Site icon Vistara News

Karnataka Politics: ಮಹಾರಾಷ್ಟ್ರ ಮಾದರಿಯಲ್ಲಿ ರಾಜ್ಯ ಕಾಂಗ್ರೆಸ್‌ ಸರ್ಕಾರ ಪತನ? ಮಹಾರಾಷ್ಟ್ರ ಸಿಎಂ ಏಕನಾಥ್‌ ಶಿಂಧೆ ಮಹತ್ವದ ಸುಳಿವು!

karnataka politics eknath shinde

ಬೆಂಗಳೂರು: ರಾಜ್ಯ ಕಾಂಗ್ರೆಸ್ (Karnataka Congress) ಸರ್ಕಾರದ ಪತನಕ್ಕೆ (Karnataka politics) ಸಮಯ ಸನ್ನಿಹಿತವಾಗಿದೆ. ಈ ಸಂದರ್ಭದಲ್ಲಿ ತನ್ನ ನೆರವನ್ನು ರಾಜ್ಯದ ಬಿಜೆಪಿ (BJP) ನಾಯಕರು ಕೋರಿದ್ದಾರೆ ಎಂಬ ಸುಳಿವನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ (Maharashtra CM Eknath Shinde) ಬಿಟ್ಟುಕೊಟ್ಟಿದ್ದಾರೆ. ರಾಜ್ಯದಲ್ಲಿ ನಡೆದ ಒಂದು ಸಭೆಯಲ್ಲಿ ನಡೆದ ಚರ್ಚೆಯ ಬಗ್ಗೆ ಮಾತನಾಡಿ ಅವರು ಈ ಸೂಚನೆ ನೀಡಿದ್ದಾರೆ.

ಅತ್ತ ಬಿಜೆಪಿ ನಾಯಕರಿಂದಲೂ ಪದೇ ಪದೆ ಸರ್ಕಾರ ಬೀಳಿಸುವ ಕುರಿತ ಹೇಳಿಕೆ ಬರುತ್ತಿರುವ ಹಿನ್ನೆಲೆಯಲ್ಲಿ, ಮಹಾರಾಷ್ಟ್ರ ಸಿಎಂ ಹೇಳಿಕೆ ಮಹತ್ವ ಪಡೆದುಕೊಂಡಿದೆ. ಮಹಾರಾಷ್ಟ್ರದ ಸತಾರಾದಲ್ಲಿ ನಡೆದ ಒಂದು ಸಭೆಯಲ್ಲಿ ಕರ್ನಾಟಕ ಸರ್ಕಾರದ ಬಗ್ಗೆ ಅವರು ಮಾತನಾಡುತ್ತಿದ್ದರು. “ಕರ್ನಾಟಕ ಸರ್ಕಾರ ಬೀಳುವುದು ಖಚಿತ” ಎಂದು ಏಕನಾಥ ಶಿಂಧೆ ಹೇಳಿದ್ದಾರೆ. “ಈ ಕುರಿತು ನನ್ನ‌ ಅನುಭವ ಬೇಕು ಅಂತ ಹೇಳಿದ್ದಾರೆ” ಎಂದು ಶಿಂಧೆ ತಿಳಿಸಿದ್ದಾರೆ.

ರಾಜ್ಯದಲ್ಲಿ ನಡೆದ ಒಂದು ಸಭೆಯಲ್ಲಿ ಚರ್ಚೆಯಾದ ಗುಟ್ಟನ್ನು ಅವರು ಈ ಮೂಲಕ ಬಿಟ್ಟುಕೊಟ್ಟಿದ್ದಾರೆ ಎನ್ನಲಾಗಿದೆ. “ನಾನು ಇತ್ತೀಚೆಗೆ ಕರ್ನಾಟಕದ ಒಂದು ಸಭೆಗೆ ಹೋಗಿದ್ದೆ. ಕರ್ನಾಟಕದಲ್ಲಿಯೂ ʼಆಪರೇಶನ್‌ ನಾಥʼ ನಡೆಸುವುದಿದೆ ಎಂದು ಅಲ್ಲಿನ ನಾಯಕರು ಹೇಳಿದರು. ಹಾಗೆಂದರೇನು ಎಂದು ವಿಚಾರಿಸಿದಾಗ, ಮಹಾರಾಷ್ಟ್ರದಲ್ಲಿ ಹಿಂದಿನ ಸರ್ಕಾರ ಪತನ ಮಾಡಿದಂತೆ ಇಲ್ಲಿಯೂ ಮಾಡುವುದಿದೆ ಎಂದಿದ್ದರು. ಅದಕ್ಕೆ ನಿಮ್ಮ ಅನುಭವ ಅಗತ್ಯ ಎಂದಿದ್ದರುʼʼ ಎಂದು ಶಿಂಧೆ ಹೇಳಿದ್ದಾರೆ. ಇದಕ್ಕಾಗಿ ಚುನಾವಣೆ ಮುಗಿದ ಮೇಲೆ ಮತ್ತೆ ನಾನು ಕರ್ನಾಟಕಕ್ಕೆ ಬರುತ್ತೇನೆ ಎಂದಿದ್ದೇನೆ ಎಂದವರು ಹೇಳಿದ್ದಾರೆ.

ಶುಕ್ರವಾರ ಬೆಂಗಳೂರಿನಲ್ಲಿ ಮಾತನಾಡುತ್ತ ರಾಜ್ಯ ವಿಪಕ್ಷ ನಾಯಕ ಆರ್. ಆಶೋಕ್ ಅವರು, “ಈ ಸರ್ಕಾರಕ್ಕೆ ಆಯುಷ್ಯವಿಲ್ಲ” ಎಂದಿದ್ದರು. ಅದಕ್ಕೂ ಮೊದಲು ಬೆಳಗಾವಿಯಲ್ಲಿ “ಈ ಸರ್ಕಾರ ಲೋಕಸಭಾ ಚುನಾವಣೆ ಬಳಿಕ ಬೀಳುವುದು ಖಚಿತ” ಎಂದು ರಮೇಶ್ ಜಾರಕಿಹೊಳಿ ಹೇಳಿದ್ದರು. ಇದೀಗ ಶಿಂಧೆ ಹೇಳಿಕೆ ಇನ್ನಷ್ಟು ಕುತೂಹಲ ಮೂಡಿಸಿದೆ.

ಆದರೆ ಈ ಹೇಳಿಕೆಗಳ ಅಸಲಿಯತ್ತಿನ ಬಗ್ಗೆ ಅನುಮೂನ ಮೂಡುವಂತಿದೆ. ಸದ್ಯ ಕಾಂಗ್ರೆಸ್‌ ವಿಧಾನಸಭೆಯಲ್ಲಿ 136 ಸ್ಥಾನ ಹೊಂದಿದ್ದು, ಬಹುಮತ ಹೊಂದಿದೆ. ಒಟ್ಟು 224 ಶಾಸಕ ಸ್ಥಾನಗಳಲ್ಲಿ ಬಿಜೆಪಿ ಕೇವಲ 66 ಸ್ಥಾನ ಹೊಂದಿದ್ದು, ಜೆಡಿಎಸ್‌ 19 ಶಾಸಕಬಲ ಹೊಂದಿದೆ. ಎರಡೂ ಪಕ್ಷಗಳು ಒಟ್ಟಾದರೂ 85 ಸ್ಥಾನಗಳು ಆಗುತ್ತವೆ; ಇದು ಬಹುಮತದ ಹತ್ತಿರಕ್ಕೂ ಬರುವುದಿಲ್ಲ. ಹೀಗಿರುವಾಗ ಕಾಂಗ್ರೆಸ್ ಸರ್ಕಾರ ಬೀಳಿಸುವುದು ಅಷ್ಟೊಂದು ಸುಲಭವಲ್ಲ.

ಹಾಗಾದರೆ ಇದು ಕೇವಲ ರಾಜಕೀಯ ಹೇಳಿಕೆಯಾ? ಇಲ್ಲದಿದ್ದರೆ 45 ಶಾಸಕರನ್ನು ಸೆಳೆದು ಸರ್ಕಾರ ಪತನ ಮಾಡುವುದು ಅಷ್ಟೊಂದು ಸುಲಭವಾ? ಅತೃಪ್ತ ಶಾಸಕರನ್ನು ಸೆಳೆದು ಸರ್ಕಾರ ಬೀಳಿಸುವ ಸರ್ಕಸ್ ಶುರು ಮಾಡುತ್ತಾರಾ? ಸಿಎಂ ಆಗುವ ಕನಸು ಕಾಣುತ್ತಿರುವ ನಾಯಕನಿಗೆ ಬಿಜೆಪಿ ಗಾಳ ಹಾಕಲಿದೆಯಾ? ರಾಜ್ಯದಲ್ಲೂ ಒಬ್ಬ ಶಿಂಧೆಯನ್ನು ಕಾಂಗ್ರೆಸ್‌ನಲ್ಲಿ ಬಿಜೆಪಿ ಹುಟ್ಟು ಹಾಕಲಿದೆಯಾ? ಹಾಗಿದ್ದರೆ ಅಂಥವರು ಯಾರು? ಲೋಕಸಭಾ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಗೆದ್ದು ದೆಹಲಿಯಲ್ಲಿ ಅಧಿಕಾರ ಹಿಡಿದರೆ ರಾಜ್ಯದಲ್ಲೂ ಕಾಂಗ್ರೆಸ್‌ನೊಳಗೆ ಬಂಡಾಯ ಖಚಿತವಾ? ರಾಜ್ಯ ಕಾಂಗ್ರೆಸ್‌ನಲ್ಲಿ ಶಿಂಧೆಗಾಗಿ ಹುಡುಕಾಟ ನಡೆದಿದೆಯಾ? ಮುಂತಾದ ಪ್ರಶ್ನೆಗಳು ಈಗ ಎದ್ದಿವೆ.

ಮಹಾರಾಷ್ಟ್ರದಲ್ಲಿ ಬಿಜೆಪಿ ಹಾಗೂ ಶಿವಸೇನೆ 2019ರ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡಿದ್ದವು. ಬಿಜೆಪಿ 105 ಸ್ಥಾನಗಳನ್ನು ಹಾಗೂ ಶಿವಸೇನೆ 56 ಸ್ಥಾನಗಳನ್ನು ಗೆದ್ದಿದ್ದವು. ಸರ್ಕಾರ ರಚನೆಯ ಸಂದರ್ಭದಲ್ಲಿ ಬಿರುಕು ಉಂಟಾಗಿತ್ತು. ಬಳಿಕ ಶಿವಸೇನೆ, ಎನ್‌ಸಿಪಿ ಹಾಗೂ ಕಾಂಗ್ರೆಸ್‌ ಸೇರಿ ಸರ್ಕಾರ ರಚಿಸಿದ್ದವು. ನಂತರ ಶಿವಸೇನೆ ನಾಯಕ ಏಕನಾಥ ಶಿಂಧೆ ಮೂರನೇ ಎರಡರಷ್ಟು ಶಾಸಕರ ಜೊತೆಗೆ ಹೊರಬಿದ್ದು ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡರು. ಇದರಿಂದ ಮಹಾ ವಿಕಾಸ್‌ ಅಘಾಡಿ ಸರ್ಕಾರ ಪತನವಾಗಿ ಬಿಜೆಪಿ- ಶಿವಸೇನೆ ಸರ್ಕಾರ ಅಸ್ತಿತ್ವಕ್ಕೆ ಬಂದಿತ್ತು. ಎನ್‌ಸಿಪಿಯ ಅಜಿತ್‌ ಪವಾರ್‌ ಕೂಡ ಇದಕ್ಕೆ ಕೈ ಜೋಡಿಸಿದ್ದರು.

ಇದನ್ನೂ ಓದಿ: Lok Sabha election 2024: 4ನೇ ಹಂತದ ಮತದಾನ..ಮೈತ್ರಿಕೂಟದಲ್ಲಿ ಬಿಕ್ಕಟ್ಟು ನೂರು.. ಗೆಲುವಿನ ಲೆಕ್ಕಾಚಾರದಲ್ಲಿ ಎನ್‌ಡಿಎ ಮತ್ತು ಇಂಡಿಯಾ

Exit mobile version