Site icon Vistara News

Lok Sabha Election 2024: ಮೊದಲೆರಡು ಗಂಟೆಗಳ ಮತದಾನ ನಿರೀಕ್ಷೆಗಿಂತ ಕಡಿಮೆ, ಇನ್ನೂ ಇಳಿಯುವ ಆತಂಕ; ಎಲ್ಲಿ ಎಷ್ಟು?

lok sabha election 2024 voting second phase

ಬೆಂಗಳೂರು: ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕದ 14 ಲೋಕಸಭೆ ಕ್ಷೇತ್ರಗಳಲ್ಲಿ (lok sabha constituency) ನಡೆಯುತ್ತಿರುವ ಲೋಕಸಭೆ ಚುನಾವಣೆ (lok sabha election 2024) ಮತದಾನ (voting) ಬೆಳಗ್ಗಿನ ಮೊದಲ ಎರಡು ಗಂಟೆಗಳಲ್ಲಿ ಸರಾಸರಿ 9.5% ಮತದಾನ ದಾಖಲಿಸಿತು. ಮೊದಲ ಹಂತದ ಚುನಾವಣೆಗೆ ಹೋಲಿಸಿದರೆ ಈ ಪ್ರತಿಕ್ರಿಯೆ ನೀರಸವಾಗಿದೆ. ಮೊದಲ ಹಂತದ ಮತದಾನದಲ್ಲಿ ಮೊದಲ ಎರಡು ಗಂಟೆಗಳಲ್ಲಿ ಸರಾಸರಿ 10% ಮತದಾನ ಕಂಡುಬಂದಿತ್ತು. ಮುಂಜಾನೆ 7 ಗಂಟೆಗೆ ಮತದಾನ ಶುರುವಾಗಿದೆ.

ಶಿವಮೊಗ್ಗದಲ್ಲಿ 11.45, ಉತ್ತರ ಕನ್ನಡ ಕ್ಷೇತ್ರದಲ್ಲಿ ಶೇ. 11.42, ಚಿಕ್ಕೋಡಿಯಲ್ಲಿ ಶೇ. 10.81, ಬಳ್ಳಾರಿಯಲ್ಲಿ ಶೇ. 10.37, ಬೆಳಗಾವಿಯಲ್ಲಿ ಶೇ. 9.31, ಧಾರವಾಡದಲ್ಲಿ ಶೇ.9.38, ವಿಜಯಪುರದಲ್ಲಿ 9.22%, ರಾಯಚೂರಿನಲ್ಲಿ ಶೇ. 8.83 , ಹಾವೇರಿಯಲ್ಲಿ ಶೇ. 8.2, ಕಲಬುರಗಿಯಲ್ಲಿ ಶೇ. 8.71 ಮತದಾನ ದಾಖಲಾಯಿತು. ಸರಾಸರಿ ಶೇ. 9.5 ಎಂದು ಅಂದಾಜಿಸಲಾಗಿದೆ. ಇದು ನಿರೀಕ್ಷೆಗಿಂತ ಕಡಿಮೆಯಾಗಿದೆ.

ಹತ್ತು ಗಂಟೆಯ ಬಳಿಕ ಬಿಸಿಲು ಏರುವುದರಿಂದ, ಬಿಸಿಲಿನ ಹೊಡೆತ ತಪ್ಪಿಸಿಕೊಳ್ಳಲು ಹಿರಿಯ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮತ ಚಲಾಯಿಸಿದರು. ಮಧ್ಯಾಹ್ನದ ಹೊತ್ತಿನಲ್ಲಿ ಮತದಾನ ಇನ್ನಷ್ಟು ಇಳಿಕೆಯಾಗುವ ಆತಂಕ ಕಂಡುಬಂದಿದೆ. ಸಂಜೆಯ ವೇಳೆ ಮಳೆ ಬರುವ ಸಾಧ್ಯತೆಯೂ ಇರುವುದರಿಂದ, ಸಂಜೆಯೂ ಮತದಾನ ನಿರೀಕ್ಷಿತ ಪ್ರಮಾಣದಲ್ಲಿ ನಡೆಯದ ಆತಂಕ ತಲೆದೋರಿದೆ.

ಹಾವೇರಿಯಲ್ಲಿ ಬಸವರಾಜ ಬೊಮ್ಮಾಯಿ, ಶಿವಮೊಗ್ಗದಲ್ಲಿ ಬಿಎಸ್‌ ಯಡಿಯೂರಪ್ಪ, ವಿಜಯೇಂದ್ರ, ರಾಘವೇಂದ್ರ, ಈಶ್ವರಪ್ಪ, ಹುಬ್ಬಳ್ಳಿಯಲ್ಲಿ ಪ್ರಹ್ಲಾದ್‌ ಜೋಶಿ, ಕಲಬುರಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕ ಖರ್ಗೆ, ಕಾರವಾರದಲ್ಲಿ ಅಂಜಲಿ ನಿಂಬಾಳ್ಕರ್ ಸೇರಿದಂತೆ ಹಲವಾರು ಗಣ್ಯರು ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದರು.

ಕೆಲವೆಡೆ ಮತಯಂತ್ರ ಕೈಕೊಟ್ಟು ಮತದಾರರು ಗಂಟೆಗಟ್ಟಲೆ ಕಾಯುವಂತಾಯಿತು. ತಂತ್ರಜ್ಞರು ಆಗಮಿಸಿ ಸರಿಪಡಿಸಿದ ಬಳಿಕ ಮತ ಹಾಕಲಾಯಿತು. ಮಹಿಳೆಯರಿಗಾಗಿ ಏರ್ಪಡಿಸಿದ ಪಿಂಕ್‌ ಬೂತ್‌ಗಳಲ್ಲಿಯೂ ಉತ್ತಮ ಸ್ಪಂದನ ವ್ಯಕ್ತವಾಯಿತು. ಹಲವು ಕಡೆಗಳಲ್ಲಿ ಮತದಾರರು ಬಹಿಷ್ಕಾರ ವ್ಯಕ್ತಡಿಸಿದರು. ಹಲವೆಡೆ ಶತಾಯುಷಿಗಳು ಆಗಮಿಸಿ ಮತ ಹಾಕುವ ಉತ್ಸಾಹ ತೋರಿದರು. ಒಂದು ಕಡೆ ದಿವ್ಯಾಂಗ ಯುವತಿ ಮೊದಲ ಮತ ಹಾಕಿದಳು. ಉತ್ತರ ಕನ್ನಡದಲ್ಲಿ ನವದುರ್ಗೆಯರ ರೂಪದಲ್ಲಿ ಮೊದಲ ಮತದಾನ ನಡೆದುದು ವಿಶಿಷ್ಟವಾಗಿತ್ತು.

ರಾಜ್ಯದಲ್ಲಿ ಎರಡನೇ ಹಂತದಲ್ಲಿ ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ಬಿಜಾಪುರ, ಕಲಬುರಗಿ, ರಾಯಚೂರು, ಬೀದರ್, ಕೊಪ್ಪಳ, ಬಳ್ಳಾರಿ, ಹಾವೇರಿ, ಧಾರವಾಡ, ಉತ್ತರ ಕನ್ನಡ, ದಾವಣಗೆರೆ, ಶಿವಮೊಗ್ಗ ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. 14 ಕ್ಷೇತ್ರಗಳಲ್ಲಿ 28,269 ಮತಗಟ್ಟೆ ಸ್ಥಾಪಿಸಿದ್ದು, ಶಾಂತಿಯುತ ಚುನಾವಣೆ ನಡೆಸಲು ಸುಮಾರು 40 ಸಾವಿರ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಮತದಾನ ಕೇಂದ್ರದಲ್ಲಿ ಮತದಾರರ ಅನುಕೂಲಕ್ಕಾಗಿ ಕುಡಿಯುವ ನೀರು ಸೇರಿ ಅಗತ್ಯ ವ್ಯವಸ್ಥೆ ಮಾಡಲಾಗಿದ್ದು, ಮತಗಟ್ಟೆಗಳ ಸುತ್ತ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಸೂಕ್ತ ಭದ್ರತೆ ಏರ್ಪಡಿಸಲಾಗಿದೆ.

ರಾಜ್ಯದಲ್ಲಿ ಕಾಂಗ್ರೆಸ್, ಬಿಜೆಪಿ ಎಲ್ಲಾ ಕ್ಷೇತ್ರಗಳಲ್ಲೂ ಸ್ಪರ್ಧಿಸಿದ್ದರೆ, ಬಿಎಸ್‌ಪಿ 9, ನೋಂದಾಯಿತ ಮಾನ್ಯತೆ ಪಡೆಯದ ರಾಜಕೀಯ ಪಕ್ಷಗಳು 23, ಸ್ವತಂತ್ರ ಅಭ್ಯರ್ಥಿಗಳು 117 ಸೇರಿ ಒಟ್ಟು 227 ಅಭ್ಯರ್ಥಿಗಳು ಸ್ಪರ್ಧೆಗಿಳಿದಿದ್ದಾರೆ. ಇದರಲ್ಲಿ 206 ಪುರುಷ, 21 ಮಹಿಳಾ ಅಭ್ಯರ್ಥಿಗಳಿದ್ದಾರೆ. ಈ ಕ್ಷೇತ್ರಗಳಲ್ಲಿ 2,59,52,958 ಮತದಾರರಿದ್ದು, 1,29,48,978 ಪುರುಷ, 1,29,64,570 ಮಹಿಳಾ ಹಾಗೂ 1,945 ತೃತೀಯ ಲಿಂಗಿ ಮತದಾರರು ಇದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಅತೀ ಕಡಿಮೆ 16,41,156 ಮತದಾರರಿದ್ದರೆ, ಅತಿ ಹೆಚ್ಚು ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ 20,98,202 ಮತದಾರರಿದ್ದಾರೆ.

ದೇಶದ 11 ರಾಜ್ಯ ಮತ್ತು ಕೇಂದ್ರಾಡಳಿತದ ಪ್ರದೇಶಗಳ 93 ಕ್ಷೇತ್ರಗಳಲ್ಲಿ ಮೂರನೇ ಹಂತದ ಮತದಾನ ಆರಂಭವಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಮತ್ತು ಕೇಂದ್ರ ಗೃಹ ಸಚಿವ ಅಮಿತ್‌ ಶಾ (Amit Shah) ಗುಜರಾತ್‌ನ ಅಹಮದಾಬಾದ್‌ನಲ್ಲಿ ಮತದಾನ ಮಾಡಿದರು. ಮೂರನೇ ಹಂತದಲ್ಲಿ ಸುಮಾರು 120 ಮಹಿಳೆಯರು ಸೇರಿದಂತೆ 1,300ಕ್ಕೂ ಹೆಚ್ಚು ಅಭ್ಯರ್ಥಿಗಳು ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. 8.39 ಕೋಟಿ ಮಹಿಳೆಯರು ಸೇರಿದಂತೆ 17.24 ಕೋಟಿ ಜನರು ಮತ ಚಲಾಯಿಸಲು ಅರ್ಹರಾಗಿದ್ದು, 18.5 ಲಕ್ಷ ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. 1.85 ಲಕ್ಷ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

ಇದನ್ನೂ ಓದಿ: Lok Sabha Election 2024: ಮತ ಹಕ್ಕು ಚಲಾಯಿಸಿದ ಪ್ರಧಾನಿ ಮೋದಿ; ಮತದಾನ ಮಾಡಲು ಕನ್ನಡದಲ್ಲೇ ಕರೆ

Exit mobile version