Site icon Vistara News

PoK Crisis: ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ದಂಗೆಯೆದ್ದ ಜನ, ಗಲಾಟೆ; ಭಾರತದ ಜತೆ ವಿಲೀನಕ್ಕೆ ಆಗ್ರಹ!

PoK

Is Pakistan Losing Its Grip On PoK? Posters Emerge Demanding Merger With India Amid Protests

ಶ್ರೀನಗರ:‌ ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ (PoK Crisisi) ಪರಿಸ್ಥಿತಿ ಕೈಮೀರಿ ಹೋಗುತ್ತಿದೆ. ಸರ್ಕಾರ, ಅಧಿಕಾರಿಗಳ ವಿರುದ್ಧವೇ ಜನ ದಂಗೆ ಎದ್ದಿದ್ದಾರೆ. ಹಣದುಬ್ಬರ ಏರಿಕೆ (Inflation), ಹೆಚ್ಚಿನ ತೆರಿಗೆ ಹಾಗೂ ವಿದ್ಯುತ್‌ ಪೂರೈಕೆಯ ಕೊರತೆಯಿಂದಾಗಿ ಬೇಸತ್ತಿರುವ ಜನ ಸರ್ಕಾರದ ಕಚೇರಿಗಳು, ಪೊಲೀಸ್‌ ಅಧಿಕಾರಿಗಳ ಮೇಲೆಯೇ ದಾಳಿ ನಡೆಸುತ್ತಿದ್ದಾರೆ. ಅಷ್ಟೇ ಅಲ್ಲ, ಪಾಕ್‌ ಆಕ್ರಮಿತ ಕಾಶ್ಮೀರವನ್ನು ಭಾರತದ ಜತೆ ವಿಲೀನಗೊಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸುತ್ತಿದ್ದಾರೆ. ಹಾಗಾಗಿ, ಪಿಒಕೆ ಮೇಲೆ ಪಾಕಿಸ್ತಾನದ (Pakistan) ನಿಯಂತ್ರಣವು ಪೂರ್ತಿ ಕೈತಪ್ಪಿಹೋಗಿದೆ ಎಂದು ಹೇಳಲಾಗುತ್ತಿದೆ.

ಹೌದು, ಕಳೆದ ಎರಡು ದಿನಗಳಿಂದ ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಪ್ರತಿಭಟನೆ ತೀವ್ರಗೊಂಡಿದೆ. ಸುಮಾರು 10 ಜಿಲ್ಲೆಗಳಲ್ಲಿ ಜನ ಅಕ್ಷರಶಃ ದಂಗೆಯೆದ್ದಿದ್ದಾರೆ. ಮುಜಫರಾಬಾದ್‌ನಿಂದ ರಾವಲ್‌ಕೋಟ್‌ವರೆಗೆ ಜನ ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದಾರೆ. ಸೇನೆ ಹಾಗೂ ಪೊಲೀಸರ ವಾಹನಗಳ ಮೇಲೆ ಕಲ್ಲುತೂರಾಟ, ಸರ್ಕಾರಿ ಕಚೇರಿಗಳ ಮೇಲೆ ದಾಳಿ, ಪೊಲೀಸರ ಮೇಲೆ ಹಲ್ಲೆ ಸೇರಿ ಹಲವು ರೀತಿಯ ಹಿಂಸಾಚಾರ ಭುಗಿಲೆದ್ದಿದೆ. ಈಗಾಗಲೇ ಆರ್ಥಿಕವಾಗಿ ದಿವಾಳಿಯಾಗಿರುವ ಪಾಕಿಸ್ತಾನವು ಪಿಒಕೆಯನ್ನು ನಿಯಂತ್ರಿಸುವಲ್ಲಿ ವಿಫಲವಾಗಿದೆ ಎಂದು ವಿಶ್ಲೇಷಿಸಲಾಗಿದೆ.

ಭಾರತದ ಜತೆ ವಿಲೀನಕ್ಕೆ ಬೇಡಿಕೆ

ಭಾರತದ ಜತೆ ಪಾಕ್‌ ಆಕ್ರಮಿತ ಕಾಶ್ಮೀರವನ್ನು ವಿಲೀನಗೊಳಿಸಬೇಕು ಎಂಬುದು ಕೂಡ ಪ್ರತಿಭಟನಾಕಾರರ ಬೇಡಿಕೆಯಾಗಿದೆ. ಭಾರತದ ಪರ ಘೋಷಣೆಗಳು, ಭಾರತದ ಧ್ವಜ ಪ್ರದರ್ಶನಗಳು ಕೂಡ ನಡೆದಿವೆ. ಇನ್ನು, ಸ್ವಾತಂತ್ರ್ಯ ಬೇಕು, ಸ್ವಾತಂತ್ರ್ಯಕ್ಕಾಗಿ ಹೋರಾಟ ಎಂಬ ಘೋಷಣೆಗಳು ಕೂಡ ಕೇಳಿಬಂದಿವೆ. ಪೊಲೀಸರು, ಭದ್ರತಾ ಸಿಬ್ಬಂದಿ ಹಾಗೂ ಜನರ ನಡುವಿನ ಸಂಘರ್ಷಕ್ಕೆ ಒಬ್ಬ ಪೊಲೀಸ್‌ ಅಧಿಕಾರಿ ಬಲಿಯಾಗಿದ್ದಾರೆ. ಪೊಲೀಸರು, ಸೈನಿಕರು ಸೇರಿ ಸುಮಾರು 90 ಜನ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಯಾವುದೇ ಕಾರಣಕ್ಕೂ ಜನರನ್ನು ನಿಯಂತ್ರಿಸಲು ಭದ್ರತಾ ಸಿಬ್ಬಂದಿಗೆ ಆಗುತ್ತಿಲ್ಲ ಎಂಬುದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೊಗಳಿಂದ ಮಾಹಿತಿ ಲಭ್ಯವಾಗಿದೆ.

ಜಮ್ಮು-ಕಾಶ್ಮೀರ ಜಾಯಿಂಟ್‌ ಅವಾಮಿ ಆಕ್ಷನ್‌ ಕಮಿಟಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುತ್ತಿದ್ದು, ಇದರ ಹತ್ತಾರು ನಾಯಕರನ್ನು ಪೊಲೀಸರು ಬಂಧಿಸಿದ್ದಾರೆ. ಗುಂಪನ್ನು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗ, ಲಾಠಿ ಚಾರ್ಜ್‌ ಮಾಡಿದರೂ ನಿಯಂತ್ರಿಸಲು ಆಗುತ್ತಿಲ್ಲ ಎನ್ನಲಾಗಿದೆ. ಈಗಾಗಲೇ ಪಿಒಕೆ ನಮ್ಮದು ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ. ಪಿಒಕೆ ಜನರೇ ಭಾರತದ ಜತೆ ವಿಲೀನಗೊಳ್ಳಲು ಬಯಸುತ್ತಿದ್ದಾರೆ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಹೇಳಿದ್ದಾರೆ. ಇದರ ಬೆನ್ನಲ್ಲೇ, ಬಲೂಚಿಸ್ತಾನದ ಜತೆಗೆ ಪಿಒಕೆಯಲ್ಲೂ ದಂಗೆ ಶುರುವಾಗಿದೆ.

ಇದನ್ನೂ ಓದಿ: Pakistan Occupied Kashmir: ಪಾಕ್‌ ದಿವಾಳಿ, ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಹಿಂಸೆಯ ಹಾವಳಿ; ನಾಗರಿಕ ದಂಗೆ ಶುರು?

Exit mobile version