ಬೆಂಗಳೂರು: ಬುಧವಾರ ಮುಂಜಾನೆಯೇ ರಾಜ್ಯದ 40 ಕಡೆ ಲೋಕಾಯುಕ್ತ ತಂಡಗಳು ದಾಳಿ (Lokayukta Raid) ನಡೆಸಿವೆ. 10 ಪ್ರಕರಣಗಳಿಗೆ ಸಂಬಂಧಿಸಿದಂತೆ, ಲಂಚ (corruption) ಹಾಗೂ ಅಕ್ರಮ ಆಸ್ತಿ ಸಂಗ್ರಹದ (Illegal assets) ಆರೋಪ ಹೊತ್ತಿರುವ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಲಾಗಿದೆ.
ಮೈಸೂರಿನಲ್ಲಿ ಮುಡಾ ಎಇಇ ಯಜ್ಞೇಂದ್ರ ವಿರುದ್ಧ ಲೋಕಾಯುಕ್ತ ಬಲೆ (Lokayukta Raid) ಬೀಸಿದ್ದು, ಜೆಪಿ ನಗರದ ಮನೆ, ವಿಜಯ ನಗರದ ಫ್ಲಾಟ್ ಹಾಗೂ ಕೆ.ಆರ್.ನಗರದ ಅಣ್ಣನ ಮನೆಯಲ್ಲಿ ಶೋಧ ನಡೆಸಲಾಗುತ್ತಿದೆ. ಮೈಸೂರು ಲೋಕಾಯುಕ್ತ ಎಸ್‌ಪಿ ಸುರೇಶ್ ಬಾಬು ನೇತೃತ್ವದಲ್ಲಿ ಶೋಧ ನಡೆಯುತ್ತಿದೆ.
ತುಮಕೂರಿನಲ್ಲಿ ಕೆಆರ್ ಐಡಿಎಲ್ EE ಹನುಮಂತರಾಯಪ್ಪ ಮನೆ, ಕಚೇರಿ, ಫಾರ್ಮ್ ಹೌಸ್ ಮೇಲೆ ದಾಳಿ ನಡೆಸಲಾಗಿದೆ. ಶಿರಾ ಗೇಟ್‌ನಲ್ಲಿರುವ ಮನೆ, ಕೊರಟಗೆರೆಯ ಕಚೇರಿ ಹಾಗೂ ಮಧುಗಿರಿಯಲ್ಲಿರುವ ಫಾರ್ಮ್ ಹೌಸ್ ಮೇಲೆ ನಾಲ್ಕು ಜನ ಲೋಕಾಯುಕ್ತ ಅಧಿಕಾರಿಗಳು ಸೇರಿದಂತೆ ಒಟ್ಟು 14 ಜನರ ತಂಡ ದಾಳಿ ನಡೆಸಿ ಶೋಧ ಕಾರ್ಯ ನಡೆಸುತ್ತಿದೆ.
ಬಳ್ಳಾರಿಯ ಪಿಜಿ ಸೆಂಟರ್ ನಿರ್ದೇಶಕರ ಮನೆ ಲೋಕಾಯುಕ್ತ ದಾಳಿ ನಡೆಸಿದೆ. ವಿಎಸ್‌ಕೆ ವಿವಿಯ ನಂದಿಹಳ್ಳಿ ಪಿಜಿ ಸೆಂಟರ್‌ನ ನಿರ್ದೇಶಕ ಪ್ರೊ.ರವಿ ಅವರ ಬಳ್ಳಾರಿಯ ನೆಹರು ಕಾಲೋನಿಯ ಅಪಾರ್ಟ್‌ಮೆಂಟ್‌ಗೆ ಲೋಕಾಯುಕ್ತ ಎಸ್ಪಿ ಸಿದ್ದರಾಜು ನೇತೃತ್ವದಲ್ಲಿ ದಾಳಿ ನಡೆದಿದೆ.
ಹಾಸನದಲ್ಲಿ ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪ ಹೊತ್ತಿರುವ ಆಹಾರ ನಿರೀಕ್ಷಕ ಜಗನ್ನಾಥ್ ನಿವಾಸ ಹಾಗೂ ಕಚೇರಿ ಮೇಲೆ ಲೋಕಾಯುಕ್ತ ದಾಳಿ ನಡೆಸಿದೆ. ಜಗನ್ನಾಥ್ ಸಹೋದರ, ರಿಯಲ್ ಎಸ್ಟೇಟ್ ಉದ್ಯಮಿ ಕಿರಣ್ ನಿವಾಸ ಹಾಗೂ ಕಚೇರಿ ಮೇಲೂ ದಾಳಿ ಮಾಡಲಾಗಿದೆ. ಲೋಕಾಯುಕ್ತ ಎಸ್ಪಿ ಮಲ್ಲಿಕ್ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ತಿರುಮಲೇಶ್, ಇನ್ಸ್‌ಪೆಕ್ಟರ್‌ಗಳಾದ ಬಾಲು, ಶಿಲ್ಪಾ ನೇತೃತ್ವದ ತಂಡ ದಾಳಿ ನಡೆಸಿದೆ.
ಮಂಡ್ಯದಲ್ಲಿ ಪಿಡಬ್ಲ್ಯೂಡಿ ಕಚೇರಿಯ ಎಕ್ಸಿಕ್ಯುಟಿವ್ ಇಂಜಿನಿಯರ್ ಹರ್ಷ ಮನೆ ಮೇಲೆ ದಾಳಿ ನಡೆದಿದೆ. ಮಂಡ್ಯ ಸೇರಿದಂತೆ ಹರ್ಷಗೆ ಸೇರಿದ ಸುಮಾರು 6 ಕಡೆ ಏಕಕಾಲಕ್ಕೆ ದಾಳಿ ನಡೆಸಿ ಪರಿಶೀಲಿಸಲಾಗುತ್ತಿದೆ.
ವಿಜಯನಗರ ಜಿಲ್ಲೆಯಲ್ಲಿ ನಾಲ್ಕು ಕಡೆ ಲೋಕಾಯುಕ್ತ ದಾಳಿ ನಡೆಸಿದೆ. ಜೆಸ್ಕಾಂ ಇಲಾಖೆಯ AEE ಭಾಸ್ಕರ್ ಒಡೆತನದ ನಾಲ್ಕು ಕಡೆಗೆ ಏಕಕಾಲಕ್ಕೆ ಲೋಕಾಯುಕ್ತ ತಂಡಗಳು ದಾಳಿ ನಡೆಸಿವೆ. ಹೊಸಪೇಟೆಯ ಮೂರು ಮನೆ, ಕೊಪ್ಪಳ ಜಿಲ್ಲೆಯ ಗಿಣಿಗೇರಾದ ಒಂದು ಮನೆ ಮೇಲೆ ಹೊಸಪೇಟೆ ಲೋಕಾಯುಕ್ತ ಪಿಐ ರಾಜೇಶ್ ಲಮಾಣಿ, ಸುರೇಶ್ ನೇತೃತ್ವದಲ್ಲಿ ದಾಳಿ ನಡೆದಿದೆ. ಭಾಸ್ಕರ್ ಕೆಲಸ ಮಾಡ್ತಿದ್ದ ಹಗರಿಬೊಮ್ಮನಹಳ್ಳಿಯ ಜೆಸ್ಕಾಂ ಕಚೇರಿಯ ಮೇಲೂ ದಾಳಿ ನಡೆದಿದೆ.
ಚಾಮರಾಜನಗರದಲ್ಲಿ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಇಂಜಿನಿಯರ್ ಪಿ.ರವಿಕುಮಾರ್ ಅವರ ಕೊಳ್ಳೆಗಾಲ ತಾಲೂಕಿನ ಆಲಹಳ್ಳಿ ಗ್ರಾಮದ ಮನೆ ಮೇಲೆ ದಾಳಿ ನಡೆಸಲಾಗಿದೆ. ಆಲಹಳ್ಳಿ ಹಾಗೂ ಮೈಸೂರು ನಿವಾಸದ ಮೇಲೆ ದಾಳಿ ನಡೆಸಿರುವ ಲೋಕಾಯುಕ್ತ ಪೊಲೀಸರು. ಕೆಲ ದಿನಗಳ ಹಿಂದೆಯಷ್ಟೆ ಹುಣಸೂರಿನಿಂದ ಚಾಮರಾಜನಗರಕ್ಕೆ ಇವರು ವರ್ಗಾವಣೆಗೊಂಡಿದ್ದರು.
ಚಿಕ್ಕಮಗಳೂರಿನಲ್ಲಿ ಸಿಟಿಒ ನೇತ್ರಾವತಿ, ಕೊಪ್ಪಳದಲ್ಲಿ ಅರಣ್ಯ ಇಲಾಖೆ ಅಧಿಕಾರಿ ರೇಣುಕಮ್ಮ, ಮಂಗಳೂರಿನಲ್ಲಿ ಮೆಸ್ಕಾಂ ಅಧಿಕಾರಿ ಶಾಂತ್‌ಕುಮಾರ್ ಹೆಚ್.ಎಂ ಮನೆಗಳ ಮೇಲೂ ದಾಳಿ ನಡೆಸಿ ಪರಿಶೀಲಿಸಲಾಗುತ್ತಿದೆ.
ಇದನ್ನೂ ಓದಿ: Lokayukta Case: ಮೇಲಧಿಕಾರಿಯಿಂದ ಕಿರುಕುಳ ಆರೋಪ; ಲೋಕಾಯುಕ್ತ ಮೆಟ್ಟಿಲೇರಿದ ಕಿರಿಯ ಅಧಿಕಾರಿ