ಬೆಂಗಳೂರು: ಲೈಂಗಿಕ ದೌರ್ಜನ್ಯ (Physical Abuse) ಹಾಗೂ ಅಪಹರಣ (Kidnap case) ಪ್ರಕರಣದಲ್ಲಿ ಆರು ದಿನಗಳಿಂದ ಪರಪ್ಪನ ಅಗ್ರಹಾರ ಜೈಲುವಾಸಿಯಾಗಿರುವ ಮಾಜಿ ಸಚಿವ ಎಚ್.ಡಿ ರೇವಣ್ಣ (HD Revanna jailed) ಅವರಿಗೆ ನಿನ್ನೆ ಜಾಮೀನು (HD Revanna Bail) ದೊರೆತಿದೆ. ಆದರೆ ಇಂದು ಸಂಜೆಯವರೆಗೂ ಅವರು ಜೈಲಿನಲ್ಲಿರಬೇಕಾಗಿದೆ.
ಕಿಡ್ನಾಪ್ ಕೇಸ್‌ನಲ್ಲಿ ಜೈಲು ಸೇರಿದ್ದ ಎಚ್.ಡಿ.ರೇವಣ್ಣನವರಿಗೆ ಇಂದು ಸೆರೆವಾಸ ಅಂತ್ಯವಾಗಲಿದೆ. ಇಂದು ಪರಪ್ಪನ ಅಗ್ರಹಾರ ಜೈಲಿನಿಂದ ಅವರು ಬಿಡುಗಡೆಯಾಗಲಿದ್ದಾರೆ. ಆದರೆ ಮೊದಲಿಗೆ ಜಾಮೀನಿನ ಶೂರಿಟಿ ಪ್ರಕ್ರಿಯೆಯನ್ನು ಕೋರ್ಟಿನಲ್ಲಿ ಮುಗಿಸಬೇಕು. ಬೇಲ್ ಕಾಪಿ ಜೈಲಿನ ಅಧಿಕಾರಿಗಳಿಗೆ ಮುಖತಃ ಬರಬೇಕು. ಬೇಲ್ ಕಾಪಿ ಬಂದ ಬಳಿಕ ಸಂಜೆ ಬಿಡುಗಡೆ ಮಾಡುವ ಸಾಧ್ಯತೆ ಇದೆ.
ನಿನ್ನೆ ಸಂಜೆ ಜಾಮೀನು ಸಿಕ್ಕ ಖುಷಿಯಲ್ಲಿದ್ದ ರೇವಣ್ಣ ರಾತ್ರಿ 12 ಗಂಟೆ ಸುಮಾರಿಗೆ ನಿದ್ರೆಗೆ ಜಾರಿದ್ದರು. ಇಂದು ಬೆಳಿಗ್ಗೆ 4 ಗಂಟೆಗೆ ಎದ್ದು ಕೆಲ ಹೊತ್ತು ಬ್ಯಾರಕ್‌ನಲ್ಲಿ ವಾಕಿಂಗ್ ಮಾಡಿದ್ದಾರೆ. ಕೊಠಡಿಯಲ್ಲಿದ್ದ ದೇವರ ಪೋಟೋಗೆ ಪೂಜೆ ಮಾಡಿದ್ದಾರೆ. ಜೈಲು ಸಿಬ್ಬಂದಿ ನೀಡಿದ ಚಹಾವನ್ನು ಕುಡಿದು ರಿಲ್ಯಾಕ್ಸ್ ಆಗಿದ್ದು, ದಿನಪತ್ರಿಕೆ ಓದಿ ವಿದ್ಯಮಾನಗಳ ಕಡೆ ಕಣ್ಣಾಡಿಸಿದ್ದಾರೆ.
ಜೈಲಿಗೆ ಬಂದ ದಿನದಿಂದ ಮೌನಕ್ಕೆ ಜಾರಿದ್ದ ರೇವಣ್ಣ, ಆಪ್ತರ ಭೇಟಿ ವೇಳೆ ಕಣ್ಣೀರು ಹಾಕಿ ನೋವನ್ನು ಹೇಳಿಕೊಳ್ಳುತ್ತಿದ್ದರು. ಆರು ದಿನಗಳ ಕಾಲ ಪರಪ್ಪನ ಅಗ್ರಹಾರ ಜೈಲಿನಲ್ಲಿ ಸೆರೆವಾಸ ಅನುಭವಿಸಿರುವ ಅವರಿಗೆ ನ್ಯಾಯಾಲಯ ಕೊನೆಗೂ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಇಂದು ರೇವಣ್ಣ ಅವರು ಪರಪ್ಪನ ಅಗ್ರಹರ ಜೈಲಿನಿಂದ ಬಿಡುಗಡೆಯಾಗುವ ಹಿನ್ನೆಲೆಯಲ್ಲಿ, ಜೆಡಿಎಸ್ ಕಾರ್ಯಕರ್ತರು ಪರಪ್ಪನ ಅಗ್ರಹಾರ ಜೈಲು ಬಳಿ ಸೇರುವ ಸಾಧ್ಯತೆ ಇದೆ. ಹೀಗಾಗಿ ಜೈಲಿನ ರಸ್ತೆಯಲ್ಲಿ ಬಿಗಿ ಭದ್ರತೆ ಒದಗಿಸಲಾಗಿದೆ. ಇಬ್ಬರು ಎಸಿಪಿ, 6 ಜನ ಇನ್ಸ್ಪೆಕ್ಟರ್, 15 ಜನ ಸಬ್ ಇನ್ಸ್ಪೆಕ್ಟರ್ ಸೇರಿ 200 ಸಿಬ್ಬಂದಿಯಿಂದ ಭದ್ರತೆ ಒದಗಿಸಲಾಗಿದೆ. 12 ಗಂಟೆ ಒಳಗೆ ಕೋರ್ಟ್ ಜಾಮೀನು ಪ್ರಕ್ರಿಯೆ ಮುಗಿಸಿ ರೇವಣ್ಣ ಪರ ವಕೀಲರು ಜಾಮೀನು ಪ್ರತಿ ಪಡೆಯಲಿದ್ದು, 1 ಗಂಟೆಯೊಳಗೆ ಜಾಮೀನು ಪ್ರತಿಯನ್ನು ಜೈಲು ತಲುಪಿಸುವ ಸಾಧ್ಯತೆ ಇದೆಯೆಂದು ತಿಳಿದುಬಂದಿದೆ.
ಎಚ್.ಡಿ. ರೇವಣ್ಣಗೆ ಜಾಮೀನು ಸಿಗುವುದಕ್ಕೆ ಕಾರಣಗಳೇನು?
- ರೇವಣ್ಣ ಅವರೇ ಕಿಡ್ನ್ಯಾಪ್ ಮಾಡಿಸಿದ್ದು ಎನ್ನುವುದಕ್ಕೆ ಸಾಕ್ಷಿ ಇಲ್ಲ.
- ಸಿಆರ್‌ಪಿಸಿ ಅಡಿ ಸಂತ್ರಸ್ತೆ ನೀಡಿದ್ದ ಹೇಳಿಕೆಯಲ್ಲೂ ಪ್ರಸ್ತಾಪ ಇಲ್ಲ.
- ರಿಮ್ಯಾಂಡ್ ಅಪ್ಲಿಕೇಶನ್ನಲ್ಲಿ ಸಾಕ್ಷಿ ಒದಗಿಸಲು ಎಸ್ಐಟಿ ವಿಫಲವಾಗಿದೆ.
- ಎಚ್.ಡಿ. ರೇವಣ್ಣ ಸೂಚನೆ ಮೇರೆಗೆ ಸಂತ್ರಸ್ತೆ ಕಿಡ್ನ್ಯಾಪ್ ಅನ್ನಲು ಸಾಕ್ಷಿ ಇಲ್ಲ.
ರೇವಣ್ಣ ಅವರಿಗೆ ಏಕೆ ಜಾಮೀನು ಕೊಡಲಾಗುತ್ತಿದೆ ಎಂಬುದಾಗಿ ಈ ಮೇಲಿನ ಕಾರಣಗಳನ್ನು ಉಲ್ಲೇಖಿಸಿ, ನ್ಯಾಯಾಧೀಶರು ಸ್ಪಷ್ಟವಾಗಿ ಆದೇಶಿಸಿದ್ದಾರೆ. ಆದರೆ, ಕೆಲವು ಷರತ್ತುಗಳನ್ನು ನ್ಯಾಯಾಲಯವು ವಿಧಿಸಿದೆ.
8 ಷರತ್ತುಗಳನ್ನು ವಿಧಿಸಿ ಬೇಲ್ ಕೊಟ್ಟ ಕೋರ್ಟ್!
- 5 ಲಕ್ಷ ರೂಪಾಯಿ ಮೌಲ್ಯದ ಬಾಂಡ್ ಕೊಡಬೇಕು
- ಇಬ್ಬರ ಶ್ಯೂರಿಟಿಯನ್ನು ಒದಗಿಸಿಕೊಡಬೇಕು
- ಯಾವ ಕಾರಣಕ್ಕೂ ದೇಶ ಬಿಟ್ಟು ಹೋಗಬಾರದು
- ಕೇಸ್ ಆಗಿರುವ ಕೆ.ಆರ್.ನಗರಕ್ಕೆ ಹೋಗಬಾರದು
- ಎಸ್‌ಐಟಿ ತನಿಖೆಗೆ ಸೂಕ್ತ ಸಹಕಾರ ನೀಡಲೇಬೇಕು
- ಯಾವುದೇ ರೀತಿಯ ಸಾಕ್ಷ್ಯ ನಾಶ ಮಾಡಬಾರದು
- ಪಾಸ್ ಪೋರ್ಟ್ ಅನ್ನು ಕೋರ್ಟ್‌ಗೆ ಸಲ್ಲಿಸಬೇಕು.
- ನ್ಯಾಯಾಲಯದ ಅನುಮತಿ ಇಲ್ಲದೇ ರಾಜ್ಯದಿಂದ ಹೊರಹೋಗುವಂತಿಲ್ಲ.
ಸಂತ್ರಸ್ತೆ ಹೇಳಿಕೆಯ ವಿಡಿಯೊ ಪ್ರಸ್ತಾಪ
ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಸತತ ನಾಲ್ಕು ಗಂಟೆಗಳ ಕಾಲ ವಾದ – ಪ್ರತಿವಾದಗಳು ನಡೆದಿವೆ. ಕಲಾಪ ಆರಂಭವಾಗುತ್ತಿದ್ದಂತೆ ವಾದ ಮಂಡಿಸಿದ ಎಸ್‌ಐಟಿ ಪರ ಎಸ್‌ಪಿಪಿ ಜಯ್ನಾ ಕೊಠಾರಿ, 2 ವಿಚಾರಗಳಿಗೆ ಸಂಬಂಧಿಸಿ ಆರೋಪಿಗೆ ಜಾಮೀನು ಕೊಡಬೇಡಿ. ಒಂದು ಪ್ರಕರಣದ ಗಂಭೀರತೆಯನ್ನು ನೋಡಬೇಕಿದ್ದು, ಇದರಲ್ಲಿ ಶಿಕ್ಷೆ ಪ್ರಮಾಣ ಹೆಚ್ಚಿದೆ. ಕಿಡ್ನ್ಯಾಪ್ ಕೇಸಲ್ಲೂ ಈಗಾಗಲೇ 2ನೇ ಆರೋಪಿ ಹೇಳಿಕೆಯನ್ನು ಪಡೆಯಲಾಗಿದೆ. ಈ ನಡುವೆ ಸಂತ್ರಸ್ತೆಯ ವಿಡಿಯೊವನ್ನು ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಸಂತ್ರಸ್ತೆ ಸ್ಪಷ್ಟನೆ ನೀಡಿದ್ದಾರೆ ಎಂಬುದಾಗಿ ವಿಡಿಯೋ ವೈರಲ್ ಬಗ್ಗೆ ಕೋರ್ಟ್‌ಗೆ ಮಾಹಿತಿಯನ್ನು ನೀಡಿದರು.
ಮೊದಲು ತನಿಖಾ ವರದಿ ಕೊಡಿ ಎಂದ ನ್ಯಾಯಾಧೀಶರು
ಈ ವೇಳೆ ಮಧ್ಯಪ್ರವೇಶ ಮಾಡಿದ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಜಡ್ಜ್ ಸಂತೋಷ್ ಗಜಾನನ ಭಟ್, ತನಿಖಾಧಿಕಾರಿಯ ಇನ್‌ವೆಸ್ಟಿಗೇಷನ್ ರಿಪೋರ್ಟ್ ಅನ್ನು ಮೊದಲು ಸಲ್ಲಿಸಿ. ಕಿಡ್ನ್ಯಾಪ್ ಕೇಸ್ ಸಂಬಂಧ ಏನೇನು ವಿಚಾರಗಳು ನಡೆದಿವೆ ಎಂಬುದನ್ನು ತಿಳಿಯಬೇಕು ಎಂದು ಎಸ್‌ಪಿಪಿಗೆ ಸೂಚಿಸಿದರು. ಆಗ ರೇವಣ್ಣ ಪರ ವಕೀಲ ಸಿ.ವಿ. ನಾಗೇಶ್, ತನಿಖಾ ವರದಿಯನ್ನು ನಮಗೂ ಕೊಟ್ಟಿಲ್ಲ ಎಂದು ಕೋರ್ಟ್ ಗಮನಕ್ಕೆ ತಂದರು. ಈ ವೇಳೆ ಮುಚ್ಚಿದ ಲಕೋಟೆಯಲ್ಲಿ ಇನ್‌ವೆಸ್ಟಿಗೇಷನ್ ರಿಪೋರ್ಟ್ ಅನ್ನು ಸಲ್ಲಿಸಲಾಯಿತು. ಇದಕ್ಕೆ ಎಚ್.ಡಿ. ರೇವಣ್ಣ ಪರ ಹಿರಿಯ ವಕೀಲ ಸಿ.ವಿ. ನಾಗೇಶ್‌ರಿಂದ ಆಕ್ಷೇಪ ವ್ಯಕ್ತವಾಯಿತು. ಬಳಿಕ ತಮಗೂ ಒಂದು ಕಾಪಿ ನೀಡಲು ಕೇಳಿದ್ದು, ಅವರಿಗೂ ಒಂದು ಪ್ರತಿಯನ್ನು ನೀಡಲಾಯಿತು.
ಸಿ.ವಿ.ನಾಗೇಶ್ ವಾದ
ಇಬ್ಬರೂ ಎಸ್‌ಪಿಪಿಗಳ ವಾದ ಮಂಡನೆ ನಂತರ ಸಿ.ವಿ. ನಾಗೇಶ್ ವಾದವನ್ನು ಆರಂಭಿಸಿದರು. ಏಪ್ರಿಲ್ 29ಕ್ಕೆ ಕಿಡ್ನ್ಯಾಪ್ ಮಾಡಿದರೆ, ದೂರು ಕೊಡಲು ತಡ ಯಾಕೆ ಮಾಡಿದರು? ಸಂತ್ರಸ್ತ ಮಹಿಳೆ ಎಚ್.ಡಿ.ರೇವಣ್ಣ ಅವರ ಸಂಬಂಧಿಯಾಗಿದ್ದಾರೆ. ಸುಮಾರು ವರ್ಷ ರೇವಣ್ಣ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದರು. ಮನೆಯಲ್ಲಿ ಕೆಲಸ ಮಾಡಿದ್ದವರನ್ನು ಯಾಕೆ ಕಿಡ್ನ್ಯಾಪ್ ಮಾಡಬೇಕು? ಮನೆ ಕೆಲಸ ಮಾಡುತ್ತಿದ್ದರಲ್ಲ, ಕರೆದುಕೊಂಡು ಬನ್ನಿ ಅಂದಿರಬಹುದು. ಇಲ್ಲಿ ಸಂತ್ರಸ್ತ ಮಹಿಳೆಯನ್ನು ಕಿಡ್ನ್ಯಾಪ್ ಮಾಡಿಸುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.
ರೇವಣ್ಣ ಅರೆಸ್ಟ್ ಆದ ದಿನವೇ ಸಂತ್ರಸ್ತೆ ಮಹಿಳೆ ಹುಣಸೂರಿನಲ್ಲಿ ಪತ್ತೆಯಾಗಿದ್ದಾರೆ. ಮೈಸೂರಿನ ಹುಣಸೂರು ಠಾಣಾ ವ್ಯಾಪ್ತಿಯಲ್ಲಿ ಮಹಿಳೆ ಪತ್ತೆ ಆಗಿದ್ದರು. ಸಂತ್ರಸ್ತ ಮಹಿಳೆ ಪ್ರಜ್ವಲ್ ರೇವಣ್ಣ ವಿರುದ್ಧ ಮಾತ್ರ ಆರೋಪಿಸಿದ್ದಾರೆ. ರೇವಣ್ಣ ವಿರುದ್ಧ ಸಂತ್ರಸ್ತೆ ಮಹಿಳೆ ಯಾವುದೇ ಆರೋಪವನ್ನು ಮಾಡಿಲ್ಲ ಎಂದು ಎಚ್.ಡಿ. ರೇವಣ್ಣ ಪರ ಹಿರಿಯ ವಕೀಲ ಸಿ.ವಿ.ನಾಗೇಶ್ ವಾದ ಮಂಡಿಸಿದರು.
ಸಂತ್ರಸ್ತ ಮಹಿಳೆಯಿಂದ ಪ್ರಜ್ವಲ್ ರೇವಣ್ಣ ವಿರುದ್ಧ ರೇಪ್ ಆರೋಪದ ಬಗ್ಗೆ ವಾದ ಮಂಡಿಸಿದ ಸಿ.ವಿ. ನಾಗೇಶ್, ಸಂತ್ರಸ್ತೆಯು ಸಿಆರ್‌ಪಿಸಿ 161 ಅಡಿಯಲ್ಲಿ ಹೇಳಿಕೆ ನೀಡುವಾಗ, ಕೇವಲ ಪ್ರಜ್ವಲ್ ವಿರುದ್ಧ ಅತ್ಯಾಚಾರ ಅಂತಾ ಆರೋಪ ಮಾಡಿದ್ದಾಳೆ. ಇದೇ ವೇಳೆ ಪ್ರಕರಣಕ್ಕೆ ಸಂಬಂಧಿಸಿ ಎರಡು ರಿಮ್ಯಾಂಡ್ ಅರ್ಜಿ ಸಲ್ಲಿಕೆಯಾಗಿದೆ. ಕಿಡ್ನ್ಯಾಪ್ ಮಾಡಿದ್ದಾರೆ ಅಂತಾ ಮಹಿಳೆಯ ಮಗನಿಗೆ ಹೇಗೆ ಗೊತ್ತಾಯ್ತು? ಅದು ಊಹೆಯಷ್ಟೇ. ಸಂತ್ರಸ್ತೆಯ ಮಗನಿಗೆ ಯಾರೂ ಕಾಲ್ ಮಾಡಿ ಡಿಮ್ಯಾಂಡ್ ಮಾಡಿಲ್ಲ. ಇನ್ನು ಸಂತ್ರಸ್ತ ಮಹಿಳೆಯನ್ನು ಅಂದು ಹುಣಸೂರಿನ ಬಳಿ ರಕ್ಷಣೆ ಮಾಡಲಾಗಿದೆ. ಆಪ್ತ ಸಮಾಲೋಚನೆ ಮಾಡಿ, ಆಕೆಯನ್ನು ಸುರಕ್ಷಿತ ಕೊಠಡಿಯಲ್ಲಿಡಲಾಗಿದೆ. ಈ ಪ್ರಕರಣ ಸಂಬಂಧ ಹೇಳಿಕೆ ದಾಖಲಿಸಿಲ್ಲ ಏಕೆ? ಇಲ್ಲಿಯ ತನಕ ರೇವಣ್ಣ ವಿರುದ್ಧ ಯಾವುದೇ ಸಾಕ್ಷಿಯನ್ನೂ ಸಂಗ್ರಹಿಸಿಲ್ಲ, ಸಂತ್ರಸ್ತೆಯನ್ನು ಕರೆದೊಯ್ದು ಸ್ಥಳ ಮಹಜರು ಮಾಡಿಸಿಲ್ಲ. ಸಂತ್ರಸ್ತ ಮಹಿಳೆಯನ್ನು ಕೇವಲ ಆಪ್ತ ಸಮಾಲೋಚನೆಯಲ್ಲಿ ಇರಿಸಿದ್ದಾರೆ ಎಂದು ರೇವಣ್ಣ ಪರ ವಕೀಲ ಸಿ.ವಿ.ನಾಗೇಶ್ ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.
ಸಂತ್ರಸ್ತ ಮಹಿಳೆಯನ್ನು ಹುಣಸೂರಿನ ತೋಟದಿಂದ ರಕ್ಷಣೆ ಮಾಡಿದರಾ? ಎಸ್‌ಐಟಿ ಎಲ್ಲಿಂದ ಮಹಿಳೆಯನ್ನು ಕರೆತಂದರು? ಅವರ ಸಂಬಂಧಿಕರ ಮನೆಯಿಂದ ಸಂತ್ರಸ್ತೆಯನ್ನು ಕರೆ ತಂದಿದ್ದಾರೆ. ಅದಕ್ಕೆ ಸಾಕ್ಷಿಯಾಗಿ ಎರಡು ಕಡೆ ರೆಕಾರ್ಡ್ ಆಗಿದೆ. ಒಂದು ಕಡೆ ಫೋಟೋ ಶಾಪ್‌ವೊಂದರ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇನ್ನೊಂದು ಕಡೆ ತರಕಾರಿ ಅಂಗಡಿ ಸಿಸಿ ಕ್ಯಾಮರಾದಲ್ಲಿ ಇದು ಸೆರೆಯಾಗಿದೆ. ಅನುಮತಿ ನೀಡಿದರೆ ಸೆರೆಯಾಗಿರುವ ದೃಶ್ಯವನ್ನು ತೋರಿಸಲು ನಾವು ಸಿದ್ಧ. ಈಗ ನ್ಯಾಯಾಲಯದಲ್ಲಿಯೇ ಪ್ಲೇ ಮಾಡುತ್ತೇವೆ. ಸ್ಪೆಷಲ್ ಇನ್‌ವೆಸ್ಟಿಗೇಷನ್ ಟೀಮ್ ವಿರುದ್ಧವೇ ಸಿ.ವಿ. ನಾಗೇಶ್ ಆರೋಪಿಸಿದರು.
ಕಿಡ್ನ್ಯಾಪ್ ಪ್ರಕರಣದಲ್ಲಿ ಎಸ್‌ಐಟಿಯವರೇ ಟ್ಯಾಂಪರಿಂಗ್ ಮಾಡುತ್ತಿದ್ದಾರೆ. ಆದರೆ, ಎಸ್‌ಪಿಪಿಯವರು ಸಂತ್ರಸ್ತೆ ಹೇಳಿಕೆಯನ್ನು ಟ್ಯಾಂಪರಿಂಗ್ ಆಗಿದೆ ಎಂದು ಹೇಳಿದ್ದಾರೆ. ವೈರಲ್ ಆದ ಸ್ಪಷ್ಟನೆ ವಿಡಿಯೊದಲ್ಲಿ ಸಂತ್ರಸ್ತೆಯೇ ಹೇಳಿಕೊಂಡಿದ್ದಾರೆ. ನನ್ನನ್ನು ಯಾರೂ ಕಿಡ್ನ್ಯಾಪ್ ಮಾಡಿಲ್ಲವೆಂದಿದ್ದಾರೆ. ನಮ್ಮ ಕುಟುಂಬಕ್ಕೆ ತೊಂದರೆಯಾದರೆ ಅವರೇ ಹೊಣೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಸಂಬಂಧಿಕರ ಮನೆಯಲ್ಲಿದ್ದೇನೆ. ಬೇಗ ಬರುತ್ತೇನೆ ಎಂದೂ ಹೇಳಿದ್ದಾರೆ. ಯಾರೂ ಬೆದರಿಕೆ ಹಾಕಿಲ್ಲ, ಬಲವಂತವಾಗಿಯೂ ಕರೆದೊಯ್ದಿಲ್ಲ ಎಂದು ಹೇಳಿಕೊಂಡಿದ್ದಾರೆ. ಹೀಗೆಲ್ಲಾ ಸಂತ್ರಸ್ತೆಯೇ ವಿಡಿಯೊ ಮೂಲಕ ಹೇಳಿದ್ದಾರೆ. ಹಾಗಾಗಿ ಕಿಡ್ನ್ಯಾಪ್ ಹೇಗೆ ಆಗುತ್ತದೆ. ಈ ಕಾರಣಕ್ಕಾಗಿ ರೇವಣ್ಣ ಅವರಿಗೆ ಜಾಮೀನು ನೀಡಬೇಕು ಎಂದು ಸಿ.ವಿ. ನಾಗೇಶ್ ಕೋರಿದರು.
ಕಿಡ್ನ್ಯಾಪ್ ಪ್ರಕರಣದಲ್ಲಿ ಚುನಾವಣಾ ತಕರಾರು ಅರ್ಜಿ ತರುವುದು ಬೇಡ. ಎಸ್‌ಪಿಪಿ ವಾದದ ಅಂಶಗಳನ್ನು ಆಕ್ಷೇಪಿಸಿ ರೇವಣ್ಣ ಪರ ವಕೀಲರು ವಾದ ಮಂಡಿಸಿದರು. ಎಚ್.ಡಿ.ರೇವಣ್ಣ ವಿರುದ್ಧ ಕೇಳಿಬಂದಿರುವ ಆರೋಪಗಳು ಸಾಬೀತಾಗಿಲ್ಲ. ಹಿಂದಿನ ಕೇಸ್‌ಗಳು ಸಾಬೀತಾಗಿದ್ದರೆ ಯಾಕೆ ಎಲ್ಲವೂ ಬಿ ರಿಪೋರ್ಟ್ ಆಗುತ್ತಿತ್ತು? ಎಂದು ಪ್ರಶ್ನೆ ಮಾಡಿದರು.
ರಿಮ್ಯಾಂಡ್ ಅಪ್ಲಿಕೇಷನ್‌ನಲ್ಲಿ ಎಸ್‌ಐಟಿ ಲೋಪವೆಸಗಿದೆ. ಅದರಲ್ಲಿ ಸಂತ್ರಸ್ತೆಯ ಹೇಳಿಕೆ ಒಂದು ಪ್ಯಾರಾ ಇದೆ. ಅದು ಬಿಟ್ಟು ರಿಮ್ಯಾಂಡ್ ಅಪ್ಲಿಕೇಷನ್‌ನಲ್ಲಿ ಆರೋಪಿ ಹೇಳಿಕೆಯೇ ಇದೆ. ಸಂತ್ರಸ್ತ ಮಹಿಳೆಯ ಹೇಳಿಕೆ ಒಂದು ಪ್ಯಾರಾ ಬಿಟ್ಟರೆ ಬೇರೆ ಇಲ್ಲವೇ ಇಲ್ಲ. ಯಾವಾಗಲೂ ಹೇಳಿಕೆ ದಾಖಲು ಮಾಡಿಕೊಳ್ಳುವುದೇ ಎಸ್‌ಐಟಿ ಕೆಲಸನಾ? ಸಂತ್ರಸ್ತೆ ಏನು ಹೇಳ್ತಾರೆ? ಏನು ಹೇಳಲ್ಲ ಅಂತಾ ಹೇಳಿಕೆ ದಾಖಲಾಗಬೇಕು. ಆಕೆ ಎಸ್‌ಐಟಿ ಸುಪರ್ದಿಯಲ್ಲಿರುವಾಗ ಏನನ್ನೂ ಮಾಡಿಲ್ಲ. ರಿಮ್ಯಾಂಡ್ ಅಪ್ಲಿಕೇಷನ್‌ನಲ್ಲಿರುವಂತೆ ಯಾವುದೇ ಸಾಕ್ಷಿ ಸಂಗ್ರಹಿಸಿಲ್ಲ. ಆದರೆ, ನ್ಯಾಯಾಲಯಕ್ಕೆ ಎಸ್ಐಟಿ ರಿಮ್ಯಾಂಡ್ ಅಪ್ಲಿಕೇಷನ್ ಸಲ್ಲಿಸಿದ್ದಾರೆ ಎಂದು ನಾಗೇಶ್ ಹೇಳಿದರು.
ಇದನ್ನೂ ಓದಿ: Prajwal Revanna Case: ರೇವಣ್ಣಗೆ ಜಾಮೀನು ಹಿನ್ನೆಲೆ ವಿದೇಶದಿಂದ ಪ್ರಜ್ವಲ್ ವಾಪಸ್?; ಕೋರ್ಟ್‌ಗೆ ಶರಣಾಗುವ ಸಾಧ್ಯತೆ