Site icon Vistara News

Kamala Harris: ಕಮಲಾ ಹ್ಯಾರಿಸ್ ಪಕ್ಷದ ಭಾರಿ ಕಾರ್ಯಕ್ರಮದಲ್ಲಿ ಅಮೆರಿಕನ್ನರ ಮನ ಗೆದ್ದ ಉಡುಪಿಯ ಪುರೋಹಿತರ ಸಂಸ್ಕೃತ ಪ್ರಾರ್ಥನೆ!

rakesh bhat kamala harris

ಚಿಕಾಗೋ: ಅಮೆರಿಕದ ಚಿಕಾಗೋದಲ್ಲಿ ಕಮಲಾ ಹ್ಯಾರಿಸ್‌ (Kamala Harris) ಅವರ ಡೆಮಾಕ್ರಟಿಕ್ ಪಕ್ಷದ ನ್ಯಾಷನಲ್ ಕನ್ವೆನ್ಶನ್‌ನ (Democratic National convention) 3ನೇ ದಿನದಂದು ಕರ್ನಾಟಕದ ಉಡುಪಿ ಮೂಲದ (Udupi Priest) ಅರ್ಚಕರೊಬ್ಬರು ಸಂಸ್ಕೃತ ಪ್ರಾರ್ಥನೆಯ (Sanskrit Prayer) ಮೂಲಕ ಕಲಾಪವನ್ನು ಪ್ರಾರಂಭಿಸಿದರು. ವೈದಿಕ ಪ್ರಾರ್ಥನೆ (Vedic Prayer) ಹಾಗೂ ಅದರ ಅರ್ಥವನ್ನು ಅವರು ವಿವರಿಸಿದ ಬಳಿಕ, ಸಭಾಂಗಣದಾದ್ಯಂತ “ಓಂ ಶಾಂತಿ ಶಾಂತಿ” ಘೋಷಣೆಗಳು ಪ್ರತಿಧ್ವನಿಸಿದವು.

ಮೇರಿಲ್ಯಾಂಡ್‌ನ ಶ್ರೀ ಶಿವ ವಿಷ್ಣು ದೇವಸ್ಥಾನದ ಅರ್ಚಕ ರಾಕೇಶ್ ಭಟ್ (Rakesh Bhat) ಅವರು ಅಖಂಡ ದೇಶಕ್ಕಾಗಿ ದೇವರ ಆಶೀರ್ವಾದ ಕೋರಿ ವೈದಿಕ ಪ್ರಾರ್ಥನೆ ಮಾಡಿದರು. ʼʼನಮ್ಮಲ್ಲಿ ಭಿನ್ನಾಭಿಪ್ರಾಯಗಳಿದ್ದರೂ, ರಾಷ್ಟ್ರದ ವಿಷಯಕ್ಕೆ ಬಂದಾಗ ನಾವು ಒಗ್ಗಟ್ಟಾಗಿರಬೇಕುʼʼ ಎಂದು ಭಟ್ ಹೇಳಿದರು. “ನಾವು ಒಗ್ಗಟ್ಟಿನಿಂದ ಇರಬೇಕು. ನಮ್ಮ ಮನಸ್ಸು ಒಟ್ಟಿಗೆ ಯೋಚಿಸಲಿ. ನಮ್ಮ ಹೃದಯಗಳು ಒಂದಾಗಿ ಮಿಡಿಯಲಿ. ಎಲ್ಲರೂ ಸಮಾಜದ ಒಳಿತಿಗಾಗಿ ದುಡಿಯಲಿ. ಇದು ನಮ್ಮನ್ನು ಶಕ್ತಿಯುತರನ್ನಾಗಿ ಮಾಡಲಿ. ನಾವು ಒಂದಾಗಬಹುದು ಮತ್ತು ನಮ್ಮ ರಾಷ್ಟ್ರದ ಬಗ್ಗೆ ಹೆಮ್ಮೆಪಡಬಹುದು” ಎಂದು ರಾಕೇಶ್‌ ಭಟ್‌ ಹೇಳಿದರು.

ಗುರುವಾರ ಕಮಲಾ ಹ್ಯಾರಿಸ್ ಅವರ ಪರ ಪಕ್ಷದ ಪ್ರಚಾರದ ಭಾರಿ ಸಭೆ ನಡೆಯಿತು. ಅಮೆರಿಕದ ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸಿರುವ ಕಮಲಾ ಹ್ಯಾರಿಸ್‌, ಭಾರತೀಯ ಮೂಲದವರಾಗಿದ್ದಾರೆ. ಪ್ರಾರ್ಥನೆ ಮಾಡಿದ ಭಟ್, ʼವಸುಧೈವ ಕುಟುಂಬಕಂ’ (ಇಡೀ ಜಗತ್ತು ಒಂದೇ ಕುಟುಂಬ) ಎಂಬ ವೈದಿಕ ಪರಿಕಲ್ಪನೆಯಲ್ಲಿ ನಂಬಿಕೆಯಿರುವ ನಾಯಕನನ್ನು ಆಯ್ಕೆ ಮಾಡುವಂತೆ ಅಮೆರಿಕವನ್ನು ಒತ್ತಾಯಿಸಿದರು.

“ನಾವು ಒಂದು ಸಾರ್ವತ್ರಿಕ ಕುಟುಂಬ. ಸತ್ಯವು ನಮ್ಮ ಅಡಿಪಾಯ ಮತ್ತು ಅದು ಯಾವಾಗಲೂ ಮೇಲುಗೈ ಸಾಧಿಸುತ್ತದೆ. ನಮ್ಮನ್ನು ಅವಾಸ್ತವದಿಂದ ವಾಸ್ತವಕ್ಕೆ, ಕತ್ತಲೆಯಿಂದ ಬೆಳಕಿನೆಡೆಗೆ ಮತ್ತು ಸಾವಿನಿಂದ ಅಮರತ್ವಕ್ಕೆ ಕರೆದೊಯ್ಯುತ್ತದೆ. ಓಂ ಶಾಂತಿ ಶಾಂತಿ ಶಾಂತಿ” ಎಂದು ಭಟ್ ಸಂಸ್ಕೃತದ ಶ್ಲೋಕವನ್ನು ನುಡಿದು ಅದರ ಅರ್ಥವನ್ನು ವಿವರಿಸಿದರು.

ರಾಕೇಶ್ ಭಟ್ ಮೂಲತಃ ಕರ್ನಾಟಕದವರು. ಇವರು ತಮ್ಮ ಗುರುಗಳಾದ ಉಡುಪಿ ಅಷ್ಟಮಠದ ಪೇಜಾವರ ಸ್ವಾಮೀಜಿಯವರ ಬಳಿ ಋಗ್ವೇದ ಮತ್ತು ತಂತ್ರಸಾರ (ಮಾಧ್ವ) ಆಗಮದಲ್ಲಿ ತರಬೇತಿ ಪಡೆದಿದ್ದಾರೆ. ಹಿಂದಿ, ಇಂಗ್ಲಿಷ್, ಸಂಸ್ಕೃತ, ತಮಿಳು, ತೆಲುಗು, ಕನ್ನಡ ಮತ್ತು ತುಳು ಭಾಷೆಗಳನ್ನು ನಿರರ್ಗಳವಾಗಿ ಮಾತನಾಡಬಲ್ಲರು. ಸಂಸ್ಕೃತ, ಇಂಗ್ಲಿಷ್ ಮತ್ತು ಕನ್ನಡ ಈ ಮೂರು ಭಾಷೆಗಳಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿಗಳನ್ನು ಹೊಂದಿದ್ದಾರೆ. ಇವರು ಬೆಂಗಳೂರಿನ ಒಸ್ಟೀನ್ ಕಾಲೇಜಿನಲ್ಲಿ ಇಂಗ್ಲಿಷ್ ಮತ್ತು ಕನ್ನಡ ಪದವಿಗಳನ್ನು ಪಡೆದವರು. ಜಯಚಾಮರಾಜೇಂದ್ರ ಕಾಲೇಜಿನಲ್ಲಿ ಸಂಸ್ಕೃತ ಪದವಿ ಪಡೆದರು. ಉಡುಪಿ ಅಷ್ಟಮಠದಲ್ಲಿ ಅಲ್ಪಾವಧಿ ಸೇವೆ ಸಲ್ಲಿಸಿದ ನಂತರ ಬದರಿನಾಥ, ಸೇಲಂ ರಾಘವೇಂದ್ರ ಸ್ವಾಮಿ ದೇವಾಲಯಗಳಲ್ಲಿ ಸೇವೆ ಸಲ್ಲಿಸಿ ಬಳಿಕ 2013 ಜುಲೈಯಲ್ಲಿ ಅಮೆರಿಕಕ್ಕೆ ತೆರಳಿ ಮೇರಿಲ್ಯಾಂಡ್‌ನಲ್ಲಿ ಶ್ರೀ ವಿಷ್ಣು ದೇವಸ್ಥಾನದ ಅರ್ಚಕರಾಗಿದ್ದಾರೆ.

ಡೆಮಾಕ್ರಟಿಕ್ ಪಾರ್ಟಿಯ ಡೆಪ್ಯುಟಿ ನ್ಯಾಷನಲ್ ಫೈನಾನ್ಸ್ ಚೇರ್ ಅಜಯ್ ಭುಟೋರಿಯಾ, “ಇಂದು ಡಿಎನ್‌ಸಿಯಲ್ಲಿ ರಾಕೇಶ್ ಭಟ್ ಅವರ ಹಿಂದೂ ಪ್ರಾರ್ಥನೆಯು ಮಹತ್ವದ ಕ್ಷಣವಾಗಿದೆ. ಇದು ಡೆಮಾಕ್ರಟಿಕ್ ಪಕ್ಷದ ಒಳಗೊಳ್ಳುವಿಕೆ ಮತ್ತು ವೈವಿಧ್ಯತೆಯ ಬದ್ಧತೆಯನ್ನು ಪ್ರದರ್ಶಿಸುತ್ತದೆ” ಎಂದರು. “ಭಾರತೀಯ ಅಮೆರಿಕನ್ ಸಮುದಾಯದ ಶ್ರೀಮಂತ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಸಂಪ್ರದಾಯಗಳನ್ನು ಇಂತಹ ಪ್ರಮುಖ ವೇದಿಕೆಯಲ್ಲಿ ಗೌರವಿಸುವುದು ಆತ್ಮೀಯ ಕ್ಷಣ. ಈ ಕ್ಷಣವು ಅಮೇರಿಕನ್ ಸಮಾಜದ ವಿನ್ಯಾಸದಲ್ಲಿ ನಮ್ಮ ಸಮುದಾಯದ ಬೆಳೆಯುತ್ತಿರುವ ಪ್ರಭಾವ ಮತ್ತು ಗುರುತಿಸುವಿಕೆಯನ್ನು ಪ್ರತಿಬಿಂಬಿಸುತ್ತದೆ” ಎಂದು ಭೂಟೋರಿಯಾ ಹೇಳಿದರು.

ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಯುಎಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಅವರನ್ನು ಸೋಲಿಸುವ ಭರವಸೆಯೊಂದಿಗೆ ಡೆಮೋಕ್ರಾಟ್‌ ಪಕ್ಷದ 59 ವರ್ಷದ ಕಮಲಾ ಹ್ಯಾರಿಸ್‌ ಸ್ಪರ್ಧಿಸುತ್ತಿದ್ದಾರೆ. ಸ್ಪರ್ಧೆಯಲ್ಲಿ ಹ್ಯಾರಿಸ್ ಸ್ವಲ್ಪ ಮುಂದಿದ್ದಾರೆ ಎನ್ನಲಾಗುತ್ತಿದೆ. ಕೇವಲ ಒಂದು ತಿಂಗಳ ಹಿಂದೆ ಜೋ ಬೈಡೆನ್ ವಿರುದ್ಧ ಟ್ರಂಪ್‌ ಹಿಡಿತ ಸಾಧಿಸಿದ್ದರು.

ಇದನ್ನೂ ಓದಿ: Kamala Harris: ಅಮೆರಿಕ ಅಧ್ಯಕ್ಷ ಸ್ಥಾನಕ್ಕೆ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿ ಕಮಲಾ ಹ್ಯಾರಿಸ್ ಹೆಸರು ಅಂತಿಮ

Exit mobile version