Site icon Vistara News

ವಿಸ್ತಾರ ಸಂಪಾದಕೀಯ: ಪಠ್ಯ ಪುಸ್ತಕ ಪರಿಷ್ಕರಣೆ ಆಟ, ವಿದ್ಯಾರ್ಥಿಗಳಿಗೆ ಸಂಕಟ

Karnataka Textbook Row

Karnataka Textbook Row: It is distress Students

ಕಳೆದ ವರ್ಷ ಪರಿಷ್ಕರಣೆಯಾಗಿದ್ದ ಪಠ್ಯವನ್ನು ಮತ್ತೆ ಪರಿಷ್ಕರಣೆ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಸದ್ಯ ಈ ಬಗ್ಗೆ ಎರಡು ವಾದಗಳು ಕೇಳಿಬರುತ್ತಿವೆ. ಇಡೀ ಪಠ್ಯವನ್ನೇ ಶೀಘ್ರವಾಗಿ ಪರಿಷ್ಕರಿಸಿ, ಹೊಸ ಪಠ್ಯವನ್ನು ಮಕ್ಕಳಿಗೆ ನೀಡಬೇಕು ಎನ್ನುವವರೂ ಇದ್ದಾರೆ; ವಿವಾದಕ್ಕೊಳಗಾದ ಪಾಠಗಳನ್ನು ಮಾತ್ರ ಬೋಧಿಸದೆ ಇರುವಂತೆ ಶಿಕ್ಷಕರಿಗೆ ಸೂಚನೆ ನೀಡಬೇಕು; ಪರಿಷ್ಕೃತ ಪಠ್ಯವನ್ನು ಮುಂದಿನ ವರ್ಷ ನೀಡಬೇಕು ಎಂಬುದು. ಎರಡು ವಾದಗಳಿಗೂ ಅದರದೇ ಆದ ಸಮರ್ಥನೆಗಳೂ, ನ್ಯೂನತೆಗಳೂ ಇವೆ. ಏನೇ ಆದರೂ ಮಕ್ಕಳ ಮೇಲೆ ಇದರ ಪರಿಣಾಮ ಬೀರುತ್ತದೆ. ಸರ್ಕಾರ ಪ್ರತಿ ಬಾರಿ ಬದಲಾದಾಗಲೂ ಮೊದಲ ಪ್ರಹಾರ ಮಕ್ಕಳ ಪಠ್ಯದ ಮೇಲೆ ಆಗುತ್ತದೆ. ಅದಕ್ಕಿದು ಇನ್ನೊಂದು ಸಾಕ್ಷಿ.

2008ರಲ್ಲಿ ಪ್ರೊ. ಮುಡಂಬಡಿತ್ತಾಯ ಅವರ ಅಧ್ಯಕ್ಷತೆಯ ಸಮಿತಿ ರಚಿಸಿದ್ದ ಬಿಜೆಪಿ ಸರ್ಕಾರ, ಪಠ್ಯಪುಸ್ತಕ ಬದಲಾಯಿಸಿ, ವಿವಿಧ ಪಠ್ಯಗಳನ್ನು ಸೇರಿಸಿತು. ಇದಕ್ಕೆ ಕಾಂಗ್ರೆಸ್ ಹಾಗೂ ಎಡಪಂಥೀಯ ಒಲವುಳ್ಳ ಲೇಖಕರು ವಿರೋಧ ವ್ಯಕ್ತಪಡಿಸಿದರು. 2013ರಲ್ಲಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ನೇಮಿಸಿದ ಬರಗೂರು ರಾಮಚಂದ್ರಪ್ಪ ಅವರ ಅಧ್ಯಕ್ಷತೆಯ ಪಠ್ಯಪುಸ್ತಕ ರಚನಾ ಸಮಿತಿ, ಕೆಲವು ಪಠ್ಯಗಳ ಸೇರ್ಪಡೆ ಮಾಡಿತು. ಇದಕ್ಕೆ ಬಿಜೆಪಿ ವಲಯದಿಂದ ವಿರೋಧ ವ್ಯಕ್ತವಾಯಿತು. 2019ರಲ್ಲಿ ಅಧಿಕಾರಕ್ಕೇರಿದ ಬಿಜೆಪಿ ಸರ್ಕಾರ ರಚಿಸಿದ ರೋಹಿತ್ ಚಕ್ರತೀರ್ಥ ಅವರ ಅಧ್ಯಕ್ಷತೆಯ ಸಮಿತಿ ಮತ್ತೊಮ್ಮೆ ಪಠ್ಯಪುಸ್ತಕವನ್ನು ತಿದ್ದಿತು. ಇದರಲ್ಲಿ ನಾರಾಯಣಗುರು, ಕುವೆಂಪು ಸೇರಿ ಅನೇಕರಿಗೆ ಅವಮಾನ ಮಾಡಲಾಗಿದೆ ಎಂದು ಕೋಲಾಹಲವೇ ಉಂಟಾಯಿತು. ಇದೀಗ ಕಾಂಗ್ರೆಸ್‌ ಸರ್ಕಾರ ಮತ್ತೊಮ್ಮೆ ಅದನ್ನು ತಿದ್ದಲು ಮುಂದಾಗಿದೆ.

ಪಠ್ಯ ಪುಸ್ತಕ ಎನ್ನುವುದು ವಿದ್ಯಾರ್ಥಿಗಳ ಪಾಲಿಗೆ ಅಮೂಲ್ಯ. ಆದರೆ ಪಠ್ಯ ಪುಸ್ತಕ ಎನ್ನುವುದೀಗ ರಾಜಕೀಯ ಸಿದ್ಧಾಂತದ ಆಟಿಕೆಯಂತಾಗಿದೆ. ಈ ರೀತಿಯ ಪಠ್ಯ ಪುಸ್ತಕ ಪರಿಷ್ಕರಣೆಯ ಮೇಲಾಟ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಮೇಲೆ ದುಷ್ಪರಿಣಾಮ ಬೀರುತ್ತದೆ ಎನ್ನಲು ಹೆಚ್ಚಿನ ಸಾಕ್ಷಿಗಳು ಬೇಕಿಲ್ಲ. ಈಗಾಗಲೆ ಶಾಲೆಗಳು ಆರಂಭವಾಗಿ, ಪಠ್ಯಗಳು ಅವರ ಕೈಯಲ್ಲಿವೆ. ಶಿಕ್ಷಕರು ಹಾಗೂ ಮಕ್ಕಳು ಈ ಪಠ್ಯಗಳಿಗೆ ಮಾನಸಿಕವಾಗಿ ಸಿದ್ಧಗೊಂಡಿದ್ದಾರೆ. ಹೀಗಿದ್ದರೂ, ಪಠ್ಯ ಪರಿಷ್ಕರಣೆ ಮಾಡುವ ಮಾತುಗಳನ್ನು ಸಿಎಂ ಸಿದ್ದರಾಮಯ್ಯ ಹಾಗೂ ಶಿಕ್ಷಣ ಸಚಿವ ಮಧು ಬಂಗಾರಪ್ಪ ಆಡಿದ್ದಾರೆ. ಈ ಪ್ರಯತ್ನದಿಂದ ವಿದ್ಯಾರ್ಥಿಗಳಿಗೆ ಹಾನಿಯಾಗುತ್ತದೆ ಎಂಬುದನ್ನು ಸರ್ಕಾರ ಮರೆತಂತಿದೆ. ಈಗಾಗಲೇ ಆರಂಭವಾಗಿರುವ ಶೈಕ್ಷಣಿಕ ವರ್ಷವನ್ನು ಹಾಗೆಯೇ ಬಿಟ್ಟು, ಮುಂದಿನ ವರ್ಷದಿಂದ ಅನ್ವಯವಾಗುವಂತೆ ಪರಿಷ್ಕರಣೆ ಮಾಡಿದರೆ ಅದನ್ನು ಅರ್ಥ ಮಾಡಿಕೊಳ್ಳಬಹುದು. ಈಗ ತಿದ್ದಲು ಹೊರಟರೆ, ಮಕ್ಕಳಿಗೂ ಶಿಕ್ಷಕರಿಗೂ ಗೊಂದಲ ಖಚಿತ.

ಇದನ್ನೂ ಓದಿ: ವಿಸ್ತಾರ ಅಂಕಣ: ಪಠ್ಯ ಪುಸ್ತಕ ಪರಿಷ್ಕರಣೆ ಎಂದರೆ ಮಕ್ಕಳ ಆಟ ಎಂದುಕೊಂಡಿದೆಯೇ ಸರ್ಕಾರ?

ಇಷ್ಟಕ್ಕೂ ಪಠ್ಯ ಪುಸ್ತಕಗಳನ್ನು ವರ್ಷಕ್ಕೊಮ್ಮೆ, ಸರ್ಕಾರ ಬದಲಾದಾಗಲೊಮ್ಮೆ ಯಾಕೆ ತಿದ್ದಬೇಕು ಎಂಬ ಮೂಲಭೂತ ಪ್ರಶ್ನೆಯನ್ನೇ ಕೇಳಿಕೊಳ್ಳಬೇಕಿದೆ. ಪಠ್ಯವೆಂಬುದು ಶೈಕ್ಷಣಿಕ ಲೋಕದ ಸಂವಿಧಾನ ಇದ್ದಂತೆ. ಅದರ ಪಾವಿತ್ರ್ಯತೆಯನ್ನು ರಾಜಕೀಯ ಕಾರಣಕ್ಕಾಗಿ ಕೆಡಿಸಬಾರದು. ಪಠ್ಯ ಪುಸ್ತಕವು ಯಾವುದೇ ಪಕ್ಷದ ವೈಯಕ್ತಿಕ ಸಿದ್ಧಾಂತಗಳನ್ನು ಮೀರಿ, ದೇಶದ ಹಿರಿಮೆ ಗರಿಮೆ, ಸಂಸ್ಕೃತಿ, ಜಾತ್ಯತೀತತೆಯನ್ನು ಎತ್ತಿ ಹಿಡಿಯುವಂತಿರಬೇಕು. ಪಠ್ಯ ಪುಸ್ತಕ ಪರಿಷ್ಕರಣೆಯ ಆಟ ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದಲ್ಲಿ ಸಂಕಟವಾಗಬಾರದು. ಆದರೆ ಈಗ ಆಗುತ್ತಿರುವುದು ಅದೇ. ಬಿಜೆಪಿ ಸರ್ಕಾರ ಬಂದಾಗಲೆಲ್ಲಾ ರಾಷ್ಟ್ರೀಯತೆಯನ್ನು ಪ್ರತಿಪಾದಿಸುವ ಪಠ್ಯಗಳನ್ನು ಸೇರಿಸಲು ಯತ್ನಿಸುತ್ತದೆ. ಇದು ಕೋಮುವಾದ ಎಂದು ಕಾಂಗ್ರೆಸ್‌ ಹಾಗೂ ಎಡಪಂಥೀಯರು ಬೊಬ್ಬಿಡುತ್ತಾರೆ. ಕಾಂಗ್ರೆಸ್‌ ಸರ್ಕಾರ ಬಂದಾಗ ವಾಮಪಂಥೀಯ ಚಿಂತನೆಯ ಅಂಶಗಳನ್ನು ಸೇರಿಸಲು ಯತ್ನಿಸುತ್ತದೆ. ಇದು ಸನಾತನ ಸಂಸ್ಕೃತಿಯ ಅವಹೇಳನ ಉಂಟುಮಾಡುತ್ತಿದೆ ಎಂದು ಬಿಜೆಪಿ ಕಡೆಯವರು ಬೊಬ್ಬಿಡುತ್ತಾರೆ. ಇವೆರಡನ್ನೂ ಮೀರಿದ, ದೇಶದ ಭವಿಷ್ಯದ ಪ್ರಜೆಗಳ ಹಿತದೃಷ್ಟಿಯನ್ನು ಹೊಂದಿದ ಒಂದು ಸಮನ್ವಯ ಪಠ್ಯವನ್ನು ಸಿದ್ಧ ಮಾಡಲು ಯಾಕೆ ಸಾಧ್ಯವಿಲ್ಲ? ಪಠ್ಯ ಸಿದ್ಧ ಮಾಡಬೇಕಾದವರು ಶಿಕ್ಷಣ ತಜ್ಞರೇ ಹೊರತು ರಾಜಕಾರಣಗಳಲ್ಲ. ರಾಜಕಾರಣಿಗಳ ಆಣತಿಯಂತೆ ನಡೆಯಬೇಕಾದವರು ತಜ್ಞರಲ್ಲ. ಅವರು ಚಿಂತನೆಗಳ ಪ್ರಸ್ತುತತೆಯನ್ನಷ್ಟೆ ನೋಡಬೇಕಾದವರು. ಸರ್ಕಾರ ಬದಲಾದಂತೆ ಬದಲಾಗದ ಸರ್ವಮಾನ್ಯ ಪಠ್ಯ ರಚನಾ ಸಮಿತಿಯೊಂದು ಅಗತ್ಯವಾಗಿದೆ.

ಇದನ್ನೂ ಓದಿ: Text Book: ಹಿಂದಿನ ಪಠ್ಯದಲ್ಲಿ ಹುಸಿ ದೇಶಭಕ್ತಿ; ಪಠ್ಯ ಪರಿಷ್ಕರಣೆ ಮಾಡುವುದೇ ಸರಿ ಅಂದ್ರು ಕುಂ. ವೀರಭದ್ರಪ್ಪ!

Exit mobile version