ಬಾಗಲಕೋಟೆ: ವಿಜಯಪುರ ಜಿಲ್ಲೆಯ ಇಂಡಿಯಲ್ಲಿ ಕೊಳವೆ ಬಾವಿಗೆ ಬಿದ್ದಿರುವ (Borewell tragedy) ಮಗು ಸಾತ್ವಿಕ್ ಕ್ಷೇಮವಾಗಿ (child rescue) ಬದುಕಿ ಬರಲಿ ಎಂದು, ಈ ಹಿಂದೆ ಕೊಳವೆ ಬಾವಿಗೆ ಬಿದ್ದು ಬದುಕಿ ಬಂದಿರುವ ಬಾಗಲಕೋಟೆಯ ಕಲ್ಲವ್ವ ಎಂಬ ಮಹಿಳೆ ದೇವರಲ್ಲಿ ಪ್ರಾರ್ಥನೆ ಮಾಡಿಕೊಂಡಿದ್ದಾರೆ.
ಬಾಗಲಕೋಟೆ ತಾಲೂಕಿನ ಸೀಗಿಕೇರಿ ಗ್ರಾಮದಲ್ಲಿ ವಾಸವಾಗಿದ್ದ ಕಲ್ಲವ್ವ 2006ರಲ್ಲಿ ಕೊಳವೆ ಬಾವಿಗೆ ಬಿದ್ದು, ಬದುಕಿ ಬಂದಿರುವ ಮಹಿಳೆ. ಹೊಲಕ್ಕೆ ಮೇವು ತರಲು ಹೋಗಿ ಸಂಜೆ ವೇಳೆ ಕಾಣದೇ ತೆರೆದ ಕೊಳವೆ ಬಾವಿಗೆ ಬಿದ್ದಿದ್ದರು. ಅವರು ತಮಗೆ ಆದ ಅನುಭವ ಹೇಳುತ್ತಲೇ, ತನ್ನಂತೆ ಪಾಪು ಸಹ ಬದುಕಿ ಬರಬೇಕು ಎಂದು ಆಶಿಸಿದ್ದಾರೆ.
20 ಗಂಟೆಗಳ ಕಾಲ, 30 ಅಡಿ ಆಳದಲ್ಲಿ ಸಿಲುಕಿದ್ದ ಕಲ್ಲವ್ವ ಬದುಕಿ ಬಂದದ್ದೇ ರೋಚಕ ಅನುಭವವಾಗಿದ್ದು, ವಿಸ್ತಾರ ನ್ಯೂಸ್ ಮುಂದೆ ಆ ಕೆಟ್ಟ ಕ್ಷಣಗಳ ನೆನೆದು ಅವರು ಭಾವುಕರಾದರು. “ಒಳಗೆ ಬಿದ್ದ ನಂತರ ನನಗೆ ಕೆಲ ಸಮಯ ಪ್ರಜ್ಞೆ ಇರಲಿಲ್ಲ. ನನಗೆ ಪ್ರಜ್ಞೆ ಬಂದ ನಂತರ ಭಯ ಅನಿಸುತ್ತಿತ್ತು. ಬಾಯಾರಿಕೆ ಆಗ್ತಿತ್ತು, ನೀರು ನೀರು ಅಂತಿದ್ದೆ. ಈಗ ಯಾರ ಕೈಯಲ್ಲೂ ಏನೂ ಬರಲ್ಲ, ಆ ದೇವರನ್ನು ನೆನೆದೇ ಹೊರಗೆ ತೆಗೆಯಬೇಕು, ಆ ಭಗವಂತನೇ ಆಶೀರ್ವಾದ ಕೊಡೋದು ಈಗ” ಎಂದು ಕಲ್ಲವ್ವ ಹೇಳಿದ್ದಾರೆ.
“ಆ ಕಂದಮ್ಮನಿಗಾಗಿ ಈ ಸಮಯದಲ್ಲಿ ಭಗವಂತನ ನೆನೆಸಬೇಕು. ನನಗೆ ತಿಳುವಳಿಕೆ ಇತ್ತು ನಾ ಧೈರ್ಯ ಮಾಡಿದೆ, ದೇವರ ನೆನೆದೆ. ಆ ಕೂಸು ಹೆಂಗ ಹೇಳಬೇಕ ರಿ ಸರ… ಆ ಕೂಸು ಉಳಿಬೇಕು ಅಂತ ಆ ದೇವ್ರನ್ನೆ ನೆನೆಸ್ತೆನ್ರಿ ನಾ ಈಗ. ಅದು ಸಹ ನನ್ನ ಮಗಾನೇ ಅಂದುಕೊಳ್ತೇನೆ ಸರ.. ಅದು ಉಳಿದು ಬರಲಿ” ಎಂದು ಕಲ್ಲವ್ವ ಭಾವುಕರಾಗಿದ್ದಾರೆ.
“ಸಣ್ಣ ಮಗುವನ್ನು ಆ ರೀತಿ ನಿರ್ಲಕ್ಷ್ಯದಿಂದ ಬಿಡಬಾರದಿತ್ತು” ಎಂದು ಸಹ ತಂದೆ ತಾಯಿಯ ಜವಾಬ್ದಾರಿ ಬಗ್ಗೆ ಕಲ್ಲವ್ವ ಹೇಳಿದ್ದಾರೆ. “ಬಾಯಿಲ್ಲದ ಆ ಕೂಸು ಹೆಂಗ ಹೇಳಿ ಪ್ರಯತ್ನ ಮಾಡಿ ಬರಬೇಕು? ನನ್ನ ಪರವಾಗಿಯಾದ್ರೂ ಆ ಕೂಸು ಉಳಿದು ಬರಬೇಕು” ಅಂತ ಕೂಸಿಗಾಗಿ ಕಲ್ಲವ್ವಳ ತಾಯಿ ಹೃದಯ ಮಿಡಿದಿದೆ.
“ಕೊಳವೆ ಬಾವಿಯಿಂದ ತೆಗೆದ ನಂತರ ಸರ್ಕಾರ, ಜಿಲ್ಲಾಡಳಿತ ತಮಗೆ ಯಾವ ಸಹಾಯವನ್ನೂ ಮಾಡಿಲ್ಲ. ತಮ್ಮ ಕುಟುಂಬಕ್ಕೆ, ಮಕ್ಕಳಿಗೆ ಇದೀಗ ಸರ್ಕಾರದ ಆಸರೆ ಬೇಕಿದೆ” ಎಂದು ಕೂಡ ಕಲ್ಲವ್ವ ಗದಗೆನ್ನವರ ಅಳಲು ಹೇಳಿಕೊಂಡಿದ್ದಾರೆ.
ವಿಜಯಪುರ ಜಿಲ್ಲೆ ಕೋಲಾರ ಮೂಲದ ಕಲ್ಲವ್ವ, ಸೀಗೀಕೇರಿಗೆ ಮದುವೆಯಾಗಿದ್ದು, 18 ವರ್ಷದವಳಿದ್ದಾಗ ಅಲ್ಲಿ ಕೊಳವೆ ಬಾವಿಯಲ್ಲಿ ಬಿದ್ದಿದ್ದರು. 20 ಅಡಿ ಆಳದಲ್ಲಿ ಸಿಲುಕಿದ್ದರು. ಅಂದು ಬಾಗಲಕೋಟೆ ಜಿಲ್ಲಾಡಳಿತ ಯಶಸ್ವಿ ಕಾರ್ಯಚರಣೆ ನಡೆಸಿ ಆಕೆಯನ್ನು ಬದುಕಿಸಿತ್ತು. ಸೀಗಿಕೇರಿ ಗ್ರಾಮದ ಶ್ರೀಶೈಲ ಎಂಬವರ ಪತ್ನಿಯಾಗಿರುವ ಕಲ್ಲವ್ವಗೆ ಸದ್ಯ ಇಬ್ಬರು ಮಕ್ಕಳಿದ್ದಾರೆ/ ಘಟನೆಯ ನಂತರ ಸೀಗಿಕೇರಿ ಬಿಟ್ಟು ಬಾಗಲಕೋಟೆ ತಾಲ್ಲೂಕಿನ ಮಲ್ಲಾಪೂರ ಗ್ರಾಮದಲ್ಲಿ ವಾಸವಾಗಿದ್ದಾರೆ.
ರಾತ್ರಿಯಿಡೀ ಕಾರ್ಯಾಚರಣೆ
ಮಗು ಸಾತ್ವಿಕ್‌ನನ್ನು ರಕ್ಷಿಸಲು ರಕ್ಷಣಾ ತಂಡಗಳು ರಾತ್ರಿಯಿಡೀ ಒಂದು ಕ್ಷಣ ಬಿಡುವಿಲ್ಲದೆ ಕಾರ್ಯಾಚರಣೆ ನಡೆಸಿವೆ. ನಿನ್ನೆ ಸಂಜೆ 6 ಗಂಟೆಗೆ ಕಾರ್ಯಾಚರಣೆ ಶುರುವಾಗಿತ್ತು. ಸುಮಾರು 20 ಅಡಿ ಆಳದಲ್ಲಿ ಮಗು ಸಿಲುಕಿಕೊಂಡಿದೆ ಎಂದು ಭಾವಿಸಲಾಗಿದೆ. ಇದೀಗ ಕೊಳವೆ ಬಾವಿಯ ಪಕ್ಕದಲ್ಲಿಯೇ 20 ಅಡಿಗಳಷ್ಟು ರಕ್ಷಣಾ ತಂಡ ಡಿಗ್ಗಿಂಗ್ ಮಾಡಿದೆ. ಅಲ್ಲಿಂದ ಮಗು ಇರುವ ಕಡೆಗೆ 5 ಅಡಿಗಳಷ್ಟು ದೂರ ಸುರಂಗ ನಿರ್ಮಾಣ ಮಾಡಲಾಗುತ್ತಿದೆ. ಈಗಾಗಲೇ ಅಡ್ಡಡ್ಡ 3 ಅಡಿಗಳಷ್ಟು ಸುರಂಗ ನಿರ್ಮಾಣವಾಗಿದೆ.
ಆದರೆ ಕಾರ್ಯಾಚರಣೆಗೆ ಕೆಲವು ಗಟ್ಟಿಯಾದ ಕಲ್ಲು ಬಂಡೆಗಳು ಅಡ್ಡ ಸಿಗುತ್ತಿವೆ ಎಂದು ಗೊತ್ತಾಗಿದೆ. ಕಲ್ಲುಗಳನ್ನು ಪುಡಿ ಮಾಡಿಕೊಂಡು ಕಾರ್ಯಾಚರಣೆ ಮಾಡಬೇಕಾದ ಅನಿವಾರ್ಯತೆ ಇರುವುದರಿಂದ, ಅದೇ ಸಮಯಕ್ಕೆ ಮಗುವಿಗೂ ಗಾಯವಾಗದಂತೆ ನೋಡಿಕೊಳ್ಳಬೇಕಾದ ಅನಿವಾರ್ಯತೆ ಇರುವುದರಿಂದ, ಕಾರ್ಯಾಚರಣೆ ನಿಧಾನವಾಗಿದೆ.
ಕೊಳವೆ ಬಾವಿಯಲ್ಲಿ ಬಾಲಕ ಬಿದ್ದಿರುವಲ್ಲಿ ಹಗ್ಗದ ಮೂಲಕ ಒಂದು ಕ್ಯಾಮೆರಾ ಇಳಿಸಲಾಗಿದ್ದು, ಅದರಲ್ಲಿ ಬಾಲಕನ ಮುಖದ ಮೇಲೆ ಮಣ್ಣು ಬಿದ್ದಿರುವುದು ಕಂಡುಬಂದಿದೆ. ಬಾಲಕನ ಚಲನವಲನದ ಮೇಲೆ ಕ್ಯಾಮೆರಾ ಮೂಲಕ ನಿಗಾ ಇಡಲಾಗಿದ್ದು, ನಿರಂತರವಾಗಿ ಆಕ್ಸಿಜನ್ ಪೂರೈಕೆ ಮಾಡಲಾಗುತ್ತಿದೆ. ಬಾಲಕನ ಕಾಲು ಅಲುಗಾಡುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಮಗು ಬದುಕಿದೆ ಎಂಬುದು ಖಚಿತವಾಗಿದೆ.
ಹೈದರಾಬಾದಿನಿಂದ NDRF ತಂಡ ಆಗಮಿಸಿದೆ. ಅಗ್ನಿಶಾಮಕ ದಳ, ಬೆಳಗಾವಿ, ಕಲಬುರ್ಗಿಯಿಂದ ಎರಡು SDRF ತಂಡಗಳು ಆಗಮಿಸಿವೆ. ಕೊಳವೆ ಬಾವಿ ಕೊರೆಯುವ ನುರಿತವರ ತಂಡಗಳಿಂದ ನಿರಂತರ ಕಾರ್ಯಾಚರಣೆ ನಡೆದಿದ್ದು, ಕಾರ್ಯಾಚರಣೆಗೆ ಎರಡು ಹಿಟ್ಯಾಚಿ, ಬ್ರೇಕರ್‌ಗಳ ಬಳಕೆಯಾಗುತ್ತಿದೆ. ಕಾರ್ಯಾಚರಣೆ ನೋಡಲು ಜನ ಕೂಡ ಕಿಕ್ಕಿರಿದು ಸೇರಿದ್ದಾರೆ.
ಇದನ್ನೂ ಓದಿ: Borewell tragedy: ಕೊಳವೆ ಬಾವಿ ಆಳ ಅಗೆತ ಮುಕ್ತಾಯ, ಅಡ್ಡ ಅಗೆತ ಶುರು, ಅಲ್ಲೇ ಇದ್ದಾನಾ ಮಗು ಸಾತ್ವಿಕ್?