Site icon Vistara News

DK Shivakumar: ರಾಮನಗರ ಜಿಲ್ಲೆ ಹೆಸರು ಬದಲಾವಣೆ; ಡಿಕೆಶಿ- ಎಚ್‌ಡಿಕೆ ನಡುವೆ ಮತ್ತೊಂದು ಮಹಾಸಮರಕ್ಕೆ ಮುನ್ನುಡಿ!

dk shivakumar hd kumaraswamy

ಬೆಂಗಳೂರು: ರಾಮನಗರ ಜಿಲ್ಲೆಗೆ (Ramanagara District) ಬೆಂಗಳೂರು ದಕ್ಷಿಣ ಜಿಲ್ಲೆ (Bangalore South) ಎಂದು ಹೆಸರು ಬದಲಾವಣೆಗೆ ಡಿಸಿಎಂ ಡಿಕೆ ಶಿವಕುಮಾರ್ (DCM DK Shivakumar) ಯೋಜನೆ ಹೆಣೆದಿದ್ದು, ಅದರಂತೆ ಇಂದು ರಾಮನಗರ ಜಿಲ್ಲೆಯ ಶಾಸಕರನ್ನು ಕರೆದುಕೊಂಡು ಬಂದು ಸಿಎಂ ಸಿದ್ದರಾಮಯ್ಯ (CM Siddaramaiah) ಅವರನ್ನು ಭೇಟಿಯಾಗಿ ಮನವಿ ನೀಡಿದ್ದಾರೆ. ಈ ಹೆಸರು ಬದಲಾವಣೆಯ ಪ್ಲಾನ್‌ ಡಿಕೆಶಿ ಹಾಗೂ ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ (HD Kumaraswamy) ಅವರ ನಡುವೆ ಇನ್ನೊಂದು ಸುತ್ತಿನ ಮಹಾಯುದ್ಧಕ್ಕೆ ಮುನ್ನುಡಿಯಾಗಲಿದೆ ಎಂದು ಅಂದಾಜಿಸಲಾಗಿದೆ.

ಹೆಸರು ಬದಲಾವಣೆಯ ಮೂಲಕ ಎಚ್‌ಡಿಕೆಗೆ ಮಾಸ್ಟರ್ ಸ್ಟ್ರೋಕ್ ಕೊಡಲು ಡಿಕೆಶಿ ಮುಂದಾಗಿದ್ದಾರೆ. ರಾಮನಗರ ಜಿಲ್ಲೆ ಕ್ರಿಯೇಟ್‌ ಮಾಡಿದ್ದ ಕುಮಾರಸ್ವಾಮಿ ಅವರ ಹೆಗ್ಗಳಿಕೆಗೆ ಧಕ್ಕೆ ನೀಡಲು ಡಿಕೆಶಿ ಮುಂದಾಗಿದ್ದಾರೆ. ಆ ಮೂಲಕ ರಾಮನಗರ ಜಿಲ್ಲೆಯ ಜಮೀನು ಬೆಲೆಯಲ್ಲಿ ಒಂದಕ್ಕೆರಡು ಏರಿಸುವುದು, ಎಚ್‌ಡಿಕೆ ಹವಾ ತಗ್ಗಿಸುವುದು, ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣ ತರಿಸುವುದು ಸೇರಿದಂತೆ ಹಲವು ಪ್ಲಾನ್‌ಗಳನ್ನು ಡಿಕೆಶಿ ಹೆಣೆದಿದ್ದಾರೆ.

ʼಬ್ರಾಂಡ್ ಬೆಂಗಳೂರುʼ ಹೆಸರಲ್ಲಿ ರಾಮನಗರ ಜಿಲ್ಲೆಯ ಹೆಸರನ್ನು ʼಬೆಂಗಳೂರು ದಕ್ಷಿಣ ಜಿಲ್ಲೆʼ ಎಂದು ನಾಮಕರಣ ಮಾಡುವುದು ಡಿಕೆಶಿ ಪ್ಲಾನ್.‌ ಜಿಲ್ಲೆಯ ಅಭಿವೃದ್ಧಿಗೆ ಬೆಂಗಳೂರು ಹೆಸರು ಪೂರಕವಾಗಿರಲಿದೆ. ಆ ಮೂಲಕ ರಾಮನಗರಕ್ಕೆ ಬೆಂಗಳೂರು ಮಾನ್ಯತೆ ನೀಡಿ ಕ್ರೆಡಿಟ್ ಪಡೆಯಲು ಡಿಕೆಶಿ ಚಿಂತನೆ. ಚನ್ನಪಟ್ಟಣ ಉಪ ಚುನಾವಣೆಯಲ್ಲೂ ಇದರ ಕ್ರೆಡಿಟ್ ಪಡೆಯಲು ಡಿಕೆಶಿ ಮುಂದಾಗಿದ್ದಾರೆ. ಆ ಮೂಲಕ ಈ ಪ್ರದೇಶದಲ್ಲಿ ಕುಮಾರಸ್ವಾಮಿಯವರ ಪ್ರಾಬಲ್ಯ ಕಡಿಮೆ ಮಾಡಲು ಡಿಕೆಶಿ ಯತ್ನಿಸುತ್ತಿದ್ದಾರೆ. ಒಕ್ಕಲಿಗ ಮತ ಬ್ಯಾಂಕ್‌ ಅನ್ನು ಸಂಪೂರ್ಣ ತಮ್ಮ ಕೈವಶ ಮಾಡಿಕೊಳ್ಳುವ ಚಿಂತನೆ ಇದಾಗಿದೆ.

ಡಿಕೆ ಶಿವಕುಮಾರ್ ಪ್ಲಾನ್‌ಗೆ ಕುಮಾರಸ್ವಾಮಿ ಹಿಂದಿನಿಂದಲೂ ವಿರೋಧ ವ್ಯಕ್ತಪಡಿಸಿದ್ದಾರೆ. ಇದು ತಮ್ಮ ಬೇನಾಮಿ ಆಸ್ತಿ ಸಕ್ರಮ ಮಾಡಿಕೊಳ್ಳಲು ಡಿಕೆಶಿ ಪ್ಲಾನ್ ಎಂದು ಎಚ್‌ಡಿಕೆ ಆರೋಪಿಸಿದ್ದರು. ಚನ್ನಪಟ್ಟಣ ಉಪ ಚುನಾವಣೆ ವೇಳೆ ಹೆಸರು ಬದಲಾವಣೆಯ ಕಿಡಿ ಹೊತ್ತಿಸಿದ ಡಿಕೆಶಿ ಯತ್ನ, ಇವರಿಬ್ಬರ ನಡುವೆ ಮತ್ತೊಂದು ಸುತ್ತಿನ ವಾಕ್ಸಮರಕ್ಕೆ ವೇದಿಕೆಯಾಗಲಿದೆ.

ಸಿಎಂ ಭೇಟಿ ಮಾಡಿದ ಡಿಕೆಶಿ

ʼರಾಮನಗರ ಜಿಲ್ಲೆಯ ಹೆಸರು ಬದಲಾವಣೆಗೆ ಮನವಿ ಮಾಡಲಾಗಿದೆʼ ಎಂದು ಸಿಎಂ ಭೇಟಿಯ ಬಳಿಕ ಡಿಕೆಶಿ ತಿಳಿಸಿದ್ದಾರೆ. “ನನ್ನ ನೇತೃತ್ವದಲ್ಲಿ ಸಿಎಂ ಭೇಟಿ ಮಾಡಿದ್ದೆವು. ನಾವೆಲ್ಲಾ ಬೆಂಗಳೂರಿನವರೇ. ಮೊದಲು ಬೆಂಗಳೂರು ಜಿಲ್ಲೆಗೇ ರಾಮನಗರ ಸೇರಿತ್ತು. ನಂತರ ಪ್ರತ್ಯೇಕ ಜಿಲ್ಲೆಯನ್ನಾಗಿ ಮಾಡಲಾಯಿತು. ಈಗ ರಾಮನಗರ ಬದಲಿಗೆ ಬೆಂಗಳೂರು ದಕ್ಷಿಣ ಜಿಲ್ಲೆಯಾಗಿ ಹೆಸರು ಬದಲಿಸುವಂತೆ ಕೋರಲಾಗಿದೆ. ಇದಕ್ಕೆ ಸಿಎಂ ಕೂಡ ಸಹಮತ ವ್ಯಕ್ತಪಡಿಸಿದ್ದಾರೆ” ಎಂದಿದ್ದಾರೆ ಡಿಕೆ ಶಿವಕುಮಾರ್.‌

“ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚೆ ಆಗಲಿದೆ. ಬಳಿಕ ಹೆಸರು ಬದಲಾವಣೆ ಆಗಲಿದೆ. ಈಗಿರುವ ರಾಮನಗರವೇ ಹೆಡ್ ಕ್ವಾರ್ಟರ್ ಆಗಿರಲಿದೆ. ರಾಮನಗರ, ಮಾಗಡಿ, ಕನಕಪುರ, ಚನ್ನಪಟ್ಟಣ, ಹಾರೋಹಳ್ಳಿ ತಾಲ್ಲೂಕುಗಳು ಬೆಂಗಳೂರು ದಕ್ಷಿಣದ ವ್ಯಾಪ್ತಿಗೆ ಸೇರಲಿವೆ. ಈ ವಿಚಾರವನ್ನು ಕ್ಯಾಬಿನೆಟ್‌ನಲ್ಲಿಟ್ಟು ಚರ್ಚೆ ಮಾಡ್ತೀವಿ” ಎಂದು ಡಿಕೆ ಶಿವಕುಮಾರ್‌ ಹೇಳಿದ್ದಾರೆ.

ಇದರಿಂದ ಕಾಂಗ್ರೆಸ್, ಡಿಕೆಶಿಗೆ ಏನು ಲಾಭ?

ಇದೊಂದೇ ಕ್ರಮದಿಂದ ಡಿಕೆಶಿ ಹಲವು ಹಕ್ಕಿ ಹೊಡೆಯಲು ಮುಂದಾಗಿದ್ದಾರೆ. ಅವು ಈ ಕೆಳಗಿನಂತಿವೆ:

1) ಕುಮಾರಸ್ವಾಮಿ ಕಾಲದಲ್ಲಿ ಇಟ್ಟ ಹೆಸರು ಬದಲಿಸಿದೆವು ಎಂದು ಕ್ರೆಡಿಟ್‌ ಪಡೆಯಬಹುದು. ಎಚ್‌ಡಿಕೆ ಪ್ರಭಾವಕ್ಕೆ ಕುತ್ತು ತರಬಹುದು.

2) ರಾಮನಗರವನ್ನು ಬೆಂಗಳೂರಿನ ಭಾಗ ಮಾಡಿದೆವು ಎಂದು ಹೇಳಿಕೊಂಡು ರಾಜಕೀಯ ಲಾಭ ಪಡೆದುಕೊಳ್ಳಬಹುದು.

3) ರಾಮನಗರ ಜಿಲ್ಲೆಯನ್ನು ಬೆಂಗಳೂರು ಎಂದು ಮಾಡುವುದರಿಂದ ರಿಯಲ್ ಎಸ್ಟೇಟ್ ಬೂಮ್ ಆಗಲಿದೆ.

4) ಚನ್ನಪಟ್ಟಣ ಬೈ ಎಲೆಕ್ಷನ್‌ನಲ್ಲಿ ಪರೋಕ್ಷವಾಗಿ ಇದರ ಲಾಭ ಪಡೆಯಬಹುದು.

5) ಜಿಲ್ಲೆಯಲ್ಲಿ ಬರುವ ನಾಲ್ಕು ವಿಧಾನ ಸಭಾ ಕ್ಷೇತ್ರಗಳ ಮೇಲೆ ರಾಜಕೀಯ ಹಿಡಿತ ಸಾಧಿಸಲು ಅನುಕೂಲ ಆಗಬಹುದು.

6) ಬೆಂಗಳೂರಿನಲ್ಲಿ ಆಗಬೇಕಿರುವ ಎರಡನೇ ವಿಮಾನ ನಿಲ್ದಾಣವನ್ನು ಕನಕಪುರ ರಸ್ತೆಯಲ್ಲಿ ಮಾಡಲು ಸಾಧ್ಯವಾಗಬಹುದು.

ಆದರೆ ವಿಪಕ್ಷಗಳು ಖಂಡಿತವಾಗಿಯೂ ಇದನ್ನು ವಿರೋಧ ಮಾಡಲಿವೆ. ಹೆಸರು ಬದಲಾವಣೆಯ ಮೂಲಕ ಡಿಕೆ ಬ್ರದರ್ಸ್‌ ಇನ್ನಷ್ಟು ಶಕ್ತಿಶಾಲಿಯಾಗಲಿದ್ದಾರೆ ಎಂಬ ಆತಂಕವೇ ಬಿಜೆಪಿ- ಜೆಡಿಎಸ್‌ ನಾಯಕರನ್ನು ಇನ್ನಷ್ಟು ಹತ್ತಿರ ತರಲಿದ್ದು, ಇದರ ವಿರುದ್ಧ ಹೋರಾಟ ರೂಪಿಸಬಹುದು. ರಾಮನಗರ ಹೆಸರು ಬದಲಾವಣೆ ಮಾಡಿ ಎಚ್‌ಡಿಕೆ ವಿರುದ್ಧ ರಾಜಕೀಯ ದ್ವೇಷ ಸಾಧಿಸುತ್ತಿದ್ದಾರೆ ಎಂಬುದು ಪ್ರಮುಖ ಆರೋಪ ಆಗಿರಲಿದೆ. ಜನಾಕ್ರೋಶ ಸೃಷ್ಟಿ ಮಾಡಿ ಸರ್ಕಾರಕ್ಕೆ ತಲೆಬಿಸಿ ಉಂಟಮಾಡುವ ಸಾಧ್ಯತೆ ಇದೆ.

ಇದನ್ನೂ ಓದಿ: DK Shivakumar: ರಾಮನಗರ ಜಿಲ್ಲೆ ಹೆಸರು ಬದಲಾವಣೆ ಖಚಿತ; ಡಿಕೆಶಿ ನೇತೃತ್ವದ ನಿಯೋಗ ಸಿಎಂ ಭೇಟಿ

Exit mobile version