ಬೆಂಗಳೂರು: ಬಿಜೆಪಿ-ಜೆಡಿಎಸ್ ನಡೆಸುತ್ತಿರುವ ಪಾದಯಾತ್ರೆಗೆ (BJP-JDS Padayatra) ಟಕ್ಕರ್ ನೀಡಲು ಮೈಸೂರಿನಲ್ಲಿ ಇಂದು ಆಯೋಜಿಸಲಾಗಿರುವ ಬೃಹತ್ ಜನಾಂದೋಲನ ಸಮಾವೇಶಕ್ಕೆ (Mysore Janandolana Samavesha) ನಗರ ಸಜ್ಜಾಗಿದೆ. ಸುಮಾರು 4 ಲಕ್ಷಕ್ಕೂ ಅಧಿಕ ಜನರನ್ನು ಸಿಎಂ ಸಿದ್ದರಾಮಯ್ಯ ನೇತೃತ್ವದ (CM Siddaramaiah) ಕೈ ಪಡೆ ಸೇರಿಸಲು ನಿರ್ಧಾರ ಮಾಡಿದ್ದು, ದೋಸ್ತಿಗಳ ವಿರುದ್ಧ ʼಸಂಚುʼ ಎಂಬ ಹೆಸರಿನ ಪುಸ್ತಕವನ್ನು ಬಿಡುಗಡೆ ಮಾಡಲೂ ಸಿದ್ಧತೆ ಮಾಡಿಕೊಂಡಿದೆ.
ಜನಾಂದೋಲನ ಸಮಾವೇಶದ ವೇದಿಕೆ ಮೇಲೆ ಸುಮಾರು 200 ಜನ ಕೂರಲು ವ್ಯವಸ್ಥೆ ಮಾಡಲಾಗಿದೆ. ಎಡ ಮತ್ತು ಬಲ ಭಾಗದಲ್ಲಿ ಮಾಜಿ ಶಾಸಕರು ಹಾಗೂ ಪರಿಷತ್ ಸದಸ್ಯರು ಕೂರಲು ವ್ಯವಸ್ಥೆ ಮಾಡಲಾಗಿದ್ದು, ಮಳೆ ಬಂದರೂ ಕಾರ್ಯಕ್ರಮ ಯಶಸ್ವಿಯಾಗಲು ಜರ್ಮನ್ ಪೆಂಡಾಲ್ ಅಳವಡಿಸಲಾಗಿದೆ. ʼಸಿದ್ದರಾಮೋತ್ಸವʼ ರೀತಿಯಲ್ಲಿಯೇ ಕಾರ್ಯಕ್ರಮ ಮಾಡಲಾಗುತ್ತಿದೆ.
ಜನಾಂದೋಲನ ಸಮಾವೇಶವನ್ನು ಸಿಎಂ ವೈಯಕ್ತಿಕ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು, ಇಂದಿನ ಸಮಾವೇಶದಲ್ಲಿ 2 ಲಕ್ಷಕ್ಕೂ ಅಧಿಕ ಜನ ಸೇರಿಸಲಿದ್ದಾರೆ ಎಂದು ಭಾವಿಸಲಾಗಿದೆ. ಮೈಸೂರು, ಮಂಡ್ಯ, ಕೊಡಗು, ಚಾಮರಾಜನಗರ, ರಾಮನಗರ, ಬೆಂಗಳೂರು ಗ್ರಾಮಾಂತರದಿಂದ ಹೆಚ್ಚು ಜನ ಬರುವ ಸಾಧ್ಯತೆ ಇದೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಸಿಎಂ, ಡಿಸಿಎಂ, ಸಚಿವರು ಶಾಸಕರು, ಎಂಎಲ್ಸಿಗಳು ಭಾಗವಹಿಸಲಿದ್ದಾರೆ.
ಜನಾಂದೋಲನ ಸಮಾವೇಶದ ಅಜೆಂಡಾ
ವಿಪಕ್ಷಗಳ ವಿರುದ್ಧ ದಾಖಲೆ ಸಮೇತ ಮಾತನಾಡುವುದು, ಮುಡಾದಲ್ಲಿ ಮಾಜಿ ಸಿಎಂ ಎಚ್ ಡಿ ದೇವೇಗೌಡ (HD Deve gowda) ಫ್ಯಾಮಿಲಿ ಖರೀದಿಸಿದ ಆಸ್ತಿಗಳ ಬಗ್ಗೆ ಮಾಹಿತಿ ಕೊಡುವುದು, ಎಚ್.ಡಿ ಕುಮಾರಸ್ವಾಮಿ (HD Kumaraswamy) ಕಾಲದಲ್ಲಿ ಆದ ನಿವೇಶನ ಹಂಚಿಕೆ, ಕುಮಾರಸ್ವಾಮಿ ವಿರುದ್ಧ ಇರೋ ಪ್ರಕರಣಗಳ ಬಗ್ಗೆ ದಾಖಲೆ ಸಮೇತ ಮಾತನಾಡುವುದು, ಮುಡಾದಲ್ಲಿ ಸಿದ್ದರಾಮಯ್ಯ ಪಾತ್ರ ಇಲ್ಲ ಅನ್ನೋದನ್ನ ಹೇಳುವುದು, ಬಿಜೆಪಿ ಹಾಗೂ ಜೆಡಿಎಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸುವುದು, ರಾಜ್ಯಪಾಲರು ಈ ಹಿಂದೆ ಯಾವೆಲ್ಲ ಪ್ರಕರಣಗಳಲ್ಲಿ ಮೌನ ವಹಿಸಿದ್ದಾರೆ ಅನ್ನೋದನ್ನ ಹೇಳುವುದು, ವಿರೋಧ ಪಕ್ಷಗಳ ನಾಯಕರ ಹಗರಣಗಳ ಬಗ್ಗೆ ಕಿರು ಹೊತ್ತಿಗೆ ಬಿಡುಗಡೆ ಮಾಡುವುದು ಜನಾಂದೋಲನ ಸಮಾವೇಶದ ಅಜೆಂಡಾ ಆಗಿದೆ.
ಇದೇ ಸಂದರ್ಭದಲ್ಲಿ ಬಿಜೆಪಿ-ಜೆಡಿಎಸ್ ವಿರುದ್ಧ ಕಿರುಹೊತ್ತಿಗೆ ಬಿಡುಗಡೆ ಮಾಡಲಾಗುತ್ತಿದೆ. ಎರಡೂ ಪಕ್ಷಗಳು ಕುಟಿಲ ರಾಜಕಾರಣ ನಡೆಸುತ್ತಿವೆ ಎಂದು ʼಸಂಚು’ ಹೆಸರಿನಲ್ಲಿ ಪುಸ್ತಕ ಬಿಡುಗಡೆ ಮಾಡಲಾಗುತ್ತಿದ್ದು, ಇದು ಮುಡಾ ಪ್ರಕರಣದ ಸಮಗ್ರ ವಿವರ ಮತ್ತು ದಾಖಲೆಗಳನ್ನೊಳಗೊಂಡಿದೆ ಎನ್ನಲಾಗಿದೆ. ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ ಶಿವಕುಮಾರ್ ಇಬ್ಬರನ್ನೂ ಒಂದೇ ಕಲ್ಲಲ್ಲಿ ಹೊಡೆಯಲು ಬಿಜೆಪಿ ಕುಟಿಲ ಕಾರಸ್ಥಾನ ನಡೆಸಿದೆ ಎಂದು ʼಸಂಚುʼ ಕೃತಿ ರೂಪಿಸಿರುವ ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ ಬರೆದಿದ್ದಾರೆ ಎನ್ನಲಾಗಿದೆ.
ಕಿರುಹೊತ್ತಿಗೆಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ, ಬೊಮ್ಮಾಯಿ, ಹಾಲಿ ಕೇಂದ್ರ ಸಚಿವ ಹೆಚ್‌ಡಿಕೆ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ವಿಪಕ್ಷ ನಾಯಕ ಆರ್ ಅಶೋಕ್ ವಿರುದ್ಧ ಅಕ್ರಮದ ಆರೋಪಗಳ ಕುರಿತು ಉಲ್ಲೇಖ ಮಾಡಲಾಗಿದೆ ಎನ್ನಲಾಗಿದೆ.
ದೇವೇಗೌಡರ ಕುಟುಂಬವೇ ಟಾರ್ಗೆಟ್
ಸಮಾವೇಶದ ಉದ್ದೇಶವೇ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರ ಕುಟುಂಬ ಆಗಿದೆ. ದೇವೇಗೌಡರ ಕುಟುಂಬಸ್ಥರು ಮುಡಾ ಸೈಟ್ ಪಡೆದ ಬಗ್ಗೆ ಕಾಂಗ್ರೆಸಿಗರು ಫ್ಲೆಕ್ಸ್ ಹಾಕಿದ್ದಾರೆ. ನಗರದ ಹಲವು ಭಾಗದ ಸರ್ಕಲ್‌ಗಳಲ್ಲಿ ಫ್ಲೆಕ್ಸ್‌ಗಳ ಅಳವಡಿಕೆ ಮಾಡಲಾಗಿದೆ. 2023ರ ಫೆಬ್ರವರಿ ತಿಂಗಳಿನಲ್ಲಿ ಬಿಜೆಪಿ ನೀಡಿರುವ ಜಾಹೀರಾತನ್ನು ಕಾಂಗ್ರೆಸ್ ಬಳಸಿಕೊಂಡಿದೆ. ಕುಮಾರಸ್ವಾಮಿ ಅವರಿಗೆ ಮುಡಾದಿಂದ ಕೊಟ್ಟಿರುವ ಸೈಟ್ ಬಗ್ಗೆ, ಮಾಜಿ ಪ್ರಧಾನಿ ದೇವೇಗೌಡರ 20 ಹೆಸರು ಬರೆದು ಎಷ್ಟು ಅಳತೆಯ ನಿವೇಶನ ಮಂಜೂರಾಗಿದೆ ಎಂಬ ಮಾಹಿತಿ ಫ್ಲೆಕ್ಸ್‌ನಲ್ಲಿದೆ. ಎಚ್‌ಡಿಕೆಯವರೇ ನೀವು ಬೇರೆಯವರ ಬಗ್ಗೆ ಪ್ರಶ್ನಿಸುವ ನೈತಿಕ ಹಕ್ಕು ಉಳಿಸಿಕೊಂಡಿದ್ದೀರಾ ಎಂದು ಫ್ಲೆಕ್ಸ್‌ನಲ್ಲಿ ಪ್ರಶ್ನಿಸಲಾಗಿದೆ.
ಇದನ್ನೂ ಓದಿ: CM Siddaramaiah: ನಾಳೆ ಮೈಸೂರಿನಲ್ಲಿ ಸಿದ್ದರಾಮಯ್ಯ ಅಬ್ಬರ; ʼಜನಾಂದೋಲನ ಸಮಾವೇಶʼ ಮೂಲಕ ದೋಸ್ತಿ ಪಾದಯಾತ್ರೆಗೆ ಟಕ್ಕರ್