Site icon Vistara News

CM Siddaramaiah: ಇಂದು ಕಟಕಟೆ ಏರಲಿದೆ ಮುಡಾ ಪ್ರಕರಣ; 20 ಅಂಶಗಳೊಂದಿಗೆ ಸಿದ್ದರಾಮಯ್ಯ ಹೈಕೋರ್ಟ್‌ಗೆ; ಇಂದು ಏನೇನಾಗಲಿದೆ?

CM Siddaramaiah and high court

ಬೆಂಗಳೂರು: ಮುಡಾ ಹಗರಣಕ್ಕೆ (MUDA Scam, MUDA case) ಸಂಬಂಧಿಸಿ ಸಿಎಂ ಸಿದ್ದರಾಮಯ್ಯ (CM Siddaramaiah) ವಿರುದ್ಧ ಪ್ರಾಸಿಕ್ಯೂಶನ್‌ಗೆ (Prosecution) ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ (Governir Thawar Chand Gehlot) ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಇಂದು ದೂರುದಾರರು ಅಧಿಕೃತವಾಗಿ ಹೈಕೋರ್ಟ್‌ಗೆ (High Court) ತೆರಳಿ ರಾಜ್ಯಪಾಲರ ಆದೇಶದ ಪ್ರತಿಯನ್ನು ನೀಡಲಿದ್ದಾರೆ. ಇತ್ತ ಸಿಎಂ ಕೂಡ ಘಟಾನುಘಟಿ ವಕೀಲರನ್ನು ಮುಂದಿಟ್ಟುಕೊಂಡು ಕಾನೂನು ಸಮರಕ್ಕೆ ಸಜ್ಜಾಗಿದ್ದು, ಇಂದೇ ಹೈ ವೋಲ್ಟೇಜ್‌ ಲೀಗಲ್‌ ಫೈಟ್‌ ಆರಂಭವಾಗಲಿದೆ.

ರಾಜ್ಯಪಾಲರು ತಮ್ಮ ವಿರುದ್ಧ ಪ್ರಾಸಿಕ್ಯೂಶನ್‌ಗೆ ಕೊಟ್ಟ ನಡೆಯನ್ನು ಹೈಕೋರ್ಟ್‌ ಮುಂದೆ ಸಿಎಂ ಪ್ರಶ್ನೆ ಮಾಡಲಿದ್ದಾರೆ. ಸಿಎಂ ಸಲ್ಲಿಕೆ ಮಾಡಲಿರುವ ಅರ್ಜಿಯಲ್ಲಿ 20 ಅಂಶಗಳನ್ನು ಪ್ರಸ್ತಾಪ ಮಾಡಿದ್ದಾರೆ.

1) ರಾಜ್ಯಪಾಲರು ಕಾನೂನು ಹಾಗೂ ಸಂವಿಧಾನದ ವಿರುದ್ಧ ಪ್ರಾಸಿಕ್ಯೂಶನ್‌ಗೆ ಅನುಮತಿ ನೀಡಿದ್ದಾರೆ.

2) ಎಸ್ಓಪಿ ನಿಯಮ ಪಾಲನೆ ಮಾಡಿಲ್ಲ. ಎಸ್ಓಪಿ ಬಗ್ಗೆ ರಾಜ್ಯಪಾಲರಿಗೆ ಅರಿವಿಲ್ಲ. ಕೇಂದ್ರ ಸರ್ಕಾರ ಮಾಡಿರುವ ಹೊಸ ಕಾನೂನಿನ ವಿರುದ್ಧ ನಡೆದುಕೊಂಡಿದ್ದಾರೆ.

3) ಈ ಪ್ರಕರಣದಲ್ಲಿ ನನ್ನ ಪಾತ್ರವೇ ಇಲ್ಲ.

4) ಇದೊಂದು ಸಿವಿಲ್ ಮೊಕದ್ದಮೆಯೇ ಹೊರತು ಕ್ರೈಮ್ ಅಲ್ಲ

5) ಮುಡಾದಲ್ಲಿ ಪಡೆದ ನಿವೇಶನಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ

6) ಅದು ನನ್ನ ಪತ್ನಿಗೆ ಅವರ ಸಹೋದರರಿಂದ ಬಂದ ಗಿಫ್ಟ್

7) ನನ್ನ ಪತ್ನಿಯ ಆಸ್ತಿಯನ್ನು ಮುಡಾ ಅಧಿಕಾರಿಗಳು ಅಕ್ರಮವಾಗಿ ಸ್ವಾಧೀನ ಮಾಡಿದ್ದಾರೆ

8) ಅದಕ್ಕೆ ಮುಡಾದವರು 14 ನಿವೇಶನಗಳನ್ನ ಪರ್ಯಾಯವಾಗಿ ನೀಡಿದ್ದಾರೆ

9) ಇದು ಎಲ್ಲ ಪ್ರಕ್ರಿಯೆ ನಡೆದಿರುವುದು ಬಿಜೆಪಿ ಸರ್ಕಾರದ ಅವಧಿಯಲ್ಲಿ

10) ಇಂತಹ ಆರೋಪ ಬಂದ ತಕ್ಷಣ ಒನ್ ಮ್ಯಾನ್ ಕಮಿಷನ್ ನೇಮಕ ಮಾಡಿದ್ದೇವೆ. ಕಮಿಷನ್ ತನಿಖೆ ಮಾಡ್ತಿದೆ

11) ನ್ಯಾಯಾಂಗ ತನಿಖೆಯ ಸಮಿತಿ ಮಾಹಿತಿ ಸಹ ರಾಜ್ಯಪಾಲರು ಪಡೆದಿಲ್ಲ

12) ದೂರುದಾರರ ಬಗ್ಗೆ ಹಲವು ಅನುಮಾನಗಳಿವೆ

13) ಪ್ರದೀಪ್ ಜೆಡಿಎಸ್ ವಕ್ತಾರ

14) ಅಬ್ರಹಾಂ ಈ ಹಿಂದೆ ಹಲವು ದೂರುಗಳನ್ನು ಕೊಟ್ರೂ ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಿಲ್ಲ. ಒಬ್ಬ ಅಧಿಕಾರಿಯನ್ನು ಬ್ಲಾಕ್‌ ಮೇಲ್ ಮಾಡಿದ ಪ್ರಕರಣದಲ್ಲಿ ಆರೋಪಿ ಆಗಿದ್ದಾರೆ.

15) ಇದೊಂದು ರಾಜಕೀಯ ಪ್ರೇರಿತ ಪ್ರಕರಣ

16) ರಾಜ್ಯ ಸರ್ಕಾರವನ್ನ ಬುಡಮೇಲು ಮಾಡುವ ಹುನ್ನಾರ

17) ದೆಹಲಿ ಸೇರಿದಂತೆ ಇತರೆ ರಾಜ್ಯಗಳಲ್ಲಿ ರಾಜ್ಯಪಾಲರ ಅಧಿಕಾರ ದುರುಪಯೋಗ ಪಡಿಸಿಕೊಂಡು ಸರ್ಕಾರಗಳನ್ನ ಅಭದ್ರ ಮಾಡಿ ಇಲ್ಲಿಯೂ ಅದನ್ನೇ ಮಾಡುವ ಕೆಲಸ ಮಾಡ್ತಿದ್ದಾರೆ

18) ನನ್ನ ವಿರುದ್ಧ ಮಾಜಿ ಪಿಎಂ ಎಚ್‌ಡಿ ದೇವೇಗೌಡ, ಕುಮಾರಸ್ವಾಮಿ ಹಾಗೂ ಬಿಎಸ್‌ವೈ ಸೇರಿದಂತೆ ಬಿಜೆಪಿಯ ಕೇಂದ್ರ ನಾಯಕರು ನನ್ನ ವಿರುದ್ಧ ಮಾಡ್ತಿರುವ ಷಡ್ಯಂತ್ರ

19) ಈ ಪ್ರಕರಣದಲ್ಲಿ ನನ್ನ ಪಾತ್ರ ಇಲ್ಲದಿದ್ದರೂ ನನ್ನ ವಿರುದ್ಧ ಪ್ರಾಸಿಕ್ಯೂಶನ್‌ಗೆ ಕೊಟ್ಟ ರಾಜ್ಯಪಾಲರ ಆದೇಶ ಸರಿಯಲ್ಲ

20) ಹೀಗಾಗಿ ಪ್ರಾಸಿಕ್ಯೂಶನ್‌ಗೆ ಕೊಟ್ಟ ಕ್ರಮ ಸರಿಯಿಲ್ಲ ಎಂದು ಆದೇಶ ಮಾಡಬೇಕೆಂದು ಮನವಿ.

ಘಟಾನುಘಟಿ ನ್ಯಾಯವಾದಿಗಳು

ಅಭಿಷೇಕ್ ಮನು ಸಿಂಗ್ವಿ ಹಾಗೂ ಕಪಿಲ್ ಸಿಬಲ್ ಟೀಮ್‌ ಸಿದ್ದರಾಮಯ್ಯ ಬೆನ್ನಿಗೆ ನಿಂತಿದೆ. ಈಗಾಗಲೇ ಹೈಕೋರ್ಟ್‌ಗೆ ಸಲ್ಲಿಸಬೇಕಿರುವ ಅರ್ಜಿ ತಯಾರು ಮಾಡಿರುವ ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ ನೆರವಿನೊಂದಿಗೆ ಹೈಕೋರ್ಟ್‌ನಲ್ಲಿ ವಾದ ಮಂಡನೆಗೆ ತಯಾರಿ ಶುರು ಮಾಡಲಾಗಿದೆ. ಇಂದು ಅರ್ಜಿ ದಾಖಲು ಮಾಡಿ ತ್ವರಿತ ವಿಚಾರಣೆಗೆ ಸಿಎಂ ಪರ ವಕೀಲರು ಒತ್ತಾಯ ಮಾಡಲಿದ್ದಾರೆ.

ದೆಹಲಿಯಿಂದ ಅಭಿಷೇಕ್ ಮನುಸಿಂಗ್ವಿ ಹಾಗೂ ಕಪಿಲ್ ಸಿಬಲ್ ಬಂದ ತಕ್ಷಣ ಅರ್ಜಿ ಪರಿಶೀಲನೆ ಮಾಡಿ ಕೋರ್ಟ್ ಮೊರೆ ಹೋಗಲಿದ್ದಾರೆ. 20, 21ನೇ ತಾರೀಕು ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ತೀರ್ಪು ಇರೋದರಿಂದ ಅದಕ್ಕೂ ಮೊದಲೇ ಅರ್ಜಿ ವಿಚಾರಣೆ ಮಾಡುವಂತೆ ಮನವಿ ಮಾಡುವ, ಜನಪ್ರತಿನಿಧಿಗಳ ನ್ಯಾಯಾಲಯದ ವಿಚಾರಣೆಗೆ ತಡೆ ಕೊಡುವಂತೆಯೂ ಮನವಿ ಮಾಡುವ ಸಾಧ್ಯತೆ ಇದೆ.

ಕಾಂಗ್ರೆಸ್ ನಾಯಕರಿಗೆ ಕಾನೂನು ಸಂಕಷ್ಟ ಬಂದಾಗಲೆಲ್ಲ ಕಪಿಲ್ ಸಿಬಲ್ ಹಾಗೂ ಅಭಿಷೇಕ್ ಮನುಸಿಂಗ್ವಿ ಎಂಟ್ರಿ ಕೊಡುತ್ತಿದ್ದು, ಡಿಕೆ ಶಿವಕುಮಾರ್ ಪ್ರಕರಣಗಳಲ್ಲೂ ವಕಾಲತ್ತು ವಹಿಸಿದ್ದರು. ಸುಪ್ರೀಂ ಕೋರ್ಟ್‌ನಲ್ಲಿ ಇವರು ಹೆಸರಾಂತ ವಕೀಲರುಗಳಾಗಿದ್ದಾರೆ.

ಅಂದು ಯಡಿಯೂರಪ್ಪ ಇಂದು ಸಿದ್ದರಾಮಯ್ಯ

2010-11ರಲ್ಲಿ ಯಡಿಯೂರಪ್ಪ ವಿರುದ್ಧವೂ ಆರು ಪಿಸಿಆರ್‌ಗಳು ದಾಖಲಾಗಿದ್ದವು. ಬಾಲರಾಜು ಎಂಬವರಿಂದ ದಾಖಲಾಗಿದ್ದ ಪ್ರಕರಣಗಳಲ್ಲಿ ರಾಜ್ಯಪಾಲರ ಅನುಮತಿ ಪಡೆದು ದೂರು ದಾಖಲು ಮಾಡಲಾಗಿತ್ತು. ರಾಜ್ಯಪಾಲರ ಅನುಮತಿ ಪ್ರಶ್ನೆ ಮಾಡಿ ಯಡಿಯೂರಪ್ಪ ಹೈಕೋರ್ಟ್ ಮೊರೆ ಹೋಗಿದ್ದರು. ರಾಜ್ಯಪಾಲರ ನಿರ್ಧಾರ ಕಾನೂನು ಬಾಹಿರ ಎಂದು ವಾದ ಮಂಡಿಸಿದ್ದರು. ಕೆಳ ನ್ಯಾಯಾಲಯದ ವಿಚಾರಣೆಗೆ ತಡೆ ಪಡೆದಿದ್ದರು. ಬಳಿಕ ಯಡಿಯೂರಪ್ಪ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿ ರಾಜ್ಯಪಾಲರ ಪ್ರಾಸಿಕ್ಯೂಶನ್ ನೀಡಿದ್ದು ಸರಿ ಇದೆ ಎಂದು ಹೈಕೋರ್ಟ್ ಹೇಳಿತ್ತು. ಲೋಕಾಯುಕ್ತ ಕೋರ್ಟ್‌ನಲ್ಲಿ ವಿಚಾರಣೆ ನಡೆದು ಯಡಿಯೂರಪ್ಪ ಜೈಲಿಗೆ ಹೋಗಿದ್ದರು.

ಈಗ ಸಿದ್ದರಾಮಯ್ಯ ವಿರುದ್ಧ ಕೇಳಿ ಬಂದಿರುವ ಮುಡಾ ಪ್ರಕರಣದಲ್ಲಿ, ಹೈಕೋರ್ಟ್‌ನಲ್ಲಿ ಸಿದ್ದರಾಮಯ್ಯ ಪರ ತೀರ್ಪು ಬಂದರೆ ಸದ್ಯಕ್ಕೆ ಸುರಕ್ಷಿತರಾಗುತ್ತಾರೆ. ಸಿದ್ದರಾಮಯ್ಯ ವಿರುದ್ಧ ತೀರ್ಪು ಬಂದ್ರೆ ಸಿಎಂ ಸ್ಥಾನಕ್ಕೂ ಕುತ್ತು ಬರಬಹುದು. ಆರೋಪಿಯನ್ನು ವಶಕ್ಕೆ ಪಡೆಯುವುದು ಅಗತ್ಯವಿದೆ ಎಂದು ತನಿಖಾಧಿಕಾರಿ ವಾದ ಮಂಡಿಸಿದರೆ ಬಂಧನಕ್ಕೂ ಕೋರ್ಟ್ ಸೂಚಿಸಬಹುದು. ಬಂಧನದ ಪ್ರಕ್ರಿಯೆ ಕೊನೆಯ ಆಯ್ಕೆಯಾಗಿದೆ.

ಇದನ್ನೂ ಓದಿ: CM Siddaramaiah: ಆ.23ಕ್ಕೆ ಸಿಎಂ ಸಿದ್ದರಾಮಯ್ಯ ದೆಹಲಿಗೆ; ಕಾನೂನು ಹೋರಾಟಕ್ಕೆ ಹೈ ‌ಕಮಾಂಡ್ ಬೆಂಬಲ ಕೋರಲು ಭೇಟಿ

Exit mobile version