Site icon Vistara News

International Firefighters Day 2024: ಇಂದು ಅಂತಾರಾಷ್ಟ್ರೀಯ ಅಗ್ನಿಶಾಮಕ ದಿನ; ಜೀವ ರಕ್ಷಕರಿಗೊಂದು ಸಲಾಂ

International Firefighters Day 2024

ಪ್ರಾಕೃತಿಕ ವಿಕೋಪವಾಗಿರಬಹುದು (Natural disaster) ಅಥವಾ ಯಾವುದಾದರೂ ದುರಂತ (Tragedy) ಉಂಟಾಗಿರಬಹುದು ಇಂತಹ ವಿವಿಧ ಸಂದರ್ಭದಲ್ಲಿ ಕಷ್ಟಕ್ಕೆ ಸಿಲುಕಿರುವ ಜನ ಸಾಮಾನ್ಯರನ್ನು ರಕ್ಷಿಸಲು ತಮ್ಮ ಪ್ರಾಣವನ್ನೇ ಪಣಕ್ಕೆ ಇಡುವವರು ಅಗ್ನಿ ಶಾಮಕದಳದ ಸಿಬ್ಬಂದಿ. ಇವರನ್ನು ಗೌರವಿಸುವ ಸಲುವಾಗಿ ಪ್ರತಿ ವರ್ಷ ಮೇ 4ರಂದು ಅಂತಾರಾಷ್ಟ್ರೀಯ ಅಗ್ನಿ ಶಾಮಕ ದಿನವನ್ನು (International Firefighters Day 2024) ಆಚರಿಸಲಾಗುತ್ತದೆ.

ಜನ ಸಮುದಾಯವನ್ನು ರಕ್ಷಿಸಲು ತಮ್ಮ ಪ್ರಾಣವನ್ನು ಪಣಕ್ಕಿಡುವ ಅಗ್ನಿ ಶಾಮಕದಳದ ವೀರರನ್ನು ಗೌರವಿಸಲು ಇಂದು ವಿಶ್ವದಾದ್ಯಂತ ಅಂತಾರಾಷ್ಟ್ರೀಯ ಅಗ್ನಿಶಾಮಕ ದಿನವನ್ನು ಆಚರಿಸಲಾಗುತ್ತಿದೆ. ಇವರು ಜನ ಸಮುದಾಯಗಳನ್ನು ರಕ್ಷಿಸುವ ಜೊತೆಗೆ ವಿವಿಧ ಪರಿಸ್ಥಿತಿಗಳಲ್ಲಿ ಅಪಾಯಕ್ಕೆ ಸಿಲುಕಿರುವವರ ಜೀವಗಳನ್ನು ಉಳಿಸುವ ಕೆಲಸವನ್ನೂ ನಿರ್ವಹಿಸುತ್ತಾರೆ. ಅಗ್ನಿಶಾಮಕ ದಳದವರ ತ್ಯಾಗವನ್ನು ಗುರುತಿಸಲು ಮತ್ತು ಪ್ರಶಂಸಿಸಲು ಈ ಒಂದು ದಿನ ಖಂಡಿತ ಸಾಕಾಗಲಾರದು. ಆದರೂ ಅವರ ತ್ಯಾಗ, ಪರಿಶ್ರಮವನ್ನು ನೆನಪಿಸುವ ಈ ಒಂದು ದಿನ ಅತ್ಯಂತ ಮಹತ್ವದ್ದು ಎಂದರೆ ತಪ್ಪಾಗಲಾರದು. ಅಂತಾರಾಷ್ಟ್ರೀಯ ಅಗ್ನಿಶಾಮಕ ದಳದ ದಿನವು (International Firefighters Day) ಇತರರನ್ನು ರಕ್ಷಿಸಲು ತಮ್ಮ ಪ್ರಾಣವನ್ನು ಕಳೆದುಕೊಂಡ ಅಗ್ನಿಶಾಮಕರನ್ನು ನೆನಪಿನ ದಿನವಾಗಿಯೂ ಆಚರಿಸಲಾಗುತ್ತದೆ.

ಯಾವಾಗ ?

ಅಂತಾರಾಷ್ಟ್ರೀಯ ಅಗ್ನಿಶಾಮಕ ದಿನವನ್ನು ಮೇ 4 (international firefighters day may 4)ರಂದು ಪ್ರತಿ ವರ್ಷ ಆಚರಿಸಲಾಗುತ್ತದೆ. ಈ ದಿನವನ್ನು ಅಗ್ನಿಶಾಮಕ ದಳದ ಪೋಷಕ ಸಂತ ಸೇಂಟ್ ಫ್ಲೋರಿಯನ್ ಅವರ ಸ್ಮರಣಾರ್ಥ ಆಚರಿಸಲಾಗುತ್ತಿದೆ. ಸೇಂಟ್ ಫ್ಲೋರಿಯನ್ ಅನ್ನು ರೋಮನ್ ಸಾಮ್ರಾಜ್ಯದಲ್ಲಿ ಅಗ್ನಿಶಾಮಕ ದಳದ ಮೊದಲ ಕಮಾಂಡರ್ ಎಂದು ಪರಿಗಣಿಸಲಾಗಿದೆ. ಅವರು ಪ್ರಾಚೀನ ರೋಮನ್ ನಗರವಾದ ನೊರಿಕಮ್ ನಲ್ಲಿ ಅಗ್ನಿಶಾಮಕ ಘಟಕದ ನಾಯಕರಾಗಿದ್ದರು.

ದಿನದ ಇತಿಹಾಸ

ಆಸ್ಟ್ರೇಲಿಯಾದಲ್ಲಿ ನಡೆದ ದುರಂತ ಘಟನೆಯ ಬಳಿಕ ಅಗ್ನಿ ಶಾಮಕ ದಿನವನ್ನು ಆಚರಿಸಲಾಯಿತು. 1998ರ ಡಿಸೆಂಬರ್ 2ರಂದು ವಿಕ್ಟೋರಿಯಾದ ಲಿಂಟನ್‌ನಲ್ಲಿ ಭೀಕರ ಕಾಡ್ಗಿಚ್ಚು ಉಂಟಾಗಿತ್ತು. ಈ ಸಂದರ್ಭದಲ್ಲಿ ಐವರು ಅಗ್ನಿಶಾಮಕ ದಳದವರು ಪ್ರಾಣ ಕಳೆದುಕೊಂಡರು. ಗೀಲಾಂಗ್ ಪಶ್ಚಿಮ ಅಗ್ನಿಶಾಮಕ ದಳದ ಸದಸ್ಯರಾಗಿದ್ದ ಗ್ಯಾರಿ ವ್ರೆಡೆವೆಲ್ಡ್ಟ್, ಕ್ರಿಸ್ಟೋಫರ್ ಇವಾನ್ಸ್, ಸ್ಟುವರ್ಟ್ ಡೇವಿಡ್ಸನ್, ಜೇಸನ್ ಥಾಮಸ್ ಮತ್ತು ಮ್ಯಾಥ್ಯೂ ಆರ್ಮ್ ಸ್ಟ್ರಾಂಗ್ ಅವರು ಈ ದುರ್ಘಟನೆಯಲ್ಲಿ ಸಾವನ್ನಪ್ಪಿದ್ದರು. ಬಳಿಕ ಘಟನೆಯ ಮಹತ್ವವನ್ನು ತಿಳಿಸಲು ಅಂತಿಮವಾಗಿ ಅಂತಾರಾಷ್ಟ್ರೀಯ ಅಗ್ನಿಶಾಮಕ ದಿನದ ಆಚರಣೆಯ ಪ್ರಸ್ತಾಪಕ್ಕೆ ಕಾರಣವಾಯಿತು. ಆಸ್ಟ್ರೇಲಿಯನ್ ಅಗ್ನಿಶಾಮಕ ದಳದ ಜೆಜೆ ಎಡ್ಮಂಡ್ಸನ್ ಅವರು ಅಗ್ನಿಶಾಮಕ ದಳದವರಿಗೆ ಮೀಸಲಾದ ದಿನವನ್ನು ಸ್ಥಾಪಿಸುವ ಉಪಕ್ರಮದ ನೇತೃತ್ವ ವಹಿಸಿದ್ದರು. ಎಡ್ಮಂಡ್ಸನ್ 1999 ರ ಹೊಸ ವರ್ಷದ ನಿರ್ಣಯದಂತೆ “ಎಲ್ಲಾ ಅಗ್ನಿಶಾಮಕ ದಳದವರಿಗೆ ಬೆಂಬಲ ಮತ್ತು ಗೌರವದ ಅಂತಾರಾಷ್ಟ್ರೀಯವಾಗಿ ಗುರುತಿಸಲ್ಪಟ್ಟ ದಿನವನ್ನು ಆಯೋಜಿಸಲು ಮತ್ತು ಇದನ್ನು ವಿಶ್ವಾದ್ಯಂತ ಸಂಘಟಿಸಬಹುದಾದ ದಿನಾಂಕವನ್ನು ಆಯೋಜಿಸಲು ನಿರ್ಧರಿಸಿದರು.

ಇದನ್ನೂ ಓದಿ: Sunita Williams: ಸುನೀತಾ ವಿಲಿಯಮ್ಸ್‌ 3ನೇ ಬಾರಿಗೆ ಬಾಹ್ಯಾಕಾಶಕ್ಕೆ ತೆರಳಲು ಸಜ್ಜು

ಕೆಂಪು ಮತ್ತು ನೀಲಿ ರಿಬ್ಬನ್

ಕೆಂಪು ಮತ್ತು ನೀಲಿ ರಿಬ್ಬನ್ ಸಾಮಾನ್ಯವಾಗಿ ಅಗ್ನಿಶಾಮಕ ದಳದವರನ್ನು ಗೌರವಿಸುವ ಸಂಕೇತವಾಗಿದೆ. IFFD ಯೊಂದಿಗೆ ಸಂಬಂಧ ಹೊಂದಿರುವ ಈ ರಿಬ್ಬನ್ ಅನ್ನು ಸಾಮಾನ್ಯವಾಗಿ ಸೇವೆ ಮತ್ತು ರಕ್ಷಿಸುವ ಅಗ್ನಿಶಾಮಕರಿಗೆ ಬೆಂಬಲ ಮತ್ತು ಮೆಚ್ಚುಗೆಯ ಸಂಕೇತವಾಗಿ ಧರಿಸಲು ನೀಡಲಾಗುತ್ತದೆ.
ಅಗ್ನಿಶಾಮಕ ದಳದವರು ಹೆಚ್ಚಾಗಿ ಎದುರಿಸುವ ಎರಡು ಅಂಶಗಳನ್ನು ಬಣ್ಣಗಳು ಸಂಕೇತಿಸುತ್ತವೆ. ಬೆಂಕಿಗೆ ಕೆಂಪು ಮತ್ತು ನೀರಿಗೆ ನೀಲಿ.

Exit mobile version