Site icon Vistara News

Hassan Pen Drive Case: 24 ಗಂಟೆಯೊಳಗೆ ವಿಚಾರಣೆಗೆ ಹಾಜರಾಗಿ; ಪ್ರಜ್ವಲ್‌, ರೇವಣ್ಣಗೆ ಎಸ್‌ಐಟಿ ನೋಟಿಸ್‌

Hassan Pen Drive case

ಬೆಂಗಳೂರು: ಹಾಸನ ಅಶ್ಲೀಲ ವಿಡಿಯೊ ಪ್ರಕರಣ (Hassan Pen Drive Case) ದೇಶಾದ್ಯಂತ ಸದ್ದು ಮಾಡುತ್ತಿದ್ದು, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಬೇಕು ಎಂಬ ಒತ್ತಾಯಗಳು ಕೇಳಿಬರುತ್ತಿವೆ. ಈ ನಡುವೆ ಪ್ರಕರಣದ ತನಿಖೆಗಾಗಿ ರಾಜ್ಯ ಸರ್ಕಾರ ಎಸ್‌ಐಟಿ ರಚನೆ ಮಾಡಿತ್ತು. ಇದೀಗ 24 ಗಂಟೆಯೊಳಗೆ ವಿಚಾರಣೆಗೆ ಹಾಜರಾಗುವಂತೆ ಸಿಆರ್‌ಪಿಸಿ 41a ಅಡಿಯಲ್ಲಿ ಎಸ್‌ಐಟಿಯಿಂದ ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಮಾಜಿ ಸಚಿವ ಎಚ್. ಡಿ. ರೇವಣ್ಣಗೆ ನೋಟಿಸ್ ನೀಡಲಾಗಿದೆ.

ಎಸ್ಐಟಿ ಸದಸ್ಯ, ತನಿಖಾಧಿಕಾರಿ ಎಸ್‌ಪಿ ಸೀಮಾ‌ ಲಾಟ್ಕರ್ ಅವರ ಮುಂದೆ ತುರ್ತು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ. ಎಚ್‌.ಡಿ. ರೇವಣ್ಣ ನಿವಾಸಕ್ಕೆ ಎಸ್ಐಟಿ ತಂಡ ನೊಟೀಸ್ ತಲುಪಿಸಿದ್ದು, ಹೊಳೆನರಸೀಪುರದಲ್ಲಿ ದಾಖಲಾದ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗಲು ಸೂಚಿಸಲಾಗಿದೆ.

ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಪ್ರಜ್ವಲ್‌ ರೇವಣ್ಣ ಮತ್ತು ಎಚ್‌.ಡಿ.ರೇವಣ್ಣ ವಿರುದ್ಧ ಏ.28ರಂದು ಹೊಳೆನರಸೀಪುರ ಠಾಣೆಯಲ್ಲಿ ಮನೆಗೆಲಸದಾಕೆ ದೂರು ನೀಡಿದ್ದಳು. ಈ ಸಂಬಂಧ ವಿಚಾರಣೆಗಾಗಿ ಇದೀಗ ನೋಟಿಸ್‌ ನೀಡಲಾಗಿದೆ.

ಪ್ರಜ್ವಲ್‌ ಕೇಸ್‌ಗೆ ರಾಷ್ಟ್ರೀಯ ಮಹಿಳಾ ಆಯೋಗ ಎಂಟ್ರಿ; 3 ದಿನದಲ್ಲಿ ವರದಿ ಕೊಡಲು ಡಿಜಿಗೆ ಪತ್ರ

ಬೆಂಗಳೂರು: ಹಾಸನ ಸಂಸದ (Hassan MP), ಜೆಡಿಎಸ್‌ ಮುಖಂಡ (JDS Leader), ಮಾಜಿ ಸಚಿವ ಎಚ್.ಡಿ. ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ (Prajwal Revanna) ಅವರ ಅಶ್ಲೀಲ ವಿಡಿಯೊ ಎನ್ನಲಾದ ಪೆನ್‌ಡ್ರೈವ್‌ ಪ್ರಕರಣಕ್ಕೆ (Hassan Pen Drive Case) ಸಂಬಂಧಪಟ್ಟಂತೆ ರಾಷ್ಟ್ರೀಯ ಮಹಿಳಾ ಆಯೋಗ (National Commission for Women) ಎಂಟ್ರಿ ಕೊಟ್ಟಿದೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂರು ದಿನದೊಳಗೆ ವರದಿ ನೀಡುವಂತೆ ಕರ್ನಾಟಕ ಪೊಲೀಸ್‌ ಮಹಾ ನಿರ್ದೇಶಕರಿಗೆ ಸೂಚನೆ ನೀಡಿದೆ.

ಪ್ರಜ್ವಲ್‌ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗ ಮಹಿಳಾ ಆಯೋಗವು ಸುಮೊಟೊ ಕೇಸ್‌ ದಾಖಲು ಮಾಡಿಕೊಂಡಿದೆ. ಜತೆಗೆ ಡಿಜಿಗೆ ಪತ್ರ ಬರೆದು ಈ ಸಂಬಂಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ. ಇನ್ನು ಕೆಲವೇ ದಿನಗಳಲ್ಲಿ ಕೇಂದ್ರ ಮಹಿಳಾ ಆಯೋಗದ ಸದಸ್ಯರು ರಾಜ್ಯಕ್ಕೆ ಆಗಮಿಸಲಿದ್ದಾರೆ ಎನ್ನಲಾಗಿದೆ.

ಪೆನ್‌ ಡ್ರೈವ್‌ ಹೊರ ಬಿಡುವ ಚಿಲ್ಲರೆ ಕೆಲಸ ಮಾಡಲ್ಲ; ಡಿಕೆಶಿ

ಹಾಸನ ಸಂಸದ (Hassan MP), ಜೆಡಿಎಸ್‌ ಮುಖಂಡ (JDS Leader), ಮಾಜಿ ಸಚಿವ ಎಚ್.ಡಿ. ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ (Prajwal Revanna) ಅವರ ಅಶ್ಲೀಲ ವಿಡಿಯೊ ಎನ್ನಲಾದ ಪೆನ್‌ಡ್ರೈವ್‌ ಪ್ರಕರಣಕ್ಕೆ (Hassan Pen Drive Case) ಸಂಬಂಧಪಟ್ಟಂತೆ ತಮ್ಮ ಮೇಲೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಮಾಡಿರುವ ಆರೋಪವನ್ನು ಡಿಸಿಎಂ ಡಿ.ಕೆ. ಶಿವಕುಮಾರ್‌ ನಿರಾಕರಣೆ ಮಾಡಿದ್ದಾರೆ. ಪೆನ್‌ಡ್ರೈವ್‌ ಹೊರಬಿಡುವಂತಹ ಚಿಲ್ಲರೆ ಕೆಲಸವನ್ನು ನಾನಂತೂ ಮಾಡಲ್ಲ. ಚುನಾವಣೆಯಲ್ಲಿ ಫೇಸ್ ಮಾಡುತ್ತೇನೆ. ನಾನು ಪೆನ್ ಡ್ರೈವ್ ಇದೆ ಎಂದು ಹೆಸರಿಸುವುದಿಲ್ಲ. ಅಸೆಂಬ್ಲಿಗೆ ಬನ್ನಿ ಎಂದು ಕರೆದಿದ್ದೇನೆ‌ ಎಂದು ಸವಾಲು ಹಾಕಿದರು.

ಬೆಂಗಳೂರಿನಲ್ಲಿ ದಿಢೀರ್‌ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್‌, ನಾವು ನಮ್ಮ ಪೊಲಿಟಿಕಲ್ ಟೂರ್ ಬಗ್ಗೆ ಮೀಟಿಂಗ್ ಮಾಡಿದ್ದೇವೆ. ಯಾರು ಎಲ್ಲಿ ಪ್ರಚಾರ ಮಾಡಬೇಕು ಎಂದು ಚರ್ಚೆ ಮಾಡಿದ್ದೇವೆ. ಕಾಂಗ್ರೆಸ್‌ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ರಾಜ್ಯಕ್ಕೆ ಮತ್ತೊಮ್ಮೆ ಆಗಮಿಸಲಿದ್ದಾರೆ. ಈ ವೇಳೆ ಸಿಎಂ ಸಿದ್ದರಾಮಯ್ಯ ಎಲ್ಲಿ ಭಾಗಿಯಾಗಬೇಕು, ನಾನು ಎಲ್ಲಿ ಭಾಗಿಯಾಗಬೇಕು ಎಂದು ಚರ್ಚೆ ಮಾಡಿದ್ದೇವೆಯೇ ವಿನಃ ಪೆನ್ ಡ್ರೈವ್ ವಿಚಾರದ ಬಗ್ಗೆ ಚರ್ಚೆ ಮಾಡಿಲ್ಲ ಎಂದು ಹೇಳಿದರು.

ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಮತ್ತು ಅವರ ಕುಟುಂಬಕ್ಕೆ ನನ್ನ ನೆನಸಿಕೊಳ್ಳದೆ ಸ್ಫೂರ್ತಿ ಇರಲ್ಲ. ಕುಮಾರಸ್ವಾಮಿ ಅವರ ಭಾಷಣ ಕೇಳಿದ್ದೇನೆ. ಪ್ರಜ್ವಲ್‌ನನ್ನು ನನ್ನ ಮಗ ಎಂದು ಹೇಳಿದ್ದಾರೆ. ಅದರಲ್ಲಿ ತಪ್ಪೇನೂ ಇಲ್ಲ. ಅವರ ಕುಟುಂಬದ ಕುಡಿ. ನೂಲಿನಂತೆ ಸೀರೆ ಎಂದು ಡಿಕೆಶಿ ವ್ಯಂಗ್ಯವಾಡಿದರು.

ಹಳೆ ವಿಡಿಯೋ ಎಂದು ಪ್ರಜ್ವಲ್‌ ತಂದೆ ಎಚ್‌.ಡಿ. ರೇವಣ್ಣ ಹೇಳಿದ್ದಾರೆ. ಅಂದರೆ ಅವರು ಒಪ್ಪಿಕೊಂಡಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ತೀರ್ಮಾನ ಮಾಡುತ್ತಾರೆ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಹೇಳಿದ್ದಾರೆ. ಈ ಸಂಬಂಧ ದೇವರಾಜೇಗೌಡ ಅಮಿತ್ ಶಾಗೆ ಪತ್ರ ಬರೆದಿದ್ದಾರೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.

10 ದಿನದ ಮುಂಚೆ ದೂರು ಕೊಡಬೇಕಿತ್ತು

ಕೇಂದ್ರ ಗೃಹ ಸಚಿವ ಅಮಿತ್ ಶಾ ಈಗ ಮಾತನಾಡಿದ್ದಾರೆ. ಕರ್ನಾಟಕದಲ್ಲಿ ಮಹಿಳೆಯರ ರಕ್ಷಣೆ ಬಗ್ಗೆ ಮಾತನಾಡುತ್ತಾರೆ. ಉಡುಪಿಯಲ್ಲಿ ಪೋಟೊ ಹಿಡಿದು ಅಂತಾರಾಷ್ಟ್ರೀಯ ಮಹಿಳಾ ಆಯೋಗ ಕಳುಹಿಸಿದರು. ಬಿಜೆಪಿಯವರು ಯಾಕೆ ಮಾತನಾಡುತ್ತಿಲ್ಲ. ಅವರ ಕುಟುಂಬದವರು ಹೌದೋ ಇಲ್ಲವೋ ನೀವು ಹೇಳಬೇಕು. ವಾರ ಹತ್ತು ದಿನದ ಮುಂಚೆ ದೂರು ಕೊಟ್ಟಿದ್ದರೆ ಕ್ರಮ ತೆಗೆದುಕೊಳ್ಳುತ್ತಿದ್ದೆವು. ಮಹಿಳಾ ಆಯೋಗಕ್ಕೆ ದೂರು ಕೊಟ್ಟಿದ್ದಾರೆ. ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದರು. ಬಳಿಕ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಅಮಿತ್ ಶಾ ಅವರು ಮೈಸೂರಿಗೆ ಬಂದಾಗ ಪ್ರಜ್ವಲ್‌ ರೇವಣ್ಣ ಅವರಿಗೆ ಟಿಕೆಟ್ ಕೊಡಬೇಡಿ ಎಂದು ಹೇಳಿದ್ದರು. ಆದರೆ, ಕೊನೆಗೆ ಏಕೆ ಕೊಟ್ಟರು? ಅಮಿತ್‌ ಶಾ ಬೇಡವನ್ನೆಲು ಏನು ಕಾರಣ? ಎಂದು ಡಿ.ಕೆ. ಶಿವಕುಮಾರ್‌ ಪ್ರಶ್ನೆ ಮಾಡಿದರು.

ಎಚ್‌ಡಿಕೆ ವಿರುದ್ಧ ಏಕವಚನ ಪ್ರಯೋಗ

ಪಕ್ಷದಿಂದ ವಜಾ ಮಾಡಲಿ, ಒಳಗೆ ಇಟ್ಟುಕೊಳ್ಳಲಿ‌. ಅದೆಲ್ಲ ಕಣ್ಣು ಒರೆಸುವ ನಾಟಕ. ಈ ಅಮಾನತಿನ ಬಗ್ಗೆ ರಾಜಕಾರಣದಲ್ಲಿ ನನಗೂ ಗೊತ್ತಿದೆ. ನನ್ನ ವಿರುದ್ಧ ಮೊದಲು ಪ್ರತಿಭಟನೆ ಮಾಡಲಿ. ಕುಮಾರಸ್ವಾಮಿ ಯಾವ ಕರೆ ಕೊಡುತ್ತೀಯೋ ಕೊಡು‌. ಕರೆ ಕೊಡಬೇಕು ನೀನು‌. ನೀನು ಕೊಡಲಿ ಅಂತನೇ ಹೇಳುತ್ತಿದ್ದೇನೆ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

ಎಚ್‌.ಡಿ. ಎಂದರೆ ಏನು? ಕುಟಂಬ ಅಲ್ಲವೆಂದರೆ ಹೇಗೆ?

ಈಗ ಪ್ರಜ್ವಲ್‌ ರೇವಣ್ಣ ಅವರು ತಮ್ಮ ಕುಟುಂಬ ಅಲ್ಲ ಅಂತ ಹೇಳಿದರೆ ಹೇಗೆ ಒಪ್ಪಲು ಆಗುತ್ತದೆ? ಎಚ್‌.ಡಿ. ಎಂದರೆ ಏನು? ಎಚ್ ಡಿ ರೇವಣ್ಣ ಎಂದರೆ ಹೊಳೆನರಸೀಪುರ ದೇವೇಗೌಡರ‌ ಮಗ ಎಂದಲ್ಲವೇ? ಎಚ್.ಡಿ. ಕುಮಾರಸ್ವಾಮಿ ಅಂದರೂ ಹಾಗೇ ಎಂದು ಡಿಕೆಶಿ ಹೇಳಿದರು.

ಭಗವಂತ ಇದನ್ನು ಕ್ಷಮಿಸಲ್ಲ

ಮಹಿಳೆಯರಿಗೆ ರಕ್ಷಣೆ ಕೊಡಬೇಕು. ಮರ್ಯಾದೆ ಹೋಗುತ್ತದೆ. ಇವರ ಚಟಕ್ಕೆ ವಿಡಿಯೊ ಮಾಡಿಕೊಂಡು ಪದೇ ಪದೆ ಬರಬೇಕು ಎಂದು ಪೀಡಿಸುತ್ತಾರೆ. ಭಗವಂತ ಇದನ್ನು ಕ್ಷಮಿಸಲ್ಲ. ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹೋಗುವಾಗ ಯಾರು ಜತೆಗೆ ಇದ್ದರು? ಯಾರು ಯಾರಿಗೆ ಕರೆ ಮಾಡಿದರು ಎಂದು ಅವರನ್ನೇ ಕೇಳಿ ಎಂದು ಡಿ.ಕೆ. ಶಿವಕುಮಾರ್ ಪ್ರಶ್ನೆ ಮಾಡಿದರು.

ಇದನ್ನೂ ಓದಿ: Hassan Pen Drive Case: ಲೈಂಗಿಕ ದೌರ್ಜನ್ಯ ಕೇಸ್;‌ ಪ್ರಜ್ವಲ್‌ ರೇವಣ್ಣ ಜೆಡಿಎಸ್‌ನಿಂದ ಅಮಾನತು

ಬಿಜೆಪಿಯವರ ಸ್ಟ್ಯಾಂಡ್ ಹೇಳಲಿ

ಈ ವಿಚಾರದಲ್ಲಿ ಬಿಜೆಪಿಯವರ ಸ್ಟ್ಯಾಂಡ್ ಹೇಳಬೇಕು. ಪ್ರಲ್ಹಾದ್‌ ಜೋಶಿ, ಸುನೀಲ್ ಕುಮಾರ್, ಬಸವರಾಜ ಬೊಮ್ಮಾಯಿ, ಶೋಭಾ ಕರಂದ್ಲಾಜೆ ಯಾಕೆ ಮಾತನಾಡುತ್ತಿಲ್ಲ. ಅವರ ಪಾರ್ಟಿಯವರು ನೋಡಿಕೊಳ್ಳುತ್ತಾರೆ ಎಂದು ವಿಪಕ್ಷ ನಾಯಕ ಆರ್.‌ ಅಶೋಕ್ ಹೇಳುತ್ತಾರೆ. ಅಶೋಕ್ ಬೆನ್ನು ಮೂಳೆ ಇಲ್ಲದ ನಾಯಕ ಎಂದು ಡಿ.ಕೆ. ಶಿವಕುಮಾರ್‌ ಕಿಡಿಕಾರಿದರು.

ಬಿಜೆಪಿಯವರು ಸ್ವಲ್ಪ ಪ್ರಾಬ್ಲಮ್ ಇದೆ ಎಂದು ಹೇಳಿದ್ದರು ಬ್ರದರ್. ಐ ವಿಲ್ ಟೇಕ್ ಕೇರ್ ಎಂದು ದೊಡ್ಡವರು ಹೇಳಿದ್ದಾರೆ ಬ್ರದರ್ ಎಂಬುದಾಗಿ ಹೇಳಿದ್ದಾರೆ ಎಂದು ಕುಮಾರಸ್ವಾಮಿ ಶೈಲಿಯಲ್ಲೇ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದರು.

Exit mobile version