Site icon Vistara News

Blast in Bengaluru: ರಾಮೇಶ್ವರಂ ಕೆಫೆ ಸ್ಫೋಟದ ಕ್ಲೂ; ಬೆಂಗಳೂರು ಸೇರಿ 5 ನಗರಗಳಲ್ಲಿ ಎನ್‌ಐಎ ದಾಳಿ, ವಾಂಟೆಡ್‌ ಉಗ್ರರೇ ಟಾರ್ಗೆಟ್‌

blast in bengaluru NIA raid

ಬೆಂಗಳೂರು: ರಾಜಧಾನಿಯ ವೈಟ್‌ಫೀಲ್ಡ್‌ನ ರಾಮೇಶ್ವರಂ ಕೆಫೆ ಸ್ಫೋಟ (Rameshwaram Cafe Blast, Blast in Bengaluru) ಪ್ರಕರಣಕ್ಕೆ ಸಂಬಂಧಿಸಿ, ಬೆಂಗಳೂರು ಸೇರಿದಂತೆ 5 ನಗರಗಳಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಅಧಿಕಾರಿಗಳು ಇಂದು ಮುಂಜಾನೆ ದಾಳಿ (NIA raid) ನಡೆಸಿದ್ದಾರೆ.

ಶಿವಮೊಗ್ಗ, ಬೆಂಗಳೂರು, ಹುಬ್ಬಳ್ಳಿ , ತೀರ್ಥಹಳ್ಳಿ, ತಮಿಳುನಾಡಿನ ಚೆನ್ನೈನಲ್ಲಿ ದಾಳಿ ನಡೆಸಲಾಗಿದೆ. ಚೆನ್ನೈಯ ಲಾಡ್ಜ್‌ನಲ್ಲಿ ಶಂಕಿತ ಬಾಂಬರ್ ಹಲವಾರು ದಿನಗಳ ಕಾಲ ಉಳಿದುಕೊಂಡಿದ್ದ. ಈ‌ ಹಿನ್ನೆಲೆಯಲ್ಲಿ ಚೆನ್ನೈನಲ್ಲಿ ಮೂರು‌ ಕಡೆ ಎನ್ಐಎ ದಾಳಿ ನಡೆಸಿ ಪರಿಶೀಲಿಸಿದೆ.

ಶಿವಮೊಗ್ಗದ ಸೊಪ್ಪುಗುಡ್ಡೆ, ತೀರ್ಥಹಳ್ಳಿ,ಯಲ್ಲಿ ಶೋಧ ನಡೆಸಲಾಗಿದೆ. ಬೆಂಗಳೂರಿನಿಂದ ಶಿವಮೊಗ್ಗಕ್ಕೆ ತೆರಳಿರುವ ಎನ್ಐಎ ಅಧಕಾರಿಗಳು ಶಂಕಿತರ ಮನೆಗಳಲ್ಲಿ ಬೆಳ್ಳಂಬೆಳಗ್ಗೆ ಶೋಧಿಸಿದರು. ಶಂಕಿತರಾದ ಅಬ್ದುಲ್ ಮತಿನ್ ತಾಹ, ಮುಸಾವಿರ್ ಹುಸೇನ್ ಶಾಹೀಜ್ ಮನೆಗಳಲ್ಲಿ ಪರಿಶೀಲನೆ ನಡೆಸಲಾಯಿತು.

2020ರಿಂದಲೂ ಈ ಇಬ್ಬರು ಶಂಕಿತ ಉಗ್ರರು ನಾಪತ್ತೆಯಾಗಿದ್ದಾರೆ. ಗುರಪ್ಪನಪಾಳ್ಯದಲ್ಲಿ ಇವರು ಭಯೋತ್ಪಾದಕ ಕೃತ್ಯ ನಡೆಸಲು 2020ರಲ್ಲಿ ಸಭೆ ನಡೆಸಿದ್ದರು. ಸಭೆ ನಡೆಸಿದ್ದ ಬಗ್ಗೆ ಮಾಹಿತಿ‌ ಪಡೆದು CCB ದಾಳಿ ನಡೆಸಿತ್ತು. ಬಳಿಕ ಆ ಪ್ರಕರಣ ಎನ್ಐಗೆ ವರ್ಗಾವಣೆ ಆಗಿತ್ತು. ಎನ್ಐಎ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದು, ಇಬ್ಬರು ಶಂಕಿತ ಉಗ್ರರು ಅಂದಿನಿಂದಲೂ ಎನ್ಐಎ ವಾಡೆಂಟ್ ಲಿಸ್ಟ್‌ನಲ್ಲಿ ಇದ್ದಾರೆ.

ಇಂದು ಮುಂಜಾನೆಯಿಂದ ನಡೆಯುತ್ತಿರುವ ದಾಳಿಯಲ್ಲಿ ಕೆಫೆ ಸ್ಫೋಟಕ್ಕೆ (Rameshwaram Cafe Blast) ಸಂಬಂಧಿಸಿದ ಅನುಮಾನಾಸ್ಪದ ವ್ಯಕ್ತಿಗಳ ಮನೆ ಮೇಲೆ ದಾಳಿ ನಡೆಸಿ ಪರಿಶೀಲಿಸಲಾಗುತ್ತಿದೆ. ಮೊಬೈಲ್‌ ಕಾಲ್‌ ರೆಕಾರ್ಡ್‌ಗಳು, ಶಂಕಿತರ ಜೊತೆಗಿನ ಸಂಪರ್ಕ, ಅನುಮಾನಾಸ್ಪದ ಚಟುವಟಿಕೆ ಇತ್ಯಾದಿಗಳ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ. ದಾಳಿಯ ಸಂದರ್ಭದಲ್ಲಿ ಸ್ಫೋಟದ ಬಗ್ಗೆ ಮಹತ್ವದ ದಾಖಲೆಗಳು ಸಿಕ್ಕಿವೆ ಎಂದು ತಿಳಿದುಬಂದಿದೆ.

ಶನಿವಾರ ಸಂಜೆ ಪ್ರಕರಣಕ್ಕೆ ಸಂಬಂಧಿಸಿ ರಾಷ್ಟ್ರೀಯ ತನಿಖಾ ದಳ (NIA) ಅಧಿಕಾರಿಗಳು ಇಬ್ಬರನ್ನು ಬೆಂಗಳೂರಿನಲ್ಲಿ ವಶಕ್ಕೆ ಪಡೆದಿದ್ದರು. ಇವರಿಬ್ಬರೂ ಸ್ಫೋಟದ ಶಂಕಿತ ಆರೋಪಿಗಳೊಂದಿಗೆ ನಿರಂತದ ಸಂಪರ್ಕದಲ್ಲಿದ್ದರು ಎನ್ನಲಾಗಿದೆ. ಈಗಾಗಲೇ ಸ್ಫೋಟದ ಪ್ರಧಾನ ಆರೋಪಿಗಳು ಮುಝಾವೀರ್, ಅಬ್ದುಲ್ ಮತೀನ್ ತಾಹ್ಯಾ ಎಂದು ಗೊತ್ತು ಹಚ್ಚಲಾಗಿದೆ. ಇವರ ಜೊತೆ ಈ ಆರೋಪಿಗಳು ನಿರಂತರ ಸಂಪರ್ಕದಲ್ಲಿದ್ದರು.

ಟೆಕ್ನಿಕಲ್ ಎವಿಡೆನ್ಸ್‌ನ ಹಿನ್ನೆಲೆಯಲ್ಲಿ ಅವರಿಬ್ಬರಿಗೆ ಜೊತೆಯಾಗಿ ಇವರು ಸ್ಲೀಪರ್ ಸೆಲ್ ಆಗಿ ಕಾರ್ಯ ನಿರ್ವಹಿಸಿರುವ ಶಂಕೆ ಇದೆ. ಶಂಕಿತ ಆರೋಪಿಗಳಿಗೆ ಇವರು ಬೆಂಗಳೂರಿನಲ್ಲಿ ಆಶ್ರಯ ಮತ್ತಿತರ ಅನುಕೂಲಗಳನ್ನು ಮಾಡಿಕೊಟ್ಟಿರುವ ಶಂಕೆ ಇದೆ.

ಶಂಕಿತರಿಗೆ ಚೆನ್ನೈ ಲಿಂಕ್‌

ಶಂಕಿತನ ಜಾಡು ಹಿಡಿದ ಎನ್‌ಐಎಗೆ ಚೆನ್ನೈ ಲಿಂಕ್ ಸಿಕ್ಕಿದೆ. ತಮಿಳುನಾಡಿನಿಂದ ಬಂದು ಬಾಂಬ್ ಇಟ್ಟ ಶಂಕಿತ ತಮಿಳುನಾಡಿಗೇ ಪರಾರಿಯಾಗಿರಬಹುದು ಎಂದು ಕೂಡ ಶಂಕಿಸಲಾಗಿದೆ. ಸ್ಫೋಟಕ್ಕೂ (Blast in Bengaluru) ಮುನ್ನ ಎರಡು ತಿಂಗಳುಗಳ ಕಾಲ ತಮಿಳುನಾಡಿನಲ್ಲಿ ಉಳಿದಿದ್ದುದು ತಿಳಿದುಬಂದಿದೆ.

ರಾಮೇಶ್ವರಂ ಕೆಫೆಯಲ್ಲಿ ಸ್ಪೋಟಕವನ್ನು ಇಟ್ಟಿದ್ದವನ ಜೊತೆ ಮತ್ತೋರ್ವ ಪತ್ತೆಯಾಗಿದ್ದು, ತಮಿಳುನಾಡಿನಲ್ಲಿ ಉಳಿದಿದ್ದ ಶಂಕಿತನ ಜೊತೆಗೆ ಈತನೂ ಇದ್ದ. ಸ್ಫೋಟಕ್ಕೆ ಮುನ್ನ ಇವರು ಓಡಾಡಿದ್ದ ಜಾಡನ್ನು ಎನ್‌ಐಎ ಹಿಡಿದಿದೆ. ಎರಡು ತಿಂಗಳು ತಮಿಳುನಾಡಿನ ಲಾಡ್ಜ್‌ನಲ್ಲಿ ಇವರು ಉಳಿದುಕೊಂಡಿರುವುದು ಪತ್ತೆಯಾಗಿದೆ. ಸ್ಫೋಟಕ್ಕೆ ಅವರು ಇಲ್ಲಿ ತರಬೇತಿ ಪಡೆಯುತ್ತಿದ್ದರೇ ಅಥವಾ ಇನ್ನಷ್ಟು ದೊಡ್ಡ ಉಗ್ರ ಕೃತ್ಯದ ತಯಾರಿ ನಡೆಸುತ್ತಿದ್ದರೇ ಎಂಬ ಅಂಶವನ್ನು ತನಿಖೆ ಮಾಡಲಾಗುತ್ತಿದೆ.

ಸ್ಫೋಟಕ ಇಡಲು ಬರುವ ವೇಳೆ ಮುಖ ಮರೆಮಾಚಲು ಧರಿಸಿದ್ದ ಉಗ್ರ ಧರಿಸಿದ್ದ ಟೊಪ್ಪಿಯ ಮೂಲವನ್ನು ಎನ್‌ಐಎ ಪತ್ತೆ ಹಚ್ಚಿದೆ. ಇದು ತಮಿಳುನಾಡಿನ ಮಾಲ್ ಒಂದರಲ್ಲಿ ಖರೀದಿಸಲಾದ ಟೊಪ್ಪಿ.ಯಾಗಿದ್ದು, ಟೊಪ್ಪಿ ಖರೀದಿ ವೇಳೆ ಶಂಕಿತನ ಜೊತೆಗೆ ಮತ್ತೊಬ್ಬನಿದ್ದ. ಖರೀದಿ ವೇಳೆ ಇಬ್ಬರ ಮುಖಚಹರೆ ಅಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಸಿಸಿಟಿವಿ ಫೂಟೇಜ್‌ಗಳನ್ನು ಎನ್‌ಐಎ ಸಂಗ್ರಹಿಸಿದೆ.

ಮತ್ತೊಂದೆಡೆ, ಭಯೋತ್ಪಾದಕ ಎಸೆದುಹೋದ ಕ್ಯಾಪ್‌ನಲ್ಲಿ ಶಂಕಿತನ ಕೂದಲು ದೊರೆತಿದ್ದು, ಅದನ್ನು ಡಿಎನ್‌ಎ ಟೆಸ್ಟ್‌ಗೆ ಒಳಪಡಿಸಲಾಗಿದೆ. ಸದ್ಯ ಸಿಸಿಟಿವಿಗಳನ್ನು ಆಧರಿಸಿದ ನಡೆದಿರುವ ತನಿಖೆಯಲ್ಲಿ ಸಿಕ್ಕಿರುವ ಈ ಮಹತ್ವದ ಲೀಡ್‌ ಎನ್‌ಐಎಯ ಮತ್ತಷ್ಟು ಆಳದ ತನಿಖೆಗೆ ಪೂರಕವಾಗಿದೆ.

ತನಿಖೆಯ ಆರಂಭಿಕ ಹಂತದಲ್ಲಿ ಆತನ ಸರಿಯಾದ ಮುಖಚರ್ಯೆ ಕಾಣುವ ಯಾವ ಚಿತ್ರವೂ ಯಾರ ಕೈಗೂ ಸಿಕ್ಕಿರಲಿಲ್ಲ. ಆತ ಕೆಎಸ್‌ಆರ್ಟಿಸಿ ವೋಲ್ವೋ ಬಸ್‌ನಲ್ಲಿ ಬಂದಿದ್ದು, ಹೋಟೆಲ್‌ ಪ್ರವೇಶ ಮಾಡಿದ್ದು, ಬಿಲ್‌ ಕೌಂಟರ್‌, ರವೆ ಇಡ್ಲಿ ಹಿಡಿದುಕೊಂಡು ಹೋಗುವ, ಬಾಂಬಿಟ್ಟ ಬಳಿಕ ಇಳಿದುಕೊಂಡು ಹೋಗುವ ವಿಡಿಯೊಗಳೆಲ್ಲ ಸಿಸಿಟಿವಿಯಲ್ಲಿ ಸಿಕ್ಕಿದ್ದವು. ಆದರೆ, ಅದೆಲ್ಲದರಲ್ಲಿ ಆತ ಮುಖವನ್ನು ಟೋಪಿಯಿಂದ ಮರೆ ಮಾಚಿದ್ದ. ಮಾಸ್ಕ್‌ ಹಾಕಿಕೊಂಡಿದ್ದ. ಹಾಗಾಗಿ ಆತನ ಮುಖ ಕಾಣುತ್ತಿರಲಿಲ್ಲ.

ಎನ್‌ಐಎ ಆರಂಭಿಕ ಹಂತದಲ್ಲಿ ಆತ ರಾಮೇಶ್ವರಂ ಕೆಫೆಯಲ್ಲಿರುವಾಗ ಸೆರೆ ಹಿಡಿದ ಚಿತ್ರವನ್ನು ಬಿಡುಗಡೆ ಮಾಡಿ ಈ ವ್ಯಕ್ತಿಯ ಮಾಹಿತಿ ಇದ್ದರೆ ದಯವಿಟ್ಟು ತಿಳಿಸಿ ಎಂದು ಹೇಳಿತ್ತು. ಬಳಿಕ ಬಳ್ಳಾರಿ ಬಸ್‌ ನಿಲ್ದಾಣದ ಒಂದು ವಿಡಿಯೊವನ್ನು ಪೋಸ್ಟ್‌ ಮಾಡಿತು. ಆದರೆ, ಅದನ್ನು ಕೆಲವೇ ನಿಮಿಷಗಳಲ್ಲಿ ಜಾಲ ತಾಣದಿಂದ ತೆಗೆದುಹಾಕಿತು.

ನಂತರ ಎನ್‌ಐಎ ನಾಲ್ಕು ಚಿತ್ರಗಳ ಒಂದು ಬಂಚ್‌ ಅನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಶಂಕಿತ ಆರೋಪಿಯ ಮುಖ ಬಹುತೇಕ ಸ್ಪಷ್ಟವಾಗಿ ಕಾಣಿಸುತ್ತದೆ. ಪೋಟೋದಲ್ಲಿರುವ ವ್ಯಕ್ತಿ ಕಂಡು ಬಂದರೆ ಮಾಹಿತಿ ನೀಡುವಂತೆ ಸಾರ್ವಜನಿಕರಿಗೆ ಮನವಿ ಮಾಡಿದೆ. ಪೋನ್ ನಂಬರ್ ಮತ್ತು ಇ ಮೇಲ್ ಐಡಿ ಕೊಟ್ಟು ಮಾಹಿತಿ ನೀಡುವಂತೆ ಮನವಿ ಮಾಡಿದೆ.

ಬಳ್ಳಾರಿ ಮೂಲದ ಹಾಗೂ ಶಿವಮೊಗ್ಗ ಮೂಲದ ಕೆಲವು ಉಗ್ರರನ್ನೂ ಎನ್‌ಐಎ ವಶಕ್ಕೆ ಪಡೆದುಕೊಂಡು ತನಿಖೆ ನಡೆಸಿದ್ದು, ಅದು ಹೆಚ್ಚಿನ ಫಲ ನೀಡಿಲ್ಲ.

ಇದನ್ನೂ ಓದಿ: Blast in Bengaluru: ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದಲ್ಲಿ ಸ್ಲೀಪರ್‌ ಸೆಲ್‌ ಆಗಿದ್ದ ಇಬ್ಬರು ವಶಕ್ಕೆ, ಏನ್‌ ಮಾಡಿದ್ರು?

Exit mobile version