Site icon Vistara News

ವಿಸ್ತಾರ ಸಂಪಾದಕೀಯ: ರಷ್ಯಾದಲ್ಲಿ ಬಂಡಾಯ, ಪುಟಿನ್ ವಿಸ್ತರಣಾಕಾಂಕ್ಷೆಯ ದುಷ್ಪರಿಣಾಮ

Turmoil In Russia: Vladimir Putin with Army

Insurgency in Russia, a side effect of Putin's expansionism

ರಾಷ್ಟ್ರದ ನಾಯಕತ್ವ ವಹಿಸಿದವರಲ್ಲಿ ವಿಸ್ತರಣಾಕಾಂಕ್ಷೆ, ಸರ್ವಾಧಿಕಾರ ಧೋರಣೆ ಸೇರಿಕೊಂಡಾಗ ಏನಾಗುತ್ತದೆ ಎಂಬುದಕ್ಕೆ ಸದ್ಯದ ರಷ್ಯದ ಸ್ಥಿತಿಯೇ ಉದಾಹರಣೆ. ಸದ್ಯ ಅಲ್ಲಿನ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಅವರೇ ಹುಟ್ಟಿಸಿ ಸಾಕಿ ಬೆಳೆಸಿದ ಬಾಡಿಗೆ ಸೈನ್ಯದ ನಾಯಕನೇ ಅವರಿಗೆ ತಿರುಗಿ ಬಿದ್ದಿದ್ದಾನೆ. ರಷ್ಯಾದ ಸೈನ್ಯಕ್ಕೂ ಬಾಡಿಗೆ ಸೈನ್ಯಕ್ಕೂ ಚಕಮಕಿ ಶುರುವಾಗಿದೆ. ಪುಟಿನ್‌ ಅವರ ಸರ್ವಾಧಿಕಾರಿ ಧೋರಣೆಯಿಂದ ನೊಂದಿರುವ ಹಲವರು ಬಂಡಾಯ ಸೈನ್ಯದ ಜತೆ ಹೋಗಲೂಬಹುದು. ಪರಿಣಾಮ ಏನಾಗುತ್ತದೆ ಎಂದು ಹೇಳಬರುವಂತಿಲ್ಲ. ಪುಟಿನ್‌ ಅವರೇ ಉಳಿದುಕೊಳ್ಳಲೂಬಹುದು; ತಲೆದಂಡವಾಗಲೂಬಹುದು. ಆದರೆ ಏನೇ ಆದರೂ ರಷ್ಯಾದ ಅಮಾಯಕ ಪ್ರಜೆಗಳಿಗಂತೂ ಕಂಟಕ ಕಟ್ಟಿಟ್ಟ ಬುತ್ತಿ.

ಪಕ್ಕದ ದೇಶ ಉಕ್ರೇನ್‌ ನ್ಯಾಟೋ ಸೇರಲು ಬಯಸುತ್ತಿದೆ ಎಂಬುದು ರಷ್ಯಾದಂಥ ಬಲಿಷ್ಠ ದೇಶದ ನಾಯಕನಲ್ಲಿ ಹುಟ್ಟಿಸಿದ ಆತಂಕವೇ ಉಕ್ರೇನ್‌ನ ಮೇಲೆ ರಷ್ಯಾದ ದಾಳಿಯ ಮೂಲ. ಉಕ್ರೇನ್‌ನ ಹಿಂದೆ ಅಮೆರಿಕದಂಥ ಹಿತಾಸಕ್ತಿಗಳು ಇರುವುದನ್ನು ಅಲ್ಲಗಳೆಯಲು ಸಾಧ್ಯವಿಲ್ಲವಾದರೂ, ವ್ಲಾದಿಮಿರ್‌ ಪುಟಿನ್‌ ಅವರ ಸರ್ವಾಧಿಕಾರ ಧೋರಣೆಯ ಬಗ್ಗೆ ಮೊದಲಿನಿಂದಲೂ ಜಾಗತಿಕ ಆತಂಕವಿದೆ. ಅಲ್ಲಿ ಹೆಸರಿಗೆ ಪ್ರಜಾಪ್ರಭುತ್ವವಿದ್ದರೂ, ಚೀನಾದಂತೆಯೇ ಏಕಾಧಿಪತ್ಯವನ್ನು ಪುಟಿನ್‌ ಸಾಧಿಸಿಕೊಂಡಿದ್ದಾರೆ. ನ್ಯಾಟೋದಂಥ ಪವರ್‌ ಕೇಂದ್ರಗಳು ತಮ್ಮ ಅಸ್ತಿತ್ವಕ್ಕೆ ಅಪಾಯ ಉಂಟುಮಾಡಬಹುದು ಎಂಬ ಅಸ್ಥಿರತೆಯಿಂದ ಪುಟಿನ್‌ ಉಕ್ರೇನ್ ಮೇಲೆ ದಾಳಿ ಶುರುಮಾಡಿದರು. ಅಧಿಕಾರ ಉಳಿಸಿಕೊಳ್ಳಲು ನಡೆಸಿದ ಈ ಅನಗತ್ಯ ದಾಳಿಯಿಂದಾಗಿ ಎರಡೂ ಕಡೆ ಅಪಾರ ನಷ್ಟವಾಯಿತು. ಸಾವಿರಾರು ಮಂದಿಯ ಸಾವುನೋವುಗಳಾದವು. ಚಿಂದಿಯಾಗಿರುವ ಉಕ್ರೇನ್‌ ಅನ್ನು ಮತ್ತೆ ಕಟ್ಟಲು ದಶಕಗಳೇ ಬೇಕು. ಯುದ್ಧದಿಂದ ಛಿದ್ರಗೊಂಡಿರುವ ದೇಶಗಳು ಮರಳಿ ಸುಧಾರಿಸಿಕೊಳ್ಳುವುದು ಮರೀಚಿಕೆ ಎಂಬುದನ್ನು ಅಫಘಾನಿಸ್ತಾನ, ಸಿರಿಯಾ, ಇರಾಕ್, ರುವಾಂಡ ಇತ್ಯಾದಿ ದೇಶಗಳು ಸಾಬೀತುಪಡಿಸಿವೆ. ರಷ್ಯಾದಲ್ಲಿ ಕೂಡ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಹಣದುಬ್ಬರದಿಂದ ಜನತೆ ತತ್ತರಿಸುತ್ತಿದ್ದಾರೆ.

ಈ ಯುದ್ಧದಿಂದ ಜಾಗತಿಕವಾಗಿಯೂ ಕೆಟ್ಟ ಪರಿಣಾಮವಾಗಿದೆ. ಜಾಗತಿಕ ಆರ್ಥಿಕತೆ ಮೇಲೆ ಇದು ದುಷ್ಪರಿಣಾಮ ಬೀರಿತು. ಯುದ್ಧವೊಂದು ಕಡೆ ಶುರುವಾದರೆ ತೈಲ ದೇಶಗಳು ತೈಲ ಮಾರಾಟದಲ್ಲಿ ರಾಜಕೀಯ ಶುರು ಮಾಡುತ್ತವೆ. ಸ್ವತಃ ರಷ್ಯಾ ಕೂಡ ತೈಲ ಮಾರಾಟ ರಾಷ್ಟ್ರ. ಆದರೆ ಇತರ ದೇಶಗಳ ಜತೆಗಿನ ಅದರ ರಫ್ತು- ಆಮದು ಕೆಟ್ಟುಹೋಯಿತು. ರಷ್ಯಾದ ಜೊತೆಗೆ ರಕ್ಷಣಾ- ವ್ಯಾಪಾರ ಸಂಬಂಧ ಹೊಂದಿದ್ದ ದೇಶಗಳ ಸ್ಥಿತಿ ಹದಗೆಟ್ಟಿತು. ಇದೆಲ್ಲವೂ ಯುದ್ಧದ ಅನಿವಾರ್ಯ ಪರಿಣಾಮಗಳು. ಒಂದು ದೇಶ ಎಲ್ಲ ನಿಯಮಗಳನ್ನು ಮರೆತು ವರ್ತಿಸತೊಡಗಿದರೆ, ಉಳಿದ ಬಲಿಷ್ಠ ದೇಶಗಳಿಗೂ ಹಾಗೆಯೇ ವರ್ತಿಸಲು ಆಹ್ವಾನ ಕೊಟ್ಟಂತಾಗುತ್ತದೆ. ಜಾಗತಿಕ ಶಾಂತಿಯನ್ನು ಕಾಪಾಡಿಕೊಳ್ಳುವುದು ಕಷ್ಟವಾಗುತ್ತದೆ.

ಇದನ್ನೂ ಓದಿ: Turmoil In Russia: ಮಾಸ್ಕೋದತ್ತ ವ್ಯಾಗ್ನರ್‌ ಸೇನೆ ಲಗ್ಗೆ, ರಷ್ಯಾದಿಂದಲೇ ವ್ಲಾಡಿಮಿರ್‌ ಪುಟಿನ್‌ ಪಲಾಯನ

ಇದೀಗ ರಷ್ಯಾದಲ್ಲೇ ಅಂತರ್ಯುದ್ಧ ಶುರುವಾಗಿದೆ. ಇದೂ ಕೂಡ ಯುದ್ಧದ ಅನಿವಾರ್ಯ ಪರಿಣಾಮವೇ ಆಗಿದೆ. ಪುಟಿನ್‌ ಈಗ ತಾವೇ ಸಾಕಿದ ಬಾಡಿಗೆ ಕೊಲೆಗಡುಕರ ಕೈಯಲ್ಲಿ ಸಿಕ್ಕಿಬೀಳುವಂತಾಗಿದೆ. ತಾನೇ ಸಾಕಿದ ಹದ್ದು ತನ್ನ ಕೈಯನ್ನೇ ಕುಕ್ಕಿದಂತಾಗಿದೆ. ವ್ಯಾಗ್ನರ್‌ ಗ್ರೂಪ್‌ ಎಂಬ ಬಾಡಿಗೆ ಸೈನಿಕರ ಪಡೆ ರಷ್ಯಕ್ಕೆ ನಿದ್ರೆಯಿಲ್ಲದ ರಾತ್ರಿಗಳನ್ನು ಕರುಣಿಸುವುದು ನಿಶ್ಚಿತ. ವಿಷಸರ್ಪಗಳನ್ನು ಸಾಕಿದವನು ಕುಟುಕಿಸಿಕೊಳ್ಳಲು ಸಿದ್ಧನಾಗಿರಬೇಕಾಗುತ್ತದೆ. ಸರ್ವಾಧಿಕಾರ, ಸೈನ್ಯದ ಕೈಯಲ್ಲಿ ಹೆಚ್ಚಿನ ಅಧಿಕಾರ ನಿಕ್ಷೇಪ, ಎಲ್ಲರ ಮೇಲೂ ಬೇಹುಗಾರಿಕೆ, ವಿಪಕ್ಷಗಳ ನಾಯಕರನ್ನು ಸಾಯಿಸಲು ಯತ್ನ ಮುಂತಾದ ಆರೋಪಗಳು ಪುಟಿನ್‌ ಮೇಲಿವೆ. ಪ್ರಜಾಪ್ರಭುತ್ವೀಯ ಮೌಲ್ಯಗಳ ದಾರಿಯಲ್ಲಿ ನಡೆದಿದ್ದರೆ ಇಂಥ ಸ್ಥಿತಿ ಒದಗುತ್ತಿರಲಿಲ್ಲ. ಭಾರತಕ್ಕೆ ಮೇಲ್ನೋಟಕ್ಕೆ ಈ ಬೆಳವಣಿಗೆಗಳಿಂದ ತಕ್ಷಣದ ಹಾನಿಯಿಲ್ಲವಾದರೂ, ಇದರ ಪಶ್ಚಾತ್‌ ಪರಿಣಾಮಗಳ ಬಗ್ಗೆ ಎಚ್ಚರ ವಹಿಸಬೇಕಿದೆ. ಪ್ರಜಾಪ್ರಭುತ್ವದ ಮೌಲ್ಯಗಳೇ ಸದಾ ಶಾಂತಿಯ ಮೂಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಿದೆ.

Exit mobile version