Site icon Vistara News

Fathers Day 2024: ʼಅಪ್ಪʼನೆಂದರೆ ಆಕಾಶ… ಎನ್ನುವವರು ಈ ಭಾನುವಾರ ತಪ್ಪದೇ ವಿಶ್‌ ಮಾಡಿ!

Fathers Day 2024

ಬೆಂಗಳೂರು: ತಂದೆ – ತಾಯಿ ಪ್ರತಿಯೊಬ್ಬರ ಜೀವನದಲ್ಲಿ ಬಹಳ ಅಮೂಲ್ಯವಾದವರು. ಅವರಲ್ಲಿ ನಾವು ಯಾರನ್ನೇ ಕಳೆದುಕೊಂಡರೂ ಆಘಾತದ ಸಿಡಿಲು ಬಡಿಯುವುದಂತೂ ಖಂಡಿತ. ಹಾಗಾಗಿ ತಂದೆ ತಾಯಿಯ ಋಣ, ಪ್ರೀತಿ, ಮಮತೆ ಯಾವತ್ತೂ ಮರೆಯಲಾಗದು. ಈಗೀಗ ಎಲ್ಲದಕ್ಕೂ ಒಂದೊಂದು ದಿನವಿಟ್ಟು ಅದನ್ನು ಆಚರಿಸುವ ಹುಕಿಗೆ ಬಿದ್ದಿದ್ದೇವೆ. ಫಾದರ್ಸ್‌ ಡೇ (Fathers Day 2024), ಒಡಹುಟ್ಟಿದವರ ದಿನ, ಸ್ನೇಹಿತರ ದಿನ, ತಾಯಂದಿರ ದಿನವೆಂದು ಆಚರಿಸುತ್ತೇವೆ. ಮದರ್ಸ್ ಡೇ(Mothers Day)ಯನ್ನು ಪ್ರತಿವರ್ಷ ಮೇ ತಿಂಗಳ 2ನೇ ಭಾನುವಾರದಂದು ಆಚರಿಸಲಾಗುತ್ತದೆ. ಆ ದಿನ ಎಲ್ಲರೂ ತಮ್ಮ ತಾಯಿಗೆ ವಿಶ್ ಮಾಡಿ ಉಡುಗೊರೆಯನ್ನು ನೀಡುತ್ತಾರೆ. ಅದೇ ರೀತಿ ತಂದೆಯ ದಿನವನ್ನು ಆಚರಿಸಲು ಒಂದು ದಿನವನ್ನು ಮೀಸಲಿಡಲಾಗಿದೆ. ಅದು ಯಾವಾಗ ಎಂಬುದರ ಮಾಹಿತಿ ಇಲ್ಲಿದೆ.

ಅಪ್ಪ…ಈ ಹೆಸರೇ ಚೆಂದ. ಅಪ್ಪನೆಂದರೆ ಗೌರವ, ಭಯಮಿಶ್ರಿತ ಪ್ರೀತಿ ಎಲ್ಲರಿಗೂ ಇರುತ್ತದೆ. ಆದರೆ ಈಗ ಅಪ್ಪ ಕೂಡ ಮೊದಲಿನ ಹಾಗೇ ಇಲ್ಲ. ಹಿಂದಿನ ಕಾಲದಲ್ಲಿ ಅಪ್ಪನ ಜೊತೆ ಮಕ್ಕಳಿಗೆ ಅಷ್ಟು ಸಲುಗೆ ಇರಲಿಲ್ಲ. ಅಮ್ಮನ ಹತ್ತಿರ ಹೇಳಿದ ಹಾಗೇ ಅಪ್ಪನ ಬಳಿ ಎಲ್ಲಾ ವಿಷಯವನ್ನೂ ಹೇಳಿಕೊಳ್ಳುವುದಕ್ಕೆ ಆಗುತ್ತಿರಲಿಲ್ಲ. ಆದರೆ ಈಗ ಹಾಗಲ್ಲ. ಹೆಣ್ಣುಮಕ್ಕಳಿಗೆ ಅಮ್ಮನಿಗಿಂತ ಅಪ್ಪನೇ ಈ ಬೆಸ್ಟ್‌ ಫ್ರೆಂಡ್‌ ಎನ್ನಬಹುದು. ನೋವನ್ನು ತೋಡಿಕೊಳ್ಳಲು ಒಂದು ಭುಜ ಸಿಗುತ್ತೆಂದರೆ ಅದು ಅಪ್ಪನದಾಗಿರುತ್ತದೆ. ಸಂಸಾರದ ಜವಬ್ದಾರಿಯನ್ನು ಹೊರುತ್ತಾ, ನೊಂದ ಮನಸ್ಸಿಗೆ ಸಾಂತ್ವನ ಮಕ್ಕಳನ್ನು ಮುದ್ದಿಸುವ ಒಂದು ಜೀವವೆಂದರೆ ಅದು ಅಪ್ಪ. ಮುದ್ದಿನ ಅಪ್ಪನಿಗೆ ವಿಶ್ ಮಾಡಲು ಜೂನ್ ಮೂರನೇ ಭಾನುವಾರವನ್ನು ಆಯ್ಕೆ ಮಾಡಲಾಗಿದೆ. ಈ ದಿನ ಎಲ್ಲರೂ ನಿಮ್ಮ ಪ್ರೀತಿಯ ಅಪ್ಪನಿಗೆ ವಿಶ್‌ ಮಾಡಿದರೆ ಅದಕ್ಕಿಂತ ದೊಡ್ಡ ಉಡುಗೊರೆ ಅವರಿಗೆ ಇನ್ನೊಂದಿರಲಿಕ್ಕಿಲ್ಲ!

ಈ ವರ್ಷ ಫಾದರ್ಸ್ ಡೇ ಜೂನ್ 16ರ ಭಾನುವಾರದಂದು ಬಂದಿದೆ. ಹಾಗಾಗಿ ಈ ದಿನ ನಿಮಗೆ ರಜಾ ಇರುವ ಕಾರಣ ನಿಮ್ಮ ತಂದೆಯನ್ನು ಖುಷಿ ಪಡಿಸಲು ಅವರ ಜೊತೆ ಸಣ್ಣದೊಂದು ವಾಕಿಂಗ್ ಹೋಗಿ, ಅಥವಾ ಅವರ ಕೆಲಸದಲ್ಲಿ ಸಹಾಯ ಮಾಡಿ, ಅವರಿಗೆ ಇಷ್ಟವಾದುದನ್ನು ಕೊಡಿಸಿ. ಇದರಿಂದ ಆ ತಂದೆಯ ಮನಸ್ಸು ತುಂಬಾ ಖುಷಿ ಪಡುತ್ತದೆ.. ಕಳೆದ ವರ್ಷ ಫಾದರ್ಸ್ ಡೇಯನ್ನು ಜೂನ್ 18ರಂದು ಆಚರಿಸಲಾಗಿತ್ತು.

ಫಾದರ್ಸ್ ಡೇ ಆಚರಣೆ ಹಿಂದಿರುವ ಕಾರಣವೇನು?

ಫಾದರ್ಸ್ ಡೇಯನ್ನು 1900ರ ದಶಕದಲ್ಲಿ ಆಚರಿಸಲು ಆರಂಭವಾಯಿತಂತೆ. ಸೋನೋರಾ ಸ್ಮಾರ್ಟ್ ಡಾಡ್ ಎಂಬ ಮಹಿಳೆಯು ಹುಟ್ಟಿದಾಕ್ಷಣ ತನ್ನ ತಾಯಿಯನ್ನು ಕಳೆದುಕೊಂಡಳಂತೆ. ಆಕೆ ಮತ್ತು ಆಕೆಯ ಒಡಹುಟ್ಟಿದವರು ತಂದೆಯ ಆರೈಕೆಯಲ್ಲಿ ಬೆಳೆದರಂತೆ. ಮಕ್ಕಳ ಜೀವನಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡಿ ಮಕ್ಕಳಿಗಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟ ತನ್ನ ತಂದೆಗೆ ಕೃತಜ್ಞತೆ ಹೇಳಲು ಅವಳು ಒಂದು ದಿನವನ್ನು ಗೊತ್ತುಪಡಿಸಿದಳು. ಅದರಂತೆ ಆ ವರ್ಷ ಅವಳು ಜೂನ್ 19ರಂದು ಮೊದಲ ಬಾರಿಗೆ ಫಾದರ್ಸ್ ಡೇಯನ್ನು ಆಚರಿಸಿದಳಂತೆ. ಯಾಕೆಂದರೆ ಅದು ಆಕೆಯ ತಂದೆ ಹುಟ್ಟಿದ ತಿಂಗಳಾಗಿತ್ತಂತೆ. ಹಾಗಾಗಿ ಆ ತಿಂಗಳಿನಂದು ನಾವು ಈಗಲೂ ಫಾದರ್ಸ್ ಡೇಯನ್ನು ಆಚರಿಸುತ್ತೇವೆ.

ಅಮೆರಿಕದಲ್ಲಿ ಫಾದರ್ಸ್ ಡೇಯನ್ನು ಆಚರಿಸಲು ಗುಲಾಬಿ ಹೂವನ್ನು ಸಂಕೇತವಾಗಿಟ್ಟುಕೊಳ್ಳುತ್ತಾರಂತೆ. ಅದರಂತೆ ಬಣ್ಣಬಣ್ಣದ ಗುಲಾಬಿ ಹೂ ಜೀವಂತ ತಂದೆಯನ್ನು ಪ್ರತಿನಿಧಿಸಿದರೆ, ಬಿಳಿ ಬಣ್ಣದ ಗುಲಾಬಿ ಮರಣ ಹೊಂದಿದ ತಂದೆಯ ಸಂಕೇತವಂತೆ. ಅಲ್ಲದೇ 1914ರಲ್ಲಿ ಮದರ್ಸ್ ಡೇಯನ್ನು ರಜಾದಿನವೆಂದು ಫೋಷಿಸಿದ ನಂತರ ಅಧ್ಯಕ್ಷ ರಿಚರ್ಡ್ ನಿಕ್ಸನ್ ಅವರು 1972ರಲ್ಲಿ ತಂದೆಯ ದಿನವನ್ನು ರಜಾದಿನವೆಂದು ಅಧಿಕೃತವಾಗಿ ಘೋಷಣೆ ಮಾಡಿದ್ದರಂತೆ.

ಇದನ್ನೂ ಓದಿ:Viral News: 80ರ ಅಜ್ಜನನ್ನು ಪ್ರೀತಿಸಿ ಮದುವೆಯಾದ 23ರ ಸುಂದರಿ! ಆಕೆ ಕೊಟ್ಟ ಕಾರಣ ಮಜವಾಗಿದೆ!

ಭಾರತದಲ್ಲೂ ಇತ್ತೀಚೆಗೆ ತಂದೆಯ ದಿನವನ್ನು ಮಕ್ಕಳು ವಿಶಿಷ್ಟವಾಗಿ ಆಚರಿಸುತ್ತಾರೆ. ಕೇಕ್‌ ಕತ್ತರಿಸುತ್ತಾರೆ. ಕಾರು ಇತ್ಯಾದಿ ಬೆಲೆ ಬಾಳುವ ವಸ್ತುಗಳನ್ನು ತಂದೆಗೆ ಉಡುಗೊರೆಯಾಗಿ ನೀಡುವವರೂ ಇದ್ದಾರೆ. ವಿಭಿನ್ನ ವಿನ್ಯಾಸ ಡಿಜಿಟಲ್‌ ಶುಭಾಶಯ ಸಂದೇಶಗಳನ್ನು ಕಳುಹಿಸುತ್ತಾರೆ. ತಂದೆಯ ದಿನದ ಶುಭಾಶಯ…

Exit mobile version