Site icon Vistara News

ವಿಸ್ತಾರ ಸಂಪಾದಕೀಯ: ಮತ ಪ್ರಮಾಣ ಹೆಚ್ಚಿಸುವ ಆಯೋಗದ ಕ್ರಮವನ್ನು ಬೆಂಬಲಿಸೋಣ

Karnataka Elections 2023

Karnataka Elections 2023

ಕೇಂದ್ರ ಚುನಾವಣೆ ಆಯೋಗವು ಕರ್ನಾಟಕ ವಿಧಾನಸಭೆ ಚುನಾವಣೆಯ ದಿನವನ್ನು ಘೋಷಿಸಿದೆ. ಮೇ 10ರಂದು ಒಂದೇ ಹಂತದಲ್ಲಿ ಚುನಾವಣೆ ನಡೆದು, ಮೇ 13ರಂದು ಮತ ಎಣಿಕೆಯಾಗಿ ಫಲಿತಾಂಶ ಕೂಡ ಬರಲಿದೆ. ಮುಕ್ತ, ಪಾರದರ್ಶಕ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಯುವುದರ ಜತೆಗೆ, ಮತದಾನ ಪ್ರಮಾಣವನ್ನೂ ಹೆಚ್ಚಿಸಲು ಅಗತ್ಯವಾದ ಕ್ರಮಗಳನ್ನು ಕೈಗೊಳ್ಳುತ್ತಿರುವುದಾಗಿ ಆಯೋಗ ಘೋಷಿಸಿದೆ. ಮುಖ್ಯವಾಗಿ ನಗರ ಪ್ರದೇಶಗಳಲ್ಲಿ ಮತದಾನ ಪ್ರಮಾಣ ಕಡಿಮೆಯಿದೆ. ವಿದ್ಯಾವಂತರೇ ಮತದಾನ ಮಾಡುತ್ತಿಲ್ಲ ಎಂಬುದು ನಮ್ಮ ಪ್ರಜಾಪ್ರಭುತ್ವಕ್ಕೆ ಸವಾಲಾಗಿರುವ ಕೊರಗುಗಳಲ್ಲಿ ಒಂದು. ಹೀಗಾಗಿ ಮತದಾರರನ್ನು ಮತಗಟ್ಟೆಯತ್ತ ಸೆಳೆಯಲು ಆಯೋಗ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಇವುಗಳಿಗೆ ಪೂರಕವಾಗಿ ಎಲ್ಲರೂ ಸ್ಪಂದಿಸಬೇಕಿದೆ.

ಸಾಮಾನ್ಯವಾಗಿ ವಾರಾಂತ್ಯ ಅಥವಾ ವಾರದ ಆರಂಭದಲ್ಲಿ ಮತದಾನ ದಿನ ನಿಗದಿಪಡಿಸಿದರೆ ಒಂದಿಷ್ಟು ಸಂಖ್ಯೆಯ ಮತದಾರರು ಪ್ರವಾಸಕ್ಕೆ ಹೊರಡುವ ಪ್ರವೃತ್ತಿಯನ್ನು ನಾವು ಈ ಹಿಂದಿನ ಚುನಾವಣೆಗಳಲ್ಲಿ ಗಮನಿಸಿದ್ದೇವೆ. ಅದನ್ನು ತಪ್ಪಿಸಲು ಈ ಬಾರಿ ಆಯೋಗವು ವಾರದ ನಡುವೆ ಮತದಾನದ ದಿನ ನಿಗದಿಪಡಿಸಿದ್ದು ಕೂಡ ಯೋಜಿತ ಮತ್ತು ಪರಿಣಾಮಕಾರಿ ನಿರ್ಧಾರ ಎನ್ನಬಹುದಾಗಿದೆ. ಹಾಗೆಯೇ ಎಲ್ಲರೂ ಮತದಾನ ಮಾಡಲು ಅವಕಾಶ ದೊರೆಯಬೇಕು ಎನ್ನುವ ಉದ್ದೇಶದಿಂದ ಮೊದಲ ಬಾರಿಗೆ ಮತದಾನ ಕೇಂದ್ರಕ್ಕೆ ಬರಲು ಆಗದ 80 ವರ್ಷಕ್ಕೂ ಮೇಲ್ಪಟ್ಟವರು, ಗಂಭೀರ ಅನಾರೋಗ್ಯ ಬಾಧಿತರು ಮತ್ತು ಅಂಗವಿಕಲರಿಗೆ ಮನೆಯಿಂದಲೇ ಮತದಾನಕ್ಕೆ ಅವಕಾಶ ನೀಡಲಾಗಿದೆ. ಜತೆಗೆ ಮತದಾನ ಕೇಂದ್ರದಲ್ಲೂ ಇವರಿಗೆ ವಿಶೇಷ ಸೌಲಭ್ಯ ಮಾಡಲಾಗಿದೆ. ಆದರೆ ಮೊದಲೇ ಈ ಬಗ್ಗೆ ನೋಂದಾಯಿಸಿಕೊಳ್ಳಬೇಕು. ಅಂಥ ಒಂದು ಮತದ ಸಂಗ್ರಹಕ್ಕೆ ಮೂರ್ನಾಲ್ಕು ಮಂದಿಯನ್ನು ನಿಯೋಜಿಸಲಾಗುತ್ತದೆ ಎಂದರೆ, ಒಂದೊಂದು ಮತವನ್ನೂ ಆಯೋಗ ಎಷ್ಟು ಗಂಭಿರವಾಗಿ ಪರಿಗಣಿಸಿದೆ ಎಂಬುದನ್ನು ಗಮನಿಸಬಹುದು. ಕರ್ನಾಟಕದಲ್ಲಿ ಮೊದಲ ಬಾರಿಗೆ ಜಾರಿಯಾಗುತ್ತಿರುವ ಇದೊಂದು ಕ್ರಾಂತಿಕಾರಿ ಉಪಕ್ರಮವೇ ಸರಿ. ಅಗತ್ಯವಿದ್ದವರು ಇದರ ಸದ್ಬಳಕೆ ಮಾಡಿಕೊಳ್ಳಬೇಕಿದೆ.

ಯುವ ಮತದಾರರಿಗೆ, ಮೊದಲ ಬಾರಿಗೆ ಮತ ಹಾಕುತ್ತಿರುವವರಿಗೆ ಉತ್ತೇಜನ ನೀಡುವ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಕರ್ನಾಟಕದಲ್ಲಿ ಕರ್ನಾಟಕದಲ್ಲಿ 5, 21, 73, 573 ಮತದಾರರಿದ್ದು, ಇದರಲ್ಲಿ ಮೊದಲ ಬಾರಿಯ ಮತದಾರರ ಸಂಖ್ಯೆ 9.17 ಲಕ್ಷದಷ್ಟು ಹೆಚ್ಚಳವಾಗಿದೆ. ಇವರನ್ನು ಮತಗಟ್ಟೆಗಳತ್ತ ತರಲು ಉತ್ಸಾಹ ತುಂಬಲು, ಪ್ರಜಾಪ್ರಭುತ್ವದಲ್ಲಿ ಅವರ ಹೊಣೆಯ ಕುರಿತು ಆಡುವ ನಾಲ್ಕು ಪ್ರೋತ್ಸಾಹದ ಮಾತುಗಳೂ ಸಾಕಾಗುತ್ತವೆ. ಇವರನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಜೇನು ಕುರುಬ ಹಾಗೂ ಕೊರಗ ಸಮುದಾಯಗಳನ್ನು ಬುಡಕಟ್ಟು ಸಮುದಾಯಗಳು ಎಂದು ಪರಿಗಣಿಸಲಾಗಿದ್ದು, ಈ ಸಮುದಾಯದವರ ಮತದಾನಕ್ಕೆ 40 ಮತಗಟ್ಟೆ ಮಾಡಲಾಗಿದೆ. ಮತಗಟ್ಟೆಗಳ ಸಂಖ್ಯೆ ಹೆಚ್ಚಿಸಲಾಗಿರುವುದರಿಂದ ಒತ್ತಡ ಕಡಿಮೆಯಾಗಲಿದೆ. ಬೆಂಗಳೂರು ನಗರದಲ್ಲಿ ಯುವಮತದಾರರ ಪಾಲ್ಗೊಳ್ಳುವಿಕೆ ಹೆಚ್ಚಿಸಲು ಐಐಎಸ್‌ಸಿ, ಐಐಟಿ ಹಾಗೂ ಸ್ಟಾರ್ಟಪ್‌ಗಳ ಸಹಯೋಗದೊಂದಿಗೆ ಎಲೆಕ್ಥಾನ್ ಹಾಗೂ ಇನ್ನಿತರ ಕ್ರಮಗಳನ್ನು ಆಯೋಗ ಕೈಗೊಳ್ಳುತ್ತಿದೆ. ಮತ ಪ್ರಮಾಣ ಹೆಚ್ಚಿಸುವ ಸಲಹೆ ನೀಡುವವರಿಗೆ ಬಹುಮಾನ ಇತ್ಯಾದಿ ಹಲವು ಕ್ರಮಗಳನ್ನು ಕೈಗೊಂಡಿರುವುದು ಕ್ರಾಂತಿಕಾರಕವಾಗಿದೆ.

ಪ್ರತಿ ಮತವೂ ಅಮೂಲ್ಯ ಎಂದು ನಾವು ಹೇಳುತ್ತೇವೆ. ಆದರೆ, ಮುಖ್ಯವಾಗಿ ನಗರ ಪ್ರದೇಶಗಳಲ್ಲೇ ಮತದಾನ ಪ್ರಮಾಣ ಶೇ.60ನ್ನು ದಾಟುವುದಿಲ್ಲ. ನಗರ ಪ್ರದೇಶದ ಮತದಾರರ ಆಲಸ್ಯ ಹಾಗೂ ಹಣದ ಪ್ರಾಬಲ್ಯವು ಕರ್ನಾಟಕದಲ್ಲಿ ಪ್ರಮುಖ ಸವಾಲಾಗಿದೆ ಎಂದು ಆಯೋಗವೇ ಹೇಳಿದೆ. ಸುಶಿಕ್ಷಿತರು ಮತದಾನ ಮಾಡುವುದು ತಮ್ಮ ಕರ್ತವ್ಯ ಎಂದು ಭಾವಿಸಿದಾಗ ಮಾತ್ರ ಇದಕ್ಕೆ ಪರಿಹಾರ. ಪ್ರಜಾಪ್ರಭುತ್ವವೆಂಬುದು ಸುಮ್ಮನೇ ಯಾರೋ ನಮಗೆ ತಟ್ಟೆಯಲ್ಲಿಟ್ಟು ಕೊಟ್ಟ ಉಡುಗೊರೆಯಲ್ಲ. ಪ್ರತಿ ಪ್ರಜೆಯೂ ಪ್ರತಿ ಕಾಲದಲ್ಲೂ ತಮ್ಮ ಪ್ರಜಾಪ್ರಭುತ್ವವನ್ನು ಉತ್ತಮಗೊಳಿಸಿಕೊಳ್ಳಲು ಸದಾ ಶ್ರಮಿಸುತ್ತಿರಬೇಕು. ಸಂವಿಧಾನದ ಪ್ರಕಾರ ಪ್ರತೀ ಪ್ರಜೆಗೂ ಮತದಾನ ಎಂಬುದು ಮೂಲಭೂತ ಹಕ್ಕು. ಮತದಾನದ ಒಂದು ದಿನದಂದು ಮಾತ್ರವೇ ಪ್ರಜೆ ಪ್ರಭುವಾಗಿರುತ್ತಾನೆ. ಅಂದು ಸರಿಯಾಗಿ ತಮ್ಮ ಅಧಿಕಾರ ಚಲಾಯಿಸದೇ ಹೋದರೆ ಮುಂದಿನ ಐದು ವರ್ಷ ತಮಗಿಷ್ಟವಿಲ್ಲದ ವ್ಯಕ್ತಿಗಳ ಗುಲಾಮರಾಗಿರಬೇಕಾಗುತ್ತದೆ. ಚುನಾವಣೆ ಆಯೋಗದ ಸುಧಾರಣಾವಾದಿ ಕ್ರಮಗಳನ್ನು ಬೆಂಬಲಿಸುವುದು ತಮ್ಮ ಕರ್ತವ್ಯ ಎಂದು ನಾಗರಿಕರು ಪರಿಗಣಿಸಬೇಕು. ಆಗ ಮಾತ್ರ ಮತದಾನ ಪ್ರಮಾಣ ಹೆಚ್ಚಲು ಸಾಧ್ಯವಾಗುತ್ತದೆ.

Exit mobile version