ಹೊಸದಿಲ್ಲಿ: ʼಕೇಂದ್ರ ಸರ್ಕಾರ (Central Govt) ರಾಜ್ಯಕ್ಕೆ ಏನೂ ಮಾಡಿಲ್ಲ, ಬಿಜೆಪಿ (BJP) ನಮಗೆ ಸಹಾಯ ಮಾಡ್ತಿಲ್ಲ, ರಾಜ್ಯದ ಬಗ್ಗೆ ನಮ್ಮ ರಾಜ್ಯದ ಬಿಜೆಪಿ ಸಂಸದರಿಗೇ ಕಾಳಜಿ ಇಲ್ಲ ಅನ್ನುವ ಮಾತುಗಳನ್ನು ಪದೇ ಪದೆ ಆಡುವುದನ್ನು ಬಿಡಿʼ ಎಂದು ಎನ್‌ಡಿಎ (NDA) ಸಂಸದರು ಸಿಎಂ ಸಿದ್ದರಾಮಯ್ಯ (CM Siddaramaiah) ಅವರಿಗೆ ಪಾಠ ಹೇಳಿದ್ದಾರೆ.
ನಿನ್ನೆ ಹೊಸದಿಲ್ಲಿಯಲ್ಲಿ ಸಿಎಂ ನೇತೃತ್ವದಲ್ಲಿ ನಡೆದ, ರಾಜ್ಯದ ನೂತನ ಸಂಸದರ ಸಭೆಯಲ್ಲಿ ಈ ಕುರಿತು ಮಾತುಗಳು ವಿನಿಮಯಗೊಂಡವು. ರಾಜ್ಯದ ಅಭಿವೃದ್ಧಿಗೆ ನಾವು ಬದ್ದರಿದ್ದೇವೆ. ರಾಜ್ಯದ ಸರ್ವತೋಮುಖ ಬೆಳವಣಿಗೆಗೆ ನಾವು ಸಹ ಸಹಕಾರ ನೀಡ್ತೇವೆ. ಹಾಗಂತ ಎಲ್ಲಾ ವಿಚಾರಗಳಿಗೂ ಸಹ ಕೇಂದ್ರ ಸರ್ಕಾರದ ತಪ್ಪು ಎನ್ನುವುದು ಸರಿ ಅಲ್ಲ. ಒಂದು ಯೋಜನೆ ಯಶಸ್ವಿಯಾಗಿ ಜಾರಿ ಆಗ್ಬೇಕು ಅಂದ್ರೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಇಬ್ಬರೂ ಸಹಕರಿಸಬೇಕು. ನೀವು ಏನೂ ಮಾಡದೆ, ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವುದು ಎಷ್ಟರ ಮಟ್ಟಿಗೆ ಸರಿ? ಎಂದು NDA ಸಂಸದರು ಕಾಂಗ್ರೆಸ್‌ಗೆ ಚಾಟಿ ಬೀಸಿದರು.
ರೈಲ್ವೆ ಯೋಜನೆ ಬಾಕಿ ಇದೆ, ರಾಷ್ಟ್ರೀಯ ಹೆದ್ದಾರಿಗಳು ಆಗಿಲ್ಲ ಅಂತ ಹೇಳುವ ಮೊದಲು ಅದಕ್ಕೆ ಬೇಕಾದ ಸಹಕಾರ ರಾಜ್ಯ ಸರ್ಕಾರ ಎಷ್ಟರ ಮಟ್ಟಿಗೆ ನೀಡಿದೆ ಎಂಬುದನ್ನು ಹೇಳಿ. ಸುಖಾ ಸುಮ್ಮನೆ ಕೇಂದ್ರ ಸರ್ಕಾರದ ಮೇಲೆ ಇಲ್ಲಾ ಸಲ್ಲದ ಆರೋಪ ಮಾಡಬೇಡಿ. ಬದಲಾಗಿ, ರಾಜ್ಯಕ್ಕೆ ಬೇಕಾದ ಅನುದಾನದ ಬಗ್ಗೆ ಫಾಲೋ ಅಪ್ ಮಾಡುವ ಕೆಲಸ ಮಾಡಿ. ನಾವು ನಿಮ್ಮೊಂದಿಗೇ ಇದ್ದೇವೆ, ರಾಜ್ಯದ ಹಿತಾಸಕ್ತಿಗೇ ಕೆಲಸ ಮಾಡುತ್ತೇವೆ ಎಂದು ಬಿಜೆಪಿ ಸಂಸದರು ಹಾಗೂ ಸಚಿವರು ಹೇಳಿದ್ದಾರೆ.
ಯಾವುದೇ ಬಾಕಿ ಉಳಿಸಿಲ್ಲ: ನಿರ್ಮಲಾ
ಕೇಂದ್ರ ಸರಕಾರ ಬಾಕಿ ಹಣ ನೀಡಿಲ್ಲ ಎಂಬ ಸಿಎಂ ಆರೋಪಕ್ಕೆ ಸಿಎಂ ನೇತೃತ್ವದ ಸಭೆಯಲ್ಲೇ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ವಿವರಣೆ ನೀಡಿದರು. ಕೇಂದ್ರ ಸರ್ಕಾರ ನಮಗೆ ಅನ್ಯಾಯ ಮಾಡಿದೆ, ನಮ್ಮ ಹಣ ನಮಗೆ ನೀಡಿಲ್ಲ, GST ದುಡ್ಡು ನಮಗೆ ಸೇರಿಲ್ಲ ಅಂತ ಎಲ್ಲರೂ ಹೇಳಿದ್ದೀರಿ. ಬರ ಪರಿಹಾರದ ಹಣ ನೀಡಿಲ್ಲ ಅಂತ ಮಾಧ್ಯಮದ ಮುಂದೆ ದಿನಂಪ್ರತಿ ಹೇಳಿದ್ದೀರಿ. ಆದರೆ ನಾವು ಯಾವುದೇ ಹಣ ಬಾಕಿ ಉಳಿಸಿಲ್ಲ. ರಾಜ್ಯಕ್ಕೆ ಪೂರಕವಾಗಿ ಹಣ ಬಿಡುಗಡೆ ಮಾಡಿದ್ದೇವೆ ಎಂದು ನಿರ್ಮಲಾ ಹೇಳಿದರು.
ಬರ ಪರಿಹಾರ ಅಂತ 18 ಸಾವಿರ ಕೋಟಿ ಕೇಳಿದಾಗಲೂ ಸಹ ನಾವು ಅಗತ್ಯ ಹಣ ಬಿಡುಗಡೆ ಮಾಡಿದ್ದೇವೆ. GST ಹಣ ಸಹಿತ ನಾವು ನೀಡಿದ್ದೇವೆ. ನಿಮಗೆ ಪಕ್ಕಾ ಅಂಕಿ ಅಂಶ ಬೇಕಾದರೆ, ನಮ್ಮ ಜೊತೆ ಚರ್ಚೆಗೆ ಬನ್ನಿ. ಎಲ್ಲಾ ಅಂಕಿ ಅಂಶ ಸಮೇತ ನಾನು ನೀಡಬಲ್ಲೆ. ಅನವಶ್ಯಕವಾಗಿ ಕೇಂದ್ರದ ಮೇಲೆ ವಾಗ್ದಾಳಿ ಮಾಡಬೇಡಿ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ರಾಜ್ಯದ ಸಹಕಾರವೇ ಪ್ರಮುಖ: ಜೋಶಿ
ಕೇಂದ್ರ ಸರ್ಕಾರದಿಂದ ನಮಗೆ ಬರಬೇಕಾದದ್ದು ಬಹಳಷ್ಟಿದೆ ಅಂತ ಯಾವಾಗಲೂ ಹೇಳೋದು ಸರಿಯಲ್ಲ. ರೈಲ್ವೆ ಯೋಜನೆ ಬಾಕಿ ಇದೆ ಅಂತ ಆರೋಪ ಮಾಡೋದು ಒಳ್ಳೇದಲ್ಲ. ಅದಕ್ಕೆ ಬೇಕಾದ ಸೌಕರ್ಯ ಒದಗಿಸುವುದು ರಾಜ್ಯ ಸರ್ಕಾರದ ಜವಾಬ್ದಾರಿ. ಈ ವರ್ಷದ ಬಜೆಟ್‌ನಲ್ಲಿ 7524 ಕೋಟಿ ರೂ.ಗಳನ್ನ ರಾಜ್ಯದ ರೈಲ್ವೆ ಅಭಿವೃದ್ಧಿಗೆ ಮೀಸಲು ಇಡಲಾಗಿದೆ. ಹುಬ್ಬಳ್ಳಿ -ಅಂಕೋಲಾ , ತುಮಕೂರು – ಚಿತ್ರದುರ್ಗ, ಧಾರವಾಡ- ಬೆಳಗಾವಿ ಸೇರಿದಂತೆ ಹಲವು ಯೋಜನೆ ಬಾಕಿ ಇದೆ. ಈ ಯೋಜನೆಗಳು ಬಾಕಿ ಉಳಿಯುವುದಕ್ಕೆ ಕೇವಲ ಕೇಂದ್ರ ಸರ್ಕಾರ ಮಾತ್ರ ಕಾರಣ ಅಲ್ಲ ಎಂದು ಸಂಸದ ಪ್ರಹ್ಲಾದ್ ಜೋಶಿ (Prahlad Joshi) ಗುಡುಗಿದರು.
ರೈಲ್ವೆ ಯೋಜನೆಯಲ್ಲಿ ರಾಜ್ಯ ಸರ್ಕಾರದ ಪಾತ್ರ ಸಹ ಪ್ರಮುಖವಾಗಿರಲಿದೆ. ರಾಜ್ಯ ಸರ್ಕಾರ ಫಾರೆಸ್ಟ್ ಕ್ಲಿಯರೆನ್ಸ್, ಲ್ಯಾಂಡ್ ಅಕ್ವಿಸಿಶನ್ ನೀಡಿದ್ರೆ ಮಾತ್ರ ಇವೆಲ್ಲಾ ಸಾಧ್ಯ. ಆದ್ರೆ ರಾಜ್ಯ ಸರ್ಕಾರ ಈ ಬಗ್ಗೆ ಪ್ರಸ್ತಾಪ ಮಾಡುವುದೇ ಇಲ್ಲ. ರೈಲ್ವೆ ಯೋಜನೆ ಬಂದಿಲ್ಲ, ಹೈವೇ ಆಗಿಲ್ಲ ಅಂತ ಹೇಳುವ ಕೆಲಸ ಮಾಡ್ತಿದೆ. ಈ ಎಲ್ಲಾ ಯೋಜನೆ ಸಂಪೂರ್ಣವಾಗಿ ರಾಜ್ಯಕ್ಕೆ ದೊರೆಯಬೇಕು ಅಂದ್ರೆ ನಿಮ್ಮ ಸಹಕಾರ ಸಹ ಅಗತ್ಯ. ನೀವು ನಮ್ಮೊಂದಿಗೆ ಕೆಲಸ ಮಾಡಿದರೆ, ಖಂಡಿತವಾಗಿಯೂ ರಾಜ್ಯದ ಹಿತಾಸಕ್ತಿ ನಾವು ಕಾಪಾಡಬಹುದು ಎಂದು ಪ್ರಹ್ಲಾದ್ ಜೋಶಿ ನುಡಿದಿದ್ದಾರೆ.
ಇದನ್ನೂ ಓದಿ: Kempegowda Jayanti: ಕೆಂಪೇಗೌಡರು ಯಾವುದೇ ಜಾತಿಗೆ ಸೀಮಿತರಾದವರಲ್ಲ; ಸಿದ್ದರಾಮಯ್ಯ