ಬೆಂಗಳೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ಪೆನ್‌ಡ್ರೈವ್ ಪ್ರಕರಣಕ್ಕೆ (Hassan Pen Drive Case) ಸಂಬಂಧಿಸಿ ರಚಿಸಲಾಗಿರುವ ವಿಶೇಷ ತನಿಖಾ ತಂಡಕ್ಕೆ 18 ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. ಸಿಬ್ಬಂದಿಯಲ್ಲಿ ಹೆಚ್ಚಿನ ಮಹಿಳಾ ಸಿಬ್ಬಂದಿಯಿದ್ದು, ವಿಡಿಯೋದಲ್ಲಿರುವ ಮಹಿಳೆಯರ ತನಿಖೆಗೆ ವಿಶೇಷ ಪ್ರಯತ್ನ ಮಾಡಲಾಗುತ್ತಿದೆ ಎಂದು ಗೊತ್ತಾಗಿದೆ.
ವಿಶೇಷ ತನಿಖಾ ತಂಡದಿಂದ ತನಿಖೆ ಚುರುಕಾಗುತ್ತಿದ್ದು, ವಿಡಿಯೋ ಪರಿಶೀಲನೆಗೆ ಪ್ರತ್ಯೇಕ ಟೀಂ ಮಾಡಲಾಗಿದೆ. ಇನ್‌ಸ್ಪೆಪಕ್ಟರ್ ಸೇರಿ ನಾಲ್ವರ ಪ್ರತ್ಯೇಕ ತಂಡದಿಂದ ವಿಡಿಯೋ ಪರಿಶೀಲನೆ ಮಾಡಲಾಗುತ್ತಿದೆ. ಪೆನ್ ಡ್ರೈವ್‌ನಲ್ಲಿರುವ ಅಷ್ಟೂ ವಿಡಿಯೋ ಪರಿಶೀಲನೆ ಮಾಡಿ ಎಸ್ಐಟಿ ಮುಖ್ಯಸ್ಥರಿಗೆ ತಂಡ ವರದಿ ಕೊಡಲಿದೆ. ವಿಶೇಷ ಎಂದರೆ, ಪ್ರಾಥಮಿಕ ವರದಿಗಳ ಪ್ರಕಾರ, ವಿಡಿಯೋಗಳಲ್ಲಿರುವ ಮಹಿಳೆಯರಲ್ಲಿ ಬಹುತೇಕರು ಸರ್ಕಾರಿ ಅಧಿಕಾರಿಗಳು ಎಂಬ ಚಕಿತಗೊಳಿಸುವ ಅಂಶ ಬಯಲಾಗಿದೆ.
PSI, AE ಹೀಗೆ ವಿಡಿಯೋದಲ್ಲಿರುವ ಸುಮಾರು ಅರ್ಧದಷ್ಟು ಮಹಿಳೆಯರು ಸರ್ಕಾರಿ ಮಹಿಳಾ ಅಧಿಕಾರಿಗಳು ಎಂಬ ವಿಚಾರ ಬೆಳಕಿಗೆ ಬಂದಿದೆ. ಇದರೊಂದಿಗೆ ಕೆಲಸ ಕೊಡಿಸುವ, ವರ್ಗಾವಣೆ ವಿಚಾರದಲ್ಲೂ ಈ ದಂಧೆ ಭಾಗಿಯಾಗಿರಬಹುದು ಎಂಬ ವ್ಯಾಪಕ ಅನುಮಾನ ವ್ಯಕ್ತವಾಗಿದೆ.
18 ಸಿಬ್ಬಂದಿ ನೇಮಕ
ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣ ತನಿಖೆಗಾಗಿ ರಚಿಸಲಾಗಿರುವ ವಿಶೇಷ ತಂಡಕ್ಕೆ ಸಿಐಡಿಯಿಂದ 18 ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಪರಿಣಿತರ ತಂಡವನ್ನು ರಚಿಸಲಾಗಿದ್ದು, ಇಂದಿನಿಂದಲೇ ಕಾರ್ಯಾಚರಣೆ ಆರಂಭ ಸಾಧ್ಯತೆ ಇದೆ.
ಎಸಿಪಿಗಳಾದ ಪ್ರಿಯದರ್ಶಿನಿ ಈಶ್ವರ್ ಸಾನಿಕೊಪ್ಪ, ಸತ್ಯನಾರಾಯಣ ಸಿಂಗ್, ಧನ್ಯ ಎನ್. ನಾಯ್ಕ್, ಪಿಐಗಳಾದ ಸುಮರಾಣಿ ಬಿ.ಎಸ್., ಸ್ವರ್ಣ ಬಿ.ಎಸ್., ಭಾರತಿ, ಹೇಮಂತ್ ಕುಮಾರ್, ರಾಜಾ ಜಿ.ಸಿ., ಪಿಎಸ್‌ಐಗಳಾದ ವೈಲೆಟ್ ಫ್ಲೆಮೀನಾ, ವಿನುತ, ನಂದೀಶ್, ಕುಮುದ, ಎಚ್‌ಸಿಗಳಾದ ಸುಮತಿ, ಮನೋಹರ, ಸುನೀಲ್ ಬೆಳವಲಗಿ, ಬಸವರಾಜ್ ಮೈಗೇರಿ, ಪಿಸಿಗಳಾದ ರಂಗಸ್ವಾಮಿ, ಸಿಂಧುರನ್ನು ನೇಮಿಸಿ ಆದೇಶ ಹೊರಡಿಸಲಾಗಿದೆ.
ಈ ನಡುವೆ ಡಿಜಿ ಅಲೋಕ್ ಮೋಹನ್ ಅವರು, “ಪ್ರಕರಣ ತನಿಖೆಗೆ ಎಸ್‌ಐಟಿ ರಚನೆಯಾಗಿದೆ. ತನಿಖೆ ನಡೆದಿದೆ. ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ” ಎಂದು ತಿಳಿಸಿದ್ದು, ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದ್ದಾರೆ.
ಪೆನ್‌ಡ್ರೈವ್ ಪ್ರಕರಣಕ್ಕೆ (Hassan Pen Drive Case) ಸಂಬಂಧಪಟ್ಟಂತೆ ತನಿಖೆ ಚುರುಕುಗೊಂಡಿದೆ. ವೈರಲ್ ವಿಡಿಯೊಗಳ ಸತ್ಯಾಸತ್ಯತೆ ಪರಿಶೀಲನೆಗೆ ಮುಂದಾಗಲಾಗಿದೆ. ಇನ್ನು ಜರ್ಮನಿಗೆ ತೆರಳಿರುವ ಪ್ರಜ್ವಲ್ ರೇವಣ್ಣ ಅಲ್ಲಿ ಎಲ್ಲಿದ್ದಾರೆ ಎಂಬ ಬಗ್ಗೆ ಎಂಬ ಬಗ್ಗೆ ಎಸ್‌ಐಟಿ ಮಾಹಿತಿಯನ್ನು ಕಲೆಹಾಕುತ್ತಿದೆ. ಹೀಗಾಗಿ ಅವಶ್ಯ ಬಿದ್ದರೆ ಪ್ರಜ್ವಲ್ ಇರುವಲ್ಲಿಗೆ ಹೋಗಿ ಕರೆತರಲು ಪ್ಲ್ಯಾನ್ ಮಾಡಲಾಗುತ್ತಿದೆ ಎನ್ನಲಾಗಿದೆ.
ಕೆಲವು ತಂಡಗಳ ರಚನೆ
ತನಿಖೆ ನಡೆಸಲು ಕೆಲವು ತಂಡಗಳನ್ನು ರಚನೆ ಮಾಡಲು ಈಗಾಗಲೇ ನಿರ್ಧಾರ ಮಾಡಲಾಗಿದೆ ಎಂದು ತಿಳಿದುಬಂದಿದೆ. ಸದ್ಯ ಹೊಳೆನರಸೀಪುರ ನಗರ ಠಾಣೆಯಲ್ಲಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಹೊಳೆನರಸೀಪುರ ನಗರ ಠಾಣೆಗೆ ದೂರು ನೀಡಿದ ಎಸ್‌ಐಟಿ ತಂಡವು ಮೊದಲಿಗೆ ಸಂತ್ರಸ್ತೆಯ ಹೇಳಿಕೆಯನ್ನು ಪಡೆದುಕೊಳ್ಳಲಿದ್ದಾರೆ. ಇನ್ನು ಪ್ರಕರಣದ ಬಗ್ಗೆ ರಾಜ್ಯದ ಯಾವುದೇ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾದರೂ ಎಸ್ಐಟಿಗೆ ವರ್ಗಾವಣೆ ಆಗಲಿದೆ, ಹಾಗೆಯೇ ತನಿಖೆ ಭಾಗವಾಗಿ ವೈರಲ್ ವಿಡಿಯೊಗಳ ಸತ್ಯಾಸತ್ಯತೆಯನ್ನು ಪರಿಶೀಲನೆ ನಡೆಸಲು ಎಸ್‌ಐಟಿ ಮುಂದಾಗಿದ್ದು, ಅವುಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್) ಕಳುಹಿಸಲಿದೆ.
ಕರೆದಾಗ ಬರುತ್ತಾನೆ: ರೇವಣ್ಣ
ಬೆಂಗಳೂರು: ನಾವೆಲ್ಲಾ ಇಲ್ಲೇ ಇದ್ದೇವೆ, ಎಲ್ಲೂ ಓಡಿ ಹೋಗಲ್ಲ. ಹಾಸನ ಪೆನ್ ಡ್ರೈವ್ ಪ್ರಕರಣದ (Hassan Pen Drive Case) ಬಗ್ಗೆ ಸದ್ಯ ನಾನು ಏನೂ ರಿಯಾಕ್ಟ್ ಮಾಡಲ್ಲ, ಕಾನೂನು ರೀತಿ ಪ್ರಕರಣವನ್ನು ನಾವು ಎದುರಿಸುತ್ತೇವೆ. ವಿಚಾರಣೆಗೆ ಕರೆದಾಗ ವಿದೇಶದಿಂದ ಪುತ್ರ ಬರುತ್ತಾನೆ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಹೇಳಿದ್ದಾರೆ.
ಹಾಸನ ಸಂಸದ ಹಾಗೂ ಪುತ್ರ ಪ್ರಜ್ವಲ್ ರೇವಣ್ಣ ವಿರುದ್ದ ಲೈಂಗಿಕ ದೌರ್ಜನ್ಯ ಆರೋಪ ಕೇಳಿ ಬಂದ ನಂತರ ನಗರದಲ್ಲಿ ಮೊದಲ ಬಾರಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಅವರು, 4-5 ವರ್ಷದ ಹಿಂದೆ ಘಟನೆ ನಡೆದಿದೆ ಎಂದು ಈಗ ಕೇಸ್ ಹಾಕಿದ್ದಾರೆ. ಇದು ಯಾವ ತರಹದ್ದು ಎಂದು ಏನೂ ಮಾತನಾಡಲ್ಲ. ವಿಡಿಯೊ ಸೇರಿ ಯಾವುದರ ಬಗ್ಗೆಯೂ ಮಾತನಾಡಲ್ಲ ಎಂದು ತಿಳಿಸಿದ್ದಾರೆ.
ಪಕ್ಷದಿಂದ ಉಚ್ಚಾಟನೆ ಮಾಡುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಆ ನಿರ್ಧಾರ ಪಕ್ಷಕ್ಕೆ ಸೇರಿದ್ದು, ಎಸ್‌ಐಟಿ ರಚನೆ ಮಾಡಿರುವುದರಿಂದ ತನಿಖೆಗೆ ತೊಂದರೆ ಆಗಬಾರದೆಂದು ನಾನೇನೂ ಮಾತನಾಡಲ್ಲ. ಇದೆಲ್ಲಾ ರಾಜಕೀಯ. ಸರ್ಕಾರ ಅವರದು ಇದೆ, ಏನು ಬೇಕಾದರೂ ಮಾಡಿಕೊಳ್ಳಲಿ. ಪ್ರಕರಣದ ಬಗೆ ಕಾನೂನು ರೀತಿಯಲ್ಲಿ ತನಿಖೆ ಆಗಲಿ ಎಂದು ಹೇಳಿದ್ದಾರೆ.
ಪ್ರಜ್ವಲ್ ವಿದೇಶಕ್ಕೆ ಹೋಗಿರುವ ವಿಚಾರಕ್ಕೆ ಸ್ಪಂದಿಸಿ, ಚುನಾವಣೆ ಮುಗಿದ ನಂತರ ಅವನು ಹೋಗಿದ್ದಾನೆ. ಯಾವುದೋ ಕೆಲಸಕ್ಕಾಗಿ ಹೋಗ್ಬೇಕಿತ್ತು ಹೋಗಿದ್ದಾನೆ. ಇವರು ಎಫ್‌ಐಆರ್ ಹಾಕುತ್ತಾರೆ ಅಂತ ಗೊತ್ತಿತ್ತಾ? ಎಸ್‌ಐಟಿ ತನಿಖೆ ಮಾಡುತ್ತಾರೆ ಅಂತ ಗೊತ್ತಿತ್ತಾ? ವಿಚಾರಣೆಗೆ ಕರೆದಾಗ ಬರುತ್ತಾನೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Hassan Pen Drive Case: ವಿಚಾರಣೆಗೆ ಕರೆದಾಗ ವಿದೇಶದಿಂದ ಪ್ರಜ್ವಲ್ ಬರುತ್ತಾನೆ ಎಂದ ಎಚ್.ಡಿ.ರೇವಣ್ಣ