Site icon Vistara News

Foreign Investment: ಜಪಾನ್‌, ದಕ್ಷಿಣ ಕೊರಿಯಾದಿಂದ ರಾಜ್ಯದಲ್ಲಿ ₹6,450 ಕೋಟಿ ಹೂಡಿಕೆ: ಎಂಬಿ ಪಾಟೀಲ್

mb patil foreign investment

ಬೆಂಗಳೂರು: ನಮ್ಮ ಇಲಾಖೆಯ ನಿಯೋಗ ಜಪಾನ್ (Japan) ಮತ್ತು ಸೌತ್ ಕೊರಿಯಾಗಳಲ್ಲಿ (South Korea) ಎರಡು ವಾರಗಳ ಕಾಲ ಪ್ರವಾಸ ಮಾಡಿದ್ದು, ಅಲ್ಲಿಂದ 6,450 ಕೋಟಿ ರೂ. ಮೊತ್ತದ ಬಂಡವಾಳ ಹೂಡಿಕೆಯ (Foreign Capital investment) ಬದ್ಧತೆ ಪಡೆದುಕೊಂಡಿದೆ ಎಂದು ಬೃಹತ್ ಮತ್ತು ಮಧ್ಯಮ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ ಪಾಟೀಲ (MB Patil) ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಸಚಿವರು ಸುದ್ದಿಗೋಷ್ಠಿ ನಡೆಸಿ ಈ ವಿಚಾರ ತಿಳಿಸಿದರು. ನಿಯೋಗದ ಭೇಟಿಯಲ್ಲಿ ಜಪಾನ್ ಮತ್ತು ದಕ್ಷಿಣ ಕೊರಿಯಾದ 6 ಪ್ರಮುಖ ಕಂಪನಿಗಳಿಂದ ಹೂಡಿಕೆ ಬದ್ಧತೆಯಾಗಿದೆ. ಕರ್ನಾಟಕದ ಆರ್ಥಿಕ ಪ್ರಗತಿ ಉತ್ತೇಜಿಸಲಿರುವ ಪ್ರಮುಖ ವಲಯಗಳಲ್ಲಿ ಗಮನಾರ್ಹ ಹೂಡಿಕೆಯಾಗಲಿದ್ದು, ಭವಿಷ್ಯದಲ್ಲಿ 25,000 ಕೋಟಿ ಮೊತ್ತದ ಬಂಡವಾಳ ಹೂಡಿಕೆ ಸಾಧ್ಯತೆಗಳು ಕಂಡುಬಂದಿವೆ ಎಂದು ಪಾಟೀಲ್‌ ತಿಳಿಸಿದ್ದಾರೆ.

ಈ ಬದ್ಧತೆ ಹಾಗೂ ಒಪ್ಪಂದಗಳ ಫಲವಾಗಿ ರಾಜ್ಯದಲ್ಲಿ 1,000 ಉದ್ಯೋಗ ಅವಕಾಶಗಳು (New Jobs) ಸೃಷ್ಟಿಯಾಗುವ ನಿರೀಕ್ಷೆಯಿದೆ. ಕರ್ನಾಟಕದ ನಿಯೋಗವು ಅಲ್ಲಿನ ಪ್ರಮುಖ ಬಹುರಾಷ್ಟ್ರೀಯ ಕಂಪನಿಗಳ (Multinational Companies) ಮುಖ್ಯಸ್ಥರನ್ನು ಭೇಟಿ ಮಾಡಿ ಮಾತುಕತೆ ನಡೆಸಿದೆ. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗಾಗಿ (ಎಸ್‌ಎಂಇ) ಬಂಡವಾಳ ಹೂಡಿಕೆ ರೋಡ್‌ ಷೋಗಳನ್ನು ನಡೆಸಿದ್ದೇವೆ. ತಯಾರಿಕಾ ವಲಯಕ್ಕೆ ರಾಜ್ಯದಲ್ಲಿ ಇರುವ ಉತ್ತೇಜನಕಾರಿ ಪೂರಕ ಸೌಲಭ್ಯಗಳ ಮಾಹಿತಿ ವಿನಿಮಯ ಮಾಡಿಕೊಂಡಿದೆ. 35 ಉದ್ಯಮಗಳ ಪ್ರಮುಖರನ್ನು ಭೇಟಿ ಮಾಡಿ ಮಾತುಕತೆ ನಡೆಸಿದೆ. ಮುಂದಿನ ವರ್ಷ ಬೆಂಗಳೂರಿನಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶ ಆಯೋಜನೆ ಮಾಡಲಾಗುತ್ತಿದ್ದು, ʼಇನ್ವೆಸ್ಟ್ ಕರ್ನಾಟಕ 2025’ರಲ್ಲಿ ಭಾಗವಹಿಸಲು ಟೋಕಿಯೊ ಮತ್ತು ಸೋಲ್‌ನಲ್ಲಿ ನಡೆದ ರೋಡ್‌ಷೋಗಳಲ್ಲಿ 200 ಕಂಪನಿಗಳಿಗೆ ಆಹ್ವಾನ ನೀಡಲಾಗಿದೆ ಎಂದು ಸಚಿವರು ವಿವರಿಸಿದರು.

ಜಪಾನ್‌ನಲ್ಲಿ ನಡೆದ ಸಭೆಗಳಲ್ಲಿ ರೆನೆಸಾಸ್ ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್, ಟೊಯೊಟಾ ಮೋಟರ್ ಕಾರ್ಪೊರೇಷನ್, ಯಮಹಾ ಮೋಟರ್ ಕಂಪನಿ, ಸುಮಿಟೊಮೊ ಹೆವಿ ಇಂಡಸ್ಟ್ರೀಸ್, ಪ್ಯಾನಾಸೋನಿಕ್ ಎನರ್ಜಿ, ನಿಡೆಕ್ ಕಾರ್ಪೊರೇಷನ್, ನಿಸಾನ್ ಮೋಟರ್ ಕಾರ್ಪೊರೇಷನ್, ಬ್ರದ‌ರ್ ಇಂಡಸ್ಟ್ರೀಸ್, ಶಿಮಾಡ್ಡು ಕಾರ್ಪೊರೇಷನ್, ಹಿಟಾಚಿ ಮತ್ತಿತರ ಕಂಪನಿಗಳನ್ನು ಸಂಪರ್ಕಿಸಲಾಗಿದೆ. ದಕ್ಷಿಣ ಕೊರಿಯಾದಲ್ಲಿ ವ್ಯಾಪಾರ, ಕೈಗಾರಿಕೆ ಮತ್ತು ಇಂಧನ ಸಚಿವಾಲಯದ ಉಪ ಮಂತ್ರಿ, ಕೊರಿಯಾದ ಜಿಯೊಂಗಿ ಪ್ರಾಂತ್ಯದ ವೈಸ್ ಗವರ್ನರ್ ಮತ್ತು ಸೋಲ್ ಮೆಟ್ರೊಪಾಲಿಟನ್ ಸರ್ಕಾರದಲ್ಲಿ ಆರ್ಥಿಕ ನೀತಿಯ ಉಪ ಮೇಯರ್ ಸೇರಿದಂತೆ ಸರ್ಕಾರಿ ಅಧಿಕಾರಿಗಳ ಜೊತೆಗೆ ಸಭೆಗಳನ್ನು ನಡೆಸಲಾಗಿದೆ ಎಂದು ಮಾಹಿತಿ ನೀಡಿದರು.

ವಿವಿಧ ಕಂಪನಿಗಳ ಒಪ್ಪಂದದ ವಿವರಗಳು:

1) ಒಸಾಕಾ ಗ್ಯಾನ್: ಜಪಾನಿನ ಪ್ರಮುಖ ಇಂಧನ ಕಂಪನಿಯಾಗಿರುವ ಒಸಾಕಾ ಗ್ಯಾಸ್, ಮುಂದಿನ 5 ವರ್ಷಗಳಲ್ಲಿ ಅನಿಲ ವಿತರಣಾ ಮೂಲಸೌಲಭ್ಯ ವಿಸ್ತರಿಸಲು ₹5000 ಕೋಟಿ (600 ದಶಲಕ್ಷ ಡಾಲರ್) ಮೊತ್ತದ ಬಂಡವಾಳ ಹೂಡಿಕೆ ಮಾಡಲು ಬದ್ಧತೆ ತೋರಿದೆ.

2) ಡಿಎನ್ ಸೊಲ್ಯೂಷನ್ಸ್: ಕೊರಿಯಾದ ಮಷಿನ್ ಟೂಲ್ಸ್ ಕಂಪನಿಯಾಗಿರುವ ಡಿಎನ್ ಸೊಲ್ಯೂಷನ್ಸ್, ಕೈಗಾರಿಕಾ ಯಂತ್ರೋಪಕರಣಗಳು ಮತ್ತು ಸ್ವಯಂಚಾಲಿತ ವ್ಯವಸ್ಥೆಗಳ ತಯಾರಿಕಾ ಘಟಕ ಸ್ಥಾಪಿಸಲು 1000 ಕೋಟಿ ಮೌಲ್ಯದ ಒಪ್ಪಂದಕ್ಕೆ ಸಹಿ ಹಾಕಿದೆ.

3) ಅವೊಯಮಾ ನೈಸಕುಶ : ವಾಹನ ಬಿಡಿಭಾಗಗಳನ್ನು ಪೂರೈಸುವ ಜಪಾನಿನ ಅವೊಯಮಾ ಸೈಸಕುಶ್, ತುಮಕೂರು ಬಳಿಯ ಜಪಾನ್ ಕೈಗಾರಿಕಾ ಟೌನ್‌ಶಿಪ್‌ನಲ್ಲಿ ತಯಾರಿಕಾ ಘಟಕ ಸ್ಥಾಪಿಸಲು ₹ 210 ಕೋಟಿ ಮೌಲ್ಯದ ಒಪ್ಪಂದಕ್ಕೆ ಸಹಿ ಹಾಕಿದೆ.

4) ಡೈಕಿ ಆ್ಯಕ್ಸಿಸ್, ಹೈವಿಷನ್ ಮತ್ತು ಇಎಂಎನ್‌ಐ ಕಂಪನಿ ಲಿಮಿಟೆಡ್ : ಬ್ಯಾಟರಿ ಸೆಲ್‌ಗಳ ಸಂಗ್ರಹ ಮತ್ತು ಪರೀಕ್ಷಾ ಕೇಂದ್ರ ಹಾಗೂ ಪರಿಸರ ಸಂರಕ್ಷಣೆ ಸಲಕರಣೆ ತಯಾರಿಸುವ ಘಟಕ ಸ್ಥಾಪಿಸಲು ಜಂಟಿಯಾಗಿ ₹ 210 ಮೊತ್ತದ ಬಂಡವಾಳ ಹೂಡಿಕೆ ಮಾಡುವ ಒಪ್ಪಂದಕ್ಕೆ ಸಹಿ ಹಾಕಿವೆ.

5) ಸುಮಿಟೊಮೊ ಹೆವಿ ಇಂಡಸ್ಟ್ರೀಸ್ (ಎಸ್‌ಎಚ್‌ಐ) ಬೆಂಗಳೂರಿನಲ್ಲಿ ತನ್ನ ಮುಖ್ಯ ಕಚೇರಿಯನ್ನು ತೆರೆಯಲು ಸಜ್ಜಾಗಿದ್ದು, 2024 ರ ಅಂತ್ಯಕ್ಕೆ ಉದ್ಘಾಟನೆ ನೆರವೇರಿಸಲು ಉದ್ದೇಶಿಸಿದೆ.

ಈ ತಕ್ಷಣದ ಹೂಡಿಕೆಗಳನ್ನು ಹೊರತುಪಡಿಸಿ, ವಾಹನ ತಯಾರಿಕೆ, ಎಲೆಕ್ಟ್ರಾನಿಕ್ಸ್ ಮತ್ತು ಇಂಧನ ಪರಿಹಾರ ವಲಯಗಳಲ್ಲಿ ₹ 25,000 ಕೋಟಿ ಮೊತ್ತದ ಬಂಡವಾಳ ಹೂಡಿಕೆ ಸಾಧ್ಯತೆಗಳನ್ನೂ ರಾಜ್ಯದ ನಿಯೋಗವು ಗುರುತಿಸಿದೆ. ಕರ್ನಾಟಕವು ಜಾಗತಿಕ ಹೂಡಿಕೆದಾರರ ಪಾಲಿಗೆ ಆಕರ್ಷಕ ತಾಣವಾಗಿರುವುದರ ಮಹತ್ವವನ್ನು ಇದು ಸೂಚಿಸುತ್ತದೆ ಎಂದಿದ್ದಾರೆ.

ಗ್ಲೋಬಲ್‌ ಸಿಟಿಗೆ ಇನ್ನೊಂದು ವಿಮಾನ ನಿಲ್ದಾಣ

ಬೆಂಗಳೂರು ಗ್ಲೋಬಲ್ ಸಿಟಿಯಾಗಿ ಬೆಳೆಯುತ್ತಿದೆ. ನವೋದ್ಯಮಗಳ ಕ್ಯಾಪಿಟಲ್ ಕೂಡ ಇದಾಗಿದೆ. ಕೆಂಪೇಗೌಡ ವಿಮಾನ ನಿಲ್ದಾಣ ದೇಶದ ಮೂರನೇ ಅತಿ ದಟ್ಟಣೆ ಹೊಂದಿರುವ ನಿಲ್ದಾಣ.
ವರ್ಷಕ್ಕೆ 5.2 ಕೋಟಿ ಪ್ರಯಾಣಿಕರು ಓಡಾಡುತ್ತಿದ್ದಾರೆ. ಕಾರ್ಗೋ ಕೆಪ್ಯಾಸಿಟಿ ೧೧ ಲಕ್ಷ ಟನ್ ತನಕ ಇದೆ. 2033ರ ತನಕ ವಿಮಾನ ನಿಲ್ದಾಣ ವಿಸ್ತರಣೆಗೆ ಅವಕಾಶ ಇಲ್ಲ. 2033ಕ್ಕೆ ಅವಧಿ ಮುಕ್ತಾಯ ಆಗುತ್ತದೆ. 150 ಕಿಮೀ ವ್ಯಾಪ್ತಿಯಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಅವಕಾಶ ಇಲ್ಲ ಎಂಬುದು ನಮ್ಮ ಒಪ್ಪಂದದಲ್ಲಿ ಇದೆ. 2035ರಲ್ಲಿ ನಮ್ಮ ಏರ್‌ಪೋರ್ಟ್‌ನಲ್ಲಿ ಪ್ರಯಾಣಿಕರ ಓಡಾಟ ಸಾಮರ್ಥ್ಯ ಪೂರ್ಣ ಪ್ರಮಾಣಕ್ಕೆ ತಲುಪುತ್ತದೆ. ಈಗಿನಿಂದಲೇ ತಯಾರಿ‌ ಮಾಡುವುದಕ್ಕೆ ಎಂಟು ವರ್ಷಗಳ ಕಾಲ ನಮಗೆ ಸಮಯ ಇದೆ ಎಂದು ಸಚಿವ ಎಂಬಿ ಪಾಟೀಲ್‌ ತಿಳಿಸಿದರು.

ಮೂರ್ನಾಲ್ಕು ಮಾನದಂಡಗಳನ್ನು, ಎರಡು ಪ್ರಮುಖ ವಿಚಾರಗಳನ್ನು ನಾವು ನೋಡಬೇಕಾಗಿದೆ. ಈಗಾಗಲೇ ಇರುವ ಕನೆಕ್ಟಿವಿಟಿ ಬಗ್ಗೆ ಕೂಡ ಗಮನ ಹರಿಸಬೇಕಿದೆ. ಪ್ರಯಾಣಿಕರ ಪ್ರಮಾಣ ಯಾವ ಕಡೆಯಿಂದ ಬರುತ್ತದೆ ಎಂಬುದನ್ನು ಕೂಡ ಗಮನ ಹರಿಸಬೇಕಿದೆ. ಈ ಎರಡು ಪ್ರಮುಖ ವಿಚಾರಗಳ ಬಗ್ಗೆ ಕೂಡ ತಜ್ಞರ ಅಭಿಪ್ರಾಯ ತೆಗೆದುಕೊಳ್ಳಬೇಕಿದೆ. ಹೊಸ ವಿಮಾನ ನಿಲ್ದಾಣಕ್ಕೆ ಐದಾರು ಜಾಗಗಳು ನಮ್ಮ ಗಮನದಲ್ಲಿವೆ. ಇನ್ನೂ ಯಾವುದೂ ನಿರ್ಧಾರ ಆಗಿಲ್ಲ. ಬಿಡದಿ ಆಗಬಹುದು, ಕನಕಪುರ ಆಗಬಹುದು, ದಾಬಸ್‌ಪೇಟೆ ಆಗಬಹುದು. ಪ್ರಸ್ತುತ ಏರ್‌ಪೋರ್ಟ್‌ಗೆ ಹತ್ತಿರವಿರಬೇಕಾ ಎಂಬ ಬಗ್ಗೆಯೂ ಚರ್ಚೆ ನಡೆದಿದೆ. ಶೀಘ್ರದಲ್ಲೇ ನಾವು ತಜ್ಞರ ಜೊತೆಗೆ ಚರ್ಚೆ ಮಾಡಿ ನಿರ್ಧಾರ ಮಾಡುತ್ತೇವೆ ಎಂದರು.

ತಮಿಳುನಾಡಿಗೆ ಹೊಸೂರಿನಲ್ಲಿ ಏರ್‌ಪೋರ್ಟ್ ಮಾಡಬೇಡಿ ಎಂದು ನಾವು ಹೇಳಲಾಗುವುದಿಲ್ಲ. ನಾವು ಏರ್‌ಪೋರ್ಟ್ ಬಗ್ಗೆ ಸಭೆ ಮಾಡಿದ ಮೇಲೆ ತಮಿಳುನಾಡಿನವರು ಮಾಡಿದ್ದಾರೆ. ಅದನ್ನು ನಾವು ಪ್ರಶ್ನೆ ಮಾಡಲು ಆಗುವುದಿಲ್ಲ. ಅದರ ಬಗ್ಗೆ ಕಾಮೆಂಟ್ ಮಾಡಲ್ಲ ಎಂದು ಪಾಟೀಲ್‌ ಉತ್ತರಿಸಿದರು.

ಇದನ್ನೂ ಓದಿ: Bangalore Airport: ಬೆಂಗಳೂರಿನ 2ನೇ ವಿಮಾನ ನಿಲ್ದಾಣ ಎಲ್ಲಿ? ಈ ಊರುಗಳ ಹೆಸರು ಫೈನಲ್

Exit mobile version