24 ರಾಜ್ಯಗಳು, 8 ಮೆಟ್ರೋ ನಗರಗಳ ಸುಮಾರು 67 ಕೋಟಿ ಜನರು, ಸಂಘ ಸಂಸ್ಥೆಗಳು, ಖಾಸಗಿ ಕಂಪನಿಗಳ ಬಳಕೆದಾರರ ವೈಯಕ್ತಿಕ ಡೇಟಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ತೆಲಂಗಾಣದ ಸೈಬರಾಬಾದ್ ಪೊಲೀಸರು ಬಂಧಿಸಿದ್ದಾರೆ. ಇದರೊಂದಿಗೆ ಬೃಹತ್ ಮಟ್ಟದಲ್ಲಿ ಜನರ ಡೇಟಾ ಮಾರಾಟದ ಜಾಲವೊಂದನ್ನು ಪತ್ತೆ ಹಚ್ಚಿದ್ದಾರೆ. ಬಂಧಿತ ವ್ಯಕ್ತಿಗೆ ಡೇಟಾ ಒದಗಿಸುತ್ತಿದ್ದ ಇನ್ನಿಬ್ಬರು ಆರೋಪಿಗಳ ಬಂಧನಕ್ಕೆ ತೆಲಂಗಾಣ ಪೊಲೀಸರು ಜಾಲ ಬೀಸಿದ್ದಾರೆ. ಈ ಪ್ರಕರಣವು ಡಿಜಿಟಲ್ ಜಗತ್ತನ್ನು ಕಾಡುತ್ತಿರುವ ‘ಸುರಕ್ಷತೆ’ಯ ಲೋಪವನ್ನು ಬಟಾಬಯಲು ಮಾಡಿದೆ. ಈ ರೀತಿಯ ಪ್ರಕರಣಗಳು ಬಯಲಿಗೆ ಬಂದಾಗಲೆಲ್ಲ ಆತಂಕದ ವಾತಾವರಣ ಸೃಷ್ಟಿಯಾಗುತ್ತದೆ. ಈ ದತ್ತಾಂಶಗಳು ಋಣಾತ್ಮಕವಾಗಿ ಬಳಕೆಯಾದರೆ ಏನು ಮಾಡುವುದು ಎಂಬ ಚಿಂತೆ ಜನರನ್ನು ಕಾಡುತ್ತದೆ.
ಸೈಬರಾಬಾದ್ ಪೊಲೀಸರು ಭೇದಿಸಿರುವ ಈ ಪ್ರಕರಣದ ಮಾಹಿತಿ ಬೆಚ್ಚಿಬೀಳಿಸುವಂತಿದೆ. ಎಜು-ಟೆಕ್ ಸಂಸ್ಥೆಗಳ ವಿದ್ಯಾರ್ಥಿಗಳು, ಫಿನ್-ಟೆಕ್ ಮತ್ತು ಇ-ಕಾಮರ್ಸ್ ಕಂಪನಿಗಳ ಗ್ರಾಹಕರು, ವಿವಿಧ ರಾಜ್ಯಗಳ ರಸ್ತೆ ಸಾರಿಗೆ ಸಂಸ್ಥೆಗಳು, ಸೋಷಿಯಲ್ ಮೀಡಿಯಾ ಬಳಕೆದಾರರು, ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಬಳಕೆದಾರರು, ಜಿಎಸ್‌ಟಿ ಗ್ರಾಹಕರು ಸೇರಿದಂತೆ 104 ಕೆಟಗರಿಯಲ್ಲಿ ದತ್ತಾಂಶಗಳನ್ನು ಬಂಧಿತ ವ್ಯಕ್ತಿ ಹೊಂದಿದ್ದಾನೆ. ಇದೆಲ್ಲ ಮೇಲ್ನೋಟಕ್ಕೆ ಕಂಡ ಬಂದ ಮಾಹಿತಿಯಷ್ಟೇ, ಈ ಪ್ರಕರಣದ ತನಿಖೆ ಇನ್ನಷ್ಟು ಆಳಕ್ಕೆ ಇಳಿದಂತೆ ಶಾಕಿಂಗ್ ಆಗಿರುವ ಮಾಹಿತಿಗಳು ಹೊರ ಬಿದ್ದರೆ ಅಚ್ಚರಿ ಪಡಬೇಕಾಗಿಲ್ಲ.
ಡಿಜಿಟಲ್ ಬಳಕೆದಾರರ ಡೇಟಾ ಕಳವು ಇದೇ ಮೊದಲಲ್ಲ. ಆಗಾಗ ಈ ರೀತಿಯ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ತಂತ್ರಜ್ಞಾನ ಕಂಪನಿಗಳು, ಡಿಜಿಟಲ್ ಆದ್ಯತೆಯ ಮೂಲಕ ವ್ಯವಹಾರ ಮಾಡುವ ಕಂಪನಿಗಳು ತಮ್ಮ ಬಳಕೆದಾರರು ಮತ್ತು ಗ್ರಾಹಕರ ಮಾಹಿತಿಯ ಸುರಕ್ಷತೆಗೆ ಅಗತ್ಯ ಕ್ರಮಗಳನ್ನು ಕೈಗೊಂಡಿರುತ್ತವೆ. ಹೀಗಿದ್ದಾಗ್ಯೂ, ಡೇಟಾ ಸೋರಿಕೆ ಮತ್ತು ಕಳವು ಅವ್ಯಾಹತವಾಗಿ ನಡೆಯುತ್ತಲೇ ಇದೆ. ಬಹುಶಃ ಈ ರೀತಿಯ ಸೈಬರ್ ಅಪರಾಧಗಳಲ್ಲಿ ಭಾಗಿಯಾದವರಿಗೆ ಅಥವಾ ಇಂಥದ್ದಕ್ಕೆ ಅವಕಾಶ ಕಲ್ಪಿಸುವ ಕಂಪನಿಗಳ ವಿರುದ್ಧ ಗರಿಷ್ಠ ಶಿಕ್ಷೆಯನ್ನು ವಿಧಿಸುವ ಅಗತ್ಯ ಕಾನೂನು ಕೊರತೆ ಇರುವುದೇ ಇದಕ್ಕೆಲ್ಲ ಕಾರಣವಾಗಿರಬಹುದು.
ಖಾಸಗಿ ಮಾಹಿತಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಸ್ಪಷ್ಟ ವ್ಯಾಖ್ಯಾನ ಮಾಡಿದೆ. ಖಾಸಗಿತನವು ಭಾರತೀಯರ ಮೂಲಭೂತ ಹಕ್ಕು ಆಗಿದ್ದು, ಅದು ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಪುಟ್ಟಸ್ವಾಮಿ ಪ್ರಕರಣದಲ್ಲಿ ಮಹತ್ವದ ತೀರ್ಪು ನೀಡಿದೆ. ಬಳಿಕ ಕೇಂದ್ರ ಸರ್ಕಾರವು ‘ಡಿಜಿಟಲ್ ಪರ್ಸನಲ್ ಡೇಟಾ ಪ್ರೊಟೆಕ್ಷನ್’ ವಿಧೇಯಕವನ್ನು ಜಾರಿಗೆ ತರುವ ಪ್ರಯತ್ನವನ್ನು ಮಾಡುತ್ತಿದೆ. ಈ ಉದ್ದೇಶಿತ ಕರಡು ಮೂರ್ನಾಲ್ಕು ಬಾರಿ ಈಗಾಗಲೇ ತಿದ್ದುಪಡಿಗೆ ಒಳಗಾಗಿದೆ. ಸಂಸತ್‌ನಲ್ಲಿ ಮಂಡನೆಯಾಗಿರುವ ವಿಧೇಯಕಕ್ಕೆ ಒಪ್ಪಿಗೆ ದೊರೆಯಬೇಕಿದೆ. ಪರಿಷ್ಕೃತ ಕರಡಿನ ಪ್ರಕಾರ, ವಿಧೇಯಕದ ನಿಬಂಧನೆಗಳನ್ನು ಉಲ್ಲಂಘಿಸಿದರೆ 500 ಕೋಟಿ ರೂ.ವರೆಗೂ ದಂಡ ವಿಧಿಸುವ ಪ್ರಸ್ತಾವನೆ ಇದೆ. ಭಾರತೀಯ ದತ್ತಾಂಶ ಮಂಡಳಿಯನ್ನು ಸ್ಥಾಪಿಸುವ ಪ್ರಸ್ತಾಪ ಕೂಡ ಇದೆ. ಕಂಪನಿಗಳು ಹಾಗೂ ವೈಯಕ್ತಿಕ ಮಟ್ಟದಲ್ಲಿ ನಡೆಯುವ ಕಳ್ಳಾಟಕ್ಕೆ ಬ್ರೇಕ್ ಹಾಕುವ ಎಲ್ಲ ನಿಯಮಗಳನ್ನು ಒಳಗೊಂಡಿದೆ. ಒಂದೊಮ್ಮೆ ಈ ವಿಧೇಯಕವೂ ಕಾನೂನಾಗಿ ಜಾರಿಯಾದರೆ, ಡಿಜಿಟಲ್ ಬಳಕೆದಾರರ ವೈಯಕ್ತಿಕ ಮತ್ತು ಖಾಸಗಿ ಮಾಹಿತಿ ಸಂರಕ್ಷಣೆಯಲ್ಲಿ ಗಮನಾರ್ಹ ಬದಲಾವಣೆಯನ್ನು ನಿರೀಕ್ಷಿಸಬಹುದು.
ಇದನ್ನೂ ಓದಿ: Cyberabad Police: 70 ಕೋಟಿ ಜನರ ವೈಯಕ್ತಿಕ, ಖಾಸಗಿ ಡೇಟಾ ಮಾರಾಟ ಮಾಡುತ್ತಿದ್ದ ವ್ಯಕ್ತಿ ಬಂಧನ!
ಬದಲಾದ ಕಾಲದ ಜತೆಗೆ ನಾವು ಹೆಜ್ಜೆ ಹಾಕಲೇಬೇಕು. ಭವಿಷ್ಯದಲ್ಲಿ ಡಿಜಿಟಲ್ ಬಳಕೆ ಈಗಿರುವುದಕ್ಕಿಂತಲೂ ಇನ್ನೂ ಹೆಚ್ಚಾಗಬಹುದು. ಹೊಸ ಹೊಸ ತಂತ್ರಜ್ಞಾನದ ಆವಿಷ್ಕಾರ, ಬಳಕೆಯನ್ನು ತಡೆಯುವುದು ಅಸಾಧ್ಯ. ಹಾಗಂತ ಅದರ ಜತೆಗೆ ಬರುವ ದುಷ್ಪರಿಣಾಮಗಳನ್ನು ಸಹಿಸಿಕೊಳ್ಳಬೇಕಾದ ಅಗತ್ಯವಿಲ್ಲ. ಅವುಗಳನ್ನು ನಿವಾರಿಸುವ ಪ್ರಯತ್ನಗಳನ್ನು ಸರ್ಕಾರಗಳು ಮತ್ತು ತಂತ್ರಜ್ಞಾನ ವಲಯವು ಮಾಡಬೇಕಾಗುತ್ತದೆ. ಅಂತಿಮವಾಗಿ ಬಳಕೆದಾರರು ಹಾಗೂ ಗ್ರಾಹಕರ ಹಿತಾಸಕ್ತಿಯನ್ನು ಕಾಪಾಡಬೇಕಾದದ್ದು ಸರ್ಕಾರದ ಕರ್ತವ್ಯ. ಹಾಗಾಗಿ, ಕೇಂದ್ರ ಸರ್ಕಾರವು ಕೂಡಲೇ ಈ ನಿಟ್ಟಿನಲ್ಲಿ ವಿಧೇಯಕದ ಜಾರಿಯೂ ಸೇರಿದಂತೆ ಎಲ್ಲ ಕಠಿಣ ಕ್ರಮಗಳನ್ನು ಕೈಗೊಳ್ಳುವತ್ತ ಗಮನ ಹರಿಸಬೇಕು.