ಹಾಸನ: ಹಾಸನ ಸಂಸದ (Hassan MP), ಜೆಡಿಎಸ್ ಮುಖಂಡ (JDS leader) ಪ್ರಜ್ವಲ್ ರೇವಣ್ಣ (Prajwal Revanna) ಅವರ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ (Hasan Pen Drive Case) ಇನ್ನೊಬ್ಬ ಆರೋಪಿಯಾಗಿ ಎಫ್‌ಐಆರ್‌ನಲ್ಲಿ ದಾಖಲಾಗಿರುವ ಜೆಡಿಎಸ್ ಮುಖಂಡ ಹೆಚ್. ಡಿ ರೇವಣ್ಣ (HD Revanna) ಅವರು ಇಂದು ಹೈಕೋರ್ಟ್ (High Court) ಮೊರೆ ಹೋಗುವ ಸಾಧ್ಯತೆ ಇದೆ. ಹಗರಣದಲ್ಲಿ ದಾಖಲಾಗಿರುವ ಎಫ್‌ಐಆರ್ ಕೂಡ ನೂತನವಾಗಿ ರಚನೆಯಾಗಿರುವ ಎಸ್‌ಐಟಿಗೆ ವರ್ಗಾವಣೆಯಾಗುವ ಸಾಧ್ಯತೆ ಇದೆ.
ಹೊಳೆನರಸೀಪುರ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಿ.ಕೆ ಸಿಂಗ್ ನೇತೃತ್ವದಲ್ಲಿ ನಿನ್ನೆ ಎಸ್‌ಐಟಿ ರಚನೆಯ ಬಗ್ಗೆ ರಾಜ್ಯ ಸರ್ಕಾರ ಅಧಿಕೃತ ಅದೇಶ ನೀಡಿತ್ತು. ಈ ಹಿನ್ನೆಲೆಯಲ್ಲಿ ಇಂದು ಎಸ್‌ಐಟಿಗೆ ಎಫ್‌ಐಆರ್ ವರ್ಗಾವಣೆ ಸಾಧ್ಯತೆ ಇದೆ. ಹೆಚ್.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣ ಇಬ್ಬರ ಮೇಲೂ ಎಫ್‌ಐಆರ್ ದಾಖಲಿಸಲಾಗಿದೆ.
ಮನೆಕೆಲಸದಾಕೆಯೇ ನೀಡಿರುವ ದೂರು ಇದಾಗಿದೆ. ಸಂಸದ ಪ್ರಜ್ವಲ್ ರೇವಣ್ಣ ಅವರು ದೇಶ ತೊರೆದು ಜರ್ಮನಿಗೆ ಹೋಗಿದ್ದಾರೆ ಎನ್ನಲಾಗಿದೆ. ಹೆಚ್. ಡಿ ರೇವಣ್ಣ ಇಂದು ಹೈಕೋರ್ಟ್ ಮೊರೆ ಹೋಗುವ ಸಾಧ್ಯತೆ ಇದೆ. ಲೈಂಗಿಕ ಕಿರುಕುಳ ಪ್ರಕರಣ ಗಂಭೀರ ಸ್ವರೂಪದ್ದಾದ್ದರಿಂದ, ಎಫ್‌ಐಆರ್‌ಗೆ ತಡೆ ಕೋರಿ ಹೈಕೋರ್ಟ್ ಮೆಟ್ಟಿಲೇರಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಜೊತೆಗೆ ಸಂಭಾವ್ಯ ಬಂಧನ ತಪ್ಪಿಸಲು ನಿರೀಕ್ಷಣಾ ಜಾಮೀನಿಗೂ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ.
ಅಶ್ಲೀಲ ವಿಡಿಯೋ ಪೆನ್‌ಡ್ರೈವ್ ಸೋಶಿಯಲ್ ಮೀಡಿಯಾ ಮೂಲಕ ವೈರಲ್ ಆಗುತ್ತಿರುವ ಹಿನ್ನೆಲೆಯಲ್ಲಿ ಇದನ್ನು ತಡೆಯಲು ಅಗತ್ಯ ಕ್ರಮಗಳನ್ನು ಪೊಲೀಸರು ಕೈಗೊಳ್ಳುತ್ತಿದ್ದಾರೆ. ಕೆಲ ಪೆನ್ ಡ್ರೈವ್‌ಗಳನ್ನು ಹೊಳೆನರಸೀಪುರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪೆನ್‌ಡ್ರೈವ್‌ಗಳನ್ನು ಎಸ್‌ಐಟಿ ತಂಡಕ್ಕೆ ಹೊಳೆನರಸೀಪುರ ಪೊಲೀಸರು ಹಸ್ತಾಂತರ ಮಾಡಲಿದ್ದಾರೆ.
ಇನ್ನು ಎಫ್‌ಎಸ್‌ಎಲ್ ಪರಿಶೀಲನೆಗೆ ವಿಡಿಯೋ ರೆಕಾರ್ಡ್ ಮಾಡಿರುವ ಮಾಸ್ಟರ್ ಡಿವೈಸ್ ಬೇಕಿರುವ ಹಿನ್ನೆಲೆಯಲ್ಲಿ, ಪ್ರಜ್ವಲ್ ರೇವಣ್ಣ ಅವರ ಫೋನ್ ವಶಕ್ಕೆ ಪಡೆಯಬೇಕಿದೆ. ಈ ಫೋನ್‌ನಲ್ಲಿ ಅಶ್ಲೀಲ ವಿಡಿಯೋ ಚಿತ್ರೀಕರಿಸಿಕೊಳ್ಳಲಾಗಿದೆ ಎನ್ನಲಾಗಿದೆ. ಇದಕ್ಕಾಗಿ ಪ್ರಜ್ವಲ್ ರೇವಣ್ಣ ಅವರ ಫೋನ್ ಅನ್ನು ಎಸ್ಐಟಿ ತಂಡ ವಶಕ್ಕೆ ಪಡೆಯಲಿದೆ. ಆದರೆ ಈಗಾಗಲೆ ಪ್ರಜ್ವಲ್ ರೇವಣ್ಣ ನಾಟ್ ರೀಚಬಲ್ ಆಗಿದ್ದು, ತಮ್ಮ ಮೊಬೈಲ್ ಬದಲಾವಣೆ ಮಾಡಿದ್ದಾರೆ ಎಂಬ ಶಂಕೆ ಇದೆ. ಹೀಗಾಗಿ ವಿಡಿಯೋ ರೆಕಾರ್ಡ್ ಆದ ಸಂದರ್ಭದ ಫೋನ್ ಐಎಂಇಐ ನಂಬರ್ ಕೂಡ ಎಸ್‌ಐಟಿ ಟ್ರ್ಯಾಕ್ ಮಾಡಲಿದೆ.
ಮಹಿಳೆಯಿಂದ ಲೈಂಗಿಕ ದೌರ್ಜನ್ಯ ದೂರು
ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿದ ಮಹಿಯೊಬ್ಬರು ನೀಡಿದ ದೂರಿನ ಮೇರೆಗೆ ಹೊಳೆನರಸೀಪುರ ಟೌನ್ ಪೊಲೀಸ್ ಠಾಣೆಯಲ್ಲಿ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಲೈಂಗಿಕ ದೌರ್ಜನ್ಯ ಮಾಡಿದ್ದಾರೆ ಎಂದು ಆರೋಪಿಸಿ ತಂದೆ-ಮಗ ಇಬ್ಬರ ಮೇಲೂ ಮನೆ ಕೆಲಸದಾಕೆಯೇ ದೂರು ನೀಡಿದ್ದಾಳೆ.
ದೂರಿನಲ್ಲಿ ಏನಿದೆ?
47 ವರ್ಷದ ಮಹಿಳೆ ನೀಡಿದ ದೂರಿನ ಅನ್ವಯ ಹೊಳೆನರಸೀಪುರ ಟೌನ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ದೂರುದಾರೆಗೆ ಭವಾನಿ ರೇವಣ್ಣ ಸೋದರತ್ತೆ ಮಗಳು. ಎಚ್.ಡಿ. ರೇವಣ್ಣ ಶಾಸಕರಾಗಿದ್ದಾಗ ನಾಗಲಾಪುರ ಹಾಲಿನ ಡೇರಿಯಲ್ಲಿ ಕೆಲಸ ಕೊಡಿಸಿದ್ದರು. ಬಳಿಕ ಬಿಸಿಎಂ ಹಾಸ್ಟೆಲ್‌ನಲ್ಲಿ ಅಡುಗೆ ಕೆಲಸ ಕೊಡಿಸಿದ್ದರು. 2015ರಲ್ಲಿ ರೇವಣ್ಣ ಅವರ ಮನೆಯಲ್ಲೇ ಕೆಲಸಕ್ಕೆ ಸೇರಿಸಿಕೊಂಡಿದ್ದರು. ಒಟ್ಟು 6 ಹೆಣ್ಣು ಮಕ್ಕಳು ಮನೆಯಲ್ಲಿ ಕೆಲಸ ಮಾಡುತ್ತಿದ್ದರು. ಕೆಲಸಕ್ಕೆ ಸೇರಿಕೊಂಡ ನಾಲ್ಕು ತಿಂಗಳಿಗೆ ಕೊಠಡಿಗೆ ಬರುವಂತೆ ರೇವಣ್ಣ ಆಹ್ವಾನಿಸಿದ್ದರು.
ಇನ್ನು ಭವಾನಿ ರೇವಣ್ಣ ಮನೆಯಲ್ಲಿ ಇಲ್ಲದಿದ್ದಾಗ ಎಚ್.ಡಿ. ರೇವಣ್ಣ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಸ್ಟೋರ್ ರೂಮ್‌ನಲ್ಲಿ ಹಣ್ಣು ಕೊಡೋ ನೆಪದಲ್ಲಿ ಕೈ ಹಿಡಿದು ಎಳೆದಾಡಿದ್ದರು. ಅದೇ ರೀತಿ ಅಡುಗೆ ಮನೆಯಲ್ಲಿ ಇದ್ದಾಗ ಪ್ರಜ್ವಲ್ ರೇವಣ್ಣ ಹಿಂಬದಿಯಿಂದ ಬಂದು ಮೈಮುಟ್ಟಿ ಹೊಟ್ಟೆ ಜಿಗುಟುತ್ತಿದ್ದರು. ಜೊತೆಗೆ ಎಣ್ಣೆ ಹಚ್ಚಲು ಪದೇ ಪದೇ ಕರೆದು ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದರು. ಮನೆಯಲ್ಲಿದ್ದಾಗ ವಿಡಿಯೋ ಕಾಲ್ ಮಾಡಿ ನನ್ನ ಮಗಳ ಜೊತೆ ಅಸಭ್ಯವಾಗಿ ಮಾತನಾಡುತ್ತಿದ್ದರು. ಇದಕ್ಕೆ ಮಗಳು ಹೆದರಿಕೊಂಡು ನಂಬರ್ ಬ್ಲಾಕ್ ಕೂಡ ಮಾಡಿದ್ದಳು. ಇದರಿಂದ ಮನೆ ಕೆಲಸ ಬಿಟ್ಟು ಹೊರಗಡೆ ಬಂದಿದ್ದಾಗಿ ದೂರಿನಲ್ಲಿ ತಿಳಿಸಿದ್ದಾಳೆ.
ಈಗ ಕೆಲ ವಿಡಿಯೊಗಳು ವೈರಲ್ ಆಗುತ್ತಿದ್ದು, ನನ್ನ ಗಂಡ ಶೀಲ ಶಂಕಿಸುತ್ತಿದ್ದಾನೆ. ಇದರಿಂದ ಮನನೊಂದು ದೂರು ನೀಡುತ್ತಿರೋದಾಗಿ 47 ವರ್ಷದ ಮಹಿಳೆ ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ. ಸದ್ಯ ಮಹಿಳೆ ದೂರಿನನ್ವಯ ಪ್ರಜ್ವಲ್ ರೇವಣ್ಣ ಹಾಗೂ ಎಚ್.ಡಿ. ರೇವಣ್ಣ ಇಬ್ಬರ ಮೇಲೂ ಎಫ್‌ಐಆರ್ ದಾಖಲಾಗಿದೆ.
ಇದನ್ನೂ ಓದಿ | Hassan Pen Drive Case: ಹಾಸನ ಅಶ್ಲೀಲ ವಿಡಿಯೊ ಪ್ರಕರಣ; ಬಿ.ಕೆ.ಸಿಂಗ್ ನೇತೃತ್ವದಲ್ಲಿ ಎಸ್‌ಐಟಿ ರಚನೆ