Site icon Vistara News

Karnataka Police: ಪತ್ರಕರ್ತನ ಬಂಧಿಸಲು ಹೋಗಿ ಉತ್ತರಪ್ರದೇಶದಲ್ಲಿ ಪೇಚಿಗೆ ಸಿಲುಕಿದ ಕರ್ನಾಟಕದ ಪೊಲೀಸರು, ಏನಿದು ಘಟನೆ?

karnataka police ajeet bharti

ಬೆಂಗಳೂರು: ಕಾಂಗ್ರೆಸ್‌ (Congress) ಹಾಗೂ ರಾಹುಲ್‌ ಗಾಂಧಿ (Rahul Gandhi) ಅವರನ್ನು ಟೀಕಿಸಿದ್ದ ಉತ್ತರ ಪ್ರದೇಶದ (Uttar Pradesh) ಪತ್ರಕರ್ತ ಅಜಿತ್ ಭಾರ್ತಿ (Ajeet Bharti) ಬಂಧನಕ್ಕೆ ತೆರಳಿದ್ದ ಕರ್ನಾಟಕದ ಪೊಲೀಸರು (Karnataka Police) ನೋಯ್ಡಾದಲ್ಲಿ (Noida) ಅಲ್ಲಿನ ಪೊಲೀಸರಿಂದ ಲಾಕ್‌ ಆಗಿದ್ದಾರೆ. ʼನಮ್ಮವರು ತಪ್ಪು ಮಾಡಿಲ್ಲ” ಎಂದು ಗೃಹ ಸಚಿವ ಪರಮೇಶ್ವರ್‌ (G Parameshwara) ಹೇಳಿದ್ದರೆ, ಬಿಜೆಪಿ ಈ ವಿಚಾರದಲ್ಲಿ ಕಿಡಿ ಕಾರಿದೆ.

ಕಾಂಗ್ರೆಸ್‌‍ ನಾಯಕ ರಾಹುಲ್‌ ಗಾಂಧಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ ಆರೋಪದ ಮೇಲೆ ನೋಯ್ಡಾದಲ್ಲಿರುವ ಪತ್ರಕರ್ತ ಮತ್ತು ಯೂಟ್ಯೂಬರ್‌ ಅಜೀತ್‌ ಭಾರ್ತಿ ವಿರುದ್ಧ ರಾಜ್ಯ ಪೊಲೀಸರು ಇತ್ತೀಚೆಗೆ ಬೆಂಗಳೂರಿನಲ್ಲಿ ಪ್ರಕರಣ ದಾಖಲಿಸಿದ್ದರು. ನಂತರ ಅವರನ್ನು ಬಂಧಿಸಲು ಬೆಂಗಳೂರು ಪೊಲೀಸರು ಅಲ್ಲಿಗೆ ತೆರಳಿದ್ದರು. ಆದರೆ ಮನೆಯಿಂದ ಹೊರಗೆ ಬರದ ಭಾರ್ತಿ, ಕೂಡಲೇ ಅಲ್ಲಿನ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಯೂಟ್ಯೂಬರ್‌ನ ಮನೆಯ ಹೊರಗೆ ಕರ್ನಾಟಕ ಪೊಲೀಸರು ಮತ್ತು ನೋಯ್ಡಾ ಪೊಲೀಸರ ನಡುವೆ ಮುಖಾಮುಖಿಯಾಗಿದೆ.

ಕರ್ನಾಟಕ ಪೊಲೀಸರನ್ನು ನನ್ನ ಮನೆಗೆ ಪ್ರವೇಶಿಸಲು ನಾನು ಅನುಮತಿಸಲಿಲ್ಲ. ನೋಯ್ಡಾ ಪೊಲೀಸರು ಸಮಯಕ್ಕೆ ಮಧ್ಯಪ್ರವೇಶಿಸಿ ಕ್ರಮ ಕೈಗೊಂಡರು ಎಂದು ಭಾರ್ತಿ ಹೇಳಿದ್ದಾರೆ. ಅದೇ ವೇಳೆ ಪತ್ರಕರ್ತ, ಫ್ಯಾಕ್ಟ್‌ ಚೆಕರ್‌ ಮೊಹಮ್ಮದ್‌ ಜುಬೇರ್‌ ವಿರುದ್ಧ ಪ್ರಕರಣ ದಾಖಲಿಸುವುದಾಗಿಯೂ ಯೂಟ್ಯೂಬರ್‌ ತನ್ನ ಕಾಮೆಂಟ್‌‍ನಲ್ಲಿ ಹೇಳಿದ್ದಾರೆ. ತನ್ನ ನಿವಾಸಕ್ಕೆ ಬಂದ ಕರ್ನಾಟಕ ಪೊಲೀಸರನ್ನು ನೋಯ್ಡಾ ಪೊಲೀಸರು ತಮ್ಮ ಜತೆ ಕರೆದೊಯ್ದಿದ್ದಾರೆ ಎಂದು ಹೇಳಿದ್ದಾನೆ.

ಪ್ರಕರಣದ ಕುರಿತು ರಾಜ್ಯ ಗೃಹ ಸಚಿವ ಪರಮೇಶ್ವರ್‌ ಹೇಳಿಕೆ ನೀಡಿದ್ದಾರೆ. “ಅಜಿತ್ ಭಾರತಿ ಯುಟ್ಯೂಬರ್ ಅವನನ್ನು ಆರೆಸ್ಟ್ ಮಾಡಲು ಹೋಗಿದ್ದರು ನಮ್ಮ ಪೊಲೀಸ್ ಮಫ್ತಿಯಲ್ಲಿ ಹೋಗಿದ್ದಾರೆ. ಅಲ್ಲಿಯ ಪೊಲೀಸರಿಗೆ ತಿಳಸಬೇಕಿತ್ತು. ತಿಳಿಸದೇ ಹೋಗಿದ್ದಾರೆ. ಅಲ್ಲಿನ ಪೊಲೀಸ್ ಮೊದಲು ನೋಟಿಸ್ ಕೊಡಿ ನಂತರ ನೋಡೋಣ ಎಂದಿದ್ದಾರೆ. ನೋಟೀಸ್ ಕೊಟ್ಟ ಮೇಲೆ ಆ ಯೂಟ್ಯೂಬರ್ ಬರದೇ ಹೋದ್ರೆ ವಾರೆಂಟ್ ತೆಗೆದುಕೊಂಡು ಆರೆಸ್ಟ್ ಮಾಡ್ತಾರೆ. ಕೆಲವೊಮ್ಮೆ ಇಂಥ ಕನ್‌ಫ್ಯೂಶನ್ ಆಗುತ್ತೆ. ನಮ್ಮ ಪೊಲೀಸರೇನೂ ತಪ್ಪು ಮಾಡಿಲ್ಲ” ಎಂದು ಹೇಳಿದ್ದಾರೆ.

ಆದರೆ ದೂರು ದಾಖಲಾಗಿರುವ ಹೈಗ್ರೌಂಡ್ಸ್ ಠಾಣೆ ಪೊಲೀಸರು, ಅಜೀತ್‌ ಭಾರ್ತಿ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌‍ ನೀಡಿದ್ದೇವೆಯೇ ಹೊರತು ಬಂಧಿಸಲು ಹೋಗಿಲ್ಲ ಎಂದು ಹೇಳಿದ್ದಾರೆ.

ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಕಿಡಿಕಾರಿದೆ. ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ.ವಿಜಯೇಂದ್ರ ಅವರು ವಾಗ್ದಾಳಿ ನಡೆಸಿದ್ದಾರೆ. “ರಾಜ್ಯದ ಆಡಳಿತಾರೂಢ ಕಾಂಗ್ರೆಸ್‌‍ ಸರ್ಕಾರ ವಿಲಕ್ಷಣ ಕಾರಣಗಳಿಗಾಗಿ ಅಜೀತ್‌ ಭಾರ್ತಿ ಅವರನ್ನು ಬಂಧಿಸುವ ಪ್ರಯತ್ನವು ಸಂಪೂರ್ಣವಾಗಿ ಸರ್ವಾಧಿಕಾರಿಯಾದದ್ದು. ಬಿಜೆಪಿ ಅಜೀತ್‌ ಭಾರ್ತಿ ಅವರೊಂದಿಗೆ ದೃಢವಾಗಿ ನಿಲ್ಲುತ್ತದೆ ಮತ್ತು ಈ ಪ್ರಕರಣದ ವಿರುದ್ಧ ಹೋರಾಡಲು ಅಗತ್ಯವಿರುವ ಎಲ್ಲಾ ಬೆಂಬಲವನ್ನು ನೀಡುತ್ತದೆ” ಎಂದು ಹೇಳಿದ್ದಾರೆ.

“ಈ ಘಟನೆಯು ಪ್ರಸ್ತುತ ಆಡಳಿತದ ಆಡಳಿತ ವೈಫಲ್ಯಕ್ಕೆ ಉದಾಹರಣೆಯಾಗಿದೆ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ. ರಾಜ್ಯದಲ್ಲಿ ಹೈ-ಪ್ರೊಫೈಲ್‌ ಕೊಲೆಗಳು, ಮಹಿಳೆಯರಿಗೆ ಕಿರುಕುಳ ಸೇರಿದಂತೆ ಅಪರಾಧ ಚಟುವಟಿಕೆಗಳಲ್ಲಿ ಗಣನೀಯ ಏರಿಕೆ ಕಂಡಿದೆ. ಆದರೆ, ಇದನ್ನು ಸರ್ಕಾರ ನಿರ್ಲಕ್ಷಿಸಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದರೂ ಪೊಲೀಸ್‌‍ ಪಡೆಯ ಅಮೂಲ್ಯ ಸಮಯ ಮತ್ತು ಸಂಪನೂಲಗಳನ್ನು ಸಾರ್ವಜನಿಕರ ಸುರಕ್ಷತೆಯ ಬದಲಿಗೆ ರಾಜಕೀಯ ಸೇಡಿಗೆ ಬಳಸಿಕೊಳ್ಳಲಾಗುತ್ತಿದೆ. ಸಿದ್ದರಾಮಯ್ಯ ಸರ್ಕಾರ ತನ್ನ ನಾಗರಿಕರ ಕಲ್ಯಾಣ ಮತ್ತು ಭದ್ರತೆಯನ್ನು ಖಾತ್ರಿಪಡಿಸುವುದಕ್ಕಿಂತ ತನ್ನ ಟೀಕಾಕಾರರನ್ನು ಹತ್ತಿಕ್ಕುವತ್ತ ಹೆಚ್ಚು ಗಮನಹರಿಸಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.ಬಿಜೆಪಿಯು ಭಾರ್ತಿ ಅವರನ್ನು ರಕ್ಷಿಸಲು ಪಣ ತೊಟ್ಟಿದೆ. ರಾಜ್ಯದ ಸರ್ವಾಧಿಕಾರಿ ಆಡಳಿತದ ವಿರುದ್ಧ ಹೋರಾಟವನ್ನು ಮುಂದುವರೆಸಲಿದೆ” ಎಂದು ಹೇಳಿದ್ದಾರೆ.

ಏನಿದು ಪ್ರಕರಣ?

‌ರಾಹುಲ್ ಗಾಂಧಿ ವಿರುದ್ಧ ಅವಹೇಳನಕಾರಿ ವಿಡಿಯೋ ಹಾಕಿದ ಕುರಿತು ಕೆಪಿಸಿಸಿ ಕಾನೂನು ಘಟಕದ ಕಾರ್ಯದರ್ಶಿ, ವಕೀಲ ಬಿ.ಕೆ ಬೋಪಣ್ಣ ಹೈಗ್ರೌಂಡ್ಸ್‌ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಬಾಬರಿ ಮಸೀದಿ ವಿಚಾರವಾಗಿ ದಾರಿ ತಪ್ಪಿಸುವ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್‌ ರಾಮಮಂದಿರ ಬದಲಿಗೆ ಬಾಬ್ರಿ ಮಸೀದಿ ಮರಳಿ ತರಲು ಉದ್ದೇಶಿಸಿದ್ದಾರೆ ಎಂದು ಪೋಸ್ಟ್ ಹಾಕಿದ್ದಾರೆ. ಆದರೆ ರಾಹುಲ್ ಗಾಂಧಿ ಯಾವುದೇ ಭಾಷಣದಲ್ಲಿ ಹಾಗೆ ಹೇಳಿಲ್ಲ. ಜನರಲ್ಲಿ ವಿಭಜನೆಯ ಭಾವ ಉಂಟು ಮಾಡಲು ಹಾಗು ಕೋಮು ದ್ವೇಷ ಹರಡಲು ಈ ಕೃತ್ಯ, ಧಾರ್ಮಿಕ ದ್ವೇಷ ಉಂಟುಮಾಡುವ ಉದ್ದೇಶದಿಂದ ಅಜಿತ್ ಭಾರತಿ ಪೋಸ್ಟ್ ಹಾಕಿದ್ದಾನೆ ಎಂದು ದೂರು ನೀಡಲಾಗಿತ್ತು.

ಇದನ್ನೂ ಓದಿ: Actor Darshan: ದರ್ಶನ್‌ ಪ್ರಕರಣ; ಶಿವಣ್ಣನ ವಿರುದ್ಧ ಪ್ರಶಾಂತ್‌ ಸಂಬರಗಿ ಆಕ್ರೋಶ!

Exit mobile version