ಮಂಡ್ಯ: 2023ರ ಡಿಸೆಂಬರ್ ತಿಂಗಳಲ್ಲಿ ಹೆಣ್ಣು ಭ್ರೂಣ ಹತ್ಯೆ ಪ್ರಕರಣ (Female Foeticide) ರಾಜ್ಯಾದ್ಯಂತ ಸದ್ದು ಮಾಡಿತ್ತು. ಆದರೆ, ದುಷ್ಕೃತ್ಯಗಳಿಗೆ ಕೇಂದ್ರ ತಾಣವಾಗಿದ್ದ ಮಂಡ್ಯದಲ್ಲಿ ಇನ್ನೂ ಈ ದಂಧೆ ನಿಂತಂತೆ ಕಾಣುತ್ತಿಲ್ಲ. ಪಾಂಡವಪುರದ ಹೆಲ್ತ್ ಕ್ವಾರ್ಟರ್ಸ್‌ನಲ್ಲಿ ಹೆಣ್ಣು ಭ್ರೂಣ ಹತ್ಯೆ ಮಾಡುತ್ತಿದ್ದಾಗಲೇ ಅಧಿಕಾರಿಗಳು ದಾಳಿ ನಡೆಸಿ, ಮೂವರನ್ನು ಬಂಧಿಸಿರುವ ಘಟನೆ ನಡೆದಿದೆ.
ಖಚಿತ ಮಾಹಿತಿ ಮೇರೆಗೆ ಪಾಂಡವಪುರದ ಹೆಲ್ತ್ ಕ್ವಾರ್ಟರ್ಸ್ ಮೇಲೆ ಭಾನುವಾರ ತಡರಾತ್ರಿ ಮಂಡ್ಯ ಡಿಎಚ್‌ಒ ಮೋಹನ್ ನೇತೃತ್ವದಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದರು. ಆ ವೇಳೆಗೆ ಗರ್ಭಪಾತ ಮಾಡಿಸಲು ಗರ್ಭಿಣಿಗೆ ಔಷಧ ನೀಡಲಾಗಿತ್ತು, ಇದರಿಂದ ವೈದ್ಯರು ಎಷ್ಟೇ ಪ್ರಯತ್ನಿಸಿದರೂ ಮಗುವನ್ನು ಉಳಿಸಲು ಸಾಧ್ಯವಾಗಿಲ್ಲ. ಮೈಸೂರು ಮೂಲದ ಮಹಿಳೆಗೆ ಈಗಾಗಲೇ 2 ಹೆಣ್ಣು ಮಗು ಜನಿಸಿತ್ತು. 3ನೇ ಮಗು ಹೆಣ್ಣು ಮಗು ಎಂದು ತಿಳಿದು ಗರ್ಭಪಾತ ಮಾಡಿಸಿಕೊಳ್ಳಲು ಪಾಂಡವಪುರಕ್ಕೆ ಆಗಮಿಸಿದ್ದರು. ಇದೀಗ ನಾಲ್ಕು ತಿಂಗಳ ಹೆಣ್ಣು ಭ್ರೂಣ ಹತ್ಯೆ ಮಾಡಲಾಗಿದೆ.
ಗರ್ಭಪಾತ ಮಾಡಿಸಿದ ಆನಂದ್ ಮತ್ತು ಅಶ್ವಿನಿ ದಂಪತಿ ಸೇರಿ ಮೂವರನ್ನು ಬಂಧಿಸಲಾಗಿದೆ. ಪಾಂಡವಪುರದ ಸಾರ್ವಜನಿಕ ಆಸ್ಪತ್ರೆಯಲ್ಲಿ ದಂಪತಿ ಹೊರಗುತ್ತಿಗೆ ನೌಕರರಾಗಿದ್ದಾರೆ. ಅಶ್ವಿನಿ ಡಿ ದರ್ಜೆ ನೌಕರೆಯಾಗಿದ್ದರೆ, ಆನಂದ ಆಂಬ್ಯುಲೆನ್ಸ್ ಚಾಲಕನಾಗಿದ್ದ. ತಾಲುಕು ಆರೋಗ್ಯ ಅಧಿಕಾರಿಗಳ ಕಚೇರಿ ಬಳಿಯ ಮನೆಯಲ್ಲಿ ಕೃತ್ಯ ನಡೆಸುತ್ತಿದ್ದಾಗ ದಂಪತಿಗಳು ಸಿಕ್ಕಿಬಿದ್ದಿದ್ದಾರೆ. ಆರೋಗ್ಯ ಇಲಾಖೆಯಿಂದ ನೀಡಿರುವ ವಸತಿ ಗೃಹದಲ್ಲಿ ಕಳೆದ 9 ವರ್ಷಗಳಿಂದ ದಂಪತಿ ವಾಸವಿದ್ದರು.
ಇದನ್ನೂ ಓದಿ | Marriage Cancel : ಸಿಹಿ ತಿಂಡಿ ಕಿರಿಕ್‌ಗೆ ಮದುವೆ ಮುರಿದ ವರ; ಹೋಗೊಲೋ ಎಂದಳು ವಧು!
ಪ್ರಕರಣದ ಹಿನ್ನೆಲೆಯಲ್ಲಿ ಪಾಂಡವಪುರಕ್ಕೆ ಮಂಡ್ಯ ಡಿಸಿ ಕುಮಾರ್, ಎಸ್.ಪಿ. ಯತೀಶ್ ಅವರು ಸೋಮವಾರ ಬೆಳಗ್ಗೆ ಭೇಟಿ ನೀಡಿ ಭ್ರೂಣ ಹತ್ಯೆ ನಡೆಯುತ್ತಿದ್ದ ಮನೆ ಪರಿಶೀಲನೆ ನಡೆಸಿದ್ದಾರೆ. ಆರೋಗ್ಯ ಇಲಾಖೆಯಿಂದ ನೀಡಲಾಗಿರುವ ವಸತಿ ಗೃಹವನ್ನೇ ಆಸ್ಪತ್ರೆ ಸಿಬ್ಬಂದಿಯಾದ ದಂಪತಿ, ದುಷ್ಕೃತ್ಯಕ್ಕೆ ಬಳಸಿಕೊಂಡಿದ್ದಾರೆ.
ಭ್ರೂಣಹತ್ಯೆ ದಂಧೆಯನ್ನು ಸಿಐಡಿಗೆ ಒಪ್ಪಿಸಿದ್ದ ರಾಜ್ಯ ಸರ್ಕಾರ
ರಾಜ್ಯದಲ್ಲಿ 2023ರ ಡಿಸೆಂಬರ್‌ನಲ್ಲಿ ಬೆಳಕಿಗೆ ಬಂದಿದ್ದ ಹೆಣ್ಣ ಭ್ರೂಣ ಹತ್ಯೆ ಪ್ರಕರಣವನ್ನು ಸಿಐಡಿ ತನಿಖೆಗೆ (CID Investigation) ರಾಜ್ಯ ಸರ್ಕಾರ ಒಪ್ಪಿಸಿತ್ತು. ರಾಮನಗರ ಮಂಡ್ಯ ಮತ್ತು ಮೈಸೂರು ಜಿಲ್ಲೆ ಸೇರಿದಂತೆ ರಾಜ್ಯದ ಹಲವು ಕಡೆ ಭ್ರೂಣ ಹತ್ಯೆ ಜಾಲ ಸಕ್ರಿಯವಾಗಿತ್ತು. ಬೆಂಗಳೂರಿನ ಬೈಯಪ್ಪನಹಳ್ಳಿಯ ಪೊಲೀಸರು ಪ್ರಕರಣ ದಾಖಲಿಸಿ 9ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿದ್ದರು.
ಆರೋಪಿಗಳು ಮೂರು ವರ್ಷಗಳ ಅವಧಿಯಲ್ಲಿ 900ಕ್ಕೂ ಅಧಿಕ ಹೆಣ್ಣು ಭ್ರೂಣಗಳ ಹತ್ಯೆ ನಡೆಸಿರುವುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿತ್ತು. ಈ ಜಾಲ ಇನ್ನಷ್ಟು ಪ್ರದೇಶಗಳಲ್ಲಿ ವಿಸ್ತರಿಸಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಅದೇ ರೀತಿ ಪ್ರಕರಣವು ರಾಜ್ಯದಲ್ಲಿ ದೊಡ್ಡ ಮಟ್ಟದ ಸಂಚಲನ ಮೂಡಿಸಿತ್ತು. ಆರೋಗ್ಯ ಇಲಾಖೆಯ ಅಧಿಕಾರಿಗಳ ಕಣ್ತಪ್ಪಿಸಿ ನಡೆಯುತ್ತಿದ್ದ ಜಾಲವನ್ನು ಮಟ್ಟ ಹಾಕುವಲ್ಲಿ ವ್ಯವಸ್ಥೆ ವೈಫಲ್ಯವಾಗಿರುವುದು ಕೂಡ ಬಹಿರಂಗೊಂಡಿತ್ತು. ಹೀಗಾಗಿ ತಕ್ಷಣವೇ ಕ್ರಮ ಕೈಗೊಳ್ಳಲು ಮುಂದಾಗಿದ್ದ ರಾಜ್ಯ ಸರ್ಕಾರ ತನಿಖೆಯನ್ನು ಸಿಐಡಿ ತನಿಖೆಗೆ ಒಪ್ಪಿಸಿತ್ತು.