Site icon Vistara News

Kolkata Doctor murder case: ಅಂತ್ಯಕ್ರಿಯೆ ನಡೆದ 3 ಗಂಟೆ ನಂತ್ರ FIR ದಾಖಲು..ಆಸ್ಪತ್ರೆ ವೈದ್ಯರು, ಪೊಲೀಸರು ಏನ್‌ ಮಾಡ್ತಿದ್ರು?- ಸುಪ್ರೀಂ ತರಾಟೆ

kolkata Doctor murder case

ನವದೆಹಲಿ:ಕೋಲ್ಕತಾದ ಆರ್‌ ಜಿ ಕರ್‌ ವೈದ್ಯಕೀಯ ಕಾಲೇಜಿನಲ್ಲಿ(RG Kar Medical college) ನಡೆದಿರುವ ವೈದ್ಯೆಯ ಬರ್ಬರ ಸಾಮೂಹಿಕ ಅತ್ಯಾಚಾರ ಹಾಗು ಕೊಲೆಯ (Kolkata Doctor murder case) ಪ್ರಕರಣದ ವಿಚಾರಣೆ ಇಂದು ಸುಪ್ರೀಂಕೋರ್ಟ್‌(Supreme Court)ನಲ್ಲಿ ನಡೆಸಿದ್ದು, ಇಂತಹ ಹೇಯ ಕೃತ್ಯಕ್ಕೆ ಕಡಿವಾಣ ಹಾಕಲು ಮತ್ತೊಂದು ಅತ್ಯಾಚಾರ ನಡೆಯುವವರೆಗೆ ಕಾಯಲು ಸಾಧ್ಯವಿಲ್ಲ ಎಂಂದು ಖಡಕ್‌ ಆಗಿ ಹೇಳಿದೆ.

ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌ ನೇತೃತ್ವ ನ್ಯಾಯಪೀಠ ಪ್ರಕರಣದ ವಿಚಾರಣೆ ನಡೆಸಿದ್ದು, ಘಟನೆಗೆ ಸಂಬಂಧಿಸಿದಂತೆ ಎಫ್‌ಐಆರ್‌ ದಾಖಲು ಮತ್ತು ಇತರ ಪ್ರಕ್ರಿಯೆ ನಡೆಸುವಲ್ಲಿ ಪೊಲೀಸ್‌ ಇಲಾಖೆ, ಆಸ್ಪತ್ರೆ ಆಡಳಿತ ಮಂಡಳಿ ಮತ್ತು ಪಶ್ಚಿಮ ಬಂಗಾಳ ಸರ್ಕಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ. ಟ್ರೈನಿ ವೈದ್ಯೆಯ ಮೃತದೇಹವನ್ನು ಅಂತ್ಯ ಸಂಸ್ಕಾರಕ್ಕೆ ಕಳುಹಿಸಿದ ಮೂರು ಗಂಟೆಗಳ ನಂತರ ಎಫ್‌ಐಆರ್‌ ಏಕೆ ದಾಖಲಾಗಿದೆ? ಕಾಲೇಜು ಪ್ರಾಂಶುಪಾಲ ಏನು ಮಾಡುತ್ತಿದ್ದರು? FIR ದಾಖಲಾಗದೇ ಯುವತಿಯ ಮೃತದೇಹವನ್ನು ಪೋಷಕರಿಗೆ ಹಸ್ತಾಂತರಿಸಲಾಗಿದೆ. ಪೊಲೀಸರು ಏನು ಮಾಡುತ್ತಿದ್ದರು? ಇಷ್ಟು ಪ್ರಕರಣವೊಂದು ನಡೆದಿರುವಾಗ ಘಟನಾ ಸ್ಥಳದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಹೇಗೆ ಅವಕಾಶ ಮಾಡಿಕೊಟ್ಟರು ಎಂದು ಖಡಕ್‌ ಆಗಿ ಪ್ರಶ್ನಿಸಿದ್ದಾರೆ.

ಪೀಠದ ಪ್ರಶ್ನೆಗಳಿಗೆ ಉತ್ತರವಾಗಿ, ಪಶ್ಚಿಮ ಬಂಗಾಳ ಸರ್ಕಾರದ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, ಆಸ್ಪತ್ರೆಯಲ್ಲಿ ಜನರು ಫೋಟೋಗಳನ್ನು ತೆಗೆದುಕೊಂಡಿದ್ದಾರೆ, ಅಸಹಜ ಸಾವಿನ ಪ್ರಕರಣವನ್ನು ತಕ್ಷಣವೇ ಪ್ರಾರಂಭಿಸಲಾಯಿತು ಮತ್ತು ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಇರುವ ಮಂಡಳಿಯನ್ನು ಸ್ಥಾಪಿಸಲಾಯಿತು ಎಂದು ಪ್ರತಿವಾದಿಸಿದರು. ಆದರೆ, ವಿಶೇಷವಾಗಿ ಸಂತ್ರಸ್ತೆಯ ಪೋಷಕರ ಅನುಪಸ್ಥಿತಿಯಲ್ಲಿ ಎಫ್‌ಐಆರ್ ದಾಖಲಿಸುವುದು ಆಸ್ಪತ್ರೆಯ ಕರ್ತವ್ಯ ಎಂದು ಸಿಜೆಐ ಚಂದ್ರಚೂಡ್ ಹೇಳಿದ್ದಾರೆ.

ಎಫ್‌ಐಆರ್‌ನ ಟೈಮ್‌ಲೈನ್ ಅನ್ನು ಪ್ರಶ್ನಿಸಿದ ನ್ಯಾಯಮೂರ್ತಿ ಪಾರ್ದಿವಾಲಾ, “ಎಫ್‌ಐಆರ್ ದಾಖಲಿಸಿದ ಮೊದಲ ಮಾಹಿತಿದಾರರು ಯಾರು? ಎಫ್‌ಐಆರ್‌ನ ಸಮಯ ಎಷ್ಟು?” ಮೊದಲ ಮಾಹಿತಿದಾರ ಸಂತ್ರಸ್ತೆಯ ತಂದೆಯಾಗಿದ್ದು, ರಾತ್ರಿ 11:45 ಕ್ಕೆ ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಸಿಬಲ್ ಪ್ರತಿಕ್ರಿಯಿಸಿದರು.

ವೈದ್ಯಕೀಯ ವೃತ್ತಿಗಳು ಹಿಂಸೆಗೆ ಗುರಿಯಾಗುತ್ತಿವೆ. ಸಮಾಜದಲ್ಲಿ ಬೇರೂರಿರುವ ಪಿತೃಪ್ರಭುತ್ವದ ಪಕ್ಷಪಾತದಿಂದಾಗಿ, ಮಹಿಳಾ ವೈದ್ಯರು ಹಿಂಸಾಚಾರಕ್ಕೆ ಹೆಚ್ಚು ಗುರಿಯಾಗುತ್ತಿದ್ದಾರೆ. ಉದ್ಯೋಗ ಸ್ಥಳದಲ್ಲೇ ಅವರ ಮೇಲಿನ ಶೋಷಣೆ ಹೆಚ್ಚಾಗುತ್ತಿದೆ ಎಂದು ಸಿಜೆಐ ಚಂದ್ರಚೂಡ್‌ ಅಭಿಪ್ರಾಯಪಟ್ಟಿದ್ದಾರೆ.

ರಾಷ್ಟ್ರೀಯ ಕಾರ್ಯಪಡೆ ನೇಮಕ

ಇನ್ನು ವೈದ್ಯೆ ಕೊಲೆ ಪ್ರಕರಣದ ತನಿಖೆ ನಡೆಸಲು ಸುಪ್ರೀಂಕೋರ್ಟ್‌ ರಾಷ್ಟ್ರೀಯ ಕಾರ್ಯಪಡೆಯನ್ನು ನೇಮಕ ಮಾಡಿದೆ. ಈ ಕಾರ್ಯಪಡೆಯಲ್ಲಿ ಸರ್ಜನ್‌ ವೈಸ್‌ ಅಡ್ಮಿರಲ್‌ ಆರ್‌.ಕೆ. ಸರಿನ್‌, ಏಷ್ಯನ್ ಇನ್ಸ್ಟಿಟ್ಯೂಟ್ ಆಫ್ ನ್ಯಾಷನಲ್ ಗ್ಯಾಸ್ಟ್ರೋಲಜಿ ವ್ಯವಸ್ಥಾಪಕ ನಿರ್ದೇಶಕ ಡಾ. ನಾಗೇಶ್ವರ ರೆಡ್ಡಿ ಇದ್ದಾರೆ.

ಇದನ್ನೂ ಓದಿ: Kolkata Doctor murder case: ಕೋಲ್ಕತ್ತಾ ಟ್ರೈನಿ ವೈದ್ಯೆಯ ಕೊಲೆ ಪ್ರಕರಣ- ಇಂದು ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ

Exit mobile version