ಮೈಸೂರು: ನಾನು ಮುಡಾದಿಂದ (MUDA) ಯಾವುದೇ ನಿವೇಶನ (Site) ಪಡೆದಿಲ್ಲ. ಮುಡಾದಲ್ಲಿ ನಿವೇಶನ ಸಿಗದಿರುವುದೇ ನನ್ನ ಅದೃಷ್ಟ ಎಂದುಕೊಳ್ಳುತ್ತೇನೆ. ಒಂದು ವೇಳೆ ನಿವೇಶನ ಮಂಜೂರಾಗಿದ್ದರೆ ಅದನ್ನೇ ದೊಡ್ಡದಾಗಿ ಅಪಪ್ರಚಾರ ಮಾಡುತ್ತಿದ್ದರು ಎಂದು ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ (Union minister HD Kumaraswamy) ಹೇಳಿದ್ದಾರೆ.
ಮೈಸೂರಿನಲ್ಲಿ ಅವರು ಪತ್ರಿಕಾಗೋಷ್ಠಿ ನಡೆಸಿದರು. 1984ರಲ್ಲಿ ನಿವೇಶನ ಕೋರಿ ಮುಡಾಗೆ ಅರ್ಜಿ ಸಲ್ಲಿಸಿದ್ದೇನೆ. 37 ಸಾವಿರ ಹಣವನ್ನು ಕಟ್ಟಿದ್ದೇನೆ. 2006ರಲ್ಲಿ ನಾನು ಸಿಎಂ ಆಗಿದ್ದಾಗ ಯಾರಿಗಾದರೂ ಹೇಳಿದ್ದರೆ ಮನೆಗೆ ಫೈಲ್ ತಂದು ಕೊಡುತ್ತಿದ್ದರು. ಆದರೆ ಆಗಲೂ ಪ್ರಭಾವ ಬಳಸಿ ನಿವೇಶನ ಪಡೆಯಲಿಲ್ಲ. ಮುಡಾದಲ್ಲಿ ನಿವೇಶನ ಸಿಗದಿರುವುದೇ ನನ್ನ ಅದೃಷ್ಟ ಎಂದುಕೊಳ್ಳುತ್ತೇನೆ. ಒಂದು ವೇಳೆ ನಿವೇಶನ ಮಂಜೂರಾಗಿದ್ದರೆ ಅದನ್ನೇ ದೊಡ್ಡದು ಮಾಡುತ್ತಿದ್ದರು. ಆದರೂ ಕಾಂಗ್ರೆಸ್‌ನವರು ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಮೈಸೂರಿನಲ್ಲಿ ಟೀಕಿಸಿದರು.
ನನ್ನ ಮೇಲೆ ಆರೋಪ ಮಾಡೋಕೆ ಕಾಂಗ್ರೆಸ್‌ನವರಿಗೆ ಬೇರೆ ಏನೂ ಸಿಗಲಿಲ್ವಾ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು. ಮುಡಾ ಹಗರಣದಿಂದ ಪಾರಾಗಲು ಸಿಎಂ ಸಿದ್ದರಾಮಯ್ಯ ದೇಸಾಯಿ ಆಯೋಗ ರಚನೆ ಮಾಡಿದ್ದಾರೆ. ದೇಸಾಯಿ ಆಯೋಗದ ವರದಿಯನ್ನು ತಗೊಂಡು ನೆಕ್ಕಲು ಆಗುತ್ತ? ಪ್ರಕರಣದಿಂದ ಬಚಾವ್ ಆಗುವ ಸಲುವಾಗಿಯೇ ದೇಸಾಯಿ ನೇತೃತ್ವದ ಆಯೋಗ ರಚನೆ ಮಾಡಿದ್ದಾರೆ. ಈ ಸರ್ಕಾರ, ಸಿದ್ದರಾಮಯ್ಯ ಒಂದು ಕ್ಷಣವೂ ಮುಂದುವರಿಯಬಾರದು ಎಂಬುದು ನನ್ನ ಆಶಯ ಎಂದು ಅವರು ಆಗ್ರಹಿಸಿದರು.
ಸಿದ್ದರಾಮಯ್ಯ ಪತ್ನಿ 50 ಅಲ್ಲ, 100 ನಿವೇಶನ ಬೇಕಾದರೂ ಪಡೆದುಕೊಳ್ಳಲಿ. ಅದಕ್ಕೆ ನಮ್ಮದೇನೂ ಅಭ್ಯಂತರವಿಲ್ಲ. ಆದರೆ ಕಾನೂನುಬದ್ಧವಾಗಿ ಪಡೆದುಕೊಳ್ಳಲಿ ಎಂಬುದು ನಮ್ಮ ಆಶಯ. ಸಿದ್ದರಾಮಯ್ಯ ಪತ್ನಿಗೆ ನೀಡಿರುವ ನಿವೇಶಗಳನ್ನು ಕಾನೂನು ಬಾಹಿರವಾಗಿ ನೀಡಲಾಗಿದೆ. ಎಲ್ಲಾ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಪರಿಶಿಷ್ಟ ಜಾತಿಯವರಿಗೆ ಅನ್ಯಾಯವಾಗಿದೆ. 16/2 ಆಗಿರುವ ಜಮೀನನ್ನು ಇವರು ಹೇಗೆ ಖರೀದಿ ಮಾಡಿದರು? ಮಲ್ಲಿಕಾರ್ಜುನ ಸ್ವಾಮಿ ಖರೀದಿ ಮಾಡಿದಾಗ ಡಿಸಿ ಕೃಷಿ ಭೂಮಿ ಎಂದು ವರದಿ ಕೊಟ್ಟಿದ್ದಾನೆ. ಆಗ ಡಿಸಿ ಏನು ಮಣ್ಣು ತಿನ್ನುತ್ತಿದ್ನಾ? ಸ್ಪಾಟ್‌ಗೆ ಹೋಗಿ ನೋಡಿದ್ನಾ? ಆಗಿರುವ ಅನ್ಯಾಯ ಸರಿಪಡಿಸಬೇಕು ಎಂಬುದು ನಮ್ಮ ಆಗ್ರಹ. ಮುಡಾ ಹಗರಣದ ವಿರುದ್ಧ ಹೋರಾಟ ಮುಂದುವರಿಯಲಿದೆ ಎಂದು ಕೇಂದ್ರ ಸಚಿವ ಎಚ್‌ಡಿಕೆ ಹೇಳಿದರು.
ಜೆಡಿಎಸ್ ನಾಯಕರಿಂದ ಶಾಸಕ ಜಿಟಿ ದೇವೇಗೌಡ ಅಂತರ ಕಾಯ್ದುಕೊಂಡ ವಿಚಾರದಲ್ಲಿ ಕೇಳಲಾದ ಪ್ರಶ್ನೆಗೆ, ಜಿಟಿ ದೇವೇಗೌಡರು ನಮ್ಮ ಕುಟುಂಬದ ಸದಸ್ಯರು. ಆ ರೀತಿಯಾದ ಮುನಿಸು ಏನಿಲ್ಲ. ಎಲ್ಲವೂ ಸರಿ ಹೋಗುತ್ತದೆ. ಅವರಿಗೆ ಇತರೆ ಕಾರ್ಯಕ್ರಮ ನಿಗದಿಯಾಗಿರುವ ಕಾರಣ ಬೇರೆ ಕಡೆ ತೆರಳಿದ್ದಾರೆ. ನಮ್ಮೆಲ್ಲ ನಾಯಕರು ಜತೆಯಲ್ಲೇ ಇದ್ದೇವೆ ಎಂದು ಎಚ್‌ಡಿಕೆ ಹೇಳಿದರು. ಚನ್ನಪಟ್ಟಣ ಉಪಚುನಾವಣೆ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ, ಅಲ್ಲಿ ಎನ್‌ಡಿಎ ಅಭ್ಯರ್ಥಿ ಸ್ಪರ್ಧೆ ಮಾಡುತ್ತಾರೆ ಎಂದಷ್ಟೇ ನುಡಿದರು.
ಪ್ರವಾಸಿ ಮಂದಿರ ಸಿಬ್ಬಂದಿ ಮೇಲೆ ಕ್ರಮ
ಎಚ್.ಡಿ. ಕುಮಾರಸ್ವಾಮಿ ತೆರಳಿದ್ದ ವೇಳೆ ಪ್ರವಾಸಿ ಮಂದಿರಕ್ಕೆ ಬೀಗ ಹಾಕಿದ್ದ ಹಿನ್ನೆಲೆಯಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಮೈಸೂರು ಡಿಸಿ ಮುಂದಾಗಿದ್ದಾರೆ. ಈ ಬಗ್ಗೆ ಮಾಧ್ಯಮ ಪ್ರಕಟಣೆ ಹೊರಡಿಸಿರುವ ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮೀಕಾಂತ್ ರೆಡ್ಡಿ, ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮಕ್ಕೆ ಆದೇಶಿಸಿದ್ದಾರೆ. ಇಂದು ಬೆಳಗ್ಗೆ ದೇವರ ದರ್ಶನ ಪಡೆದು ನಂಜನಗೂಡು ಪ್ರವಾಸಿ ಮಂದಿರಕ್ಕೆ ವಿಶ್ರಾಂತಿಗೆ ತೆರಳಿದ್ದ ಕುಮಾರಸ್ವಾಮಿ ಅವರಿಗೆ ಬೀಗ ಹಾಕಿದ್ದ ಸರ್ಕಾರಿ ಅತಿಥಿ ಗೃಹ ಎದುರಾಗಿತ್ತು. 10 ನಿಮಿಷ ಕಾದು ಯಾರೂ ಬಾರದ ಹಿನ್ನೆಲೆಯಲ್ಲಿ ಅವರು ಮೈಸೂರಿಗೆ ಮರಳಿದ್ದರು.
ಇದನ್ನೂ ಓದಿ: HD Kumaraswamy: ಎಚ್‌ಡಿ ಕುಮಾರಸ್ವಾಮಿ ಬಂದರೂ ತೆಗೆಯದ ಪ್ರವಾಸಿ ಮಂದಿರ ಬೀಗ, ಕೇಂದ್ರ ಸಚಿವರಿಗೆ ಅವಮಾನ