ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ (Renuka Swamy Murder) ಪ್ರಕರಣದಲ್ಲಿ ಪರಪ್ಪನ ಅಗ್ರಹಾರ (Parappana Agrahara) ಜೈಲಿನಲ್ಲಿರುವ ನಟ ದರ್ಶನ್ (Actor Darshan) ಅವರಿಗೆ ಜೈಲೂಟದಿಂದಾಗಿ ಫುಡ್ ಪಾಯಿಸನಿಂಗ್ ಹಾಗೂ ಅತಿಸಾರ ಆಗುತ್ತಿದೆ. ಮನೆಯೂಟ ತರಿಸಿಕೊಳ್ಳಲು ಅನುಮತಿ ನೀಡಬೇಕು ಎಂದು ದರ್ಶನ್ ಪರ ವಕೀಲರು ಹೈಕೋರ್ಟ್‌ಗೆ (High Court) ರಿಟ್ ಅರ್ಜಿ (Writ Petition) ಸಲ್ಲಿಸಿದ್ದಾರೆ.
ಮನೆ ಊಟದ ಜೊತೆಗೆ ಹಾಸಿಗೆ, ಪುಸ್ತಕ ತರಿಸಿಕೊಳ್ಳಲು ಕೂಡ ನಟ ದರ್ಶನ್ ಕೋರಿದ್ದಾರೆ. ದರ್ಶನ್ ಪರ ವಕೀಲರು ಸಲ್ಲಿಸಿರುವ ರಿಟ್ ಅರ್ಜಿ ವಿಸ್ತಾರ ನ್ಯೂಸ್‌ಗೆ ಲಭ್ಯವಾಗಿದೆ. ಬಟ್ಟೆ, ಚಮಚ (cutlery), ಮನೆಯಲ್ಲಿ ತಯಾರಿಸಿದ ಆಹಾರ, ಹಾಸಿಗೆ, ಪುಸ್ತಕ ಇವುಗಳನ್ನೆಲ್ಲಾ ಮನೆಯಿಂದ ಪಡೆಯಲು ಜೈಲು ಅಧಿಕಾರಿಗಳು ಅನುಮತಿಸಿಲ್ಲ. ಜೈಲಿನಲ್ಲಿ ನೀಡುತ್ತಿರುವ ಊಟ ದರ್ಶನ್‌ಗೆ ಜೀರ್ಣವಾಗುತ್ತಿಲ್ಲ. ಜೈಲಿನ ಊಟ ಸೇವಿಸಿದಾಗ ಅತಿಸಾರ ಆಗುತ್ತಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಜೈಲಿನ ಆಹಾರ ದರ್ಶನ್‌ಗೆ ಒಗ್ಗದೇ ಫುಡ್ ಪಾಯಿಸನಿಂಗ್ ಆಗುತ್ತಿದೆ. ಹೀಗೆಂದು ಜೈಲಿನ ವೈದ್ಯರೇ ಅಭಿಪ್ರಾಯ ನೀಡಿದ್ದಾರೆ. ಅತಿಸಾರದಿಂದಾಗಿ ದರ್ಶನ್ ತೂಕ ತುಂಬಾ ಕಡಿಮೆಯಾಗಿದೆ. ಹಲವು ಕೆಜಿಗಳಷ್ಟು ತೂಕವನ್ನು ದರ್ಶನ್ ಕಳೆದುಕೊಂಡಿದ್ದಾರೆ. ದರ್ಶನ್ ಜಾಮೀನಿಗಾಗಿ ವಕೀಲರು ಬೇಕಾದ ಸಾಕ್ಷಿಗಳನ್ನು ಸಂಗ್ರಹಿಸುತ್ತಿದ್ದಾರೆ. ಹೀಗಾಗಿ ಇನ್ನು ಕೆಲವಷ್ಟು ದಿನ ದರ್ಶನ್ ಜೈಲಿನಲ್ಲೆ ಇರಬೇಕಾದ ಪರಿಸ್ಥಿತಿ ಇದೆ. ಹೀಗಾಗಿ ಮನೆ ಊಟಕ್ಕೆ ಅನುಮತಿ ನೀಡುವಂತೆ ಜೈಲು ಅಧಿಕಾರಿಗಳ ಬಳಿ ಮನವಿ ಮಾಡಲಾಗಿದೆ ಎಂದಿದ್ದಾರೆ.
ಜೈಲು ಅಧಿಕಾರಿಗಳು ಮನೆ ಊಟ, ಹಾಸಿಗೆ ನೀಡಲು ಅವಕಾಶ ನೀಡದೆ ತಿರಸ್ಕರಿಸಿದ್ದಾರೆ. ಜೈಲು ಅಧಿಕಾರಿಗಳ ನಿರಾಕರಣೆ ಕಾನೂನುಬಾಹಿರ, ಅಮಾನವೀಯ. ಹೀಗೇ ಮುಂದುವರಿದರೆ ದರ್ಶನ್ ಮತ್ತಷ್ಟು ತೂಕ ಕಳೆದುಕೊಳ್ಳಬಹುದು. ಇದು ದರ್ಶನ್ ಅನಾರೋಗ್ಯಕ್ಕೂ ಕಾರಣವಾಗಬಹುದು. ಮನೆ ಊಟಕ್ಕೆ ಅನುಮತಿ ನೀಡಿದರೆ ಯಾರಿಗೂ ತೊಂದರೆಯಾಗಲ್ಲ. ಹೀಗಾಗಿ ಹೈಕೋರ್ಟ್ ಮುಂದೆ ಬಂದು ಮನವಿ ಮಾಡೋದು ಹೊರತು ಪಡಿಸಿ ಬೇರೆ ದಾರಿ ಇಲ್ಲ. ಇದರಿಂದ ಸರ್ಕಾರದ ಬೊಕ್ಕಸಕ್ಕೂ ಹೊರೆ ಕಡಿಮೆಯಾಗುತ್ತದೆ. ಹೀಗಾಗಿ ದರ್ಶನ್ ಕುಟುಂಬದವರಿಂದ ಮನೆ ಊಟ ಪಡೆಯಲು ಅನುಮತಿ ನೀಡಬೇಕೆಂದು ಮನವಿ ಸಲ್ಲಿಸಲಾಗಿದೆ.
ಕೊಲೆ ತನಿಖೆಯಲ್ಲಿ ಫಿಂಗರ್ ಪ್ರಿಂಟ್ ಮ್ಯಾಚ್
ಕೊಲೆ ಪ್ರಕರಣ ಸಂಬಂಧಿಸಿದಂತೆ ಪೊಲೀಸರ ತನಿಖೆ ಇನ್ನಷ್ಟು ಚುರುಕುಗೊಂಡಿದೆ. ರೇಣುಕಾಸ್ವಾಮಿ ಕೆಲಸಕ್ಕೆ ಸೇರಿದ್ದು ಯಾವಾಗ? ಕೆಲಸಕ್ಕೆ ಸೇರಲು ಕೊಟ್ಟ ದಾಖಲೆಗಳ ಬಗ್ಗೆ ಕಾಮಾಕ್ಷಿಪಾಳ್ಯ ಪೊಲೀಸರಿಂದ ವಿವರಗಳ ಸಂಗ್ರಹ ಆಗುತ್ತಿದೆ. ಕೆಲಸದ ಅವಧಿಯಲ್ಲೆ ರೇಣುಕಾಸ್ವಾಮಿಯನ್ನು ಆರೋಪಿಗಳು ಕಿಡ್ನಾಪ್ ಮಾಡಿದ್ದು ತನಿಖೆ ವೇಳೆ ತಿಳಿದು ಬಂದಿದೆ. ದರ್ಶನ್, ಪವಿತ್ರಾಗೌಡ ಸೇರಿ ಹತ್ತು ಜನರ ಫಿಂಗರ್ ಪ್ರಿಂಟ್ ಮ್ಯಾಚ್ ಆಗಿದೆ. ಎಫ್ ಎಸ್ ಎಲ್ ಪರೀಕ್ಷೆಯಲ್ಲಿ ಸ್ಪೋಟಕ ಮಾಹಿತಿ ಬಹಿರಂಗಗೊಂಡಿದೆ.
ಚಿತ್ರದುರ್ಗದ ಫಾರ್ಮಸಿಯಲ್ಲಿ ರೇಣುಕಾಸ್ವಾಮಿ ಕೆಲಸ ಮಾಡುತ್ತಿದ್ದ. ಈ ವೇಳೆ ಜೂನ್ 8 ರಂದು ಫಾರ್ಮಸಿಯಿಂದ ಹೊರಗಡೆ ಆರೋಪಿಗಳು ಕರೆಸಿಕೊಂಡು ಕಿಡ್ನಾಪ್ ಮಾಡಿದ್ದರು. ಫಾರ್ಮಸಿಯಲ್ಲಿ ಕೆಲಸಕ್ಕೆ ಸೇರಲು ಕೊಟ್ಟ ದಾಖಲೆಗಳ ಸಂಗ್ರಹ ಆಗಿದೆ. ಬೆಂಗಳೂರಿನಲ್ಲಿರುವ ಫಾರ್ಮಸಿ ಕೇಂದ್ರ ಕಚೇರಿಗೆ ಈ ಬಗ್ಗೆ ಪೊಲೀಸರು ಪತ್ರ ಬರೆದಿದ್ದಾರೆ. ನಗರದ ಸಿಂಗಸಂದ್ರದಲ್ಲಿ ಫಾರ್ಮಸಿ ಕಚೇರಿ ಇದೆ. ಈಗಾಗಲೇ ಮೇಲ್ ಮೂಲಕ ಮಾಹಿತಿ ರವಾನೆ ಆಗಿದೆ. ಇದರಲ್ಲಿ ರೇಣುಕಾಸ್ವಾಮಿ ವೈಯಕ್ತಿಕ ಮಾಹಿತಿ , ರೆಸೂಮ್ಯ್ ಹಾಗೂ ಹತ್ತನೇ ತರಗತಿ ಅಂಕಪಟ್ಟಿ ಹಾಗೂ ಕಂಪನಿ ನೀಡಿದ್ದ ನೇಮಕಾತಿ ಆದೇಶ ಪ್ರತಿ ಇದೆ. ಫಾರ್ಮಸಿ ಕಳುಹಿಸಿದ ದಾಖಲೆಗಳನ್ನ ಈಗಾಗಲೇ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.ರೇಣುಕಾಸ್ವಾಮಿ ಕೊಲೆಗೆ ಸಂಬಂಧಿಸಿದ ಪ್ರತಿ ವಿಚಾರದ ಬಗ್ಗೆಯೂ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ: Actor Darshan: ಪವಿತ್ರಾಗೌಡ ಮುನಿಸು ಶಮನ ಮಾಡೋದೇ ಚಾಲೆಂಜ್ ಆಗಿತ್ತು ದರ್ಶನ್‌ಗೆ!