Site icon Vistara News

BrahMos Missiles: ಫಿಲಿಪ್ಪೀನ್ಸ್‌ಗೆ ನಾಲ್ಕನೇ ಬ್ರಹ್ಮೋಸ್‌ ಕ್ಷಿಪಣಿ ಬ್ಯಾಟರಿ ಕಳುಹಿಸಲು ಭಾರತ ಸಜ್ಜು

BrahMos Missiles

ಹೊಸದಿಲ್ಲಿ: ದಕ್ಷಿಣ ಚೀನಾ ಸಮುದ್ರದಲ್ಲಿ (South China Sea) ಚೀನಾದ ಒತ್ತಡದಿಂದಾಗಿ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆಯೇ ರಕ್ಷಣಾ ರಫ್ತಿಗೆ (defence exports) ಭಾರಿ ಉತ್ತೇಜನ ನೀಡುತ್ತಿರುವ ಭಾರತ (India), ಇಂದು ಫಿಲಿಪ್ಪೀನ್ಸ್‌ಗೆ (Philippines) ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿಗಳ (BrahMos missiles, BrahMos supersonic cruise missiles) ಭೂ ಆವೃತ್ತಿಯ ನಾಲ್ಕನೇ ʼಬ್ಯಾಟರಿ’ಯನ್ನು (Battery) ಕಳುಹಿಸಲು ಮುಂದಾಗಿದೆ.

ಬ್ರಹ್ಮೋಸ್ ಕ್ಷಿಪಣಿಗಳ ಮೂರು ‘ಬ್ಯಾಟರಿ’ಗಳನ್ನು ಈಗಾಗಲೇ ದ್ವೀಪ ರಾಷ್ಟ್ರಕ್ಕೆ ಹಸ್ತಾಂತರಿಸಲಾಗಿದೆ. 2022ರಲ್ಲಿ ಎರಡು ಮಿತ್ರರಾಷ್ಟ್ರಗಳು ಸಹಿ ಮಾಡಿದ USD 375 ಮಿಲಿಯನ್ ಒಪ್ಪಂದದ ಭಾಗವಾಗಿದೆ ಇದು. ಪ್ರತಿ ಬ್ಯಾಟರಿಯೂ ನಾಲ್ಕು ಲಾಂಚರ್‌ಗಳನ್ನು ಒಳಗೊಂಡಿದೆ. ಪ್ರತಿ ಲಾಂಚರ್‌ನಲ್ಲೂ 290 ಕಿಮೀ ವ್ಯಾಪ್ತಿಯ ಮೂರು ಕ್ಷಿಪಣಿಗಳಿರುತ್ತವೆ. ಈ ಕ್ಷಿಪಣಿ ಸೂಪರ್‌ಸಾನಿಕ್ ವೇಗವನ್ನು ಹೊಂದಿದ್ದು, ಇದನ್ನು ಭೂಮಿ ಅಥವಾ ಹಡಗು ಆಧಾರಿತ ಬ್ಯಾಲಿಸ್ಟಿಕ್ ಮಿಸೈಲ್ ಡಿಫೆನ್ಸ್ (BMDs) ವ್ಯವಸ್ಥೆಗಳಿಂದ ಪ್ರತಿಬಂಧಿಸುವುದು ತುಂಬಾ ಕಷ್ಟ.

ಬ್ರಹ್ಮೋಸ್‌ನ ಫಿಲಿಪೈನ್ಸ್ ಒಪ್ಪಂದದ ಮೂಲಕ, 2023-2024ರಲ್ಲಿ ಭಾರತದ ರಕ್ಷಣಾ ರಫ್ತು ₹21083 ಕೋಟಿಗಳನ್ನು ಮುಟ್ಟಿದೆ. ಕಳೆದ ಹಣಕಾಸು ವರ್ಷಕ್ಕೆ ಹೋಲಿಸಿದರೆ ವರ್ಷದಿಂದ ವರ್ಷಕ್ಕೆ ಶೇ.32.5ರಷ್ಟು ಬೃಹತ್ ಬೆಳವಣಿಗೆಯಾಗಿದೆ. ಬ್ರಹ್ಮೋಸ್ ದಾಖಲೆ ಮಾರಾಟ ಕಂಡಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಭಾರತವು ಈ ಸೂಪರ್‌ಸಾನಿಕ್ ಕ್ಷಿಪಣಿಗಳ ಹೆಚ್ಚಿನ ಆರ್ಡರ್‌ಗಳನ್ನು ಪಡೆದುಕೊಳ್ಳುವ ನಿರೀಕ್ಷೆಯಿದೆ.

ಕ್ಷಿಪಣಿ ರಫ್ತಿನಲ್ಲಿ ಭಾರತವು ಸಂತುಷ್ಟಿಯ ಮಟ್ಟವನ್ನು ಮುಟ್ಟಿದೆ. ನರೇಂದ್ರ ಮೋದಿ ಸರ್ಕಾರ ಇದೀಗ ಮುಂಬೈನಲ್ಲಿ ಸ್ಕಾರ್ಪೀನ್-ಕ್ಲಾಸ್ ಡೀಸೆಲ್-ಎಲೆಕ್ಟ್ರಿಕ್ ಜಲಾಂತರ್ಗಾಮಿ ನೌಕೆಗಳನ್ನು ತಯಾರಿಸಲು ಮತ್ತು ಇಂಡೋನೇಷ್ಯಾ, ಮಲೇಷ್ಯಾ ಮುಂತಾದ ಮೂರನೇ ದೇಶಗಳಿಗೆ ಸರಬರಾಜು ಮಾಡಲು ಮಜಗಾಂವ್ ಡಾಕ್‌ಯಾರ್ಡ್ಸ್ ಲಿಮಿಟೆಡ್ ಮತ್ತು ಫ್ರೆಂಚ್ ನೇವಲ್ ಗ್ರೂಪ್ ನಡುವೆ ಜಂಟಿ ಉದ್ಯಮವನ್ನು ಸ್ಥಾಪಿಸಲು ಮುಂದಾಗಿದೆ.

ಪ್ರಸ್ತುತ ನಮ್ಮ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಜನರಲ್ ಅನಿಲ್ ಚೌಹಾನ್ ಅವರು ಫ್ರಾನ್ಸ್‌ ಸರ್ಕಾರದೊಂದಿಗೆ ಸಂವಹನ ನಡೆಸಲು ಫ್ರಾನ್ಸ್‌ಗೆ ಭೇಟಿ ನೀಡಿದ್ದು, ಭಾರತೀಯ ಮತ್ತು ಫ್ರೆಂಚ್ ರಕ್ಷಣಾ ವ್ಯವಹಾರ ಸರಪಳಿಯನ್ನು ಇನ್ನಷ್ಟು ಗಟ್ಟಿಗೊಳಿಸಲಿದ್ದಾರೆ. ದ್ವಿಪಕ್ಷೀಯ ರಕ್ಷಣಾ ಸಹಕಾರವನ್ನು ಗಾಢಗೊಳಿಸುವ ಪ್ರಯತ್ನದಲ್ಲಿ ಭಾರತೀಯ ಸೇನಾ ಮುಖ್ಯಸ್ಥರು ಟೌಲೌಸ್‌ನಲ್ಲಿರುವ ಫ್ರೆಂಚ್ ಜಲಾಂತರ್ಗಾಮಿ ನೆಲೆಗೆ ಭೇಟಿ ನೀಡಲಿದ್ದಾರೆ. ಭಾರತಕ್ಕೆ ಇನ್ನೂ ಮೂರು ಹೆಚ್ಚುವರಿ ಕಲ್ವೇರಿ (Kalveri- ಮಾರ್ಪಡಿಸಿದ ಸ್ಕಾರ್ಪೀನ್) ದರ್ಜೆಯ ಜಲಾಂತರ್ಗಾಮಿ ನೌಕೆಗಳ ನಿರ್ಮಾಣಕ್ಕಾಗಿ ಫ್ರೆಂಚ್ ನೇವಲ್ ಗ್ರೂಪ್ ಈಗಾಗಲೇ MDLನೊಂದಿಗೆ ಮಾತುಕತೆ ನಡೆಸುತ್ತಿದೆ.

P-5 ಶಕ್ತಿಗಳು ಪರಮಾಣು-ಚಾಲಿತ ಸಾಂಪ್ರದಾಯಿಕ ಸಶಸ್ತ್ರ ದಾಳಿ ಜಲಾಂತರ್ಗಾಮಿ ನೌಕೆಗಳನ್ನು (SSN) ವೈರಿ ಸೈನ್ಯದ ತಡೆಗಟ್ಟುವಿಕೆಗೆ ಬಳಸುತ್ತಿರುವಾಗ, ಭಾರತವು ಇನ್ನೂ ತನ್ನ ಆಯ್ಕೆಗಳನ್ನು ಮೌಲ್ಯಮಾಪನ ಮಾಡುತ್ತಿದೆ. ದೀರ್ಘಾವಧಿಯ ಕಡಲ ಭದ್ರತೆಗಾಗಿ ಎಸ್‌ಎಸ್‌ಎನ್‌ಗಳನ್ನು ತಯಾರಿಸುವುದು ಅಥವಾ ಸಾಂಪ್ರದಾಯಿಕ ಡೀಸೆಲ್-ಎಲೆಕ್ಟ್ರಿಕ್ ಜಲಾಂತರ್ಗಾಮಿ ನೌಕೆಗಳನ್ನು ಹೊಂದುವುದು ಆಯ್ಕೆಗಳಾಗಿವೆ.

ಇದನ್ನೂ ಓದಿ: BrahMos Missiles: ನೌಕಾಪಡೆಗೆ ಭೀಮಬಲ; 200 ಬ್ರಹ್ಮೋಸ್‌ ಕ್ಷಿಪಣಿ ಖರೀದಿಗೆ ಕೇಂದ್ರ ಅಸ್ತು

Exit mobile version