ಹೊಸದಿಲ್ಲಿ: ಲೋಕಸಭೆ ಚುನಾವಣೆ (Lok Sabha Election 2024) ಫಲಿತಾಂಶ (Election Results 2024) ನಿಶ್ಚಯವಾಗುತ್ತಿದ್ದಂತೆಯೇ ಇಬ್ಬರು ಪ್ರಾದೇಶಿಕ ನಾಯಕರು ಕಿಂಗ್‌ಮೇಕರ್‌ಗಳಾಗಿ (kingmakers) ಹೊರಹೊಮ್ಮಿದ್ದು, ಇವರನ್ನು ಹೊರತುಪಡಿಸಿ ಸರ್ಕಾರ ರಚಿಸಲು ಎನ್‌ಡಿಎಗೆ (NDA) ಹಾಗೂ ಇಂಡಿಯಾ (INDIA Bloc) ಒಕ್ಕೂಟಕ್ಕೂ ಸಾಧ್ಯವಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ, ಇವರನ್ನು ತಮ್ಮಲ್ಲಿಯೇ ಉಳಿಸಿಕೊಳ್ಳಲು ಎನ್‌ಡಿಎ ಮುಂದಾಗಿದ್ದರೆ, ತಮ್ಮತ್ತ ಸೆಳೆಯಲು ಇಂಡಿ ಒಕ್ಕೂಟ ಮುಂದಾಗಿದೆ.
ಇವರಲ್ಲಿ ಒಬ್ಬರು ತೆಲುಗು ದೇಶಂ ಪಕ್ಷದ (TDP) ನಾಯಕ ಎನ್ ಚಂದ್ರಬಾಬು ನಾಯ್ಡು (N Chandrababu Naidu). ಇವರನ್ನು ಭ್ರಷ್ಟಾಚಾರ ಪ್ರಕರಣದಲ್ಲಿ ಎದುರಾಳಿ, ಆಂಧ್ರ ಮುಖ್ಯಮಂತ್ರಿ ಜಗನ್ ರೆಡ್ಡಿ ಎಂಟು ತಿಂಗಳ ಹಿಂದೆ ಬಂಧಿಸಿ ಎರಡು ತಿಂಗಳು ಜೈಲಿನಲ್ಲಿ ಹಾಕಿದ್ದರು. ಮತ್ತೊಬ್ಬರು ಬಿಹಾರ ಮುಖ್ಯಮಂತ್ರಿ ಮತ್ತು ಜೆಡಿಯು (JDU) ಮುಖ್ಯಸ್ಥ ನಿತೀಶ್ ಕುಮಾರ್ (Nitish Kumar). ಇವರಿಬ್ಬರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎಗೆ ಬಹುಮತ ಒದಗಿಸುವ ಕಿಂಗ್ ಮೇಕರ್‌ಗಳಾಗಿ ಹೊಮ್ಮಿದ್ದಾರೆ.
ಟಿಡಿಪಿ ತನ್ನದೇ ಆದ 16 ಸ್ಥಾನಗಳನ್ನು ಗೆದ್ದುಕೊಂಡಿದೆ. ಎನ್‌ಡಿಎ ಆಂಧ್ರಪ್ರದೇಶದಲ್ಲಿ ಒಟ್ಟು 25 ಸ್ಥಾನಗಳಲ್ಲಿ 21ರಲ್ಲಿ ಗೆಲುವು ಸಾಧಿಸಿದೆ. ಬಿಹಾರದಲ್ಲಿ ನಿತೀಶ್ ಕುಮಾರ್ ಅವರ ಜೆಡಿಯು ತನ್ನ ಮಿತ್ರ ಪಕ್ಷಕ್ಕಿಂತ ಕಡಿಮೆ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದರೂ ಬಿಜೆಪಿಯಂತೆಯೇ 12 ಸ್ಥಾನಗಳನ್ನು ಗೆದ್ದಿದೆ. ನಿನ್ನೆ ಸಂಜೆಯ ಹೊತ್ತಿಗೆ ಫಲಿತಾಂಶದ ಚಿತ್ರಣವು ಸ್ಪಷ್ಟವಾಗುತ್ತಿದ್ದಂತೆ, ಬಹುಮತವನ್ನು ಒಟ್ಟುಗೂಡಿಸುವ ಪ್ರಯತ್ನದಲ್ಲಿ ಎರಡೂ ಒಕ್ಕೂಟಗಳ ನಾಯಕರು ಇಬ್ಬರನ್ನೂ ಸಂರ್ಕಿಸಿದ್ದರು. ನಾಯ್ಡು ಅವರು ನಿನ್ನೆಯೇ ಮೋದಿ ಹಾಗೂ ಅಮಿತ್ ಶಾಗೆ ಕರೆ ಮಾಡಿ, ತಮ್ಮ ಬೆಂಬಲ ಎನ್‌ಡಿಎ ಜೊತೆಗಿರುವುದನ್ನು ಖಚಿತಪಡಿಸಿದ್ದಾರೆ. ಅತ್ತ ಕಾಂಗ್ರೆಸ್ ಅಧ್ಯಕ್ಷ ಖರ್ಗೆ ಅವರು ನಾಯ್ಡು ಹಾಗೂ ನಿತೀಶ್‌ರನ್ನು ಸಂಪರ್ಕಿಸಲು ಯತ್ನಿಸಿದ್ದಾರೆ.
ಸಂಖ್ಯೆಗಳ ಆಟ ಹೀಗಿದೆ
ಇಂಡಿಯಾ ಮಿತ್ರಪಕ್ಷಗಳು ಒಟ್ಟಾಗಿ 233 ಸ್ಥಾನಗಳನ್ನು ಗೆದ್ದಿವೆ. ಇದು ಬಹುಮತಕ್ಕೆ 39 ಸ್ಥಾನ ಕಡಿಮೆ ಬರುತ್ತದೆ. ಬಿಜೆಪಿ ನೇತೃತ್ವದ ಎನ್‌ಡಿಎ 291 ಸ್ಥಾನ ಗೆದ್ದಿದ್ದು, ಇದು ಬಹುಮತಕ್ಕಿಂತ 19 ಹೆಚ್ಚು ಇದೆ. ಬಿಜೆಪಿ ತನ್ನ ಸ್ವಂತ ಬಲದಿಂದ 240 ಸ್ಥಾನ ಗಳಿಸಿದೆ. ಮ್ಯಾಜಿಕ್ ಫಿಗರ್‌ಗಿಂತ 32 ಕಡಿಮೆ. ಯಾವುದೇ ಮೈತ್ರಿಯಲ್ಲಿ ಇಲ್ಲದ ಸಂಸದರಲ್ಲಿ 4 ವೈಎಸ್‌ಆರ್‌ಸಿಪಿ ಮತ್ತು ಪಕ್ಷೇತರರು ಇದ್ದಾರೆ. ಆದ್ದರಿಂದ, ಇಂಡಿ ಬಣವು ಅಧಿಕಾರವನ್ನು ಪಡೆಯಲು ಬಯಸಿದರೆ ಅವರು ಜೆಡಿಯು, ಟಿಡಿಪಿ ಮತ್ತು ಕೆಲವು ಸ್ವತಂತ್ರರನ್ನು ಒಟ್ಟುಗೂಡಿಸಲೇಬೇಕು. ಮತ್ತೊಂದೆಡೆ, ಬಿಜೆಪಿಯು ಅಧಿಕಾರದಲ್ಲಿ ಉಳಿಯಬೇಕಾದರೆ ಇವರನ್ನು ಎಷ್ಟು ವೆಚ್ಚವಾದರೂ ಉಳಿಸಿಕೊಳ್ಳಬೇಕು.
ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರು ನಿನ್ನೆ ಸಂಜೆ ಪಕ್ಷದ ಪತ್ರಿಕಾಗೋಷ್ಠಿಯಲ್ಲಿ ಹೊಸ ಪಾಲುದಾರರ ಕುರಿತು ಮಾತನಾಡುವಾಗ ಕೆಲವು ಸುಳಿವನ್ನು ನೀಡಿದರು. “ನಾವು ನಮ್ಮ ಮೈತ್ರಿ ಪಾಲುದಾರರೊಂದಿಗೆ ಮಾತನಾಡಲಿದ್ದೇವೆ ಮತ್ತು ನಮ್ಮೊಂದಿಗೆ ಸೇರಬಹುದಾದ ಹೊಸ ಪಾಲುದಾರರೊಂದಿಗೆ ನಾವು ಹೇಗೆ ಒಟ್ಟಾಗಿ ಕೆಲಸ ಮಾಡಬಹುದು ಮತ್ತು ಬಹುಮತವನ್ನು ಪಡೆಯಬಹುದು ಎಂಬುದರ ಕುರಿತು ಪರಿಶೀಲಿಸಲಿದ್ದೇವೆ. ನಾನು ಈಗ ನಮ್ಮ ಎಲ್ಲಾ ತಂತ್ರಗಳನ್ನು ಬಹಿರಂಗಪಡಿಸಿದರೆ, ಪ್ರಧಾನಿ ನರೇಂದ್ರ ಮೋದಿ ಎಚ್ಚರಿಕೆ ವಹಿಸುತ್ತಾರೆ” ಎಂದರು.
ಜಿಗಿತಶೂರ ನಿತೀಶ್
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಎನ್‌ಡಿಎಗೆ ಜಿಗಿದದ್ದು ಇತ್ತೀಚೆಗೆ. ಅವರು ಇದಕ್ಕೂ ಹಿಂದೆ ಅವರು ಯುಪಿಎ ಜತೆಗಿದ್ದರು. ಆದರೆ ಪ್ರತಿ ಅವಧಿಯಲ್ಲಿಯೂ ಅವರು ಬಣ ಬದಲಿಸುವುದಕ್ಕೇ ಕುಖ್ಯಾತರಾಗಿದ್ದಾರೆ. ಕೆಲವೇ ತಿಂಗಳ ಹಿಂದೆ ಇಂಡಿ ಒಕ್ಕೂಟದ ಅನೇಕರು ನಿತೀಶ್ ರಾಜಕೀಯ ಮುಗಿಯಿತು ಎಂದಿದ್ದರು. ಅದು ಸಂಭವಿಸಿಲ್ಲ. ಬಿಹಾರದಲ್ಲಿ ಎನ್‌ಡಿಎಯನ್ನು ಮುನ್ನಡೆಸಿದ್ದ ನಿತೀಶ್ ಈ ಬಾರಿ ಹೆಚ್ಚಿನ ಸ್ಥಾನಗಳನ್ನು ಬಿಜೆಪಿಗೆ ಬಿಟ್ಟುಕೊಟ್ಟು ಕಡಿಮೆ ಸ್ಥಾನಗಳಲ್ಲಿ ಸಮಾಧಾನ ಮಾಡಿಕೊಳ್ಳಬೇಕಾಗಿ ಬಂದಿತ್ತು. ಇದೀಗ ಜೆಡಿಯು ಮುಖ್ಯಸ್ಥರು ಮೇಲುಗೈ ಸಾಧಿಸಿದ್ದಾರೆ. ಅವರ ಜಿಗಿತದ ಇತಿಹಾಸ ಬಿಜೆಪಿ ಆತಂಕಪಡಬೇಕಾದ ವಿಷಯವೇ.
ನಾಯ್ಡು ಪುನರಾಗಮನ
2019ರಲ್ಲಿ ಮೂರು ಸ್ಥಾನಗಳನ್ನು ಗೆದ್ದ ನಾಯ್ಡು ಅವರದ್ದು ಈ ಬಾರಿ ಭರ್ಜರಿ ಪುನರಾಗಮನ. ಲೋಕಸಭೆಯಲ್ಲಿ 16 ಸ್ಥಾನ ಗೆಲ್ಲುವುದರ ಜೊತೆಗೆ ಅವರು ವಿಧಾನಸಭೆಯನ್ನೂ ತನ್ನದಾಗಿಸಿಕೊಂಡಿದ್ದಾರೆ. ಟಿಡಿಪಿಯ ಹೆಗಲ ಮೇಲೆ ಸವಾರಿ ಮಾಡುತ್ತಾ ಬಿಜೆಪಿ ಕೂಡ ತನಗೆ ಅಸ್ತಿತ್ವವೇ ಇಲ್ಲದ ರಾಜ್ಯದಲ್ಲಿ ಮೂರು ಕಡೆ ಗೆಲುವು ಸಾಧಿಸಿದೆ. 1990ರಲ್ಲಿ ಸಮ್ಮಿಶ್ರ ಯುಗದಲ್ಲಿ ಪ್ರಧಾನ ಮಂತ್ರಿಯಾಗಿ ಎಚ್.ಡಿ ದೇವೇಗೌಡ ಮತ್ತು ಐ.ಕೆ ಗುಜ್ರಾಲ್ ಅವರನ್ನು ಬೆಂಬಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ವ್ಯಕ್ತಿಯಾಗಿ ನಾಯ್ಡು ಅವರು ರಾಜಕೀಯ ಬಣಗಳಲ್ಲೆಲ್ಲ ಸ್ನೇಹಿತರನ್ನು ಹೊಂದಿದ್ದಾರೆ. ಅವರ ಪುತ್ರ ನಾರಾ ಲೋಕೇಶ್ ಸೇರಿದಂತೆ ಟಿಡಿಪಿಯ ಹಿರಿಯ ನಾಯಕರು ತಾವು ಎನ್‌ಡಿಎಯಲ್ಲೇ ಉಳಿಯುವುದಾಗಿ ಹೇಳಿದ್ದರೂ, ಅಂತಿಮ ನಿಲುವನ್ನು ಪಕ್ಷದ ಮುಖ್ಯಸ್ಥ ನಾಯ್ಡು ತೆಗೆದುಕೊಳ್ಳಬೇಕಿದೆ.
ಟಿಡಿಪಿ ಹಾಗೂ ಜೆಡಿಯುಗಳು ಎನ್‌ಡಿಎಯಿಂದ ಇಂಡಿ ಬಣದ ಕಡೆ ಜಿಗಿದರೆ ಮೋದಿ ಪಿಎಂ ಆಗುವುದು ಸುಲಭವಲ್ಲ. ಆಗ ಅವರು ಏಕಾಏಕಿ 28 ಸ್ಥಾನಗಳನ್ನು ಕಳೆದುಕೊಳ್ಳುತ್ತಾರೆ. ಅವರ ಸ್ಥಾನಬಲ 262 ಸ್ಥಾನಗಳಿಗೆ ಇಳಿಯುತ್ತದೆ. ಆಗ ಎನ್‌ಡಿಎ ಬಹುಮತದ 272 ಸ್ಥಾನಬಲ ಪಡೆಯಲು ಕನಿಷ್ಠ 10 ಮಂದಿ ಸ್ವತಂತ್ರರನ್ನೇ ಅವಲಂಬಿಸಬೇಕಾಗುತ್ತದೆ. ಇಂಡಿ ಒಕ್ಕೂಟದಿಂದಲೂ ಕೆಲವರನ್ನು ಸೆಳೆಯಬೇಕಾಗಬಹುದು. ಭಾರಿ ಖಜಾನೆ ಹೊಂದಿರುವ ಹಾಗೂ ಆಪರೇಶನ್ ಕಮಲದ ಅನುಭವ ಹೊಂದಿರುವ ಬಿಜೆಪಿಗೆ ಇದು ಕಷ್ಟವಲ್ಲವಾದರೂ, ಸದಾ ಕಿರುಕುಳ ಕೊಡುವ ಇವರನ್ನು ಇಟ್ಟುಕೊಂಡು ಆಡಳಿತ ನಡೆಸುವುದು ಕಷ್ಟವೇ.
ಈಗಾಗಲೇ ಜೆಡಿಯುವಿನ ನಿತೀಶ್ ಕುಮಾರ್‌ಗೆ ಕಾಂಗ್ರೆಸ್ ರಾಷ್ಟ್ರದ ಉಪಪ್ರಧಾನ ಮಂತ್ರಿ ಮಾಡುವ ಆಫರ್ ಕೊಟ್ಟಿದೆ ಎನ್ನಲಾಗಿದೆ. ನಿತೀಶ್ ಕುಮಾರ್ ಅವರು ಇಂಡಿ ಬಣದ ಮುಖಂಡರಿಗೂ ಆಪ್ತರು. ಅತ್ತ ಚಂದ್ರಬಾಬು ನಾಯ್ಡುವಿಗೂ ಕಾಂಗ್ರೆಸ್ ಗಾಳ ಹಾಕಿದೆ. ಆದರೆ ಕೇವಲ ಈಗಿರುವ 236 ಸೀಟು ಇಟ್ಟುಕೊಂಡು ಇಂಡಿ ಬಣ ಸರ್ಕಾರ ರಚಿಸುವುದು ಅಸಾಧ್ಯ. ಟಿಡಿಪಿ ಹಾಗೂ ಜೆಡಿಯು ಸ್ಥಾನಗಳು ಸೇರಿದರೂ 264 ಸೀಟುಗಳಾಗುತ್ತವೆ. ಮತ್ತೂ 8 ಸಂಸದರನ್ನು ಕಲೆಹಾಕಬೇಕು. ಆದರೆ ಆಯ್ಕೆ ಮುಂದಿಟ್ಟರೆ ಸ್ವತಂತ್ರರು ಎನ್‌ಡಿಎ ಜೊತೆಗೆ ಹೋಗಬಹುದೇ ಹೊರತು ಇಂಡಿ ಜೊತೆಗೆ ಹೋಗುವುದು ಕಷ್ಟ.
ಇದನ್ನೂ ಓದಿ: Election Results 2024: ಸುದೀರ್ಘ ಅವಧಿಗೆ ಪ್ರಧಾನಿ ಆಗ್ತಾರಾ ಮೋದಿ?; ನೆಹರೂ, ಇಂದಿರಾ ಸಾಲಿಗೆ ಸೇರೋದು ಪಕ್ಕಾನಾ?