Site icon Vistara News

Borewell tragedy:‌ ಕೊಳವೆ ಬಾವಿ ಆಳ ಅಗೆತ ಮುಕ್ತಾಯ, ಅಡ್ಡ ಅಗೆತ ಶುರು, ಅಲ್ಲೇ ಇದ್ದಾನಾ ಮಗು ಸಾತ್ವಿಕ್?

satwik borewell tragedy

ವಿಜಯಪುರ: ವಿಜಯಪುರ ಜಿಲ್ಲೆ ಇಂಡಿ ತಾಲ್ಲೂಕಿನ ಲಚ್ಯಾಣ ಗ್ರಾಮದಲ್ಲಿ ಕೊಳವೆ ಬಾವಿಗೆ ಮಗು (Borewell tragedy) ಬಿದ್ದಿರುವ ಪ್ರಕರಣದಲ್ಲಿ ಮಗುವನ್ನು ರಕ್ಷಿಸಲು (child rescue) ರಕ್ಷಣಾ ತಂಡಗಳು ರಾತ್ರಿಯಿಡೀ ಒಂದು ಕ್ಷಣ ಬಿಡುವಿಲ್ಲದೆ ಕಾರ್ಯಾಚರಣೆ ನಡೆಸಿವೆ.

ನಿನ್ನೆ ಸಂಜೆ 6 ಗಂಟೆಗೆ ಕಾರ್ಯಾಚರಣೆ ಶುರುವಾಗಿತ್ತು. ಸುಮಾರು 20 ಅಡಿ ಆಳದಲ್ಲಿ ಮಗು ಸಿಲುಕಿಕೊಂಡಿದೆ ಎಂದು ಭಾವಿಸಲಾಗಿದೆ. ಇದೀಗ ಕೊಳವೆ ಬಾವಿಯ ಪಕ್ಕದಲ್ಲಿಯೇ 20 ಅಡಿಗಳಷ್ಟು ರಕ್ಷಣಾ ತಂಡ ಡಿಗ್ಗಿಂಗ್ ಮಾಡಿದೆ. ಅಲ್ಲಿಂದ ಮಗು ಇರುವ ಕಡೆಗೆ 5 ಅಡಿಗಳಷ್ಟು ದೂರ ಸುರಂಗ ನಿರ್ಮಾಣ ಮಾಡಲಾಗುತ್ತಿದೆ. ಈಗಾಗಲೇ ಅಡ್ಡಡ್ಡ 3 ಅಡಿಗಳಷ್ಟು ಸುರಂಗ ನಿರ್ಮಾಣವಾಗಿದೆ.

ಆದರೆ ಕಾರ್ಯಾಚರಣೆಗೆ ಕೆಲವು ಗಟ್ಟಿಯಾದ ಕಲ್ಲು ಬಂಡೆಗಳು ಅಡ್ಡ ಸಿಗುತ್ತಿವೆ ಎಂದು ಗೊತ್ತಾಗಿದೆ. ಕಲ್ಲುಗಳನ್ನು ಪುಡಿ ಮಾಡಿಕೊಂಡು ಕಾರ್ಯಾಚರಣೆ ಮಾಡಬೇಕಾದ ಅನಿವಾರ್ಯತೆ ಇರುವುದರಿಂದ, ಅದೇ ಸಮಯಕ್ಕೆ ಮಗುವಿಗೂ ಗಾಯವಾಗದಂತೆ ನೋಡಿಕೊಳ್ಳಬೇಕಾದ ಅನಿವಾರ್ಯತೆ ಇರುವುದರಿಂದ, ಕಾರ್ಯಾಚರಣೆ ನಿಧಾನವಾಗಿದೆ.

ಕೊಳವೆ ಬಾವಿಯಲ್ಲಿ ಬಾಲಕ ಬಿದ್ದಿರುವಲ್ಲಿ ಹಗ್ಗದ ಮೂಲಕ ಒಂದು ಕ್ಯಾಮೆರಾ ಇಳಿಸಲಾಗಿದ್ದು, ಅದರಲ್ಲಿ ಬಾಲಕನ ಮುಖದ ಮೇಲೆ ಮಣ್ಣು ಬಿದ್ದಿರುವುದು ಕಂಡುಬಂದಿದೆ. ಬಾಲಕನ ಚಲನವಲನದ ಮೇಲೆ ಕ್ಯಾಮೆರಾ ಮೂಲಕ ನಿಗಾ ಇಡಲಾಗಿದ್ದು, ನಿರಂತರವಾಗಿ ಆಕ್ಸಿಜನ್ ಪೂರೈಕೆ ಮಾಡಲಾಗುತ್ತಿದೆ. ಬಾಲಕನ ಕಾಲು ಅಲುಗಾಡುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಮಗು ಬದುಕಿದೆ ಎಂಬುದು ಖಚಿತವಾಗಿದೆ.

ಹೈದರಾಬಾದಿನಿಂದ NDRF ತಂಡ ಆಗಮಿಸಿದೆ. ಅಗ್ನಿಶಾಮಕ ದಳ, ಬೆಳಗಾವಿ, ಕಲಬುರ್ಗಿಯಿಂದ ಎರಡು SDRF ತಂಡಗಳು ಆಗಮಿಸಿವೆ. ಕೊಳವೆ ಬಾವಿ ಕೊರೆಯುವ ನುರಿತವರ ತಂಡಗಳಿಂದ ನಿರಂತರ ಕಾರ್ಯಾಚರಣೆ ನಡೆದಿದ್ದು, ಕಾರ್ಯಾಚರಣೆಗೆ ಎರಡು ಹಿಟ್ಯಾಚಿ, ಬ್ರೇಕರ್‌ಗಳ ಬಳಕೆಯಾಗುತ್ತಿದೆ. ಕಾರ್ಯಾಚರಣೆ ನೋಡಲು ಜನ ಕೂಡ ಕಿಕ್ಕಿರಿದು ಸೇರಿದ್ದಾರೆ.

ಪೂಜೆ ಪುನಸ್ಕಾರ

ಸಾತ್ವೀಕ್ ಬದುಕಿ ಬರಲಿ ಎಂದು ಗ್ರಾಮದಲ್ಲಿ ಹಾಗೂ ಸುತ್ತಮುತ್ತ ಜನ ಪೂಜೆ ಪುನಸ್ಕಾರ ನಡೆಸುತ್ತಿದ್ದಾರೆ. ಲಚ್ಯಾಣ ಗ್ರಾಮದ ಸಿದ್ದಪ್ಪ ಮಹಾರಾಜರ ಗದ್ದುಗೆಗೆ ಗ್ರಾಮದ ಯುವಕರಿಂದ ವಿಶೇಷ ಪೂಜೆ ನಡೆದಿದೆ. ಬಾಲಕ ಬದುಕಿ ಬರಲಿ ಎಂದು ಪೂಜೆ ಸಲ್ಲಿಸಿ ಯುವಕರು ಪ್ರಾರ್ಥನೆ ಸಲ್ಲಿಸಿದರು.

ನೋವು ಹಂಚಿಕೊಂಡ ಚಿಕ್ಕಪ್ಪ

ಎರಡು ವರ್ಷದ ಮಗು ತೆರೆದ ಕೊಳವೆ ಬಾವಿಗೆ ಬಿದ್ದ ಪ್ರಕರಣದಲ್ಲಿ ವಿಸ್ತಾರ ನ್ಯೂಸ್‌ನೊಂದಿಗೆ ಬಾಲಕ‌ ಸಾತ್ವಿಕ್ ಚಿಕ್ಕಪ್ಪ ನೋವು ಹಂಚಿಕೊಂಡಿದ್ದಾರೆ. “ಮನೆ ಬಳಿ ಆಟ ಆಡುತ್ತಿದ್ದ ಸಾತ್ವಿಕ್‌, ತಂದೆ ಸತೀಶ್ ಜಮೀನಿಗೆ ನೀರು ಬಿಡಲು ಬೊರವೆಲ್ ಆನ್ ಮಾಡಲು ಹೋದಾಗ ತಂದೆಯ ಹಿಂದಿನಿಂದಲೇ ಹೋಗಿದ್ದಾನೆ. ಸತೀಶ್ ಇದನ್ನು ಗಮನಿಸಿಲ್ಲ” ಎಂದು ನೋವು ತೋಡಿಕೊಂಡಿದ್ದಾರೆ.

ತಾತ ಕೊರೆಸಿದ ಬಾವಿ

ಸತೀಶ್ ಮತ್ತು ಪೂಜಾ ದಂಪತಿಯ ಪುತ್ರ ಸಾತ್ವಿಕ್ ಮುಜಗೊಂಡ (2) ಬುಧವಾರ (ಏಪ್ರಿಲ್‌ 3) ಆಟವಾಡಲು ಹೋಗಿದ್ದ ವೇಳೆ ಆಯತಪ್ಪಿ ಕೊಳವೆ ಬಾವಿಗೆ ಬಿದ್ದಿದ್ದಾನೆ. ರಕ್ಷಣಾ ಕಾರ್ಯಾಚರಣೆ ಸ್ಥಳದಲ್ಲೇ ಕುಟುಂಬಸ್ಥರು ಆಕ್ರಂದನ ವ್ಯಕ್ತಪಡಿಸುತ್ತಿದ್ದಾರೆ. ಶಂಕರಪ್ಪ ಮುಜಗೊಂಡ ಎಂಬುವರು ತಮ್ಮ ಜಮೀನಿನಲ್ಲಿ ಕೊಳವೆ ಬಾವಿ ಕೊರೆಸಿದ್ದರು. 500 ಅಡಿಯಷ್ಟು ಕೊರೆದರೂ ನೀರು ಬಂದಿರಲಿಲ್ಲ. ಹಾಗಾಗಿ ಮುಚ್ಚದೇ ಹಾಗೆಯೇ ಬಿಟ್ಟಿದ್ದರು ಎನ್ನಲಾಗಿದೆ. ಈಗ ಅವರ ಮೊಮ್ಮಗನೇ ಈ ಕೊಳವೆ ಬಾವಿಗೆ ಬದ್ದಿದ್ದಾನೆ.

ಕೊಳವೆ ಬಾವಿಗೆ ಬಿದ್ದು 2000 ರಲ್ಲಿ ದಾವಣಗೆರೆಯಲ್ಲಿ ಬಾಲಕ ಕರಿಯ ಸಾವು, 2007 ರಲ್ಲಿ ರಾಯಚೂರಿನಲ್ಲಿ ಬಾಲಕ ಸಂದೀಪ್ ಸಾವು, 2014 ರಲ್ಲಿ ಬಾಗಲಕೋಟೆಯಲ್ಲಿ 6 ವರ್ಷದ ಬಾಲಕ ತಿಮ್ಮಣ್ಣ ಹಾಗೂ ವಿಜಯಪುರ ಜಿಲ್ಲೆಯ ನಾಗಠಾಣ ಗ್ರಾಮದ ಬಾಲಕಿ ಅಕ್ಷತಾ ಸಾವು, 2017 ರಲ್ಲಿ ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ 6 ವರ್ಷದ ಬಾಲಕಿ ಕಾವೇರಿ ಹಾಗೂ ಗದಗ ಜಿಲ್ಲೆಯ ಸವಡಿ ಗ್ರಾಮದ ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಕೊಳವೆಬಾವಿ ದುರಂತಗಳಿಗೆ ಕೊನೆಯೇ ಇಲ್ಲವೆ?

Exit mobile version