ಬೆಂಗಳೂರು: ವಾಲ್ಮೀಕಿ ನಿಗಮ ಅಕ್ರಮ, ಮುಡಾ ನಿವೇಶನ ಹಗರಣದ ಬೆನ್ನಲ್ಲೇ ರಾಜ್ಯ ಸರ್ಕಾರದಲ್ಲಿ ಮತ್ತೊಂದು ಭಾರಿ ಹಗರಣ ನಡೆದಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿದೆ. 2022-23ನೇ ಸಾಲಿನಲ್ಲಿ ಜಿಲ್ಲಾ ಮತ್ತು ತಾಲೂಕು ಪಂಚಾಯತಿಗಳಲ್ಲಿ ಬಳಕೆಯಾಗದೆ ಉಳಿದಿರುವ 1,494 ಕೋಟಿ ರೂ.ಗಳ ಬಗ್ಗೆ ಪತ್ರ ಬರೆದಿದ್ದರೂ ರಾಜ್ಯ ಸರ್ಕಾರ ಯಾವುದೇ ಮಾಹಿತಿ ನೀಡಿಲ್ಲ. ರಾಜ್ಯ ಸಂಚಿತ ನಿಧಿಗೆ ಸೇರಬೇಕಾದ ಸಾವಿರಾರು ಕೋಟಿ ರೂ.ಗಳು ದುರ್ಬಳಕೆಯಾಗಿದ್ದು (Consolidated Fund Misuse), ಈ ಬಗ್ಗೆ ತನಿಖೆಗೆ ಕ್ರಮ ಕೈಗೊಂಡು ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ವಜಾ ಮಾಡಬೇಕು ಎಂದು ರಾಜ್ಯಪಾಲರಿಗೆ ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ದೂರು ನೀಡಿದ್ದಾರೆ.
2023ರ ಬೆಳಗಾವಿ ಅಧಿವೇಶನದಲ್ಲಿ ರಾಜ್ಯದ ಜಿಲ್ಲಾ ಪಂಚಾಯತಿ ಮತ್ತು ತಾಲೂಕು ಪಂಚಾಯತಿಗಳ ನಿಧಿ-IIರಲ್ಲಿ ಖರ್ಚು ಮಾಡದೆ ಬಾಕಿ ಇರುವ ಹಣಕ್ಕೆ ಸಂಬಂಧಿಸಿದಂತೆ ಪ್ರಶ್ನೆ ಕೇಳಲಾಗಿತ್ತು. ಅದಕ್ಕೆ ಸಿಎಂ ಸಿದ್ದರಾಮಯ್ಯ ಅವರು, ಬಳಕೆಯಾಗದ ಜಿಲ್ಲಾ ಪಂಚಾಯಿತಿಗಳ 459 ಕೋಟಿ ಹಾಗೂ ತಾಲೂಕು ಪಂಚಾಯಿತಿಗಳ 1,494 ಕೋಟಿ ರೂ.ಗಳನ್ನು ಸಂಚಿತ ನಿಧಿಗೆ ಜಮಾ ಮಾಡಲಾಗಿದೆ ಎಂದು ಲಿಖಿತ ಉತ್ತರ ನೀಡಿದ್ದರು. ಆದರೆ, ಇದನ್ನು ಪರಿಶೀಲಿಸಿದ ಬಳಿಕ ಮುಖ್ಯಮಂತ್ರಿಯವರು ನೀಡಿದ ಉತ್ತರ ಸುಳ್ಳು ಎಂದು ಸಾಬೀತಾಗಿದೆ.
MUDA Scam: ಮುಡಾದಲ್ಲಿ ಇನ್ನೊಂದು ಗೋಲ್‌ಮಾಲ್, ಇಲ್ಲದ ವ್ಯಕ್ತಿ ಸೃಷ್ಟಿಸಿ ನಿವೇಶನ ಪಡೆದ ಅಧಿಕಾರಿಗಳು!
ರಾಜ್ಯದ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿಗಳ ನಿಧಿ-IIನ ಖರ್ಚು ಮಾಡದ 1494 ಕೋಟಿಗಳನ್ನು ಖಜಾನೆಗೆ ಜಮಾ ಮಾಡಿಲ್ಲ ಎಂದು ಏ.20ರಂದು ಕರ್ನಾಟಕ ಖಜಾನೆ ಇಲಾಖೆ ಸ್ಪಷ್ಟಪಡಿಸಿದೆ. ಆದ್ದರಿಂದ ಸಿಎಂ ಸಿದ್ದರಾಮಯ್ಯ ಅವರು ವಿಧಾನ ಪರಿಷತ್ತಿನ ಮುಂದೆ ಉದ್ದೇಶಪೂರ್ವಕವಾಗಿ ಸುಳ್ಳು ಅಥವಾ ದಾರಿತಪ್ಪಿಸುವ ಹೇಳಿಕೆಗಳನ್ನು ನೀಡಿ ಸತ್ಯವನ್ನು ಮರೆಮಾಚುವ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿರುವ ಡಿ.ಎಸ್.ಅರುಣ್, ಕರ್ನಾಟಕ ಸರ್ಕಾರವು ಸಂವಿಧಾನದ 202, 205 ಮತ್ತು 206 ವಿಧಿಯಡಿಯ ನಿಬಂಧನೆಗಳನ್ನು ಉಲ್ಲಂಘಿಸಿದೆ. ಸಾವಿರಾರು ಕೋಟಿ ರೂ. ಅವ್ಯವಹಾರ ನಡೆದಿರುವ ಹಿನ್ನೆಲೆಯಲ್ಲಿ ಪ್ರಕರಣದ ಬಗ್ಗೆ ತನಿಖೆ ನಡೆಸಿ, ಸಿಎಂ ಸಿದ್ದರಾಮಯ್ಯ ಅವರನ್ನು ವಜಾ ಮಾಡಬೇಕು ಎಂದು ಪತ್ರದಲ್ಲಿ ಕೋರಿದ್ದಾರೆ.