಾಗಿ ಪರ್ಫೆಕ್ಟ್ ಕ್ರೈಂ ಎಸಗಿ ಎಸ್ಕೇಪ್ ಆಗಿರುವ ಆರೋಪಿಗಳ ಬಗ್ಗೆ ಎನ್‌ಐಎ ಮಾಹಿತಿ ಹೊಂದಿದ್ದು, ಅದನ್ನು ಈ ಪ್ರಕರಣದೊಂದಿಗೆ ತಾಳೆ ಹಾಕಿ ನೋಡಿದೆ.
ಬಾಂಬರ್ ತನ್ನ ಹೆಜ್ಜೆ ಗುರುತುಗಳನ್ನು ಸಾಧ್ಯವಾದಷ್ಟು ಮರೆ ಮಾಚಿದ್ದಾನೆ. ಕೈಗೆ ಗ್ಲೌಸ್ ಧರಿಸಿದ್ದು, ಫಿಂಗರ್ ಪ್ರಿಂಟ್‌ಗಳನ್ನು ಕೂಡ ಬಿಟ್ಟಿಲ್ಲ. ಸಿಸಿಟಿವಿ ಇಲ್ಲದ ಕಡೆ ಹೆಚ್ಚಾಗಿ ಓಡಾಡಿದ್ದಾನೆ ಹಾಗೂ ಅಲ್ಲೇ ಸಿಂಕ್ ಬಳಿ ಬಾಂಬ್ ಬ್ಯಾಗ್ ಇಟ್ಟಿದ್ದಾನೆ. ಬರಲು ಹೋಗಲು ಖಾಸಗಿ ವಾಹನ ಬಳಸಿಲ್ಲ. ಸ್ಥಳದಲ್ಲಿ ಮೊಬೈಲ್ ಬಳಸಿಲ್ಲ. ಹೀಗಾಗಿ ಈತ ಪಕ್ಕಾ ತರಬೇತಿ ಹೊಂದಿದವನು ಹಾಗೂ ಸಾಕಷ್ಟು ಮಾಹಿತಿ ಕಲೆಹಾಕಿ ಪ್ರಿಪ್ಲಾನ್‌ನೊಂದಿಗೆ ಕೃತ್ಯ ಎಸಗಿದವನು ಎಂಬುದು ಸಾಬೀತಾಗಿದೆ.
ಮಾಡೆಲ್ ಕ್ರೈಂ ಮಾಡಿ ಎಸ್ಕೇಪ್ ಆಗಿರುವ ರೀತಿ ಗಮನಿಸಿದಾಗ, ಇದೇ ರೀತಿ ಅಪರಾಧ ಎಸಗಿ ನಾಪತ್ತೆಯಾಗಿರುವ ಉಳಿದ ವ್ಯಕ್ತಿಗಳ ಕುರಿತ ಮಾಹಿತಿ ಅನುಸರಿಸಿದಾಗ, ಈತ ಇಸ್ಲಾಮಿಕ್ ಸ್ಟೇಟ್ ಆಫ್ ಕೋರಾಸಾನ್‌ನ ಕಾರ್ಯಕರ್ತ ಎಂಬ ಎನ್‌ಐಎ ಶಂಕೆ ದೃಢವಾಗಿದೆ. ಬಾಂಬರ್ ಉಗ್ರನ ಹಲವು ನಡವಳಿಕೆಗಳನ್ನು ವಿಶ್ಲೇಷಿಸಿ ಎನ್‌ಐಎ ಈ ನಿರ್ಧಾರಕ್ಕೆ ಬಂದಿದೆ.
ಶಂಕೆಯ ಆಧಾರದಲ್ಲಿ ಚೆನ್ನೈ ನಗರದ ದೇವಸ್ಥಾನದ ಬಳಿಯ ಐದು ಜನರನ್ನು ಪೊಲೀಸರು ತನಿಖೆಗಾಗಿ ವಶಕ್ಕೆ ಪಡೆದಿದ್ದಾರೆ. ಅವರ ಮಾಹಿತಿಯನ್ವಯ, ಇಸ್ಲಾಮಿಕ್ ಸ್ಟೇಟ್ ನಿಷೇಧಿತ ಸಂಘಟನೆಗಾಗಿ ಬಾಂಬರ್ ಕೆಲಸ ಮಾಡುತ್ತಿರುವ ಬಗ್ಗೆ ಮಾಹಿತಿ ದೊರೆತಿದೆ. ಸದ್ಯ ಜಂಟಿ ಭದ್ರತಾ ಸಂಸ್ಥೆಗಳು ಬಾಂಬರ್‌ನ ಬೆನ್ನು ಹತ್ತಿವೆ.
ಇತ್ತ ಜನರಲ್ಲಿಯೂ ಈ ಬಗ್ಗೆ ಜಾಗೃತಿ ಮೂಡುತ್ತಿದೆ. ಬಾಂಬರ್ ಅನ್ನು ನಾವು ನೋಡಿದ್ದೇವೆ ಎಂದು ಕಂಟ್ರೋಲ್ ರೂಂಗೆ ನೂರಾರು ಸಂಖ್ಯೆಯಲ್ಲಿ ಕರೆ ಬರುತ್ತಿವೆ. ಆದರೆ ಬಹುತೇಕ ಕಾಲ್‌ಗಳಿಂದ ಪೊಲೀಸರಿಗೆ ಯಾವುದೇ ಪ್ರಯೋಜನವಾಗಿಲ್ಲ. ಹಲವಾರು ಜನರ ಹೇಳಿಕೆಗಳಲ್ಲಿ ಪೊಲೀಸರಿಗೆ ಸ್ಪಷ್ಟತೆ ಸಿಗುತ್ತಿಲ್ಲ. ಆದರೆ ಯಾವುದನ್ನೂ ನಗಣ್ಯ ಮಾಡದೆ ಕರೆ ಮಾಡಿದವರ ವಿಚಾರಣೆಯನ್ನು ನಡೆಸಲಾಗುತ್ತಿದೆ.
ಸಿಸಿಬಿ ಮತ್ತು ಎನ್‌ಐಎಗಳಿಂದ ತನಿಖೆ ಮುಂದುವರಿದಿದೆ. ಸ್ಫೋಟಕ್ಕೆ ದುಷ್ಕರ್ಮಿ ಅಮೋನಿಯಂ ನೈಟ್ರೇಟ್ ಪೌಡರನ್ನು ಬಳಸಿದ್ದಾನೆ ಎಂದು ತನಿಖೆಯಲ್ಲಿ ದೃಢವಾಗಿದೆ. ಅಮೋನಿಯಂ ನೈಟ್ರೇಟ್ ಸಾರ್ವಜನಿಕವಾಗಿ ಮಾರುವುದನ್ನು ನಿಷೇಧಿಸಲಾಗಿದೆ. ಇದನನ್ನು ಕಲ್ಲು ಗಣಿಗಾರಿಕೆಯಲ್ಲಿ ಬಂಡೆಗಳನ್ನು ಸಿಡಿಸಲು ಅತಿ ಹೆಚ್ಚು ಬಳಸಲಾಗುತ್ತದೆ. ಮಂಗಳೂರು ಹಾಗೂ ಶಿವಮೊಗ್ಗ ಪ್ರಕರಣದಲ್ಲಿ ಸಲ್ಫರ್ ಪೌಡರ್ (ಗನ್ ಪೌಡರ್) ಮತ್ತು ಪೊಟಾಶಿಯಂ ನೈಟ್ರೇಟ್‌ಗಳನ್ನು ಸ್ಫೋಟದ ವೇಳೆ ಬಳಸಲಾಗಿತ್ತು. ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿರುವ ಅಮೋನಿಯಂ ನೈಟ್ರೇಟ್ ಪೂರೈಕೆದಾರರ ಕುರಿತು NIA ತೀವ್ರ ತನಿಖೆ ನಡೆಸುತ್ತಿದೆ.
ಇದನ್ನೂ ಓದಿ: Blast in Bengaluru : ಟೋಪಿವಾಲಾ ಬಾಂಬರ್ ಸುಳಿವು ನೀಡಿದರೆ 10 ಲಕ್ಷ ಬಹುಮಾನ: NIA ಘೋಷಣೆ