ಹೊಸದಿಲ್ಲಿ: ಈ ಬಾರಿ ಕೇಂದ್ರ ಸಂಪುಟ (Central Cabinet) ರಚನೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರಿಗೆ ಕಗ್ಗಂಟಾಗಲಿದೆ ಎಂಬ ಸೂಚನೆಗಳು ಮೊದಲ ದಿನವೇ ದೊರೆತಿವೆ. ಮುಖ್ಯ ಇಲಾಖೆಗಳಿಗೆ ಎನ್‌ಡಿಎಯ (NDA) ಬಲಿಷ್ಠ ಮಿತ್ರ ಪಕ್ಷಗಳಾದ ಟಿಡಿಪಿ (TDP) ಹಾಗೂ ಜೆಡಿಯು (JDU) ಡಿಮ್ಯಾಂಡ್ ಮಾಡಿವೆ. ಕೃಷಿ ಖಾತೆಯನ್ನು (agriculture ministry) ನಿತೀಶ್ ಕುಮಾರ್ (Nitish Kumar) ಕೇಳಿದ್ದು, ಇತ್ತ ಕರ್ನಾಟಕದಿಂದ ಎಚ್.ಡಿ ಕುಮಾರಸ್ವಾಮಿ (HD Kumaraswamy) ಕೂಡ ಕೃಷಿ ಇಲಾಖೆ ಅಪೇಕ್ಷಿಸಿದ್ದಾರೆ.
ಬಿಹಾರದ ಜೆಡಿಯು ಈ ಬಾರಿ ಮೂರು ಕ್ಯಾಬಿನೆಟ್ ಸ್ಥಾನಗಳ ಜೊತೆಗೆ ಕೆಲವು ಸಹಾಯಕ ಸಚಿವ ಸ್ಥಾನಗಳ ಮೇಲೂ ಕಣ್ಣಿಟ್ಟಿದೆ ಎಂದು ಮೂಲಗಳು ತಿಳಿಸಿವೆ. ಮೂಲಗಳ ಪ್ರಕಾರ, ಕೃಷಿ, ಗ್ರಾಮೀಣಾಭಿವೃದ್ಧಿ ಮತ್ತು ಜಲಶಕ್ತಿಯಂತಹ, ಬಿಹಾರದ ಹಿತಾಸಕ್ತಿಗಳಿಗೆ ಹತ್ತಿರವಿರುವ ಸಚಿವಾಲಯಗಳು ತನಗೆ ಬೇಕು ಎಂದು ಜೆಡಿಯು ಕೇಳಿದೆ. ಪಾರ್ಟಿಯ ಹಿರಿಯ ಸಂಸದ ಲಲ್ಲನ್ ಸಿಂಗ್ ಸಚಿವರಾಗುವ ಸಾಧ್ಯತೆಗಳು ಇವೆ ಎಂಬ ಊಹಾಪೋಹವೂ ಇದೆ. ರಾಜ್ಯದ ಸಂಸದೆ ಶೋಭಾ ಕರಂದ್ಲಾಜೆ ಕಳೆದ ಅವಧಿಯಲ್ಲಿ ಕೃಷಿ ಮತ್ತು ಕೃಷಿಕರ ಕಲ್ಯಾಣ ಖಾತೆಯ ಸಹಾಯಕ ಸಚಿವರಾಗಿದ್ದರು.
ಇತ್ತ ರಾಜ್ಯದಿಂದ ಇಬ್ಬರು ಸಂಸದರನ್ನು ಆರಿಸಿ ಕಳಿಸಿರುವ ಜೆಡಿಎಸ್ ಕೂಡ ಕೃಷಿ ಖಾತೆಯನ್ನು ಅಪೇಕ್ಷಿಸಿದೆ. ಸ್ವತಃ ಜೆಡಿಎಸ್ ಮುಖಂಡ ಎಚ್‌ಡಿ ಕುಮಾರಸ್ವಾಮಿ, ಕೃಷಿ ಖಾತೆ ಕೊಟ್ಟರೆ ನಿಭಾಯಿಸುವುದಾಗಿ ಮೊದಲೇ ಹೇಳಿದ್ದಾರೆ. ನಮಗೆ ಎರಡು ಸಚಿವ ಸ್ಥಾನ ಬೇಕು ಎಂದು ಎಚ್‌ಡಿಕೆ ಬೇಡಿಕೆ ಇಟ್ಟಿದ್ದಾರೆ. ನಿನ್ನೆ ಎನ್‌ಡಿಎ ಸಭೆಗಾಗಿ ದಿಲ್ಲಿ ತಲುಪಿದಾಗಲೇ ಈ ಬಗೆಗೆ ಎಚ್‌ಡಿಕೆ ಮಾತನಾಡಿದ್ದರು. ಆದರೆ ಸಭೆಯಲ್ಲಿ ಈ ಬಗ್ಗೆ ಏನೂ ಮಾತಾಡಿರಲಿಲ್ಲ. ಸಭೆಯಲ್ಲಿ ಖಾತೆಗಳ ಹಂಚಿಕೆ ಬಗ್ಗೆ ಯಾವುದೇ ಮಾತುಕತೆ ನಡೆಯಲಿಲ್ಲ. ಮೊದಲು ಸರ್ಕಾರ ರಚನೆಯಾಗಲಿ, ನಂತರ ಖಾತೆಗಳ ಹಂಚಿಕೆ ಬಗ್ಗೆ ಮಾತಾಡೋಣ ಎಂಬ ಒಪ್ಪಂದಕ್ಕೆ ಎಲ್ಲರೂ ಬಂದಿದ್ದಾರೆ.
“ಎನ್‌ಡಿಎ ಮೈತ್ರಿಕೂಟದ ಭಾಗವಾಗಿ ನಾವಿದ್ದೇವೆ. ನಮ್ಮನ್ನು ಪರಿಗಣಿಸಿ ಸೂಕ್ತ ಸ್ಥಾನ ಮಾನ ನೀಡಬೇಕು. ಜೆಡಿಎಸ್‌ಗೆ ಒಂದು ಸ್ಥಾನ ನೀಡಬೇಕು. ನನಗೆ ಕೃಷಿ ಖಾತೆಯಲ್ಲಿ ಬಹಳ ಆಸಕ್ತಿ ಇದೆ. ಹಾಗಾಗಿ ನನಗೆ ಕೃಷಿ ಖಾತೆ ನೀಡಿ” ಎಂದಿರುವ ಕುಮಾರಸ್ವಾಮಿ, ಆರೋಗ್ಯ ಖಾತೆಯನ್ನು ಡಾ.ಸಿಎನ್ ಮಂಜುನಾಥ್ ಅವರಿಗೆ ನೀಡುವಂತೆಯೂ ಅವರ ಪರ ಬ್ಯಾಟಿಂಗ್ ಮಾಡಿದ್ದಾರೆ. ಆರೋಗ್ಯ ಸೇವೆಯ ಬಗ್ಗೆ ಹೆಚ್ಚಿನ ತಿಳಿವಳಿಕೆ ಹೊಂದಿರುವ ಡಾ.ಮಂಜುನಾಥ್ ಅವರಿಗೆ ಅದೇ ಇಲಾಖೆಯಲ್ಲೇ ಒಂದು ಸ್ಥಾನ ಸಿಗಬಹುದು ಎಂದು ರಾಜ್ಯದ ಜನತೆಯೂ ನಿರೀಕ್ಷಿಸುತ್ತಿದೆ.
ಮೈತ್ರಿಧರ್ಮವನ್ನು ಪರಿಗಣಿಸಿ ಮೋದಿ ಯಾವ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂಬುದು ರಹಸ್ಯವಾಗಿದೆ. ಯಾಕೆಂದರೆ 12 ಸಂಸದರನ್ನು ಆರಿಸಿ ಎನ್‌ಡಿಎಗೆ ಬಲ ತುಂಬಿರುವ ಜೆಡಿಯು ಬೇಡಿಕೆಯನ್ನು ಮೋದಿ ನಿರ್ಲಕ್ಷಿಸಲು ಸಾಧ್ಯವಿಲ್ಲ. ಆದರೆ ಜೆಡಿಎಸ್‌ಗೂ ಒಂದು ಇಲಾಖೆ ಕೊಡುವುದು ಅಗತ್ಯವಾಗಿದೆ. ಕೃಷಿ ಖಾತೆಗೆ ಜೆಡಿಯು ಪಟ್ಟುಹಿಡಿದರೆ ಎಚ್‌ಡಿಕೆ ಅದನ್ನು ಪಡೆಯುವುದು ಕಷ್ಟವಾಗಬಹುದು. ಹೀಗಾಗಿ ಕೃಷಿ ಖಾತೆ ಯಾರಿಗೆ ಸೇರಲಿದೆ, ಕುಮಾರಸ್ವಾಮಿ ಅವರಿಗೆ ಯಾವ ಖಾತೆ ದೊರೆಯಲಿದೆ ಎಂದು ಕುತೂಹಲ ಇದೀಗ ಗರಿಗೆದರಿದೆ.
ಶನಿವಾರ ನರೇಂದ್ರ ಮೋದಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುವುದು ಖಚಿತವಾಗಿದೆ. ಅಂದು ಮೋದಿಯವರ ಜೊತೆಗೆ ಯಾರ್ಯಾರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುತ್ತಾರೆ ಎಂಬುದು ಗೊತ್ತಾಗಲಿದೆ. ಬಹುಶಃ ಖಾತೆ ಹಂಚಿಕೆಗಳು ಆ ಬಳಿಕ ನಡೆಯಲಿವೆ.
ಇದನ್ನೂ ಓದಿ: HD Kumaraswamy: ಕೃಷಿ ಖಾತೆ ಬಯಸಿದ್ದ ಎಚ್‌ಡಿಕೆ ಎನ್‌ಡಿಎ ಮೈತ್ರಿಕೂಟದ ಸಭೆಯಲ್ಲಿ ತುಟಿ ಬಿಚ್ಚಲೇ ಇಲ್ಲ!