ಬೆಂಗಳೂರು: 17 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ (Physical abuse) ಎಸಗಿದ ಆರೋಪದಲ್ಲಿ ದಾಖಲಾದ ಪೋಕ್ಸೊ ಕೇಸ್‌ನಲ್ಲಿ (POCSO Case) ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ (BS Yediyurappa) ಇಂದು ಸಿಐಡಿ (CID) ಮುಂದೆ ಹಾಜರಾಗಿ ಹೇಳಿಕೆ ನೀಡಲಿದ್ದಾರೆ. ಅವರನ್ನು ಬಂಧಿಸದಂತೆ ಈಗಾಗಲೇ ಹೈಕೋರ್ಟ್ (High court) ಸೂಚನೆ ನೀಡಿರುವ ಹಿನ್ನೆಲೆಯಲ್ಲಿ, ಬಂಧನದ ಭಯವಿಲ್ಲದೇ ಸಿಐಡಿ ಮುಂದೆ ಬಿಎಸ್‌ವೈ ಹಾಜರಾಗಲಿದ್ದಾರೆ.
ಇಂದು ಬೆಂಗಳೂರಿನಲ್ಲಿರುವ ಸಿಐಡಿ ಮುಖ್ಯ ಕಚೇರಿಯಲ್ಲಿ ಬಿಎಸ್‌ವೈ ತಮ್ಮ ವಕೀಲರ ಸಮೇತ ಹಾಜರಾಗಿ ವಿಚಾರಣೆ ಎದುರಿಸಲಿದ್ದಾರೆ ಎಂದು ಗೊತ್ತಾಗಿದೆ. ಬಿಎಸ್‌ವೈ ಅಪ್ರಾಪ್ತ ವಯಸ್ಸಿನ ಹುಡುಗಿ ಮೇಲೆ ಅತ್ಯಾಚಾರ ಮಾಡಿದ ಆರೋಪ ಎದುರಿಸುತ್ತಿದ್ದಾರೆ. ಬಾಲಕಿಯ ತಾಯಿ ಈ ಆರೋಪ ಮಾಡಿದ್ದು, ಈಕೆ ಇತ್ತೀಚೆಗೆ ನಿಧನರಾಗಿದ್ದರು. ಪ್ರಕರಣ ನಡೆದ ಸಂದರ್ಭದಲ್ಲಿ ಯಾರೆಲ್ಲ ಬಂದಿದ್ದರು, ಅಂದು ಏನಾಯಿತು ಇತ್ಯಾದಿ ಪ್ರಕರಣದ ಮಾಹಿತಿಯನ್ನು ಬಿಎಸ್‌ವೈ ಅವರಿಂದ ಸಿಐಡಿ ಪಡೆಯಲಿದೆ. ಇದೊಂದು ಸಂಪೂರ್ಣವಾಗಿ ರಾಜಕೀಯ ಪ್ರೇರಿತ ಷಡ್ಯಂತ್ರ ಎಂದು ಬಿಎಸ್‌ವೈ ಈಗಾಗಲೇ ಹೇಳಿದ್ದಾರೆ.
ಬಿಎಸ್‌ವೈ ಇಂದೂ ಕೂಡ ಪ್ರತಿ ದಿನ ಏಳುವಂತೆ ಐದು ಗಂಟೆಗೆ ಎದ್ದು ಬೆಳಿಗ್ಗೆ ಮನೆಯ ಬಳಿ ವಾಕಿಂಗ್ ಮಾಡಿದ್ದು, ಬಳಿಕ ದಿನ ಪತ್ರಿಕೆ ಓದಿದ್ದಾರೆ. ಒಂಬತ್ತು ಗಂಟೆಗೆ ವಕೀಲ ಸಂದೀಪ್ ಪಾಟೀಲ್ ಅವರು ಬಿ.ವೈ ವಿಜಯೇಂದ್ರ ಅವರ ಡಾಲರ್ಸ್ ಕಾಲೋನಿ ನಿವಾಸಕ್ಕೆ ಆಗಮಿಸಿದ್ದು, ಬಳಿಕ ವಕೀಲರ ಜತೆ ಬಿಎಸ್‌ವೈ ಹಾಗೂ ಬಿವೈವಿ ಚರ್ಚೆ ನಡೆಸಿದರು. ಸುಮಾರು ಹನ್ನೊಂದು ಗಂಟೆಗೆ ವಕೀಲ ಸಂದೀಪ್ ಪಾಟೀಲ್ ಜೊತೆಗೆ ಯಡಿಯೂರಪ್ಪ ಸಿಐಡಿ ಕಚೇರಿಗೆ ತೆರಳಲಿದ್ದಾರೆ.
ಎದುರಿಸುತ್ತೇವೆ: ಬಿವೈ ವಿಜಯೇಂದ್ರ
ಪೋಕ್ಸೋ ಪ್ರಕರಣದ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿಕೆ ನೀಡಿದ್ದು , ಇಂದು ವಿಎಸ್‌ವೈ ಸಿಐಡಿ ಮುಂದೆ ಹಾಜರಾಗಲಿದ್ದಾರೆ ಎಂದಿದ್ದಾರೆ. “ಪೋಕ್ಸೋ ಪ್ರಕರಣ ಪಬ್ಲಿಕ್ ಡೊಮೈನ್‌ನಲ್ಲಿದೆ. ಯಾರು ಬೇಕಿದ್ದರೂ ವಿವರ ಪಡೆಯಬಹುದು. ಯಡಿಯೂರಪ್ಪ ಇದರಲ್ಲಿ ನಿರ್ದೋಷಿಯಾಗಿದ್ದಾರೆ. ಪ್ರಕರಣ ನ್ಯಾಯಾಲಯದಲ್ಲಿ ಇದೆ. ವಿಚಾರಣೆಗೆ ಹಾಜರಾಗುತ್ತಾರೆ. ಪ್ರಕರಣವನ್ನು ಎದುರಿಸ್ತೇವೆ” ಎಂದು ಹೇಳಿದ್ದಾರೆ.
ಹೈಕೋರ್ಟ್ ರಿಲೀಫ್
ಬಂಧನದ ಭೀತಿಯಲ್ಲಿದ್ದ ಬಿಎಸ್‌ವೈ ಅವರಿಗೆ ಕರ್ನಾಟಕ ಹೈಕೋರ್ಟ್ ಬಿಗ್ ರಿಲೀಫ್ ನೀಡಿತ್ತು. ಹೈಕೋರ್ಟ್‌ನ ಮುಂದಿನ ವಿಚಾರಣೆವರೆಗೆ ಬಿ.ಎಸ್.ಯಡಿಯೂರಪ್ಪ ಅವರನ್ನು ಬಂಧಿಸಬಾರದು ಎಂದು ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರ ಏಕಸದಸ್ಯ ಪೀಠವು ಆದೇಶ ಹೊರಡಿಸಿತ್ತು. ಇದರಿಂದಾಗಿ, ಸಿಐಡಿ ಅಧಿಕಾರಿಗಳಿಂದ ಬಂಧನದ ಭೀತಿಯಲ್ಲಿ ಯಡಿಯೂರಪ್ಪ ಅವರಿಗೆ ರಿಲೀಫ್ ಸಿಕ್ಕಿದೆ. ಆದರೆ, ಜೂನ್ 17ರಂದು ಸಿಐಡಿ ಅಧಿಕಾರಿಗಳ ಎದುರು ವಿಚಾರಣೆಗೆ ಹಾಜರಾಗಬೇಕು ಎಂದು ಯಡಿಯೂರಪ್ಪ ಅವರಿಗೆ ಕೋರ್ಟ್ ಸೂಚಿಸಿತ್ತು.
ಪ್ರಕರಣದಲ್ಲಿ ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು “ಬಿ.ಎಸ್.ಯಡಿಯೂರಪ್ಪ ಅವರು ಮಾಜಿ ಮುಖ್ಯಮಂತ್ರಿಯಾಗಿದ್ದಾರೆ. ಅವರು ಜೂನ್ 17ರಂದು ವಿಚಾರಣೆಗೆ ಹಾಜರಾಗುವುದಾಗಿ ತಿಳಿಸಿದ್ದರೂ ಕೋರ್ಟ್ ಹೋಗಿ ಅರೆಸ್ಟ್ ವಾರಂಟ್ ತಂದಿದ್ದೀರಿ. ನಾಲ್ಕು ದಿನ ತಡವಾಗಿ ವಿಚಾರಣೆಗೆ ಹಾಜರಾಗಿದ್ದರೆ ಆಕಾಶವೇನೂ ಕಳಚಿ ಬೀಳುತ್ತಿರಲಿಲ್ಲ. ಹಾಗಾಗಿ, ಅರೆಸ್ಟ್ ವಾರಂಟ್ ಬಗ್ಗೆ ನಮಗೆ ಅನುಮಾನವಿದೆ. ಮುಂದಿನ ವಿಚಾರಣೆವರೆಗೂ ಯಡಿಯೂರಪ್ಪ ಅವರನ್ನು ಬಂಧಿಸಬಾರದು” ಎಂಬುದಾಗಿ ಏಕಸದಸ್ಯ ಪೀಠವು ಆದೇಶ ಹೊರಡಿಸಿತ್ತು.
ಏನಿದು ಪ್ರಕರಣ?
2024ರ ಫೆಬ್ರವರಿ 2ರಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು 17 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಮಾರ್ಚ್ 14ರಂದು ಪೋಕ್ಸೊ ಕಾಯ್ದೆ ಅಡಿಯಲ್ಲಿ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು. ಇದಾದ ಬಳಿಕ ಬಿ.ಎಸ್.ಯಡಿಯೂರಪ್ಪ ಅವರು ಸಿಐಡಿ ಅಧಿಕಾರಿಗಳ ವಿಚಾರಣೆಗೂ ಹಾಜರಾಗಿದ್ದರು. ಆದರೆ, ಎಫ್‌ಐಆರ್ ದಾಖಲಾದ ಮೂರು ತಿಂಗಳ ಬಳಿಕ ಪ್ರಕರಣವೀಗ ಮತ್ತೆ ಮುನ್ನೆಲೆಗೆ ಬಂದಿದೆ. ಜೂನ್ 12ರಂದೇ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಬೇಕು ಎಂಬುದಾಗಿ ಜೂನ್ 11ರಂದೇ ಸಿಐಡಿ ಅಧಿಕಾರಿಗಳು ನೋಟಿಸ್ ನೀಡಿದ್ದರು.
ಇದನ್ನೂ ಓದಿ: BS Yediyurappa: ಪೋಕ್ಸೊ ಕೇಸ್; ಯಡಿಯೂರಪ್ಪ ವಿರುದ್ಧ ಅರೆಸ್ಟ್ ವಾರಂಟ್