Site icon Vistara News

Lok Sabha Election 2024: ಮಂಡ್ಯದಲ್ಲಿ ಕಾಂಗ್ರೆಸ್‌ ಪರ ಪ್ರಚಾರಕ್ಕೆ ಬಂದ ದರ್ಶನ್‌; ಯಾಕೆ ಸುಮಲತಾ ಸೈಲೆಂಟ್?

Darshan and Sumalatha Ambareesh

ಮಂಡ್ಯ: ಮಂಡ್ಯದಲ್ಲಿ (Mandya) ಲೋಕಸಭೆ ಚುನಾವಣೆ (Lok Sabha Election 2024) ಅಖಾಡ ರಂಗೇರಿದೆ. ರಾಜ್ಯದ 28 ಕ್ಷೇತ್ರಗಳ ಪೈಕಿ ಮಂಡ್ಯ ಭಾರಿ ಪ್ರತಿಷ್ಠೆಯ ಕಣವಾಗಿದೆ. 2019ರಲ್ಲಿ ಮಂಡ್ಯ ದೇಶದ ಗಮನ ಸೆಳೆದಂತೆ, ಈ ಬಾರಿಯೂ ಆಗಿದೆ. ಸದ್ಯ, ಸುಮಲತಾ (Sumalatha Ambareesh) ಅವರ ಬಣದಲ್ಲಿದ್ದ ನಟ ದರ್ಶನ್‌ (Actor Darshan), ಕಾಂಗ್ರೆಸ್‌ ಅಭ್ಯರ್ಥಿ ಸ್ಟಾರ್‌ ಚಂದ್ರು (Star Chandru) ಅವರ ಪರವಾಗಿ ಪ್ರಚಾರಕ್ಕೆ ಇಳಿದಿದ್ದಾರೆ. ಸುಮಲತಾ ಈ ಬಗ್ಗೆ ಮೌನ ಕಾಪಾಡಿಕೊಂಡಿದ್ದು, ಅವರ ನಡೆ ಕುತೂಹಲ ಕೆರಳಿಸಿದೆ.

ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ (HD Kumaraswamy) ಹಾಗೂ ಸ್ಟಾರ್‌‌ ಚಂದ್ರು ನಡುವೆ ಇದೀಗ ಬಿಗ್ ಫೈಟ್‌‌ ನಡೆದಿದೆ. ಹಾಲಿ ಸಂಸದೆ ಸುಮಲತಾ, ಬಿಜೆಪಿ ಸೇರಿಕೊಂಡಿದ್ದರೂ ಪ್ರಚಾರ ಕಣದಲ್ಲಿ ಕಾಣಿಸದೆ ಸೈಲೆಂಟ್‌‌ ಆಗಿದ್ದಾರೆ. ಅತ್ತ ಅವರ ಕಾರ್ಯಕರ್ತರೂ ಮೌನವಾಗಿದ್ದಾರೆ. ಆದರೆ ಸುಮಲತಾ ʼದತ್ತು ಪುತ್ರʼ ಎಂದೇ ಕರೆಸಿಕೊಂಡಿರುವ ದರ್ಶನ್‌ ಮಂಡ್ಯಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿ ಸ್ಟಾರ್‌‌ ಚಂದ್ರು ಪರ ಸ್ಟಾರ್‌‌ ಪ್ರಚಾರಕ್ಕೆ ಇಳಿದಿದ್ದಾರೆ.

ದರ್ಶನ್‌ ಬಂದರೆ ಸ್ಟಾರ್‌‌ ಚಂದ್ರುಗೆ ಪ್ಲಸ್‌ ಆಗಲಿದೆಯೇ ಎಂಬ ಕುತೂಹಲ ಗರಿಗೆದರಿದೆ. ದರ್ಶನ್‌ ಮಂಡ್ಯ ಗ್ರಾಮಾಂತರ ಭಾಗದಲ್ಲಿ ಸಾಕಷ್ಟು ಹವಾ ಹೊಂದಿದ್ದಾರೆ. 2019ರಲ್ಲಿ ಜೆಡಿಎಸ್‌ನಿಂದ ನಿಂತಿದ್ದ ನಿಖಿಲ್‌ ಕುಮಾರಸ್ವಾಮಿ ಅವರ ಸೋಲಿಗೆ ದರ್ಶನ್‌‌ ಅವರ ಬಿರುಗಾಳಿಯಂಥ ಪ್ರಚಾರವೂ ಕಾರಣವಾಗಿತ್ತು. ನಟ ಯಶ್‌‌ ಜತೆ ಸೇರಿ ಒಂದು ತಿಂಗಳು ಅವರು ಪ್ರಚಾರ ಮಾಡಿದ್ದರು. ʼಸ್ವಾಭಿಮಾನ ಪಾಲಿಟಿಕ್ಸ್‌ʼ ಮಾಡಿ ಸುಮಲತಾ ಅವರನ್ನು ಗೆಲ್ಲಿಸಿದ್ದರು.

ಅಂದು ಮಗನ ವಿರುದ್ಧ ಪ್ರಚಾರ ಮಾಡಿ ಗೆಲ್ಲಿಸಿಕೊಂಡಿದ್ದ ದರ್ಶನ್‌, ಇಂದು ಅಪ್ಪನ (ಎಚ್‌ಡಿಕೆ) ವಿರುದ್ಧ ಪ್ರಚಾರಕ್ಕೆ ಇಳಿದಿದ್ದಾರೆ. ಮಂಡ್ಯದಲ್ಲಿ ದರ್ಶನ್‌‌ ಬೆಂಬಲಿಸುವ ದೊಡ್ಡ ಒಕ್ಕಲಿಗರ ಪಡೆಯಿದ್ದು, ಏಳು ವಿಧಾನಸಭಾ ಕ್ಷೇತ್ರಗಳಲ್ಲೂ ದರ್ಶನ್‌ ಫ್ಯಾನ್ಸ್‌‌ ಇದ್ದಾರೆ. ಅಭಿಮಾನಿಗಳ ವೋಟ್‌ ಕಾಂಗ್ರೆಸ್‌ಗೆ ಬಂದರೆ ಶಕ್ತಿ ದುಪ್ಪಟ್ಟಾಗಲಿದೆ. ಸದ್ಯ ಹದಿನೈದು ದಿಗಳಿಂದ ಸ್ಟಾರ್‌‌ ಚಂದ್ರು ಕ್ಷೇತ್ರದಲ್ಲಿ ಬೀಡು ಬಿಟ್ಟು ನಿರಂತರ ಪ್ರಚಾರದಲ್ಲಿದ್ದಾರೆ.

ದರ್ಶನ್‌ ಆಗಮನ, ಸುಮಲತಾ ಮೌನದಿಂದ ಎಚ್‌ಡಿ ಕುಮಾರಸ್ವಾಮಿ ಅವರಿಗೆ ಡಬಲ್‌ ಟೆನ್ಷನ್‌‌ ಉಂಟಾಗಿದೆ. ಮಂಡ್ಯದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆಯಲ್ಲಿ ಎಚ್‌ಡಿಕೆ ಇದ್ದಾರೆ. ಬಿಜೆಪಿ ಜೊತೆಗಿನ ಮೈತ್ರಿಯಲ್ಲಿ ಕೇವಲ ಮೂರು ಕ್ಷೇತ್ರಗಳು ರಾಜ್ಯದಲ್ಲಿ ಪಕ್ಷಕ್ಕೆ ದೊರೆತಿದೆ. ಈ ಮೂರನ್ನೂ ಗೆಲ್ಲಿಸಿಕೊಳ್ಳಲು ಅವರು ಮುಂದಾಗಿದ್ದಾರೆ. ಹೀಗಾಗಿ ಕೊನೆಯ ಕ್ಷಣದಲ್ಲಿ ತಾವೇ ಅಭ್ಯರ್ಥಿಯಾಗಿದ್ದರು. 2019ರಲ್ಲಿ ನಿಖಿಲ್‌ಗೆ ಆದ ಸೋಲಿಗೆ ಸೇಡು ತೀರಿಸಿಕೊಳ್ಳುವುದು ಅನಿವಾರ್ಯವಾಗಿದೆ. ಚಲುವರಾಯಸ್ವಾಮಿ ಪಾಲಿಗೆ ಸೋಲು ಕಾಣಿಸುವ ಲೆಕ್ಕಚಾರವಿದೆ.

ಕಾಂಗ್ರೆಸ್‌ ಪರ ಪ್ರಚಾರಕ್ಕೆ ಆಗಮಿಸುತ್ತಿರುವ ದರ್ಶನ್‌ ಜೊತೆಗೆ ರಾಹುಲ್‌ ಗಾಂಧಿ, ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್‌ ಮುಂತಾದ ಘಟಾನುಘಟಿಗಳಿಂದಲೂ ಪ್ರಚಾರ ನಡೆಯುತ್ತಿದೆ.

ಸುಮಲತಾ ಯಾಕೆ ಸೈಲೆಂಟ್?

ಬಿಜೆಪಿ ಸೇರ್ಪಡೆ ಆದ ಬಳಿಕವೂ ಸುಮಲತಾ ಮೌನ ವಹಿಸಿದ್ದು, ಬಹಿರಂಗ ಪ್ರಚಾರದಲ್ಲಿ ಕಾಣಿಸಿಕೊಂಡಿಲ್ಲ. ಮಂಡ್ಯದಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಎಚ್‌ಡಿಕೆ ಕಣದಲ್ಲಿದ್ದರೂ, ಮಂಡ್ಯ ಅಖಾಡದಲ್ಲಿ ಕಾಣಿಸಿಕೊಳ್ಳದ ಸುಮಲತಾ, “ನನ್ನನ್ನು ಎಚ್‌ಡಿಕೆ ಅಹ್ವಾನಿಸಿಲ್ಲ” ಎಂದಿದ್ದಾರೆ.

ತಮಗೆ ಬಿಜೆಪಿಯಿಂದಲೇ ಅಧಿಕೃತ ಅಹ್ವಾನ ಬರಬೇಕು ಎಂಬುದು ಸುಮಲತಾ ಅಭಿಪ್ರಾಯವಾಗಿದೆ. ಬಿಜೆಪಿ ಕಚೇರಿಯಿಂದಲೇ ಅಧಿಕೃತ ಕ್ಷೇತ್ರ ತೋರಿಸಿದರೆ, ಅಥವಾ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಸೇರಿಸಿದರೆ ಹೋಗೋಣ ಎಂದು ಸುಮಲತಾ ಅಂದುಕೊಂಡಿದ್ದಾರೆ. ಮಂಡ್ಯದಲ್ಲಿಯಂತೂ ಜೆಡಿಎಸ್ ಅಭ್ಯರ್ಥಿ ಪರ ಪ್ರಚಾರ ಮಾಡಲು ಸುಮಲತಾ ಹಿಂದೇಟು ಹಾಕುತ್ತಿದ್ದು, ಮಂಡ್ಯದಲ್ಲಿ ಜೆಡಿಎಸ್ ಗೆದ್ದರೆ ಬಿಜೆಪಿ ಸಂಘಟನೆ ವೀಕ್ ಆಗುತ್ತದೆ ಅನ್ನುವ ಆತಂಕದಲ್ಲಿ ಸುಮಲತಾ ಇದ್ದಾರೆ.

ಹಳೆಯ ಸ್ನೇಹಿತ ದರ್ಶನ್:‌ ಚಂದ್ರು

“ದರ್ಶನ್ ನನಗೆ ಹಳೆಯ ಸ್ನೇಹಿತ. ಪ್ರಚಾರಕ್ಕೆ ಬರುವಂತೆ ಕೇಳಿಕೊಂಡಿದ್ದೆ. ಅದಕ್ಕೆ ಒಪ್ಪಿ ಇಂದು ಪ್ರಚಾರಕ್ಕೆ ಬರ್ತಿದ್ದಾರೆ. ಮಳವಳ್ಳಿಯಲ್ಲಿ ಸಂಜೆವರೆಗೂ ಪ್ರಚಾರ ಮಾಡ್ತಾರೆ. ಸಂಜೆ ವೇಳೆಗೆ ನಾನೂ ಅವರ ಜೊತೆಗೆ ಸೇರಿಕೊಳ್ಳುತ್ತೇನೆ. ಅವರು ಬಂದು ಪ್ರಚಾರ ಮಾಡ್ತಿರೋದು ನನಗೆ ಅನುಕೂಲವಾಗುತ್ತೆ. ಹಳ್ಳಿಗಳಲ್ಲಿ ಜನ ಉತ್ತಮ ರೀತಿಯಲ್ಲಿ ಸ್ಪಂದಿಸ್ತಿದ್ದಾರೆ. ನೂರಕ್ಕೆ‌ ನೂರರಷ್ಟು ನಾನು ಗೆಲ್ತೇನೆ” ಎಂದು ಮಂಡ್ಯ ತಾಲೂಕಿನ ಕೊತ್ತತ್ತಿ ಗ್ರಾಮದಲ್ಲಿ ಕೈ ಅಭ್ಯರ್ಥಿ ಸ್ಟಾರ್ ಚಂದ್ರು ಹೇಳಿದ್ದಾರೆ.

ಇದನ್ನೂ ಓದಿ: Sumalatha Ambareesh : ಬಿಜೆಪಿಗೆ ಸೇರ್ಪಡೆಗೊಂಡರೂ ಪ್ರಚಾರಕ್ಕೆ ಇಳಿಯದ ಸುಮಲತಾ!

Exit mobile version