Site icon Vistara News

DK Shivakumar: `ಲೋಕಾಯುಕ್ತಕ್ಕೆ ಕೊಟ್ಟ ಮೇಲೆ ಸಿಬಿಐಗೇನು ಕೆಲಸ?’ ಅಕ್ರಮ ಆಸ್ತಿ ಕೇಸ್‌ ಬಗ್ಗೆ ಡಿಕೆ ಶಿವಕುಮಾರ್‌ ಪ್ರಶ್ನೆ

Kempambudi lake encroachment cleared soon says DCM DK Shivakumar

ಬೆಂಗಳೂರು: ಒಂದು ಸಲ ನಮ್ಮ ಸರಕಾರ ಪ್ರಕರಣವನ್ನು ಲೋಕಾಯುಕ್ತಕ್ಕೆ (Lokayukta) ಕೊಟ್ಟ ಮೇಲೆ ಸಿಬಿಐಯವರು ತನಿಖೆ (CBI Probe) ಮಾಡಲು ಸಾಧ್ಯವಿಲ್ಲ. ಸುಪ್ರೀಂ ಕೋರ್ಟ್‌ (Supreme Court) ತೀರ್ಮಾನವನ್ನು ಒಪ್ಪಿಕೊಳ್ಳುತ್ತೇನೆ ಎಂದು ಕರ್ನಾಟಕದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ (DCM DK Shivakumar) ಹೇಳಿದ್ದಾರೆ.

ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ತಮ್ಮ ವಿರುದ್ಧ ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ಆರಂಭಿಸಿರುವ ತನಿಖೆಯನ್ನು ಕೈಬಿಡುವಂತೆ ಸೂಚಿಸಬೇಕು ಎಂದು ಡಿಕೆ ಶಿವಕುಮಾರ್ (DK Shivakumar) ಅವರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದ ಹಿನ್ನೆಲೆಯಲ್ಲಿ ಅವರು ಪ್ರತಿಕ್ರಿಯೆ ನೀಡಿದರು.

ಸಿಬಿಐ ಎಫ್‌ಐಆರ್‌ ವಜಾ ಮಾಡಬೇಕು ಅಂತ ಕೇಳಿದ್ದೆವು. ಹೈಕೋರ್ಟ್‌ನಲ್ಲಿ ಮಾಡಲು ಆಗುವುದಿಲ್ಲ ಎಂದಿದ್ದರು. ಹೀಗಾಗಿ ಅಪೀಲ್ ಹಾಕಿದ್ದೆ. ಅಲ್ಲೂ ಏನೂ ಮಾಡಲು ಆಗುವುದಿಲ್ಲ ಎಂದು ನಿರ್ಣಯ ಬಂದಿದೆ. ಕೋರ್ಟ್ ಏನು ಹೇಳುತ್ತದೋ ಕೇಳೋಣ. ತನಿಖೆ ನಡೆಯಲಿ ಎಂದು ಡಿಕೆ ಶಿವಕುಮಾರ್‌ ಪ್ರತಿಕ್ರಿಯಿಸಿದರು.

ಲೋಕಾಯುಕ್ತದವರು ಇನ್ವೆಸ್ಟಿಗೇಶನ್ ಮಾಡುತ್ತಿದ್ದಾರೆ. CBIನವರಿಗೆ ಮಾಡಬೇಡಿ ಅಂತ ಹೇಳಿದರೂ ಮಾಡುತ್ತಿದ್ದಾರೆ. ಏನು ಬೇಕಾದರೂ ಮಾಡಲಿ, ನನ್ನದೇನೂ ತಪ್ಪಿಲ್ಲ. ನಮ್ಮ‌ ಸರ್ಕಾರ ಒಂದು ಸಲ ವಿತ್‌ಡ್ರಾ ಮಾಡಿದ ಮೇಲೆ ಮುಗಿಯಿತು. ನನ್ನ ಆಸ್ತಿ ದಾಖಲೆ ಏನಿದೆ ಕೊಡ್ತೀನಿ ಎಂದು ಡಿಕೆಶಿ ತಿಳಿಸಿದರು. ಕೇಂದ್ರ ಸರ್ಕಾರ ಇದನ್ನು ಉದ್ದೇಶಪೂರ್ವಕ ಮಾಡುತ್ತಿದೆಯಾ ಎಂಬ ಪ್ರಶ್ನೆಗೆ ʼಕೋರ್ಟ್ ಬಗ್ಗೆ ಏನು ಮಾತನಾಡಲೂ ಆಗುವುದಿಲ್ಲ. ಕೋರ್ಟ್ ಹೇಳಿದಂತೆ ಕೇಳಬೇಕುʼ ಎಂದು ಡಿಕೆಶಿ ಉತ್ತರಿಸಿದರು.

ಸಿಬಿಐ ತನಿಖೆ ಕೈಬಿಡಲು ಸುಪ್ರೀಂ ಕೋರ್ಟ್‌ ನಕಾರ

2013ರಿಂದ 2017ರವರೆಗಿನ ಅವಧಿಯಲ್ಲಿ ಡಿಕೆಶಿಯವರು ತಮ್ಮ ಆದಾಯಕ್ಕಿಂತ ಹೆಚ್ಚಿನ ಆದಾಯವನ್ನು ಗಳಿಸಿದ್ದಾರೆಂದು ಸಿಬಿಐ ಆರೋಪಿಸಿದ್ದು, ಆ ಕುರಿತಂತೆ ಎಫ್ಐಆರ್ ದಾಖಲಿಸಿತ್ತು. ಆ ಪ್ರಕರಣವನ್ನು ಕೈಬಿಡುವಂತೆ ಸಿಬಿಐಗೆ ನಿರ್ದೇಶನ ನೀಡಬೇಕೆಂದು ಕೋರಿ ಡಿಕೆಶಿ ಮನವಿ ಸಲ್ಲಿಸಿದ್ದರು. ಆ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಬಾಲಾ ತ್ರಿವೇದಿ ನೇತೃತ್ವದ ಪೀಠ, ಡಿಕೆ ಶಿವಕುಮಾರ್ ಅವರ ಅರ್ಜಿಯನ್ನು ವಜಾಗಳಿಸಿತು.

ಈ ಹಿಂದಿನ ಸಿದ್ದರಾಮಯ್ಯನವರ ರಾಜ್ಯ ಸರ್ಕಾರದಲ್ಲಿ ಡಿಕೆಶಿಯವರು ಇಂಧನ ಸಚಿವರಾಗಿದ್ದರು. ಆ ಸರ್ಕಾರದ ಅವಧಿಯಲ್ಲಿ 74 ಕೋಟಿ ರೂ.ಗಳಷ್ಟು ದಾಖಲೆರಹಿತ ಆದಾಯವನ್ನು ಡಿಕೆ ಶಿವಕುಮಾರ್ ಅವರು ಗಳಿಸಿದ್ದಾರೆಂದು ಹೇಳಲಾಗಿದೆ. ಅದರಂತೆ, 74.93 ಕೋಟಿ ರೂಪಾಯಿಗಳನ್ನು ಹೆಚ್ಚುವರಿಯಾಗಿ ಗಳಿಸಿದ್ದಾರೆಂದು ಸಿಬಿಐ ಆರೋಪಿಸಿತ್ತು. ಆ ಹಿನ್ನೆಲೆಯಲ್ಲಿ ಅವರ ವಿರುದ್ಧ ತನಿಖೆ ನಡೆಸಲು ಅನುಮತಿ ಕೋರಿ 2019ರಲ್ಲಿ ರಾಜ್ಯ ಸರ್ಕಾರಕ್ಕೆ ಸಿಬಿಐ ಅರ್ಜಿ ಸಲ್ಲಿಸಿತ್ತು.

2019ರಲ್ಲಿ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ, ಸಿಬಿಐ ಮನವಿಗೆ ಸ್ಪಂದಿಸಿ ತನಿಖೆಗೆ ಅನುಮತಿ ನೀಡಿತ್ತು. ಆನಂತರ ಸಿಬಿಐ, ಡಿಕೆ ಶಿವಕುಮಾರ್ ವಿರುದ್ಧ ಎಫ್ಐಆರ್ ದಾಖಲಿಸಿತ್ತು. ಅದೇ ತನಿಖೆಯನ್ನು ಕೈಬಿಡುವಂತೆ ಡಿಕೆ ಶಿವಕುಮಾರ್ ಅವರು ಹೈಕೋರ್ಟಿನಲ್ಲಿ ಮನವಿ ಸಲ್ಲಿಸಿದ್ದು ಮೊದಲಿಗೆ ಅದು ವಿಭಾಗೀಯ ಪೀಠದಲ್ಲಿ ವಿಚಾರಣೆಯಾಗಿ ಆನಂತರ ಅದೀಗ ವಿಸ್ತ್ರೃತ ಪೀಠಕ್ಕೆ ವರ್ಗಾವಣೆಯಾಗಿದೆ.

ಇದನ್ನೂ ಓದಿ: DK Shivakumar : ಡಿಕೆ ಶಿವಕುಮಾರ್‌ ಟಿಪ್ಪಣಿ ಆಧರಿಸಿ ಮಾಡಿದ ಬಿಬಿಎಂಪಿ ಅಧಿಕಾರಿಗಳ ವರ್ಗಾವಣೆಗೆ ಹೈಕೋರ್ಟ್‌ ತಡೆ

Exit mobile version