ಹೊಸದಿಲ್ಲಿ: ದೆಹಲಿ- ಎನ್‌ಸಿಆರ್ (Delhi NCR) ಪ್ರದೇಶದ 12 ಕನಿಷ್ಠ ಪ್ರತಿಷ್ಠಿತ ಶಾಲೆಗಳಿಗೆ (Schools) ಬುಧವಾರ ಇಮೇಲ್ ಮೂಲಕ ಬಾಂಬ್ ಬೆದರಿಕೆ ಕರೆ (Bomb Threat) ಬಂದಿದೆ. ಬುಧವಾರ ಬೆಳಗ್ಗೆ ದೆಹಲಿಯ ಹಲವು ಶಾಲೆಗಳಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳನ್ನು ಕ್ಷಿಪ್ರವಾಗಿ ಸ್ಥಳಾಂತರಿಸಲಾಯಿತು.
ಬಾಂಬ್ ಬೆದರಿಕೆ ಇ-ಮೇಲ್ ಸ್ವೀಕರಿಸಿದ ಶಾಲೆಗಳೆಂದರೆ – ಚಾಣಕ್ಯಪುರಿ ಪೊಲೀಸ್ ಠಾಣೆ ವ್ಯಾಪ್ತಿಯ ಸಂಸ್ಕೃತಿ ಶಾಲೆ, ಪೂರ್ವ ದೆಹಲಿಯ ಮಯೂರ್ ವಿಹಾರ್, ದ್ವಾರಕಾ ಜಿಲ್ಲೆಯ ಡಿಪಿಎಸ್ ಶಾಲೆ, ದಕ್ಷಿಣದ ಬಸಂತ್ ಕುಂಜ್ ಪ್ರದೇಶದಲ್ಲಿರುವ ಡಿಎವಿ ಶಾಲೆ, ಅಮಿಟಿ ಸ್ಕೂಲ್, ಸಾಕೇತ್, ನವದೆಹಲಿಯ ಸಂಸ್ಕೃತಿ ಶಾಲೆ ಮುಂತಾದವು. ಸಂಸ್ಕೃತಿಯು ದೆಹಲಿಯ ಅತ್ಯಂತ ಉನ್ನತ ಮಟ್ಟದ ಶಾಲೆಗಳಲ್ಲಿ ಒಂದಾಗಿದೆ. ಬೆದರಿಕೆ ಹಿನ್ನೆಲೆಯಲ್ಲಿ ಶಾಲಾ ಆವರಣವನ್ನು ಸಂಪೂರ್ಣವಾಗಿ ತೆರವುಗೊಳಿಸಲಾಗಿದೆ.
ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದ ಶಾಲೆಗಳಲ್ಲಿ ನೋಯ್ಡಾದ ದೆಹಲಿ ಪಬ್ಲಿಕ್ ಸ್ಕೂಲ್ ಕೂಡ ಒಂದಾಗಿದೆ. ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದ ಕೂಡಲೇ ನೋಯ್ಡಾ ಪೊಲೀಸರಿಗೆ ಎಚ್ಚರಿಕೆ ನೀಡಲಾಯಿತು. ಬಾಂಬ್ ಸ್ಕ್ವಾಡ್ ಮತ್ತು ಶ್ವಾನ ದಳ ಶಾಲೆಗಳ ಆವರಣದಲ್ಲಿ ಪರಿಶೀಲನೆ ನಡೆಸುತ್ತಿವೆ. ಬಾಂಬ್ ಪತ್ತೆ ಘಟಕ, ಬಾಂಬ್ ನಿಷ್ಕ್ರಿಯ ತಂಡ ಮತ್ತು ದೆಹಲಿ ಅಗ್ನಿಶಾಮಕ ಸೇವೆಯ ತಂಡವನ್ನು ಶಾಲೆಗಳಿಗೆ ಕಳುಹಿಸಲಾಗಿದೆ. ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಈ ಹಿಂದೆ ಎಂಟು ಶಾಲೆಗಳಿಗೆ ಬಾಂಬ್ ಬೆದರಿಕೆ ಬಂದಿತ್ತು ಎಂದು ವರದಿಯಾಗಿತ್ತು. ನಂತರ ಇತರ ಮೂರು ಶಾಲೆಗಳ ಆಡಳಿತ ಅಧಿಕಾರಿಗಳು ಸ್ವಲ್ಪ ಸಮಯದ ನಂತರ ದೆಹಲಿ ಪೊಲೀಸ್ ನಿಯಂತ್ರಣ ಕೊಠಡಿಗೆ ಬಾಂಬ್ ಬೆದರಿಕೆಯ ಬಗ್ಗೆ ಮಾಹಿತಿ ನೀಡಿದರು. ಸಂಖ್ಯೆ ಒಟ್ಟು 12ಕ್ಕೆ ತಲುಪಿದೆ.
ಇಮೇಲ್‌ನ IP ವಿಳಾಸವು ಅದು ದೇಶದ ಹೊರಗಿನಿಂದ ಬಂದಿದೆ ಎಂದು ಸೂಚಿಸಿದೆ. ವಿಪಿಎನ್ ಮೂಲಕ ಐಪಿ ವಿಳಾಸವನ್ನು ಮರೆಮಾಚಿರಬಹುದು ಎಂದು ದೆಹಲಿ ಪೊಲೀಸರು ಶಂಕಿಸಿದ್ದಾರೆ. “ನಿನ್ನೆಯಿಂದ ಹಲವು ಸ್ಥಳಗಳಿಗೆ ಇಮೇಲ್‌ಗಳು ಬಂದಿವೆ. ಒಂದೇ ಮಾದರಿಯಲ್ಲಿ ಇವೆ. ಮೇಲ್ ಡೇಟ್‌ಲೈನ್ ಅಥವಾ BCC ಅನ್ನು ಉಲ್ಲೇಖಿಸಿಲ್ಲ. ಅಂದರೆ ಒಂದೇ ಸಂದೇಶವನ್ನು ಹಲವು ಸ್ಥಳಗಳಿಗೆ ಕಳುಹಿಸಲಾಗಿದೆ. ತನಿಖೆ ನಡೆಯುತ್ತಿದೆ” ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: Taliban Writing: ಗೋಡೆ ಮೇಲೆ ತಾಲಿಬಾನ್ ಬರಹ ಬರೆದ ಪೇದೆ ಮುನಿರಾಜು ಈಗ ಮುಸ್ಲಿಂ ಅಂತೆ!