ನವದೆಹಲಿ: ಭಾರತದಲ್ಲಿ ಗಾಳಿಪಟವು ಅದೊಂದು ಮನರಂಜನೆಯ ಹವ್ಯಾಸವಾಗಿರದೆ ಸಂಸ್ಕೃತಿಯ ಭಾಗವೇ ಆಗಿದೆ. ಮಕರ ಸಂಕ್ರಾಂತಿಯಿಂದ ಕೃಷ್ಣ ಜನ್ಮಾಷ್ಟಮಿವರೆಗೆ ದೇಶಾದ್ಯಂತ ಗಾಳಿಪಟ ಹಾರಿಸಲಾಗುತ್ತದೆ. ಮಕ್ಕಳಿಂದ ಹಿಡಿದು, ಹಿರಿಯವರೆಗೆ ಆಗಸದಲ್ಲಿ ಹಾರಾಡುವ ಗಾಳಿಪಟ್ಟವನ್ನು ತದೇಕಚಿತ್ತದಿಂದ ನೋಡುವ ಖುಷಿಯನ್ನು ಅನುಭವಿಸುತ್ತಾರೆ. ಆದರೆ, ಇತ್ತೀಚೆಗೆ ಗಾಳಿಪಟ ಹಾರಿಸುವ ದಾರದಿಂದಾಗಿ ಜನ ಪ್ರಾಣವನ್ನೇ ಕಳೆದುಕೊಳ್ಳುತ್ತಿದ್ದಾರೆ. ಮಕ್ಕಳು, ಯುವಕರ ಕುತ್ತಿಗೆಗೆ ಗಾಳಿಪಟದ ದಾರವು ಉರುಳಾಗಿ ಪರಿಣಮಿಸಿದೆ. ಇದಕ್ಕೆಲ್ಲ ‘ಚೈನೀಸ್ ಮಾಂಜಾ’ ದಾರವೇ ಕಾರಣವಾಗಿದೆ.
ಹಾಗಾದರೆ, ಏನಿದು ಚೈನೀಸ್ ಮಾಂಜಾ ದಾರ? ಏಕಿದು ದೇಶದಲ್ಲಿ ಜನರ ಪ್ರಾಣವನ್ನು ಕಸಿಯುತ್ತಿದೆ? ಏಕಿಷ್ಟು ಅಪಾಯಕಾರಿ ಆಗುತ್ತಿದೆ? ಮಾಂಜಾ ದಾರದ ಕುರಿತು ಕಾನೂನು ಏನು ಹೇಳುತ್ತಿದೆ? ಜನರು ಗಾಳಿಪಟದ ದಾರ ಬಳಸುವುದೇ ತಪ್ಪೇ? ಗಾಳಿಪಟ ಹಾರಿಸುವುದರ ಜತೆಗೆ ನಮ್ಮ ಪ್ರಾಣವನ್ನೂ ರಕ್ಷಣೆ ಮಾಡಿಕೊಳ್ಳುವುದು, ಬೇರೆಯವರ ಪ್ರಾಣಪಕ್ಷಿ ಹಾರದಂತೆ ನೋಡಿಕೊಳ್ಳುವುದು ಹೇಗೆ? ಅಷ್ಟಕ್ಕೂ, ಮಾಂಜಾ ದಾರ ವಿವಾದಕ್ಕೀಡಾಗುತ್ತಿರುವುದೇಕೆ ಎಂಬುದರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ಏನಿದು ಮಾಂಜಾ ದಾರ ವಿವಾದ?
ಖುಷಿಗಾಗಿ, ಆ ಕ್ಷಣದ ಸಂತಸಕ್ಕಾಗಿ ಗಾಳಿಪಟ ಹಾರಿಸುತ್ತೇವೆ. ಆದರೆ, ಇದೇ ಗಾಳಿಪಟವು ನೆಮ್ಮದಿ ಕಳೆಯುತ್ತಿದೆ. ಚೈನೀಸ್ ಮಾಂಜಾ ದಾರವನ್ನು ಬಳಸುತ್ತಿರುವ ಕಾರಣ ಇದು ಮಕ್ಕಳು, ಯುವಕರ ಕುತ್ತಿಗೆಗೆ ಸಿಲುಕಿ ಅವರ ಜೀವವನ್ನು ತೆಗೆಯುತ್ತಿದೆ. ಇದೇ ಕಾರಣಕ್ಕಾಗಿ ಮಾಂಜಾ ದಾರದ ಉತ್ಪಾದನೆ, ಮಾರಾಟ ಹಾಗೂ ಸಾಗಣೆಯನ್ನು ನಿಷೇಧಿಸಬೇಕು ಎಂದು ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ. ದೇಶಾದ್ಯಂತ ಸಂಪೂರ್ಣವಾಗಿ ನಿಷೇಧಿಸಬೇಕು ಎಂಬ ಮಾತುಗಳು ಕೇಳಿಬರುತ್ತಿವೆ. ಹಾಗೆಯೇ, ದಾರವನ್ನು ಬಳಸಬಾರದು ಎಂಬ ಕುರಿತು ಸಾಮಾಜಿಕ ಜಾಲತಾಣಗಳು ಸೇರಿ ಹಲವು ಮಾಧ್ಯಮಗಳ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ.
ಮಾರಣಾಂತಿಕ ದಾರ
ದುರಂತ 1: ಕೆಲ ತಿಂಗಳ ಹಿಂದೆ ದೆಹಲಿಯಲ್ಲಿ ಬೈಕ್ ಮೇಲೆ ಹೋಗುವಾಗ ಮಾಂಜಾ ದಾರವು 35 ವರ್ಷದ ವ್ಯಕ್ತಿಯೊಬ್ಬರ ಕುತ್ತಿಗೆ ಸಿಲುಕಿ, ಅವರ ಪ್ರಾಣವನ್ನೇ ಕಸಿಯಿತು. ಪತ್ನಿ ಹಾಗೂ ಮಗಳನ್ನು ಕೂರಿಸಿಕೊಂಡು ಸಂಬಂಧಿಕರ ಮನೆಗೆ ತೆರಳುವ ವೇಳೆ ಮಾಂಜಾ ದಾರವು ಕುತ್ತಿಗೆ ಗಾಯ ಮಾಡಿದೆ. ಹೆಲ್ಮೆಟ್ ತೆಗೆದು ನೋಡುತ್ತಲೇ ರಕ್ತ ಬಂದಿದ್ದು, ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು.
ದುರಂತ 2: ಇತ್ತೀಚೆಗೆ ದೆಹಲಿಯ 26 ವರ್ಷದ ಉದ್ಯಮಿಯೊಬ್ಬರು ನೆಹರು ಕಾಲೊನಿಯಲ್ಲಿರುವ ಫ್ಲೈಓವರ್ ಮೇಲೆ ಬೈಕ್ ಸವಾರಿ ಮಾಡುತ್ತಿದ್ದಾಗ ಇದೇ ಚೈನೀಸ್ ದಾರ ಕುತ್ತಿಗೆ ಸಿಲುಕಿ, ಕುತ್ತಿಗೆಗೆ ಗಾಯವಾದ ಕಾರಣ ರಸ್ತೆ ಮೇಲೆ ಬಿದ್ದಿದ್ದರು. ಜನ ಅವರನ್ನು ಆಸ್ಪತ್ರೆಗೆ ಸಾಗಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ.
ದುರಂತ 3: ದೆಹಲಿಯ ಬದಾರ್‌ಪುರ ಫ್ಲೈಓವರ್ ಮೇಲೆ ತೆರಳುವಾಗ 28 ವರ್ಷದ ಫುಡ್ ಡೆಲಿವರಿ ಬಾಯ್ ಮೃತಪಟ್ಟವರು. ಬೈಕ್ ವೇಗವಾಗಿ ಚಲಿಸುತ್ತಿರುವಾಗ ದಾರ ಅಡ್ಡ ಬಂದ ಕಾರಣ ಬೈಕ್ ಮೇಲಿಂದ ಬಿದ್ದು ನಿಧನರಾದರು. ಬೈಕ್‌ಗೆ ದಾರ ಸುತ್ತಿಕೊಂಡಿದ್ದನ್ನು ಕಂಡಾಗಲೇ ಪೊಲೀಸರಿಗೆ ಇದು ಚೀನಾ ದಾರದಿಂದ ಉಂಟಾದ ಅಪಘಾತ ಎಂದು ಗೊತ್ತಾಯಿತು.
ದುರಂತ 4: ದೆಹಲಿಯಲ್ಲಿಯೇ ಕಳೆದ ಸ್ವಾತಂತ್ರ್ಯ ದಿನದಂದು ಮೂರು ಹಾಗೂ ನಾಲ್ಕು ವರ್ಷದ ಇಬ್ಬರು ಮಕ್ಕಳು ಮಾಂಜಾ ದಾರಕ್ಕೆ ಸಿಲುಕಿ ಬಲಿಯಾಗಿದ್ದಾರೆ. ಆಗಸ್ಟ್ 14ರಂದೂ ಬೈಕ್ ಸವಾರರೊಬ್ಬರು ಮೃತಪಟ್ಟಿದ್ದರು. ಇದೆಲ್ಲ ಗಮನಿಸಿದ ದೆಹಲಿ ಸರ್ಕಾರವು ಆಗಸ್ಟ್ 18ರಂದು ದಾರವನ್ನು ನಿಷೇಧಿಸಿತು. ಇಂತಹ ಉದಾಹರಣೆಗಳು ದೇಶದ ಹಲವೆಡೆಯೂ ಕಾಣಸಿಗುತ್ತವೆ.
ಹಾಗಂತ ಇದು ಚೀನಾದಲ್ಲಿ ಉತ್ಪಾದಿಸುವ ದಾರವಲ್ಲ
ದೇಶದಲ್ಲಿ ಇಷ್ಟೆಲ್ಲ ಭಾನಗಡಿ ಸೃಷ್ಟಿಸಿರುವ ಚೈನೀಸ್ ಮಾಂಜಾ ದಾರವು ಚೀನಾದಲ್ಲಿ ಉತ್ಪಾದಿಸುವುದಿಲ್ಲ ಹಾಗೂ ಚೀನಾದಿಂದ ಆಮದು ಮಾಡಿಕೊಳ್ಳುವುದಿಲ್ಲ. ಇದರ ಹೆಸರಷ್ಟೇ ಚೈನೀಸ್ ಮಾಂಜಾ ಆಗಿದೆ. ಚೈನೀಸ್ ಮಾಂಜಾ ದಾರವನ್ನು ಉತ್ತರ ಪ್ರದೇಶದ ಬರೇಲಿ, ಮಧ್ಯಪ್ರದೇಶ, ನೊಯ್ಡಾ, ಬೆಂಗಳೂರು ಸೇರಿ ದೇಶದ ಹಲವೆಡೆ ಉತ್ಪಾದಿಸಲಾಗುತ್ತಿದೆ. ಇದನ್ನೇ ದೇಶಾದ್ಯಂತ ಪೂರೈಕೆ ಮಾಡಲಾಗುತ್ತದೆ. ಹಾಗಾಗಿ, ಇದನ್ನು ಚೀನಾದ ದಾರವೆಂದು ಪರಿಗಣಿಸಬೇಕಿಲ್ಲ. ಹಾಗಂತ, ಇದೇ ಚೈನೀಸ್ ಮಾಂಜಾ ದಾರವು ಹತ್ತಿಯಿಂದಲೂ ತಯಾರಿಸಲಾಗುತ್ತದೆ. ಇದು ಬೇಗನೆ ಹರಿಯುವುದರಿಂದ ಹಾಗೂ ದುಬಾರಿ ಆಗಿರುವುದರಿಂದ ಜನ ಹೆಚ್ಚಾಗಿ ಖರೀದಿಸುವುದಿಲ್ಲ. ಉತ್ತರ ಪ್ರದೇಶದ ಬರೇಲಿಯಲ್ಲಿ ಮಾತ್ರ ಚೈನೀಸ್ ಮಾಂಜಾ ದಾರವನ್ನು ಹತ್ತಿಯಿಂದ ತಯಾರಿಸಲಾಗುತ್ತದೆ. ಇದನ್ನೇ ಒರಿಜಿನಲ್ ಎಂದು ಪರಿಗಣಿಸಲಾಗುತ್ತಿದೆ.
ಏಕಿಷ್ಟು ಅಪಾಯಕಾರಿ?
ಚೈನೀಸ್ ಮಾಂಜಾ ದಾರವನ್ನು ನೈಲಾನ್‌ನಿಂದ ಉತ್ಪಾದಿಸಲಾಗುತ್ತದೆ. ಇದಕ್ಕೆ ಚೀನಾ ಹಾಗೂ ತೈವಾನ್‌ನಿಂದ ಆಮದು ಮಾಡಿಕೊಂಡ ಕೆಲ ಕಚ್ಚಾ ವಸ್ತುಗಳನ್ನು ಬಳಸಲಾಗುತ್ತದೆ. ದಾರವನ್ನು ಬಲಿಷ್ಠವಾಗಿಸುವ ಹಾಗೂ ಅದು ಹಗುರವಾಗಿಯೂ ಇರುವಂತೆ ಉತ್ಪಾದಿಸುವುದರಿಂದ ಗಾಳಿಪಟವು ಎತ್ತರದಲ್ಲಿ ಹಾರುತ್ತದೆ. ಆದರೆ, ಇದು ಸುಲಭಕ್ಕೆ ಹರಿಯದ ಕಾರಣ ಜನರ ಕುತ್ತಿಗೆಗೆ ಉರುಳಾಗಿ ಪರಿಣಮಿಸುತ್ತಿದೆ. ಇದು ಬರೇಲಿಯ ಕಾಟನ್ (ಹತ್ತಿ) ದಾರಕ್ಕಿಂತ ಕಡಿಮೆ ಬೆಲೆಗೆ ಸಿಗುವುದರಿಂದ ಹೆಚ್ಚಿನ ಖರೀದಿಸುತ್ತಿದ್ದಾರೆ.
ಕರ್ನಾಟಕ ಸೇರಿ ಎಲ್ಲೆಲ್ಲಿ ಚೈನೀಸ್ ಮಾಂಜಾ ನಿಷೇಧ?
ಚೈನೀಸ್ ಮಾಂಜಾವು ಜನರಿಗೆ ಮಾರಣಾಂತಿಕವಾಗಿ ಪರಿಣಮಿಸಿದ ಕಾರಣ ಕರ್ನಾಟಕ ಸೇರಿ ದೇಶದ ಹಲವೆಡೆ ಇದನ್ನು ನಿಷೇಧಿಸಿದೆ. ಕರ್ನಾಟಕ, ಗುಜರಾತ್, ಮಹಾರಾಷ್ಟ್ರ, ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಆಯಾ ರಾಜ್ಯ ಸರ್ಕಾರಗಳು ಮಾಂಜಾ ದಾರದ ಉತ್ಪಾದನೆ ಹಾಗೂ ಮಾರಾಟವನ್ನು ನಿಷೇಧಿಸಿವೆ. ರಾಷ್ಟ್ರೀಯ ಹಸಿರು ನ್ಯಾಯಾಧೀಕರಣವೂ (NGT) ಚೈನೀಸ್ ಮಾಂಜಾವನ್ನು ನಿಷೇಧಿಸಿದೆ. ಕಟಕ್, ಮುಂಬೈ, ಅಲಹಾಬಾದ್ ನಗರಗಳಲ್ಲಿ ಹಾಗೂ ಕಳೆದ ಆಗಸ್ಟ್ 18ರಂದು ದೆಹಲಿ ಸರ್ಕಾರವು ದಾರವನ್ನು ನಿಷೇಧಿಸಲಾಗಿದೆ. ಆದರೆ, ಇತ್ತೀಚೆಗೆ ದೆಹಲಿ ಹೈಕೋರ್ಟ್, ದಾರದ ಉತ್ಪಾದನೆ, ಮಾರಾಟ ನಿಷೇಧಕ್ಕೆ ಇನ್ನಷ್ಟು ಮಾಹಿತಿ ಬೇಕು ಎಂದು ಹೇಳಿದೆ. ಆದರೆ, ಇಷ್ಟೆಲ್ಲ ಸಾವಿನ ನಿದರ್ಶನಗಳು ಇರುವ ಕಾರಣ ದೇಶಾದ್ಯಂತ ನಿಷೇಧಿಸಬೇಕು ಎಂಬ ಹಕ್ಕೊತ್ತಾಯ ಕೇಳಿಬಂದಿದೆ. ಇದರ ಜತೆಗೆ ಜನರೂ ಚೈನೀಸ್ ಮಾಂಜಾ ದಾರದ ಕುರಿತು ಎಚ್ಚರಿಕೆಯಿಂದ ಇರಬೇಕು. ಈ ದಾರವನ್ನು ಬಳಸಬಾರದು ಎಂದು ತಜ್ಞರು ಸಲಹೆ ನೀಡಿದ್ದಾರೆ. ಸರ್ಕಾರಗಳೂ ಅಷ್ಟೇ ಅಕ್ರಮವಾಗಿ ದಾರದ ಉತ್ಪಾದನೆ ಹಾಗೂ ಮಾರಾಟವನ್ನು ತಡೆಯಬೇಕಿದೆ.
ಇದನ್ನೂ ಓದಿ | ವಿಸ್ತಾರ Explainer | ಭಾರತವನ್ನು ಎದುರು ಹಾಕಿಕೊಂಡರೆ ಪಾಕಿಸ್ತಾನ ಕ್ರಿಕೆಟ್ ಬರ್ಬಾದ್; ಯಾಕೆ ಗೊತ್ತೆ?