ಮೈಸೂರು: ಮೇಘಾಲಯದ (Meghalaya) ರಾಜ್ಯಪಾಲರಾಗಿ (Meghalaya Governor) ರಾಜ್ಯದ ಮಾಜಿ ಸಂಸದ ಸಿ.ಎಚ್. ವಿಜಯಶಂಕರ್ (CH Vijayashankar) ಅವರನ್ನು ನೇಮಕ ಮಾಡಲಾಗಿದೆ.
ಕೇಂದ್ರ ಸರ್ಕಾರದ ಶಿಫಾರಸ್ಸಿನಂತೆ ವಿಜಯಶಂಕರ್ ಅವರನ್ನು ಮೇಘಾಲಯದ ರಾಜ್ಯಪಾಲರಾಗಿ ನೇಮಕ ಮಾಡಿ ರಾಷ್ಟ್ರಪತಿ ದ್ರೌಪದಿ ಮುರ್ಮು (President Draupadi Murmu) ಆದೇಶ ಹೊರಡಿಸಿದ್ದಾರೆ. ನಿನ್ನೆ ತಡರಾತ್ರಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ. ವಿಜಯಶಂಕರ್ ಅವರು ಮೈಸೂರಿನ ಮಾಜಿ ಸಂಸದ ಹಾಗೂ ಮಾಜಿ ಸಚಿವರಾಗಿದ್ದಾರೆ.
ಬಿಜೆಪಿ ನಾಯಕರಾಗಿರುವ ಚಂದ್ರಶೇಖರ್ ಎಚ್. ವಿಜಯಶಂಕರ್ (21.10.1956) ಲೋಕಸಭೆಯ ಸದಸ್ಯರಾಗಿ ಮೈಸೂರು ಕ್ಷೇತ್ರವನ್ನು ಹಲವು ಬಾರಿ ಪ್ರತಿನಿಧಿಸಿದ್ದರು. 1994ರಲ್ಲಿ ಹುಣಸೂರಿನಿಂದ ಕರ್ನಾಟಕ ವಿಧಾನಸಭೆಯ ಸದಸ್ಯರಾಗಿ ಆಯ್ಕೆಯಾಗಿದ್ದರು. 1998ರಲ್ಲಿ ಮೈಸೂರು ಲೋಕಸಭಾ ಕ್ಷೇತ್ರದಿಂದ 12ನೇ ಲೋಕಸಭೆಗೆ ಆಯ್ಕೆಯಾದರು. ಮೈಸೂರಿನ ಒಡೆಯರ್ ರಾಜವಂಶದ ಮುಖ್ಯಸ್ಥರಾಗಿದ್ದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ವಿರುದ್ಧ 2004ರಲ್ಲಿ ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ನಿಂತು ಮರು ಆಯ್ಕೆಯಾದರು.
ಕರ್ನಾಟಕ ರಾಜ್ಯ ಸರ್ಕಾರದಲ್ಲಿ ಕ್ಯಾಬಿನೆಟ್ ಮಂತ್ರಿಯಾಗಿ ಅರಣ್ಯ, ಪರಿಸರ ಇಲಾಖೆ, ಸಣ್ಣ ಪ್ರಮಾಣದ ಕೈಗಾರಿಕೆಗಳು ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದಾರೆ. 2014ರ ಲೋಕಸಭಾ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರ ವಿರುದ್ಧ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಹಾಸನ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು. 15 ಜೂನ್ 2010ರಿಂದ ಜನವರಿ 2016ರವರೆಗೆ ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾಗಿದ್ದರು. 2017ರ ಅಕ್ಟೋಬರ್‌ನಲ್ಲಿ ಭಾರತೀಯ ಜನತಾ ಪಕ್ಷಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಿದ್ದರು. 2019 ನವೆಂಬರ್‌ನಲ್ಲಿ ಮರಳಿ ಬಿಜೆಪಿ ಸೇರಿದ್ದರು.
6 ಮಂದಿ ನೂತನ ರಾಜ್ಯಪಾಲರ ನೇಮಕ
ಪ್ರಧಾನಿ ನರೇಂದ್ರ ಮೋದಿ ಅವರ ನಿಕಟವರ್ತಿಯಾಗಿರುವ ಗುಜರಾತ್‌ನ ಮಾಜಿ ಮುಖ್ಯ ಕಾರ್ಯದರ್ಶಿ ಕೆ. ಕೈಲಾಸನಾಥನ್ ಅವರನ್ನು ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಆಗಿ ನೇಮಿಸಲಾಗಿದೆ. ಹರಿಭಾವು ಬಾಗಡೆ ಅವರನ್ನು ರಾಜಸ್ಥಾನದ ರಾಜ್ಯಪಾಲರನ್ನಾಗಿ ನೇಮಿಸಲಾಗಿದ್ದು, ಸಂತೋಷ್ ಗಂಗ್ವಾರ್ ಅವರು ಜಾರ್ಖಂಡ್‌ಗೆ ಹಾಗೂ ಒ.ಪಿ ಮಾಥುರ್ ಅವರನ್ನು ಸಿಕ್ಕಿಂನ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ. ತ್ರಿಪುರಾ ಮಾಜಿ ಮುಖ್ಯಮಂತ್ರಿ ಜಿಷ್ಣು ದೇವ್ ವರ್ಮಾ ಅವರನ್ನು ತೆಲಂಗಾಣದ ರಾಜ್ಯಪಾಲರನ್ನಾಗಿ ನೇಮಿಸಲಾಗಿದ್ದು, ರಮೆನ್ ದೇಕಾ ಅವರು ಛತ್ತೀಸಗಢಕ್ಕೆ ರಾಜ್ಯಪಾಲರಾಗಿ ನೇಮಕಗೊಂಡಿದ್ದಾರೆ.
ಕೇಂದ್ರ ಸರ್ಕಾರ ಮೂವರು ರಾಜ್ಯಪಾಲರನ್ನು ಬೇರೆ ರಾಜ್ಯಗಳಿಗೆ ವರ್ಗಾವಣೆ ಮಾಡಿದೆ. ಜಾರ್ಖಂಡ್ ಗವರ್ನರ್ ಸಿ.ಪಿ. ರಾಧಾಕೃಷ್ಣನ್ ಅವರನ್ನು ಮಹಾರಾಷ್ಟ್ರಕ್ಕೆ ವರ್ಗಾಯಿಸಲಾಗಿದೆ. ಪಂಜಾಬ್‌ನಲ್ಲಿ ಭಗವಂತ ಮಾನ್ ನೇತೃತ್ವದ ಎಎಪಿ ಸರ್ಕಾರದೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದ ಬನ್ವಾರಿಲಾಲ್ ಪುರೋಹಿತ್ ಅವರ ಸ್ಥಾನಕ್ಕೆ ಅಸ್ಸಾಂನ ರಾಜ್ಯಪಾಲ ಗುಲಾಬ್ ಚಂದ್ ಕಟಾರಿಯಾ ಅವರನ್ನು ನೇಮಿಸಲಾಗಿದೆ. ಸಿಕ್ಕಿಂ ಗವರ್ನರ್ ಲಕ್ಷ್ಮಣ್ ಪ್ರಸಾದ್ ಆಚಾರ್ಯ ಅವರನ್ನು ಅಸ್ಸಾಂನ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ. ಜತೆಗೆ ಮಣಿಪುರದ ರಾಜ್ಯಪಾಲರ ಹೆಚ್ಚುವರಿ ಜವಾಬ್ದಾರಿಯನ್ನು ಸಹ ನೀಡಲಾಗಿದೆ.
ಇದನ್ನೂ ಓದಿ: New Governors: ನೂತನ ರಾಜ್ಯಪಾಲರನ್ನು ನೇಮಿಸಿದ ರಾಷ್ಟ್ರಪತಿ; ಮೈಸೂರಿನ ವಿಜಯ ಶಂಕರ್ ಮೇಘಾಲಯ ಗವರ್ನರ್