Site icon Vistara News

ED Raid: ಇಡಿ- ಸಿಬಿಐ ಮೆಗಾ ದಾಳಿ; 80 ಅಧಿಕಾರಿಗಳಿಂದ ರೇಡ್‌, ಬ್ಯಾಂಕ್‌ ಸಿಬ್ಬಂದಿ ಮನೆ ಸೀಜ್‌! ಬೆಳಗ್ಗೆಯಿಂದ ಏನೇನಾಯ್ತು?

ed raid nagendra home daddal home

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣಕ್ಕೆ (Valmiki Corporation Scam) ಸಂಬಂಧಿಸಿ ರಾಜ್ಯಾದ್ಯಂತ ನಾನಾ ಕಡೆ ಸುಮಾರು 80 ಮಂದಿ ಇಡಿ- ಸಿಬಿಐ ಅಧಿಕಾರಿಗಳು ವ್ಯಾಪಕ ದಾಳಿ (ED Raid, CBI Raid) ನಡೆಸಿದ್ದಾರೆ. ನಿನ್ನೆ ಮಧ್ಯರಾತ್ರಿಯಿಂದಲೇ ಈ ದಾಳಿ ಆರಂಭವಾಗಿದ್ದು, ಕೇಂದ್ರೀಯ ತನಿಖಾ ಸಮಿತಿಗಳ ಅಧಿಕಾರಿಗಳ ಮಿಂಚಿನ ದಾಳಿಯ ಅರಿವು ಸ್ಥಳೀಯ ಪೊಲೀಸರಿಗೂ ಆಗಿಲ್ಲ. ಆರ್‌ಬಿಐ (RBI) ಅಧಿಕಾರಿಗಳೂ ಇದರಲ್ಲಿ ಭಾಗಿಯಾಗಿದ್ದಾರೆ.

ಬೆಂಗಳೂರಿನಲ್ಲಿ ಮಧ್ಯರಾತ್ರಿ 2 ಗಂಟೆಯಿಂದಲೇ ಇಡಿ ಕಚೇರಿ ಬಳಿ ಅಧಿಕಾರಿಗಳ ಜಮಾವಣೆಯಾಗಿದೆ. ಭದ್ರತೆಗೆ ಸ್ಥಳೀಯ ಪೊಲೀಸರನ್ನು ನೆಚ್ಚಿಕೊಳ್ಳದ ಇಡಿ, ದೆಹಲಿಯಿಂದಲೇ ಸಿಆರ್‌ಫಿಎಫ್ (CRPF) ಸಿಬ್ಬಂದಿಯನ್ನ ಕರೆತಂದಿದೆ. ಮುಂಜಾನೆ 2.30ಕ್ಕೆ ಕಚೇರಿಯಿಂದ ಹೊರಟ ಅಧಿಕಾರಿಗಳು ಮುಂಜಾನೆ 3.15 ಗಂಟೆಗೆ ಮನೆಗಳ ಮೇಲೆ ದಾಳಿ ಆರಂಭಿಸಿದ್ದಾರೆ. ಆರು ಗಂಟೆ ವೇಳೆಗೆ ಬ್ಯಾಂಕ್ ಮತ್ತು ಕಚೇರಿಗಳ ಮೇಲೆ ದಾಳಿ ನಡೆದಿದೆ. ಇಡೀ ರಾಜ್ಯದಾದ್ಯಂತ 80ಕ್ಕೂ ಹೆಚ್ಚು ಮಂದಿ ಅಧಿಕಾರಿಗಳಿಂದ ದಾಳಿ ಹಾಗೂ ಪರಿಶೀಲನೆ ನಡೆಯುತ್ತಿದ್ದು, ಇನ್ನೂ ಮುಂದುವರಿದಿದೆ.

ನಾಗೇಂದ್ರ ಮನೆಗಳ ಮೇಲೆ ದಾಳಿ, ವಿಚಾರಣೆ

ಮಾಜಿ ಸಚಿವ ನಾಗೇಂದ್ರಗೆ (Ex minister B Nagendra) ಸೇರಿದ ಬೆಂಗಳೂರಿನ ಡಾಲರ್ಸ್‌ ಕಾಲನಿಯ ಅಪಾರ್ಟ್‌ಮೆಂಟ್‌ನಲ್ಲಿ ಇಡಿ ಅಧಿಕಾರಿಗಳು ತೀವ್ರ ಶೋಧ ನಡೆಸಿದರು. ರಾಮ್ಕ್ಯಾ ಉತ್ಸವ ಅಪಾರ್ಟ್‌ಮೆಂಟ್‌ನ ಮೂರನೇ ಮಹಡಿಯ ಪ್ಲಾಟ್ ನಂಬರ್ 302ರಲ್ಲಿ ನಾಗೇಂದ್ರ ವಾಸವಾಗಿದ್ದಾರೆ. ಇಂದು ಎಸ್‌ಐಟಿ ವಿಚಾರಣೆಗೆ ಹಾಜರಾಗಬೇಕಿರುವ ನಾಗೇಂದ್ರ ನಿನ್ನೆ ರಾತ್ರಿ ಇಲ್ಲೇ ತಂಗಿದ್ದರು. ಇದೀಗ ಇಡಿ ಅಧಿಕಾರಿಗಳು ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

ನಾಗೇಂದ್ರ ಅವರಿಗೆ ಸಂಬಂಧಿಸಿದ ಮತ್ತೊಂದು ಮನೆ ಮೇಲೂ ದಾಳಿ ಮಾಡಿ ಪರಿಶೀಲಿಸಲಾಗಿದೆ. ಅಪಾರ್ಟ್ಮೆಂಟ್ ಸಮೀಪ ಇರುವ ಇನ್ನೊಂದು ಕಟ್ಟಡದ ಮೇಲೆ ಕೂಡ ದಾಳಿ ನಡೆಸಲಾಗಿದ್ದು, ಈ ಮನೆ ಯಾರಿಗೆ ಸಂಬಂಧಿಸಿದ್ದು ಎಂಬುದರ ಬಗ್ಗೆ ಇಡಿ ಮಾಹಿತಿ ಕಲೆಹಾಕಿದೆ. ಇದು ನಾಗೇಂದ್ರ ಅವರದೇ ಮನೆ ಎನ್ನಲಾಗುತ್ತಿದೆ. ಶಾಸಕರ ಭವನದಲ್ಲಿರುವ ನಾಗೇಂದ್ರ ಅವರ ಕಚೇರಿ ನಂಬರ್‌ 360ರಲ್ಲೂ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ನಾಗೇಂದ್ರ ಅವರ ಬಳ್ಳಾರಿಯಲ್ಲಿರುವ ಮನೆಗೂ ದಾಳಿ ಮಾಡಲಾಗಿದೆ. ಬಿಇಎಲ್ ರೋಡ್, ಮತ್ತಿಕೆರೆ ಹಾಗೂ ಮಲ್ಲೇಶ್ವರಂ ಸೇರಿದಂತೆ ಬೆಂಗಳೂರಿನಲ್ಲಿ ನಾಲ್ಕು ಕಡೆ, ರಾಯಚೂರು ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಲ್ಲಿಯೂ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ದದ್ದಲ್‌ ನಿವಾಸ, ಕಚೇರಿಗೆ ದಾಳಿ

ರಾಯಚೂರು ಗ್ರಾಮೀಣ ಶಾಸಕ ಬಸವನಗೌಡ ದದ್ದಲ್ ಮನೆ ಹಾಗೂ ಕಚೇರಿಗಳಿಗೆ ದಾಳಿ ಮಾಡಲಾಗಿದೆ. ಯಲಹಂಕದ ಶ್ರೀನಿವಾಸಪುರ ಇಟ್ಟಿಗೆ ಫ್ಯಾಕ್ಟರಿ ಬಳಿ ಇರುವ ದದ್ದಲ್ ಮನೆ ಮೇಲೆ ಬೆಳಗಿನ ಜಾವ 7 ಗಂಟೆಯಿಂದ ದಾಳಿ ಮುಂದುವರೆದಿದೆ. ಶಾಸಕರ ಭವನದ ಮೇಲೂ ಇಡಿ ದಾಳಿ ನಡೆಸಿದ್ದು, ಕಟ್ಟಡ 4ರಲ್ಲಿರುವ ದದ್ದಲ್‌ ಕಚೇರಿ ಕೊಠಡಿ ಸಂಖ್ಯೆ 532ಕ್ಕೆ ಅಧಿಕಾರಿಗಳು ನುಗ್ಗಿದ್ದಾರೆ. ಯಲಹಂಕದ ಶ್ರೀನಿವಾಸಪುರದಲ್ಲಿರುವ ತಮ್ಮ ಮನೆಯಲ್ಲಿ ಶಾಸಕ ದದ್ದಲ್‌ ಇದ್ದು, ಇಲ್ಲಿಗೆ ದಾಳಿ ಮಾಡಿರುವ ಇಡಿ ಅಧಿಕಾರಿಗಳು ಶಾಸಕ ಹಾಗೂ ಕುಟುಂಬಸ್ಥರನ್ನು ಮನೆಯಲ್ಲಿ ಕೂರಿಸಿಕೊಂಡು ಪರಿಶೀಲನೆ ಮಾಡುತ್ತಿದ್ದಾರೆ.

ಬ್ಯಾಂಕ್‌ ಸಿಬ್ಬಂದಿ ಮನೆಗಳಿಗೆ ದಾಳಿ, ಮನೆ ಸೀಜ್‌

ಮೂವರು ಯೂನಿಯನ್ ಬ್ಯಾಂಕ್ ಸಿಬ್ಬಂದಿಗಳ ಮನೆಗೆ ಇಡಿ ಹಾಗೂ ಆರ್‌ಬಿಐ ಅಧಿಕಾರಿಗಳು ನಡೆಸಿ ಎರಡು ಮನೆಗಳನ್ನು ಸೀಜ್‌ ಮಾಡಿದ್ದಾರೆ. ವಿಜಯನಗರ ಎಂಆರ್‌ಸಿಆರ್‌ ಲೇಔಟ್‌ನಲ್ಲಿರುವ ದೀಪಾ‌ ಮನೆಗೆ ಸಿಬಿಐ, ಬಿಎಸ್‌ಎಸ್‌ಬಿ ಅಧಿಕಾರಿಗಳು ದಾಳಿ ನಡೆಸಿದ್ದು, ಮನೆಗೆ ಸೀಲ್ ಹಾಕಿ ನೋಟೀಸ್ ಅಂಟಿಸಿ ಸೀಜ್‌ ಮಾಡಿದ್ದಾರೆ. ಈ ಮನೆಯನ್ನು ಸಿಬಿಐ ಸೀಲ್ ಮಾಡಿದ್ದು ತನಿಖಾ ಹಂತದಲ್ಲಿದೆ ಎಂದು ನೋಟೀಸ್ ಅಂಟಿಸಿದ್ದಾರೆ. ನಂತರ ಬಂದ ಇಡಿ ಅಧಿಕಾರಿಗಳು ಸಿಬಿಐ ಸೀಲ್‌ ನೋಡಿ ಹಾಗೇ ಹಿಂದಿರುಗಿದರು.

ಈಕೆಯ ಮೇಲೆ ಸಿಬಿಐನಲ್ಲಿ ಜೂನ್ 3ರಂದೇ ಕೇಸ್ ದಾಖಲಾಗಿತ್ತು. ಬ್ಯಾಂಕ್ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ದೂರು ದಾಖಲಾಗಿದ್ದು, ದೀಪಾ ಸಿಬಿಐ ಎಫ್ಐಆರ್‌ನಲ್ಲಿ ಎ2 ಆರೋಪಿತೆ. ಕೇಸ್ ದಾಖಲಾದ ಬಳಿಕ ವಿಚಾರಣೆಗೆ ನೊಟೀಸ್ ನೀಡಲಾಗಿತ್ತು. ಆದರೆ ದೀಪ ನಾಪತ್ತೆಯಾಗಿದ್ದು ನೊಟೀಸ್‌ಗೆ ಉತ್ತರ ನೀಡಿರಲಿಲ್ಲ. ಹೀಗಾಗಿ ಮನೆಗೆ ನೊಟೀಸ್ ಅಂಟಿಸಿ ಸೀಲ್ ಮಾಡಲಾಗಿದೆ.

ಮತ್ತೊಬ್ಬ ಬ್ರಾಂಚ್ ಮುಖ್ಯಸ್ಥೆ ಸುಚಿಸ್ಮಿತಾ ರಾಲ್ ನಿವಾಸದ ಮೇಲೂ ದಾಳಿ ನಡೆಸಲಾಗಿದೆ. ಇವರು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, MG ರಸ್ತೆ ಶಾಖೆ ಮುಖ್ಯಸ್ಥರಾಗಿದ್ದರು. ಕೋರಮಂಗಲದ ನ್ಯಾಷನಲ್ ಗೇಮ್ ವಿಲೇಜ್‌ನ ಯಮುನಾ ಬ್ಲಾಕ್‌ನಲ್ಲಿ ಇವರ ನಿವಾಸವಿದ್ದು, ಆರ್‌ಬಿಐ ಅಧಿಕಾರಿಗಳು ಇಂದು ದಾಳಿ ನಡೆಸಿ ಸೀಜ್‌ ಮಾಡಿದ್ದಾರೆ.

ಯೂನಿಯನ್ ಬ್ಯಾಂಕ್ ಇನ್ನೊಬ್ಬ ಅಧಿಕಾರಿ ವಿ. ಕೃಷ್ಣಮೂರ್ತಿ ಎಂಬವರ ಮನೆ ಮೇಲೂ ದಾಳಿಯಾಗಿದೆ. ಎಂಜಿ ರೋಡ್ ಯುನಿಯನ್ ಬ್ಯಾಂಕ್‌ನಲ್ಲಿ ಹಗರಣ ನಡೆದಾಗ ಕೃಷ್ಣಮೂರ್ತಿ ಕ್ರೆಡಿಟ್ ಅಧಿಕಾರಿ ಆಗಿದ್ದರು. ಸದ್ಯ ಅವರ ನಿವಾಸಿ ಜೆಜೆಆರ್ ನಗರದ ಮೇಲೆ ಇಡಿ ದಾಳಿ ನಡೆಸಿದೆ.

ವಾಲ್ಮೀಕಿ ನಿಗಮದಲ್ಲೂ ದಾಳಿ, ಪರಿಶೀಲನೆ

ವಾಲ್ಮೀಕಿ ಅಭಿವೃದ್ಧಿ ನಿಗಮದ ಅವ್ಯವಹಾರವಾದ್ದರಿಂದ ವಸಂತನಗರದಲ್ಲಿರುವ ವಾಲ್ಮೀಕಿ ನಿಗಮದ ಕಚೇರಿಗೂ ಇಡಿ ರೇಡ್‌ ಮಾಡಿದೆ. ಎರಡು ಕಾರುಗಳಲ್ಲಿ ಬೆಳಗ್ಗೆ 6 ಗಂಟೆಗೆ ಬಂದಿರುವ ನಾಲ್ವರು ಇಡಿ ಅಧಿಕಾರಿಗಳು ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.

ಇದನ್ನೂ ಓದಿ: ED Raid: ಮಾಜಿ ಸಚಿವ ಬಿ. ನಾಗೇಂದ್ರ, ಶಾಸಕ ದದ್ದಲ್‌ಗೆ ಇಡಿ ದಾಳಿ ಶಾಕ್!‌ ಬೆಂಗಳೂರು, ಬಳ್ಳಾರಿ ನಿವಾಸಗಳಲ್ಲಿ ತೀವ್ರ ಶೋಧ

Exit mobile version