ಬೆಂಗಳೂರು: ಕೇರಳ, ಪಶ್ಚಿಮ ಬಂಗಾಳ, ದಿಲ್ಲಿ ಮುಂತಾದ ರಾಜ್ಯಗಳಲ್ಲಿ ನಡೆಯುತ್ತಿರುವ ರಾಜ್ಯ ಸರ್ಕಾರ ವರ್ಸಸ್ ರಾಜ್ಯಪಾಲರು (Governor versus state) ಫೈಟ್ ಇದೀಗ ಕರ್ನಾಟಕಕ್ಕೂ (Karnataka) ವಿಸ್ತರಿಸಿದೆ. ಮುಡಾ ಪ್ರಕರಣದಲ್ಲಿ (MUDA Scam) ಸಿಎಂ ಸಿದ್ದರಾಮಯ್ಯ (CM Siddaramaiah) ಅವರಿಗೆ ಶೋಕಾಸ್ ನೋಟಿಸ್ (Show cause Notice) ಜಾರಿ ಮಾಡಿರುವ ಪರಿಣಾಮ ಕಾಂಗ್ರೆಸ್ ನಾಯಕರು ರೊಚ್ಚಿಗೆದ್ದಿದ್ದು, ರಾಜ್ಯಪಾಲರ ವಿರುದ್ಧ ಕಾನೂನು ಸಂಘರ್ಷಕ್ಕೆ ಇಳಿಯುವ ಸಾಧ್ಯತೆಯನ್ನು ಪರಿಗಣಿಸುತ್ತಿದ್ದಾರೆ.
ಮುಡಾ ಹಗರಣದಲ್ಲಿ ಹೆಸರು ಕೇಳಿಬಂದಿರುವ ನಿಮ್ಮ ಮೇಲೆ ಏಕೆ ಪ್ರಾಸಿಕ್ಯೂಷನ್‌ಗೆ ಯಾಕೆ ಅನುಮತಿ ನೀಡಬಾರದು ಎಂದು ಉತ್ತರ ನೀಡಿ ಎಂದು ರಾಜಭವನದಿಂದ ನೋಟೀಸ್ ಕಳಿಸಲಾಗಿತ್ತು. ರಾಜ್ಯಪಾಲರ ನೋಟೀಸ್‌ಗೆ ಸಚಿವ ಸಂಪುಟ ಅಸಮಾಧಾನ ವ್ಯಕ್ತಪಡಿಸಿದೆ. ಎರಡು ಪ್ರಮುಖ ನಿರ್ಣಯಗಳನ್ನು ಕ್ಯಾಬಿನೆಟ್ ಮಾಡಿದ್ದು, ಅವುಗಳನ್ನು ರಾಜಭವನಕ್ಕೆ ಕಳಿಸಿದೆ. ಒಂದು, ಟಿಜೆ ಅಬ್ರಾಹಂ ನೀಡಿರುವ ದೂರು ವಜಾಗೊಳಿಸಬೇಕು. ಎರಡನೆಯದು, ಶೋಕಾಸ್ ನೋಟಿಸ್ ಹಿಂಪಡೆಯಬೇಕು ಎಂದಿದೆ.
ಸಚಿವ ಸಂಪುಟ ರಾಜ್ಯಪಾಲರಿಗೆ ನೀಡಿರುವ ಪ್ರತ್ಯುತ್ತರ ಇದೀಗ ಯಾವ ಸ್ವರೂಪ ಪಡೆಯಬಹುದು, ರಾಜ್ಯಪಾಲರ ನಡೆ ಏನಿರಬಹುದು ಎಂಬುದು ಕುತೂಹಲ ಮೂಡಿಸಿದೆ. ಸರ್ಕಾರದ ಸಲಹೆಯನ್ನು ರಾಜ್ಯಪಾಲರು ಯಾವ ರೀತಿ ಸ್ವೀಕಾರ ಮಾಡುತ್ತಾರೆ, ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಡ್ತಾರಾ? ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟರೆ ಆಡಳಿತ ಪಕ್ಷವೂ ಕೋರ್ಟ್ ಮೊರೆ ಹೋಗುವ ಸಾಧ್ಯತೆ ಇದೆ. ಅದು ಸರ್ಕಾರ ವರ್ಸಸ್ ರಾಜ್ಯಪಾಲರ ನಡುವೆ ಸಂಘರ್ಷಕ್ಕೆ ನಾಂದಿಯಾಗುತ್ತದೆ.
ರಾಜ್ಯಪಾಲರು ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿ ಆಧರಿಸಿ ಪ್ರಕರಣದ ಕುರಿತ ವರದಿ ನೀಡುವಂತೆ ಸಿಎಸ್‌ಗೆ ಕೇಳಿದ್ದರು. ರಾಜ್ಯಪಾಲರ ಪತ್ರವನ್ನು ಗಂಭೀರವಾಗಿ ಪರಿಗಣಿಸಿ, ಈ ಪ್ರಕರಣದ ತನಿಖೆಯನ್ನು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಪಿ.ಎನ್ ದೇಸಾಯಿ ಅವರ ನೇತೃತ್ವದ ಸಮಿತಿ ರಚಿಸಿ ನ್ಯಾಯಾಂಗ ತನಿಖೆಗೆ ಆದೇಶ ನೀಡಲಾಗಿತ್ತು.
ಅಬ್ರಾಹಂ ಅವರು ಜುಲೈ 26ರಂದು ದೂರು ನೀಡಿದ್ದರು. ಅದೇ ದಿನ ಮುಖ್ಯ ಕಾರ್ಯದರ್ಶಿಗಳು ರಾಜ್ಯಪಾಲರಿಗೆ ಪ್ರಕರಣಕ್ಕೆ ಸಂಬಂಧಿಸಿದ ವರದಿಯನ್ನು ಸಲ್ಲಿಸಿದ್ದರು. ರಾಜ್ಯಪಾಲರು ದೂರು ಹಾಗೂ ಸಿಎಸ್ ವರದಿಯನ್ನು ಸಂಪೂರ್ಣವಾಗಿ ಪರಿಶೀಲಿಸುವ ಮುನ್ನವೇ ಸಿಎಂಗೆ ಶೋಕಾಸ್ ನೋಟೀಸ್ ನೀಡಿದ್ದಾರೆ. ಇಷ್ಟು ತರಾತುರಿಯಲ್ಲಿ ಇಂತಹ ತೀರ್ಮಾನ ಮಾಡುತ್ತಿರುವುದೇಕೆ? ಎಂದು ರಾಜ್ಯಪಾಲರಿಗೆ ಕ್ಯಾಬಿನೆಟ್ ಪ್ರಶ್ನೆ ಮಾಡಿದೆ.
ಸಿಎಂ ಸಿದ್ದರಾಮಯ್ಯ ಜೊತೆಗೆ ಹೈಕಮಾಂಡ್ ನಿಂತಿದೆ. ನಿನ್ನೆ ರಾತ್ರಿ ಸಿಎಂ ಕರೆ ಮಾಡಿದ್ದ ರಾಜ್ಯದ ಉಸ್ತುವಾರಿ ವೇಣುಗೋಪಾಲ್, ಸಚಿವರ ಸಭೆ ಮತ್ತು ಕ್ಯಾಬಿನೆಟ್ ಸಭೆ ನಿರ್ಣಯದ ಬಗ್ಗೆ ಮಾಹಿತಿ ಪಡೆದಿದ್ದರು. ನಾವು ನಿಮ್ಮ ಜೊತೆಗಿದ್ದೇವೆ. ಇದನ್ನು ರಾಜಕೀಯವಾಗಿ ಹಾಗೂ ಕಾನೂನಾತ್ಮಕವಾಗಿ ಹೋರಾಟ ಮಾಡೋಣ. ಬಿಜೆಪಿ ಪಾದಯಾತ್ರೆಗೆ ಕೌಂಟರ್ ಕೊಡಬೇಕು. ನಾನು ರಾಜ್ಯಕ್ಕೆ ಬರ್ತಿದ್ದೇನೆ. ಎಲ್ಲವೂ ಚರ್ಚೆ ಮಾಡೋಣ ಎಂದಿದ್ದಾರೆ ವೇಣುಗೋಪಾಲ್.
ತನಿಖೆಗೆ ಅನುಮತಿ ಕೊಟ್ಟರೆ ಏನಾಗುತ್ತದೆ?
ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟರೆ ಸಿದ್ದರಾಮಯ್ಯ ಅವರಿಗೆ ಸಂಕಷ್ಟ ಕಾಡಲಿದೆ. ಆಗ ಜನಪ್ರತಿನಿಧಿಗಳ ನ್ಯಾಯಾಲಯ ಇಲ್ಲವೇ ಲೋಕಾಯುಕ್ತ ಕೋರ್ಟ್‌ನಲ್ಲಿ ಕೇಸ್ ದಾಖಲು ಆಗಬಹುದು. ಕೇಸ್ ಅಂಗೀಕರಿಸುವ ಬಗ್ಗೆ ಕೋರ್ಟ್‌ನಲ್ಲಿ ವಾದ ಪ್ರತಿವಾದ ಶುರು ಆಗಬಹುದು. ಬಳಿಕ ಲೋಕಾಯುಕ್ತ ಕೋರ್ಟ್‌ನಿಂದ ಸಿಎಂಗೆ ನೋಟೀಸ್ ಹೋಗುತ್ತದೆ. ಹೈಕೋರ್ಟ್ ಲೋಕಾಯುಕ್ತ ಕೋರ್ಟ್ ವಿಚಾರಣೆಗೆ ಹೈಕೋರ್ಟ್ ತಡೆ ಕೊಟ್ಟರೆ ಸಿಎಂ ಬಚಾವ್ ಆಗಬಹುದು. ಲೋಕಾಯುಕ್ತ ಪೊಲೀಸರು ಎಫ್ಐಆರ್ ದಾಖಲು ಮಾಡಿದರೆ ಎಫ್ಐಆರ್ ತಡೆ ಕೋರಿ ಅರ್ಜಿ ಸಲ್ಲಿಸಬಹುದು. ಅದಕ್ಕೂ ಮೊದಲು ಸಿಎಂ ವಿಚಾರಣೆ ಪ್ರಾಸಿಕ್ಯೂಷನ್‌ಗೆ ಕೊಟ್ಟಿರುವುದನ್ನು ಪ್ರಶ್ನೆ ಮಾಡಿ ಹೈಕೋರ್ಟ್ ಮೊರೆ ಹೋಗಬಹುದು.
ಅಧಿಕಾರ ದುರ್ಬಳಕೆ?
ಇದೆಲ್ಲದಕ್ಕೂ ಮೊದಲು ರಾಜ್ಯಪಾಲರು ಸಂವಿಧಾನದತ್ತವಾಗಿ ಸಿಕ್ಕಿರುವ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆಂದು ಸುಪ್ರೀಂ ಕೋರ್ಟ್ ಸಂವಿಧಾನದ ಪೀಠದ ಮುಂದೆ ಸಿಎಂ ಅರ್ಜಿ ಸಲ್ಲಿಸಬಹುದು. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಕಾನೂನು ತಂಡದ ಜೊತೆಗೆ ಸುದೀರ್ಘವಾಗಿ ಚರ್ಚೆ ಮಾಡುತ್ತಿದ್ದಾರೆ. ಮೊನ್ನೆ ದೆಹಲಿಗೆ ತೆರಳಿದಾಗ ಅಭಿಷೇಕ್ ಮನು ಸಿಂಗ್ವಿ ಜತೆ ಚರ್ಚೆ ಮಾಡಿದ್ದು, ಕಾನೂನು ಹೋರಾಟಕ್ಕೂ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: MUDA Scam: ಸಿಎಂಗೆ ಕಳಿಸಿದ ರಾಜ್ಯಪಾಲರ ನೋಟೀಸ್ ತಿರಸ್ಕರಿಸಿದ ಕ್ಯಾಬಿನೆಟ್, ಕಾನೂನು ಹೋರಾಟಕ್ಕೆ ನಿರ್ಣಯ