Site icon Vistara News

Lok Sabha Election 2024: ಬಿಜೆಪಿ ಪಟ್ಟಿ ರಿಲೀಸ್‌; ಮೈಸೂರಿಗೆ ಯದುವೀರ್‌, ಬೆಂ. ಉತ್ತರಕ್ಕೆ ಶೋಭಾ ಶಿಫ್ಟ್, ಉಡುಪಿಗೆ ಕೋಟ!

Lok Sabha Election 2024 BJP releases list of candidates Yaduveer and Shobha shift to Banglore North

ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಮತ್ತೊಮ್ಮೆ ಅಧಿಕಾರದ ಗದ್ದುಗೆ ಹಿಡಿಯುವಲ್ಲಿ ತಂತ್ರಗಾರಿಕೆ ರೂಪಿಸುತ್ತಿರುವ ಬಿಜೆಪಿ ಎಲ್ಲ ರಾಜಕೀಯ ಪಕ್ಷಗಳಿಂದ ಒಂದು ಹೆಜ್ಜೆ ಮುಂದಿಟ್ಟಿದೆ. ಮಾ. 2ರಂದು ಮೊದಲ ಪಟ್ಟಿ ಬಿಡುಗಡೆ ಮಾಡಿದ್ದ ಬೆನ್ನಲ್ಲೇ ಇಂದು (ಬುಧವಾರ – ಮಾ. 13) ತನ್ನ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಕರ್ನಾಟಕದ 20 ಅಭ್ಯರ್ಥಿಗಳಿಗೆ ಟಿಕೆಟ್‌ ಘೋಷಣೆ ಮಾಡಲಾಗಿದೆ. ಇದರಲ್ಲಿ ಮೈಸೂರಿಗೆ ಮಹಾರಾಜ ಯದುವೀರ್‌ ಕೃಷ್ಣದತ್ತ ಒಡೆಯರ್‌ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಿದರೆ, ಶೋಭಾ ಕರಂದ್ಲಾಜೆ ಅವರಿಗೆ ಬೆಂಗಳೂರು ಉತ್ತರಕ್ಕೆ ಟಿಕೆಟ್‌ ಕೊಡಲಾಗಿದೆ. ಅಚ್ಚರಿ ಬೆಳವಣಿಗೆಯಲ್ಲಿ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಆಯ್ಕೆ ಮಾಡಲಾಗಿದೆ.

ಕೊಡಗು – ಮೈಸೂರು ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಪ್ರತಾಪ್‌ ಸಿಂಹ ಅವರನ್ನು ಕೈಬಿಡಲಾಗಿದ್ದು, ಅವರ ಜಾಗಕ್ಕೆ ಯದುವೀರ್‌ ಒಡೆಯರ್‌ ಅವರನ್ನು ಆಯ್ಕೆ ಮಾಡಲಾಗಿದೆ. ಈ ಬಗ್ಗೆ ವಿಸ್ತಾರ ನ್ಯೂಸ್‌ ಮೊದಲೇ ವರದಿ ಮಾಡಿತ್ತು. ಅಲ್ಲದೆ, ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಗೋ ಬ್ಯಾಕ್‌ ಶೋಭಾ ಅಭಿಯಾನ ಆರಂಭವಾಗಿದ್ದರಿಂದ ಅವರನ್ನು ಬೆಂಗಳೂರು ಉತ್ತರಕ್ಕೆ ಶಿಫ್ಟ್‌ ಮಾಡಲಾಗಿದೆ. ಬೆಂಗಳೂರು ಉತ್ತರದ ಹಾಲಿ ಸಂಸದ ಡಿ.ವಿ. ಸದಾನಂದ ಗೌಡ ಅವರಿಗೆ ಟಿಕೆಟ್‌ ಮಿಸ್‌ ಆಗಿದೆ. ಅದೇ ಚಿಕ್ಕಮಗಳೂರಲ್ಲಿ ಶೋಭಾ ಕರಂದ್ಲಾಜೆ ಜಾಗಕ್ಕೆ ವಿಧಾನ ಪರಿಷತ್‌ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಲಾಗಿದೆ.

BJP MP Ticket announce and PM Narendra Modi and Lok Sabha Election 2024 BJP releases list of candidates Yaduveer and Shobha shift to Banglore North

ಇವರೇ ಬಿಜೆಪಿಯ 20 ಅಭ್ಯರ್ಥಿಗಳು

ಅಭ್ಯರ್ಥಿ ಘೋಷಣೆಯಾಗದ ಕ್ಷೇತ್ರಗಳು:

  1. ಉತ್ತರ ಕನ್ನಡ
  2. ಬೆಳಗಾವಿ
  3. ಚಿಕ್ಕಬಳ್ಳಾಪುರ
  4. ಚಿತ್ರದುರ್ಗ
  5. ರಾಯಚೂರು

8 ಮಂದಿ ಹಾಲಿ ಸಂಸದರಿಗೆ ಟಿಕೆಟ್‌ ಮಿಸ್‌!

ಈ ಎಂಟು ಹಾಲಿ ಸಂಸದರಿಗೆ ಈ ಬಾರಿ ಟಿಕೆಟ್‌ ಮಿಸ್‌ ಆಗಿದೆ. ಇವರಲ್ಲಿ ಚಾಮರಾಜನಗರದ ಸಂಸದ ಶ್ರೀನಿವಾಸ್‌ ಪ್ರಸಾದ್‌, ತುಮಕೂರಿನ ಜಿ.ಎಸ್.‌ ಬಸವರಾಜು, ಹಾವೇರಿಯ ಶಿವಕುಮಾರ್‌ ಉದಾಸಿ ಮೊದಲೇ ಚುನಾವಣಾ ನಿವೃತ್ತಿಯನ್ನು ಘೋಷಣೆ ಮಾಡಿದ್ದರು.

ಈ ಮೂರು ಕ್ಷೇತ್ರಗಳಲ್ಲಿ ಜೆಡಿಎಸ್‌ ಸ್ಪರ್ಧೆ

ಮೈತ್ರಿ ಒಪ್ಪಂದದಂತೆ ಹಾಸನ, ಮಂಡ್ಯ, ಕೋಲಾರ ಲೋಕಸಭಾ ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಜೆಪಿ ಬಿಟ್ಟುಕೊಟ್ಟಿದೆ. ಹಾಸನಕ್ಕೆ ಪ್ರಜ್ವಲ್‌ ರೇವಣ್ಣ ಅಭ್ಯರ್ಥಿ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಹಾಸನದಲ್ಲಿ ಬುಧವಾರ (ಮಾ. 13) ಘೋಷಣೆ ಮಾಡಿದ್ದಾರೆ. ಇನ್ನು ಮಂಡ್ಯದಲ್ಲಿ ಸಿ.ಎಸ್.‌ ಪುಟ್ಟರಾಜು ಹಾಗೂ ಕೋಲಾರದಲ್ಲಿ ನಿಸರ್ಗ ನಾರಾಯಣಸ್ವಾಮಿ ಜೆಡಿಎಸ್‌ನಿಂದ ಸ್ಪರ್ಧೆ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.

ಬಿಜೆಪಿಗೆ ಕರ್ನಾಟಕ ಅತಿ ಮುಖ್ಯ ರಾಜ್ಯ!

ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಕರ್ನಾಟಕವೇ ದೊಡ್ಡ ರಾಜ್ಯವಾಗಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ 28 ಲೋಕಸಭಾ ಕ್ಷೇತ್ರಗಳಲ್ಲಿ 25 + 1 ಸೀಟನ್ನು ಗೆದ್ದಿರುವ ಬಿಜೆಪಿಯು ಈ ಬಾರಿ ಜೆಡಿಎಸ್‌ ಜತೆಗೆ ಮೈತ್ರಿ ಮಾಡಿಕೊಂಡಿದೆ. ಹೀಗಾಗಿ 28ಕ್ಕೆ 28 ಕ್ಷೇತ್ರಗಳನ್ನೂ ಗೆಲ್ಲಬೇಕೆಂಬ ನಿಟ್ಟಿನಲ್ಲಿ ರಣತಂತ್ರವನ್ನು ಹೆಣೆಯುತ್ತಿದೆ. ಹೀಗಾಗಿ ಅಳೆದೂ ತೂಗಿ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಿದೆ.

ಬಿಜೆಪಿಯಲ್ಲಿ ಶುರುವಾಗಿತ್ತು ಟಿಕೆಟ್‌ ಲಾಬಿ

ಇನ್ನು ರಾಜ್ಯ ಬಿಜೆಪಿಯಲ್ಲಿ ಟಿಕೆಟ್‌ ಲಾಬಿ ಜೋರಾಗಿಯೇ ನಡೆದಿತ್ತು. ಕೆಲವು ಕಡೆ ಅಭ್ಯರ್ಥಿಗಳು ಚುನಾವಣಾ ನಿವೃತ್ತಿ ಘೋಷಣೆ ಮಾಡಿರುವುದರಿಂದ ಅಲ್ಲಿಗೆ ಯಾರು ಅಭ್ಯರ್ಥಿಯಾಗಬೇಕು ಎಂಬ ಬಗ್ಗೆ ಚರ್ಚೆಗಳು ನಡೆದಿದ್ದವು. ಅದಕ್ಕೆ ಹೈಕಮಾಂಡ್‌ ವರದಿಯನ್ನೂ ತರಿಸಿಕೊಂಡಿತ್ತು. ಇನ್ನು ರಾಜ್ಯ ಬಿಜೆಪಿ ಕೋರ್‌ ಕಮಿಟಿ ಸಭೆಯಲ್ಲಿ ಸಹ ಈ ಬಗ್ಗೆ ಚರ್ಚೆ ನಡೆಸಿ ಪಟ್ಟಿಯೊಂದನ್ನು ಕಳುಹಿಸಿಕೊಟ್ಟಿತ್ತು. ಹೀಗಾಗಿ ಅಭ್ಯರ್ಥಿಗಳ ಆಯ್ಕೆ ಮತ್ತಷ್ಟು ಸುಗಮವಾಗಿತ್ತು.

ಇನ್ನು ಕರ್ನಾಟಕದಲ್ಲಿ ಹೆಚ್ಚಿನ ಸ್ಥಾನವನ್ನು ಪಡೆಯಬೇಕೆಂದು ಗುರಿ ಇಟ್ಟುಕೊಂಡಿರುವ ಬಿಜೆಪಿ ಹೈಕಮಾಂಡ್‌ ಈ ಬಾರಿ ಎಚ್ಚರಿಕೆಯ ಹೆಜ್ಜೆಯನ್ನಿಡಲು ಮುಂದಾಗಿದೆ. ಹೀಗಾಗಿ ಅಳೆದೂ ತೂಗಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಸಿದೆ ಎನ್ನಲಾಗಿದೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗಲು ಬಿಜೆಪಿ ನಾಯಕರು ಮುಂದಾಗಿದ್ದಾರೆ.

ಇದನ್ನೂ ಓದಿ: BJP Candidates List: ಲೋಕಸಭೆಗೆ ಬಿಜೆಪಿಯ 195 ಅಭ್ಯರ್ಥಿಗಳ ಪಟ್ಟಿ ರಿಲೀಸ್; ಇವರೇ ಕ್ಯಾಂಡಿಡೇಟ್ಸ್

ಶಕ್ತಿ ಕೇಂದ್ರವಾಗಿದ್ದ ಬಿಎಸ್‌ವೈ

ಮಾಜಿ ಸಿಎಂ ಬಿ.ಎಸ್.‌ ಯಡಿಯೂರಪ್ಪ ರಾಜ್ಯ ಬಿಜೆಪಿಯ ಶಕ್ತಿ ಕೇಂದ್ರವಾಗಿದ್ದರು. ತಮಗೆ ಟಿಕೆಟ್‌ ನೀಡುವಂತೆ ಹಲವರು ಅವರಿಗೆ ದುಂಬಾಲು ಬಿದ್ದಿದ್ದರು. ಅಲ್ಲದೆ, ಲೋಕಸಭೆಯಲ್ಲಿ ಯಾರಿಗೆ ಟಿಕೆಟ್‌ ನೀಡಬೇಕು ಎಂಬ ನಿಟ್ಟಿನಲ್ಲಿ ಬಿಎಸ್‌ವೈ ಅವರ ಸಲಹೆಯನ್ನು ಸಹ ಬಿಜೆಪಿ ಹೈಕಮಾಂಡ್‌ ಪರಿಗಣಿಸಿದೆ.

ರಾಜೀವ್‌ ಚಂದ್ರಶೇಖರ್‌ಗೆ ತಿರುವನಂತಪುರ ಟಿಕೆಟ್‌

ಬಿಜೆಪಿ ಬಿಡುಗಡೆ ಮಾಡಿದ್ದ ಮೊದಲ ಪಟ್ಟಿಯಲ್ಲಿ ಕರ್ನಾಟಕದಿಂದ ರಾಜ್ಯಸಭಾ ಸದಸ್ಯರಾಗಿದ್ದ ರಾಜೀವ್ ಚಂದ್ರಶೇಖರ್‌ ಅವರಿಗೆ ಕೇರಳದಲ್ಲಿ ಟಿಕೆಟ್‌ ನೀಡಲಾಗಿತ್ತು. ಅವರಿಗೆ ತಿರುವನಂತಪುರದಲ್ಲಿ ಸ್ಪರ್ಧೆ ಮಾಡುವಂತೆ ಟಿಕೆಟ್‌ ಘೋಷಣೆ ಮಾಡಲಾಗಿತ್ತು.

Exit mobile version